ರಾಜಕೀಯ ವಿರೋಧಿಗಳ ಮೇಲೆ ಕಣ್ಗಾವಲು ಇಡಲು ಬಳಸುವ ಪೆಗಾಸಸ್ ವಿರುದ್ದ ಕೆಲ ದಿನಗಳ ಹಿಂದೆ ಫ್ರಾನ್ಸ್ ಸರ್ಕಾರ ಇಸ್ರೇಲ್ ಸರ್ಕಾರಕ್ಕೆ ದೂರು ನೀಡಿತ್ತು. ಇದಾದ ಬಳಿಕ ಈಗ ಅಮೇರಿಕಾದ ವೈಟ್ ಹೌಸ್’ನ ಹಿರಿಯ ಅಧಿಕಾರಿಗಳು, ಇಸ್ರೇಲ್ ಅಧಿಕಾರಿಗಳೊಂದಿಗೆ ತನಿಖೆ ನಡೆಸುವ ಕುರಿತಾಗಿ ಚರ್ಚಿಸಿದ್ದಾರೆಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಈ ಬೆಳವಣಿಗೆಗಳಿಗೆ ವ್ಯತಿರಿಕ್ತವಾಗಿ ಭಾರತದ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಅವರು ಪೆಗಾಸಸ್ ಚರ್ಚಿಸಬೇಕಾದ ವಿಚಾರವೇ ಅಲ್ಲ, ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನಾ ವೇಳೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಶುಕ್ರವಾರ ಧರಣಿ ಆರಂಭಿಸಿದವು.
Also Read: ಸಂಚಲನ ಸೃಷ್ಟಿಸಿದ ಪೇಗಾಸಸ್ ಲೀಕ್ಸ್: ಮೋದಿ ಆಡಳಿತದ ಟೀಕಾಕಾರರ ಮೊಬೈಲ್ ಗೆ ಕನ್ನ!
ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಷಿ, “315ಕ್ಕೂ ಹೆಚ್ಚು ಜನ ಸಂಸದರು ಪ್ರಶ್ನಾ ವೇಳೆಯನ್ನು ನಡೆಸಬೇಕೆಂದು ಕೇಳಿದ್ದಾರೆ. ಇದರ ನಡುವೆ ಇಂತಹ ವರ್ತನೆ ದುರದೃಷ್ಟಕರ. ಮಾಹಿತಿ ತಂತ್ರಜ್ಞಾನ ಸಚಿವರು ಪೆಗಾಸಸ್ ಕುರಿತು ಈಗಾಗಲೇ ವಿಸ್ತೃತವಾದ ಉತ್ತರ ನೀಡಿದ್ದಾರೆ. ಇದು ಗಂಭೀರವಾದ ವಿಚಾರವೇ ಅಲ್ಲ,” ಎಂದು ಜೋಷಿ ಹೇಳಿದ್ದಾರೆ.

ಸಂಸತ್ತು ಆರಂಭವಾದ ಬಳಿಕ ಮುಖ್ಯವಾಗಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರು ಪೆಗಾಸಸ್ ಕುರಿತು ಚರ್ಚೆ ನಡೆಸಲು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ವಿಚಾರವಾಗಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಇದ್ಯಾವುದಕ್ಕೂ ಕಿವಿಗೊಡದೇ, ಮುಗುಮ್ಮಾಗಿ ಕೂತಿದೆ.
Also Read: ಪೆಗಾಸಸ್ ಲೀಕ್ಸ್ ಹಗರಣ: ತನಿಖೆಗೆ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿ
“ಈಗ ನಾವು ಪೆಗಾಸಸ್ ಕುರಿತು ಚರ್ಚೆ ನಡೆಸದೇ ಬೇರೆ ವಿಚಾರಗಲ ಬಗ್ಗೆ ಚರ್ಚೆ ನಡೆಸಲು ಒಪ್ಪಿದರೆ, ಪೆಗಾಗಸ್ ಕುರಿತ ಚರ್ಚೆಯೇ ನಡೆಯುವುದಿಲ್ಲ. ಇದು ಕೈತಪ್ಪಿ ಹೋಗುತ್ತದೆ,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕಾರಣಕ್ಕಾಗಿ, ಪೆಗಾಸಸ್ ಬಗ್ಗೆ ಚರ್ಚೆ ನಡೆಯದೇ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷಗಳು ಹಠ ಹಿಡಿದಿವೆ.
ಇನ್ನೊಂದೆಡೆ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ, ಪೆಗಾಸಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಮೇರಿಕಾ ಅಧ್ಯಕ್ಷರಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಸಲಹೆಗಾರರಾಗಿರುವ ಬ್ರೆಟ್ ಮೆಕ್’ಗರ್ಕ್ ಅವರು ಇಸ್ರೇಲ್ ಉನ್ನತ ಮಟ್ಟದ ಅಧಿಕಾರಿಯಾಗಿರುವ ಝೋಹರ್ ಪಾಲ್ಟಿ ಅವರೊಂದಿಗೆ ಗಂಭೀರವಾದ ಚರ್ಚೆ ನಡೆಸಿದ್ದಾರೆ.
Also Read: ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?
ಅಮೇರಿಕಾ ಸಂಸತ್ತಿನ ಸದಸ್ಯರು ಕೂಡಾ ಕಣ್ಗಾವಲು ತಂತ್ರಾಂಶದ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ, ಅಧ್ಯಕ್ಷ ಜೋ ಬೈಡೆನ್ ಅವರನ್ನು ಒತ್ತಾಯಿಸಿದ್ದಾರೆ.
ಅಮೇರಿಕಾ ಮತ್ತು ಫ್ರಾನ್ಸ್’ನಂತಹ ಮುಂದುವರಿದ ರಾಷ್ಟ್ರಗಳು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇಸ್ರೇಲ್ ಕೂಡಾ ತನಿಖೆಗೆ ಆದೇಶ ನೀಡಿ, ಪ್ರಕರಣವನ್ನು ‘ಗಂಭೀರವಾಗಿ’ ಪರಿಗಣಿಸುತ್ತೇವೆ ಎಂದು ಹೇಳಿದೆ.
Also Read: ಪೇಗಾಸಸ್ ಲೀಕ್ಸ್: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ತನಿಖೆಯ ಒತ್ತಡ
ಹೀಗೆ ವಿಶ್ವದಾದ್ಯಂತ ವ್ಯಾಪಕವಾಗಿ ಪೆಗಾಸಸ್ ವಿರುದ್ದ ತನಿಖೆಗೆ ಆಗ್ರಹ ಕೇಳಿ ಬರುತ್ತಿದ್ದರೂ, ಭಾರತ ಸರ್ಕಾರ ಮಾತ್ರ ಒಪ್ಪುತ್ತಿಲ್ಲ. ಪೆಗಾಸಸ್ ಕುರಿತಾಗಿ ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೂ ವಿಪಕ್ಷಗಳು ಪಟ್ಟು ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ.
ಪೆಗಾಸಸ್: ಪತ್ರಕರ್ತರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠದ ಮುಂದೆ ಶುಕ್ರವಾರ ಮಂಡಿಸಿದ್ದಾರೆ.
‘ನಾಗರಿಕರು, ರಾಜಕಾರಣಿಗಳು, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಗೂಢಚರ್ಯೆಗೆ ಗುರಿ ಮಾಡಲಾಗಿದೆ. ಈ ವಿಚಾರ ದೇಶ ದಾದ್ಯಂತ, ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಹೀಗಾಗಿ ಈ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಎತ್ತಿಕೊಳ್ಳಬೇಕು’ ಎಂದು ಕಪಿಲ್ ಸಿಬಲ್ ಪ್ರತಿಪಾದಿಸಿದ್ದರು.
ಅರ್ಜಿಯನ್ನು ಆಲಿಸಿದ ನ್ಯಾಯಪೀಠವು ‘ಮುಂದಿನ ವಾರ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದೆ.