- ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಆಟದ ಮೈದಾನದಲ್ಲಿ ಧ್ವಜಾರೋಹಣ
- ಸಕಾಲ, ಪೋಡಿಮುಕ್ತ ಆಂದೋಲನದಲ್ಲಿ ಜಿಲ್ಲೆಯ ಸಾಧನೆ ಬಗ್ಗೆ ಮೆಚ್ಚುಗೆ
ಚಿಕ್ಕಮಗಳೂರು, ಜ.26, 2025: ಸಾರ್ವಜನಿಕರ ದೂರು ಮತ್ತು ಅಹವಾಲುಗಳನ್ನು ಪಂಚಾಯಿತಿ ಮಟ್ಟದಲ್ಲಿ ಸ್ವೀಕರಿಸಿ ಇತ್ಯರ್ಥಪಡಿಸಲು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದ ವತಿಯಿಂದ ಆರಂಭಿಸಿರುವ ‘ಪಂಚಾಯಿತಿ ಕಟ್ಟೆ ಮತ್ತು ಗ್ರಾಮ ಸ್ಪಂದನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಭಾನುವಾರ ಏರ್ಪಡಿಸಿದ್ದ ಗಣ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, “ಕಡೂರು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ‘ಪಂಚಾಯಿತಿ ಕಟ್ಟೆ ಮತ್ತು ಗ್ರಾಮ ಸ್ಪಂದನ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಮುಂದುವರಿಸಲು ಕ್ರಮ ವಹಿಸಲಾಗಿದೆ”, ಎಂದರು.
“ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಉತ್ತಮ ರೀತಿಯಲ್ಲಿ ಸಾಧನೆ ಮಾಡಲಾಗುತ್ತಿದೆ. ನಾಗರಿಕ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸುವ ಸಕಾಲ ಯೋಜನೆಯ ಅನುಷ್ಠಾನದಲ್ಲಿ ನಮ್ಮ ಜಿಲ್ಲೆಯು ಇತ್ತೀಚಿನ ರ್ಯಾಂಕ್ ಪಟ್ಟಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದೆ. ‘ಪೋಡಿ ಮುಕ್ತ’ ಆಂದೋಲನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ”, ಎಂದು ಸಚಿವರು ಮಾಹಿತಿ ನೀಡಿದರು.
“ನಮ್ಮ ದೇಶ ಸ್ವತಂತ್ರ ಭಾರತ ಎಂದು ಹೆಮ್ಮೆ ಪಡಲು ಹಾಗೂ ಗಣರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರುಗಳನ್ನು ಹರಿಸಿ ಸ್ಥಾಪಿಸಿದ ನಮ್ಮ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯದ ಉಸಿರಿನೊಂದಿಗೆ ಶಾಂತಿ ಹಾಗೂ ಸೌಹಾರ್ದಯುತ ಬದುಕಿನ ಅನುಭವವನ್ನು ಪಡೆಯುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಿಂದಾಗಿ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಕಲ್ಪಿಸಲು ಸಾಧ್ಯವಾಗಿದೆ”, ಎಂದರು.
“ಉತ್ತರದ ಕಾಶ್ಮೀರದಿಂದ ದಕ್ಷಿಣದ ತಮಿಳುನಾಡುವರೆಗೂ ಹಾಗೂ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅಸ್ಸಾಂ ವರೆಗೂ ವಿವಿಧ ಧಾರ್ಮಿಕ ಆಚರಣೆಯುಳ್ಳ ದೊಡ್ಡ ಭೂಭಾಗಗಳು, ವಿಭಿನ್ನ ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹಲವು ಬುಡಕಟ್ಟು ಪ್ರದೇಶಗಳನ್ನೂ ಒಳಗೊಂಡ ನಮ್ಮ ದೇಶಕ್ಕೆ ಸರಿಹೊಂದುವ ಸಂವಿಧಾನದ ಅವಶ್ಯಕತೆ ಇದ್ದ ಕಾಲಘಟ್ಟದಲ್ಲಿ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚನೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯ ಅತಿ ದೊಡ್ಡ ಸಾಧನೆ. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಸಂವಿಧಾನವು ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಒದಗಿಸಲು ಸಹಾಯ ಮಾಡಿದೆ”, ಎಂದು ಹೇಳಿದರು.
“ದೇಶದ ಸಂವಿಧಾನದ ಬಹಳ ಮುಖ್ಯ ಅಂಶವಾದ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ತನ್ನ ಎಲ್ಲಾ ಪ್ರಜೆಗಳಿಗೆ ನೀಡುವ ದೃಷ್ಟಿಯಿಂದ ನಮ್ಮ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾನತೆಯ ಆಶಯವನ್ನು ಸಾರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದೆ”, ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, “ನಮ್ಮ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಂತಿಯುತವಾಗಿ ದತ್ತ ಜಯಂತಿ, ಉರುಸ್ ಆಚರಣೆ, ಸಾರ್ವಜನಿಕ ಗಣಪತಿ ಉತ್ಸವ, ಹಾಗೂ ಕ್ರಿಸ್ಮಸ್ ಆಚರಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ಸಂಪನ್ನಗೊಳ್ಳುವ ಮೂಲಕ ಸಂವಿಧಾನದ ಜಾತ್ಯತೀತ ಆಶಯಗಳನ್ನು ಈಡೇರಿಸುತ್ತಿದೆ”, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ.ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಮತ್ತಿತರರು ಪಾಲ್ಗೊಂಡಿದ್ದರು.