ಬೆಳಗಾವಿ:2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು.ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸೋಮವಾರ ವಿಧಾನಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವಿಧೇಯಕವನ್ನು ಮಂಡಿಸಿದರು.
“ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರಿಗೆ ಒಟಿಎಸ್ ಮೂಲಕ ತೆರಿಗೆ ಬಾಕಿ ಪಾವತಿಸಲು ನವೆಂಬರ್ 30ವರೆಗೂ ಕಾಲಾವಕಾಶ ನೀಡಲಾಗಿತ್ತು.ಈ ಮೂಲಕ ಪಾಲಿಕೆಗೆ 700 ಕೋಟಿ ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. 3 ಲಕ್ಷ ಆಸ್ತಿಗಳಿಂದ 1200 ಕೋಟಿ ಬಾಕಿ ವಸೂಲಿ ಮಾಡಲಾಗಿದೆ. ಇನ್ನೂ 2.26 ಲಕ್ಷ ಆಸ್ತಿಗಳು ಬಾಕಿ ಇವೆ” ಎಂದು ಮಾಹಿತಿ ನೀಡಿದರು.
“2024ರ ನವೆಂಬರ್ 30ರವರೆಗೆ ಒಟ್ಟು 4284 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.ಈ ಸಂಬಂಧ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು, ಈಗ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು, “ಉಪ ಮುಖ್ಯಮಂತ್ರಿಗಳು ಉತ್ತಮ ತಿದ್ದುಪಡಿ ವಿಧೇಯಕ ಮಂಡಿಸಿದ್ದು, ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿದ್ದಾರೆ. ಇದುವರೆಗೂ ತೆರಿಗೆ ಪಾವತಿಸದವರು ಕೂಡ ತೆರಿಗೆ ಪಾವತಿಸುವಂತೆ ಮಾಡಲಾಗಿದೆ. ತೆರಿಗೆ ವಂಚನೆ ಮಾಡುವವರು, ಕಡಿಮೆ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಳ್ಳುವವರನ್ನು ತೆರಿಗೆ ವ್ಯಾಪ್ತಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಿಸಬೇಡಿ. ಆಸ್ತಿ ತೆರಿಗೆದಾರರ ಮೇಲೆ ಹೆಚ್ಚಿನ ಭಾರ ಹೊರಿಸಬೇಡಿ. ಪಾಲಿಕೆಯನ್ನು ಆಸ್ತಿ ತೆರಿಗೆ ಹಣದಲ್ಲೇ ನಡೆಸಲು ಮುಂದಾಗಬೇಡಿ. ರಾಜ್ಯದಲ್ಲಿ 65% ತೆರಿಗೆ ಸಂಗ್ರಹವಾಗುತ್ತಿದ್ದು, ಈ ನಗರಕ್ಕೆ ಬೇರೆ ಇಲಾಖೆಗಳಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ರಾಜ್ಯ ಸರ್ಕಾರದಿಂದ ಬರುವ ಅನುದಾನ ಹೆಚ್ಚಾಗಬೇಕು ಎಂದು ಮನವಿ ಮಾಡುತ್ತೇನೆ.ಎಲ್ಲರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಮ್ಮ ಪ್ರಯತ್ನಕ್ಕೆ ಶುಭಾಶಯ ತಿಳಿಸುತ್ತೇನೆ” ಎಂದು ತಿಳಿಸಿದರು.
ನಂತರ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ಸದನದಲ್ಲಿ ಸರ್ವಾನುಮತದಿಂದ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.