ಬೆಳಗಾವಿ, ಡಿಸೆಂಬರ್ 12: ಇಲ್ಲಿನ ಸುರ್ವಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಕಲಾಪದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕಾರ್ಮಿಕ ಸಚಿವರ ಹರಿಹಾಯ್ದರು. ಸಚಿವರ ಮಾತಿನ ಆರ್ಭಟಕ್ಕೆ ಇಡೀ ಸದನವೇ ಬೆಕ್ಕಸ ಬೆರಗಾದ ಘಟನೆ ನಡೆಯಿತು. ಲಾಡ್ ಅವರ ಮಾತಿನ ಚಾಟಿಗೆ ಯತ್ನಾಳ್ ಅವರು ಮರು ಮಾತನಾಡದೆ ಸುಮ್ಮನೆ ನಿಲ್ಲಬೇಕಾಯಿತು.
ಚರ್ಚೆ ವೇಳೆ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂಬಂತೆ ಉಲ್ಲೇಖಿಸಿದರು. ಇದರಿಂದ ಕೆರಳಿದ ಸಚಿವ ಸಂತೋಷ್ ಲಾಡ್ ಅವರು ಸರಿಯಾದ ಉತ್ತರ ನೀಡಿದರು. ಪಂಚಮಸಾಲಿ ಲಿಂಗಾಯಿತ ಮೀಸಲಾತಿ ಹೋರಾಟದ ನೆಪವಿಟ್ಟುಕೊಂಡು ಅನಗತ್ಯವಾಗಿ ಮಾನ್ಯ ಮುಖ್ಯಮಂತ್ರಿಗಳನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಯತ್ನಾಳ್ ಹೇಳಿಕೆಯನ್ನು ಕೂಡಲೇ ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದ ಸಂತೋಷ್ ಲಾಡ್, ಸಿಎಂ ಬಗ್ಗೆ ನಿಮ್ಮ ಹೇಳಿಕೆ ಸಲ್ಲದು, ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬಂದವರು ನೀವು ಮುಖ್ಯಮಂತ್ರಿನ ಹಿಂದೂ ವಿರೋಧಿ ಅಂತೀರಾ ಸಾಕ್ ಬಾಯಿ ಮುಚ್ಕೊಂಡ್ ಕೂತ್ಕೊಳ್ರೀ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಾತೆತ್ತಿದರೆ ಹಿಂದೂ ವಿರೋಧಿ ಹಿಂದೂ ವಿರೋಧ ಎಂದು ಬೊಬ್ಬೆ ಹಾಕುತ್ತೀರಿ. ಯಾರು ಹಿಂದೂ ವಿರೋಧಿ. ಸುಮ್ಮ ಸುಮ್ಮನೆ ಮಾತನಾಡಬೇಡಿ ಎಂದರು.ಇದಕ್ಕೆ ದನಿ ಗೂಡಿಸಿದ ಇತರೆ ಸದಸ್ಯರಾದ ಡಾ.ಜಿ.ಪರಮೇಶ್ವರ್, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ, ಶಿವಲಿಂಗೇಗೌಡ ಅವರೂ ಯತ್ನಾಳ್ ವಿರುದ್ಧ ಮುಗಿಬಿದ್ದರು
ಸ್ಪೀಕರ್ ಮಧ್ಯೆ ಪ್ರವೇಶಿ ಕಡತ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಕಲಾಪ ಸುಗಮ ಸಾಗುವಂತೆ ಮನವಿ ಮಾಡಿದರು. ಒಟ್ಟಾರೆ ಸಚಿವ ಸಂತೋಷ್ ಲಾಡ್ ಅವರ ಮಾತಿನ ಬೋರ್ಗೆರೆತಕ್ಕೆ ಇಡೀ ಸದನ ಅಚ್ಚರಿಗೊಂಡಿತ್ತು.