ವಚನ ಚಳುವಳಿಯ ಆಧಾರಸ್ಥಂಬ ಬಸವಣ್ಣ. 12ನೇ ಶತಮಾನದಲ್ಲೇ ಸಮಾನತೆ ಸಾರಿದ ಮಹಾನ್ ಚೇತನ. ಅಂತಹ ಮಹಾನ್ ದಾಶರ್ನಿಕ ಹುಟ್ಟಿದ ಸ್ಥಳವಿಗ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಈ ಮಧ್ಯೆ ಅಸಮಾಧಾನವೊಂದು ಕೇಳಿಬಂದಿದೆ.
ಬಸವನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಇದೀಗ ನಾಡಿನ ಜನರನ್ನು ತನ್ನತ್ತ ಸೆಳೆಯುತ್ತಿದೆ. ಜಗಜ್ಯೋತಿ ಬಸವಣ್ಣನ ಜನ್ಮಸ್ಥಳವಾದ ಈ ಪ್ರದೇಶ ಇದೀಗ ಜಗತ್ತಿನಾದ್ಯಂತ ಜನ ಜನಿತವಾಗಿದೆ. ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಡಿಯಲ್ಲಿ ಈ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ ಅನ್ನೋ ಅಸಮಾಧಾನ ಕೇಳಿ ಬಂದಿದೆ. ಈ ಹಿಂದೆ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಿದ ಮುಖ್ಯಸ್ಥರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ, ಲಿಂಗಾಯತ ಧರ್ಮದ ಹೋರಾಟದ ನಾಯಕ ಎಸ್.ಎ.ಜಾಮದಾರ ಅವರ ಕಾರ್ಯಕ್ಷಮತೆಯಿಂದ ಈ ಪ್ರದೇಶ ಅಭಿವೃದ್ದಿಯಾಗಿವೆ. ಆದರೆ ಜಾಮದಾರ ಅವರ ಅಧಿಕಾರದ ಅವಧಿ ನಂತರ ಇಲ್ಲಿ ಅಭಿವೃದ್ಧಿ ಕಾಣೆಯಾಗಿದ್ದು, ಪ್ರತ್ಯೇಕ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕೂಗು ಜೋರಾಗಿದೆ. ಈ ಹಿಂದೆ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ರಚನೆ ಬಗ್ಗೆ ಒಲವು ತೋರಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯಿಂದ ಅದು ನೆನೆಗುದಿಗೆ ಬಿದ್ದಿದೆ.
ಇದೀಗ ದೇಶದಲ್ಲಿ ಕಾಶಿ ಮಾದರಿಯಲ್ಲಿ ಬೇರೆ ಬೇರೆ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಸರ್ಕಾರಗಳು ಮುಂದಾಗುತ್ತಿದ್ದು, ಅದೇ ರೀತಿ ಬಸವಣ್ಣನ ಜನ್ಮ ಸ್ಥಳ ಕೂಡ ಅಭಿವೃದ್ದಿ ಮಾಡಬೇಕು. ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಬದಲು ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ಬಸವನ ಬಾಗೇವಾಡಿಯಲ್ಲಿ ಬಸವಣ್ಣನ ಜನ್ಮ ಸ್ಥಳಕ್ಕೆ ಸಂಬಂಧಿಸಿದ ಹಲವು ಐತಿಹಾಸಿಕ ಸ್ಥಳಗಳಿವೆ. ಈ ಎಲ್ಲ ಪ್ರದೇಶಗಳು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಾರಣ ಪ್ರತ್ಯೇಕ ಬಸವನ ಬಾಗೇವಾಡಿ ಪ್ರಾಧಿಕಾರ ರಚನೆ ಮಾಡಬೇಕು ಎಂಬ ಕೂಗು ಕೇಳಲಾರಂಭಿಸಿತು. ಸದ್ಯ ಕೂಡಲ ಸಂಗಮ ಪ್ರಾಧಿಕಾರದಲ್ಲಿ ಬಸವೇಶ್ವರ ದೇವಸ್ಥಾನ ಹಾಗೂ ಬಸವೇಶ್ವರ ಸ್ಮಾಕರ, ಹಾಗೂ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಸಮೀಪದ ನೀಲಾಂಬಿಕೆ, ಹಡಪದ ಅಪ್ಪಣ್ಣ ಹಾಗೂ ಮಡಿವಾಳ ಮಾಚಿದೇವರ ಐಕ್ಯ ಮಂಟಪ ಮತ್ತು ಬಸವಣ್ಣನವರ ತಾಯಿಯವರ ಜನ್ಮಸ್ಥಳವಾದ ಇಂಗಳೇಶ್ವರದ ಮನೆಯನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದ್ದು, ಉಳಿದ ಪ್ರದೇಶಗಳನ್ನ ಹಾಗೇ ಬಿಡಲಾಗಿದೆ. ಹೀಗಾಗಿ ಪ್ರಾಧಿಕಾರ ರಚನೆ ಮಾಡಿ ಉಳಿದ ಪ್ರದೇಶಗಳನ್ನು ಅದರ ವ್ಯಾಪ್ತಿಗೆ ತರಬೇಕು ಎಂಬುದು ಸರ್ಕಾರ ಆಶಯವಾಗಿದೆ.
ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ವಿರಕ್ತಮಠ ಕೂಡಾ ಬಸವಣ್ಣನ ವಚನಗಳನ್ನು ಜಗತ್ತಿಗೆ ಸಾರಲು ಐತಿಹಾಸಿಕ ಕಾರ್ಯವನ್ನು ಮಾಡುತ್ತಿದೆ. ಸುಮಾರು 1300 ವಚನಗಳನ್ನು ಕಲ್ಲಿನ ಮೇಲೆ ಕೆತ್ತುವ ಮೂಲಕ ಅವುಗಳನ್ನು ಶಾಶ್ವತವಾಗಿ ಕಾಯ್ದಿಡುವ ಕಾರ್ಯ ಮಾಡಲು ಮುಂದಾಗಿದೆ. ಈ ಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶರಣರ ಮಾರ್ಗದರ್ಶನದಂತೆ ಈ ಕಾರ್ಯ ನಡೆದಿದೆ. ಸದ್ಯ ಈ ಕಾರ್ಯ ಭಾಗಶ ಪೂರ್ಣಗೊಂಡಿದೆ. ಇದು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಹೊರಗಿರುವ ಕಾರಣ ಇದರ ಅಭಿವೃದ್ಧಿ ಕುಂಟಿತಗೊಂಡಿದೆ. ಹೀಗಾಗಿ ಪ್ರತ್ಯಕ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಜನರು ಆಗ್ರಹಿಸುತ್ತಿದ್ದಾರೆ.

ಈ ಹಿಂದೆ ಬಸವನ ಬಾಗೇವಾಡಿ ಸುತ್ತ ಹಲವು ಅಗ್ರಹಾರಗಳಿದ್ದವು, ಅವು ಬಸವಣ್ಣವರ ಬಾಲ್ಯ ಹಾಗೂ ಮುಂದೆ ನಡೆದ ಕಲ್ಯಾಣ ಕ್ರಾಂತಿಗೆ ಸಾಕ್ಷಿಯಾದ ಸ್ಥಳಗಳಾಗಿವೆ. ಇಂಗಳೇಶ್ವರ, ಮಸಿಬಿನಾಳ್, ಮನಗೂಳಿ, ಮುತ್ತಗಿ, ಗೊಳಸಂಗಿ ಗ್ರಾಮಗಳಲ್ಲಿ ಬಸವಣ್ಣನ ಕಾಲದಲ್ಲಿ ಅಗ್ರಹಾರಗಳಿದ್ದವು. ಕಾಲ ಕ್ರಮೇಣ ಸರ್ಕಾರ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡುವು ವೇಳೆ ಇವುಗಳನ್ನು ಕೈಬಿಡಲಾಗಿತ್ತು. ಇದೀಗ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿದ್ರೆ, ಈ ಸ್ಥಳಗಳು ಸಹ ಐತಿಹಾಸಿಕವಾಗಿ ಅವುಗಳಿಗೆ ಇರುವ ಮಹತ್ವ ತಿಳಿಯುತ್ತದೆ. ಜೊತೆಗೆ ಈ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ.
ಪ್ರತ್ಯೇಕ ಪ್ರಾಧಿಕಾರದಿಂದಾಗುವ ಲಾಭಗಳು
ಸದ್ಯ ಇರುವ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ಹಿರಿಯ ಸಚಿವರು ಮತ್ತು 14 ಹಿರಿಯ ಅಧಿಕಾರಿಗಳು ಮತ್ತು 10 ನಾಮ ನಿರ್ದೇಶಿತ ಸದಸ್ಯರನ್ನೊಳಗೊಂಡ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆ ಎಲ್ಲಾ ನೀತಿ ನಿಯಮಗಳನ್ನು ರೂಪಿಸುತ್ತದೆ ಮತ್ತು ಇತರೆ ಪ್ರಮುಖ ತೀರ್ಮಾನ ತೆಗೆದುಕೊಳ್ಳುತ್ತದೆ. ದಿನನಿತ್ಯದ ಕಾರ್ಯ-ಕಲಾಪಗಳನ್ನು ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗೆ ಸಮನಾದ ಆಯುಕ್ತರು ಅವಶ್ಯಕ ಸಿಬ್ಬಂದಿಯೊಂದಿಗೆ ನಡೆಸಿಕೊಂಡು ಹೋಗುತ್ತಾರೆ. ಇದೇ ಮಾದರಿಯಲ್ಲಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ನಮ್ಮ ಭಾಗದಲ್ಲೂ ಅಭಿವೃದ್ಧಿ ಕಾಣಬಹುದು ಅನ್ನೋದು ಈ ಭಾಗದ ಜನರು ಬಹುದಿನದ ಬೇಡಿಕೆ.
ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಬಹಳ ವಿಶಾಲವಾಗಿದೆ, ಜೊತೆಗೆ ಅದು ವಿಜಯಪುರ ಭಾಗಲಕೋಟೆ ಎರಡು ಜಿಲ್ಲೆಗಳನ್ನು ಒಳಗೊಂಡ ಕಾರಣ, ಆಡಳಿತಾತ್ಮಕವಾಗಿ ಯೋಜನೆಗಳ ಜಾರಿಗೆ ಅಡಚಣೆ ಉಂಟಾಗುತ್ತಿದೆ. ಎಲ್ಲ ಕಾರ್ಯವನ್ನು ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ಹೀಗಾಗಿ ನಮ್ಮ ಕೆಲಸವೇನು ಎಂದು ಹಲವು ಸಲ ಇಲ್ಲಿನ ಸ್ಥಳಿಯ ಆಡಳಿತದವರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಬಸವನ ಬಾಗೇವಾಡಿಗೆ ಪ್ರತ್ಯಕ ಪ್ರಾಧಿಕಾರವಾದ್ರೆ ಈ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಅನ್ನೋದು ನಮ್ಮ ಇಲ್ಲಿನ ಜನರ ಭಾವನೆ. ಜೊತೆಗೆ ಸರ್ಕಾರ ಇದಕ್ಕಾಗಿ ಹಣ ಮೀಸಲಿಡುವುದರಿಂದ ಯಾವುದೇ ಕಾಮಗಾರಿ ಕೈಗೊಳ್ಳಲು ಇದು ಸಹಕಾರಿಯಾಗುತ್ತದೆ. ಜೊತೆಗೆ ಪ್ರಾಧಿಕಾರದಿಂದ ಶಾಲೆ ಹಾಗೂ ಸಾಮಾಜಿಕ ಕಾರ್ಯ ಕೈಗೊಳ್ಳುವುದರಿಂದ ಬಸವಣ್ಣ ಜನ್ಮ ಸ್ಥಳಕ್ಕೆ ಸೇರಿದ ಪ್ರದೇಶಗಳು ಅಭಿವೃದ್ಧಿಯಾಗುತ್ತವೆ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ. ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಯಾದರೆ ಜನರಿಗೂ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಈ ಮೂಲಕ ಆರ್ಥಿಕವಾಗಿ ಜನರಿಗೆ ನೆರವಾಗಲಿದೆ.
ಈ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಜೊತೆಗೆ ಸರ್ಕಾರ ಬಸವ ಜಯಂತಿಯನ್ನು ಬಾಗೇವಾಡಿಯಲ್ಲಿ ಆಚರಣೆ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಮಹಾನ್ ಪುರುಷರ ಜಯಂತಿಯನ್ನು ಅವರ ಹುಟ್ಟುರು ಅಥವಾ ಕರ್ಮಭೂಮಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ಬಸವಣ್ಣ ಜಯಂತಿಯನ್ನು ಸರ್ಕಾರದ ಪರವಾಗಿ ಇಲ್ಲೇ ಆಚರಣೆ ಮಾಡಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.
ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಅಥವಾ ಮಂಡಳಿ ರಚನೆ ಮಾಡಬೇಕು ಎಂದು ನಾವು ಈ ಹಿಂದೆ ಹೋರಾಟ ಮಾಡಿದ್ದೇವು. ಸರ್ಕಾರ ಅದಕ್ಕೆ ಸ್ಪಂದಿಸಿತ್ತು, ಆದರೆ ಆಗ ಚುನಾವಣೆ ಬಂದಿದ್ದರಿಂದ ಏನೂ ಮಾಡಲಾಗಲಿಲ್ಲ. ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಈ ಭಾಗದಲ್ಲಿ ಸಾಮಾಜಿಕವಾಗಿ, ಸಾಂಸ್ಕ್ರತಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತೆ ಎಂದು ಹೋರಾಟದ ಭಾಗವಾಗಿರುವ ಅರವಿಂದ್ ಕುಲಕರ್ಣಿ ಹೇಳಿದ್ದಾರೆ.