• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI

ನಾ ದಿವಾಕರ by ನಾ ದಿವಾಕರ
March 22, 2023
in Top Story, ಅಂಕಣ, ಕರ್ನಾಟಕ
0
ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI
Share on WhatsAppShare on FacebookShare on Telegram

ADVERTISEMENT

ನಾ ದಿವಾಕರ

ಭಾರತದಲ್ಲಿ ಆಚರಿಸಲಾಗುವ ಅನೇಕ ಹಬ್ಬಗಳು ಜನಸಾಂಸ್ಕೃತಿಕ ಮೂಲಗಳಿಂದಲೇ ಉಗಮಿಸಿವೆ. ಗಣಪನ ಆರಾಧನೆ, ಎಳ್ಳು-ಬೆಲ್ಲ ಹಂಚುವ ಸಂಕ್ರಾಂತಿ, ಬೇವು-ಬೆಲ್ಲ ಹಂಚುವ ಯುಗಾದಿ ಈ ಮೂರೂ ಪ್ರಮುಖ ಹಬ್ಬಗಳ ಮೂಲವನ್ನು ಶೋಧಿಸುತ್ತಾ ಹೋದರೆ ನಮ್ಮ ಶೋಧನೆಯ ನೆಲೆಗಳು ಭಾರತೀಯ ಸಮಾಜದ ಜನಸಾಂಸ್ಕೃತಿಕ ಬೇರುಗಳನ್ನು ತಲುಪುತ್ತದೆ. ಮನುಷ್ಯನ ನಿತ್ಯ ಬದುಕು ಮತ್ತು ಈ ಬದುಕಿಗೆ ಪೂರಕವಾದ ಪರಿಕರಗಳನ್ನು ಒದಗಿಸುವ ನಿಸರ್ಗ ಇವೆರಡರ ನಡುವೆ ಏರ್ಪಡುವ ಸೂಕ್ಷ್ಮ ಸಂಬಂಧಗಳನ್ನು ಗಮನಿಸಿದರೆ, ಈ ಹಬ್ಬಗಳ ಮಹತ್ವವೂ ಅರ್ಥವಾಗುತ್ತದೆ. ಇತಿಹಾಸದ ಕಾಲಕ್ರಮದಲ್ಲಿ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪ್ರಭಾವದಿಂದ ಮತ್ತು ಶತಮಾನಗಳ ವೈದಿಕಶಾಹಿ ಪಾರಮ್ಯದ ಪರಿಣಾಮವಾಗಿ ಯುಗಾದಿಯನ್ನೂ ಸೇರಿದಂತೆ ಅನೇಕ ಹಬ್ಬಗಳು ಜನಸಂಸ್ಕೃತಿಯ ಮೂಲ ನೆಲೆಗಳಿಂದ ಹೊರಬಂದು, ಯಾವುದೋ ನಿರ್ದಿಷ್ಟ ಆಚರಣೆ, ವಿಧಿವಿಧಾನಗಳ ಅಂಗಳದಲ್ಲಿ ಸಂಭ್ರಮಿಸಲ್ಪಡುತ್ತಿವೆ.

ಆದರೂ ನಿರ್ದಿಷ್ಟ ಪ್ರಾದೇಶಿಕ-ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ದಾಟಿ ನಿಸರ್ಗ ಸೃಷ್ಟಿ ಮತ್ತು ಕಾಲಕಾಲಕ್ಕೆ ಪಲ್ಲವಿಸುವ ನಿಸರ್ಗದ ಸೌಂದರ್ಯವನ್ನು ಗಮನದಲ್ಲಿಟ್ಟು ನೋಡಿದಾಗ, ಯುಗಾದಿ ಕೇವಲ ಒಂದು ದಿನದ ಬೇವು-ಬೆಲ್ಲ ಅಥವಾ ವರ್ಷತೊಡಕಿನ ಆಚರಣೆಯೊಂದಿಗೆ ಮುಗಿಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಯುಗದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ʼ ಯುಗಾದಿ ʼ ಎಂಬ ಕವಿತೆಯ ಮೊದಲ ಈ ನಾಲ್ಕು ಸಾಲುಗಳು :

“ಯುಗ ಯುಗಾದಿ ಕಳೆದರೂ/ಯುಗಾದಿ ಮರಳಿ ಬರುತಿದೆ/ಹೊಸ ವರುಷಕೆ ಹೊಸ ಹರುಷವ/ಹೊಸತು ಹೊಸತು ತರುತಿದೆ ”

ಕನ್ನಡ ಜಗತ್ತಿನ ಮಟ್ಟಿಗೆ ಯುಗಾದಿಯ ಆಚರಣೆಯ ಬಗ್ಗೆ ಒಂದು ಹೊಸ ಚಿಂತನೆಯನ್ನೇ ಮೂಡಿಸಿದೆ. ನಿಸರ್ಗದ ಚಲನೆ ಮತ್ತು ಕ್ರಿಯೆ ಎರಡೂ ಸಹ ನಿರಂತರವಾದದ್ದು, ಚೈತ್ರ ಮಾಸದ ನವ ಚಿಗುರು ಆಧುನಿಕ ಜಗತ್ತಿಗೆ ನಿಯತಕಾಲಿಕವಾಗಿ ತನ್ನ ಚೆಲುವನ್ನು ಪರಿಚಯಿಸುತ್ತಲೇ, ತನ್ನ ಪಾಡಿಗೆ ತಾನು ಸದ್ದಿಲ್ಲದೆ ಒಣಗಿ ಸುರುಟಿಹೋದ ಕೊಂಬೆ ರೆಂಬೆಗಳಲ್ಲೂ ನವ ವಸಂತದ ರಾಗವನ್ನು ಪಲ್ಲವಿಸುವ ಮೂಲಕ ಮನುಷ್ಯ ಕುಲಕ್ಕೆ ಬಿಸಿಲಿನನ ಝಳದಲ್ಲೂ ತಂಪನ್ನೆರೆಯುತ್ತದೆ.

ಸಂಕ್ರಾಂತಿ ಮತ್ತು ಯುಗಾದಿ ಈ ಎರಡೂ ಹಬ್ಬಗಳು ನೆಲ ಮೂಲದ ಹಬ್ಬಗಳು. ಈ ಎರಡೂ ಹಬ್ಬಗಳ ಮೂಲ ಧಾತು ಇರುವುದು ಧರಿತ್ರಿಯಲ್ಲಿ ಮತ್ತು ಧರೆಯನ್ನು ಸದಾ ಕಾಲವೂ ತಮ್ಮದೇ ಕೂಸಿನಂತೆ ಪೋಷಿಸುವ ರೈತಾಪಿಯ ಬದುಕಿನಲ್ಲಿ. ಮಾನವನ ಅಭ್ಯುದಯದ ಹಾದಿಯನ್ನು ಗಮನಿಸಿದಂತೆಲ್ಲಾ, ನಿಸರ್ಗ, ನಿಸರ್ಗದ ಒಡಲು ಮತ್ತು ಸೌಂದರ್ಯ ಇವೆಲ್ಲವನ್ನೂ ಕಾಪಾಡುವ ಹೊಣೆ ಹೊತ್ತುಕೊಂಡು, ಇಂದಿಗೂ ಸಹ ಅದನ್ನು ಪೂಜ್ಯಭಾವದೊಂದಿಗೆ ಕಾಪಾಡುತ್ತಲೇ ಬಂದಿರುವ ಒಂದು ಸಮುದಾಯವನ್ನು ಗುರುತಿಸಬಹುದಾದರೆ ಅದು, ಮಣ್ಣಲ್ಲೇ ದುಡಿದು, ಮಣ್ಣಲ್ಲೇ ಬದುಕಿ, ಮಣ್ಣಿನ ನಡುವೆಯೇ ತಮ್ಮ ಬದುಕು ಕಟ್ಟಿಕೊಳ್ಳುವ ಮಣ್ಣಿನ ಮಕ್ಕಳ ಜೀವನದಲ್ಲಿ. ವಸಂತ ಋತುವನ್ನು ಸ್ವಾಗತಿಸಲು ಚೈತ್ರ ಮಾಸದಲ್ಲಿ ನಿಸರ್ಗ ಸೃಷ್ಟಿಸುವ ತಳಿರು ತೋರಣಗಳಿಗೆ ಮಾನವ ಸಮಾಜ ರೂಪಿಸಿಕೊಂಡಿರುವ ಯಾವುದೇ ಅಸ್ಮಿತೆ, ಅನನ್ಯತೆಗಳೂ ಅನ್ವಯಿಸುವುದಿಲ್ಲ. ತನ್ನ ಪಾಡಿಗೆ ತಾನು ಮರುಜೀವ ಪಡೆದುಕೊಳ್ಳುವ ಯಾಂತ್ರಿಕತೆ ನಿಸರ್ಗ ಪ್ರಕ್ರಿಯೆಯ ಒಂದು ಮಹತ್ತರವಾದ ಶಕ್ತಿ ಎನ್ನುವುದನ್ನು ಮನುಕುಲ ಇನ್ನಾದರೂ ಗ್ರಹಿಸಬೇಕಲ್ಲವೇ ? ಭೂಮಿ, ಅರಣ್ಯ, ಬೆಟ್ಟಗುಡ್ಡಗಳು, ಪರ್ವತಗಳು, ಹುಲ್ಲುಗಾವಲುಗಳು ನಿಸರ್ಗದ ಸಹಜ ಸೃಷ್ಟಿಗಳೆಂಬ ಅರಿವಿದ್ದರೂ, ಮಾನವ ಸಮಾಜ ಈ ಪರಿಸರ ಸಂಪತ್ತಿನ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸಲೆಂದೇ ಹಲವು ಮಾರ್ಗಗಳನ್ನು ಸೃಷ್ಟಿಸಿಕೊಂಡಿದೆ.

ಹಿಂದೂಗಳಲ್ಲೇ ವಿವಿಧ ರಾಜ್ಯಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಅಚರಿಸಲ್ಪಡುವ ಯುಗಾದಿ ಹಬ್ಬದ ಮೂಲ ಧಾತು ಇರುವುದು ನಿಸರ್ಗದಲ್ಲೇ. ಇದು ಎಲ್ಲ ಹಬ್ಬಗಳಂತೆಯೂ ಅಲ್ಲ. ನಂಬಿಕಸ್ಥರಿಗೆ ಇದು ಹೊಸ ವರ್ಷದ ಆರಂಭ. ಹಿಂದೂ ಧಾರ್ಮಿಕ ಆಚರಣೆಗಳನ್ನು ಅನುಸರಿಸುವವರಿಗೆ ಇದು, ವೈದಿಕ ಪರಂಪರೆಯನ್ನು ಅನುಸರಿಸುವವರಿಗೆ ಇದು ಹೊಸ ಸಂವತ್ಸರದ ಆರಂಭ. ಆದರೆ ಈ ಚೌಕಟ್ಟಿನಿಂದಾಚೆಗೆ ನಿಂತು ನೋಡಿದಾಗ, ಯುಗಾದಿ ಪ್ರಕೃತಿಯ ಹಬ್ಬದಂತೆಯೇ ಕಾಣುತ್ತದೆ. ಪ್ರಕೃತಿಯು ತನ್ನ ಒಡಲೊಳಗಿಂದಲೇ ತಂತಾನೇ ನೀಡುವ ಬೇವು ಮತ್ತು ಮನುಷ್ಯ ಬೆವರು ಸುರಿಸಿ, ಶ್ರಮವಹಿಸಿ ಕಬ್ಬು ಬೆಳೆದು, ಅದನ್ನು ಅರೆದು ತಯಾರಿಸುವ ಬೆಲ್ಲ,  ಎರಡನ್ನೂ ಒಟ್ಟಿಗೆ ಸೇವಿಸುವ ಒಂದು ಆಚರಣೆಯು ಯುಗಾದಿ ಹಬ್ಬವನ್ನು ಕಳೆಗಟ್ಟಿಸುತ್ತದೆ. ಇಲ್ಲಿ ನಮಗೆ ಮಾನವನ ಶ್ರಮ ಮತ್ತು ನಿಸರ್ಗದ ಸಹಜ ಪ್ರವೃತ್ತಿ ಎರಡೂ ಸಹ ಒಂದರೊಳಗೊಂದು ಬೆರೆತು ಸಾಗಿದಾಗ ಮಾತ್ರವೇ ನಿಸರ್ಗದ ಸಮತೋಲನವನ್ನು ಕಾಪಾಡಿಕೊಂಡು ಹೋಗಲು ಸಾಧ್ಯ ಎಂಬ ಸೂಕ್ಷ್ಮ ಸಂದೇಶವೂ ಕಾಣುತ್ತದೆ. ಈ ಬೇವು ಬೆಲ್ಲದ ಸೇವನೆಯನ್ನು ಸುಖ-ದುಃಖಗಳನ್ನು ಸಮಾನವಾಗಿ ಕಾಣಬೇಕೆನ್ನುವ ಸಂದೇಶವಾಗಿಯೂ ನಮ್ಮ ಸಮಾಜ ನೋಡುತ್ತದೆ.

ಪರಿಸರ ಮತ್ತು ಯುಗಾದಿಯ ಸಂವಾದ

ಆದರೆ ನಾವು ನೋಡಬೇಕಿರುವುದು ಮನುಷ್ಯ ಸಮಾಜದ ಸುಖ ಮತ್ತು ನಿಸರ್ಗದ ದುಃಖ ಇವೆರಡೂ ಪರಸ್ಪರ ಸ್ಪಂದಿಸುತ್ತಿವೆಯೇ ಎಂಬ ವಾಸ್ತವವನ್ನು. ಆಧುನಿಕ ಮಾನವ ತನ್ನ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಪ್ರಕೃತಿಯ ಎಲ್ಲ ಮೂಲ ನೆಲೆಗಳನ್ನೂ ಧ್ವಂಸ ಮಾಡುತ್ತಲೇ ತನ್ನ ರಾಕ್ಷಸ ಬಾಹುಗಳನ್ನು ಚಾಚುತ್ತಿದ್ದಾನೆ. ನಿಸರ್ಗ ತನ್ನೊಳಗೇ ಸೃಷ್ಟಿಸಿಕೊಳ್ಳುವ ಸೌಂದರ್ಯದ ತಾಣಗಳು ಆಧುನಿಕ ಮನುಷ್ಯನ ಮನತಣಿಸುವ ಮನರಂಜನೆಯ ಸರಕುಗಳಂತಾಗಿವೆ. ಹಾಗೆಯೇ ಪ್ರಕೃತಿಯು ಮಾನವ ಸಮಾಜವನ್ನು, ಸಕಲ ಜೀವ ಚರಾಚರಗಳನ್ನು ಕಾಪಾಡಲೆಂದೇ ಸೃಷ್ಟಿಸುವ ಮೂಲ ಸೆಲೆಗಳನ್ನು ಮನುಷ್ಯ ಸಮಾಜ ಬತ್ತುವಂತೆ ಮಾಡುವುದರಲ್ಲಿ ನಿರಂತರವಾಗಿ ತೊಡಗಿರುತ್ತದೆ. ತಾನೇ ಸೃಷ್ಟಿಸಿಕೊಂಡಿರುವ ಐಷಾರಾಮಿ ಭೋಗ ಜೀವನಕ್ಕೆ ಪೂರಕವಾದಂತಹ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಮನುಷ್ಯನು ಪ್ರಕೃತಿಯ ಬೇರುಗಳನ್ನೇ ಕಿತ್ತೊಗೆಯಲೂ ಹಿಂಜರಿಯದ ಒಂದು ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ.

ಪರಿಸರ ಸಮತೋಲನ, ಪರಿಸರ ಸಂರಕ್ಷಣೆ ಮತ್ತು ಪೋಷಣೆ ಇವೆಲ್ಲವೂ ಸಹ ಅಭಿವೃದ್ಧಿ ಪಥದ ನಿಘಂಟಿನಲ್ಲಿ ಅರ್ಥಹೀನ ಪದಗಳಾಗಿಬಿಡುತ್ತವೆ. ಬಿರುಬಿಸಿಲಿನ ಝಳದಲ್ಲಿ ನಿಂತು ಸೂರ್ಯನನ್ನು ಶಪಿಸುತ್ತಾ ನಿಲ್ಲುವ ಆಧುನಿಕ ಮಾನವನಿಗೆ, ಈ ಬೇಗೆಯಿಂದ ತಪ್ಪಿಸಿಕೊಳ್ಳಲೆಂದೇ ಪ್ರಕೃತಿ ನೀಡಿರುವ ಅರಣ್ಯ ಮತ್ತು ಸಸ್ಯ ಸಂಪತ್ತನ್ನು ತಾನೇ ಕೈಯ್ಯಾರೆ ನಾಶ ಮಾಡಿರುವುದು ಗಮನಕ್ಕೇ ಬರುವುದಿಲ್ಲ. ಏಕೆಂದರೆ ತನ್ನ ಅಭ್ಯುದಯಕ್ಕಾಗಿ ಅನುಸರಿಸುವ ಆರ್ಥಿಕ ಅಭಿವೃದ್ಧಿಯ ಮಾರ್ಗದಲ್ಲಿ ಅಡ್ಡಿಯಾಗುವ ಎಲ್ಲ ಭೌತಿಕ ಅಡೆತಡೆಗಳನ್ನೂ ನಿರ್ನಾಮ ಮಾಡುವುದು ತನ್ನ ಹಕ್ಕು ಎಂದೋ ಅಥವಾ ಅನಿವಾರ್ಯ ಆದ್ಯತೆ ಎಂದೋ ಮಾನವ ಸಮಾಜ ಪರಿಭಾವಿಸುತ್ತದೆ. ಹಾಗಾಗಿಯೇ  ಅರಣ್ಯವನ್ನು ಬೋಳಿಸಿ ನಿಸರ್ಗದ ಒಡಲನ್ನು ಭೇದಿಸುವ ಗಣಿಗಾರಿಕೆ, ನದಿಗಳ ಹರಿವನ್ನೇ ತಡೆಗಟ್ಟಿ ಈ ನದಿಗಳು ತಮ್ಮ ಹಾದಿಯಲ್ಲಿ ಪೋಷಿಸುವ ಅರಣ್ಯಗಳನ್ನೂ ಬೋಳಿಸಿ ನಿರ್ಮಿಸಲಾಗುವ ಬೃಹತ್‌ ಅಣೆಕಟ್ಟುಗಳು, ಪೃಕೃತಿಯ ಸುಂದರ ಮಡಿಲಲ್ಲಿ ನಮ್ಮ ಭೌಗೋಳಿಕ-ಲೌಕಿಕ ರಕ್ಷಣೆಗಾಗಿ ಮಾನವ ಜಗತ್ತು ನಿರ್ಮಿಸುವ ಅಣುಸ್ಥಾವರಗಳು ಇವೆಲ್ಲವೂ ಮಾನವಾಭಿವೃದ್ಧಿಯ ಸಂಕೇತಗಳಾಗಿಬಿಡುತ್ತವೆ.

ಪ್ರಕೃತಿಯ ರಕ್ಷಣೆ ಮತ್ತು ಮಾನವ ಸಮಾಜದ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಗಳನ್ನು ವಿರೋಧಿಸುವ ಪರಿಸರವಾದಿಗಳು ಅಥವಾ ಚಿಂತಕರು ಆಧುನಿಕ ಆಡಳಿತ ಪರಿಭಾಷೆಯಲ್ಲಿ ಅರ್ಬನ್‌ ನಕ್ಸಲರಾಗಿಡುತ್ತಾರೆ. ಅಥವಾ ಇಂತಹ ಚಿಂತನೆಗಳಿಗೆ ನೀರೆರೆಯುವ ಅಕ್ಷರ ಲೋಕದ ಪ್ರತಿನಿಧಿಗಳನ್ನು ಪ್ರಗತಿವಿರೋಧಿಗಳೆಂದು ಹೀಗಳೆಯಲಾಗುತ್ತದೆ. ಪ್ರಕೃತಿಯೊಂದಿಗೆ ಸಹಭಾವದೊಂದಿಗೆ, ಸಮನ್ವಯದೊಂದಿಗೆ ಬಾಳಲು ಕಲಿಯಬೇಕಾದ ಮಾನವ ಇಂದು ತನ್ನ ತಂತ್ರಜ್ಞಾನ ಮತ್ತು ತಾಂತ್ರಿಕತೆಯ ಉನ್ನತಿಯನ್ನೇ ಪರಮೋತ್ಕೃಷ್ಟ ಎಂದು ಭಾವಿಸುತ್ತಾ ತಾನು ನಿಸರ್ಗ ಸೃಷ್ಟಿಯನ್ನೂ ಮೀರಿ ಸಾಧಿಸುತ್ತೇನೆ ಎಂಬ ಅಹಮಿಕೆಯೊಂದಿಗೆ ಮುನ್ನಡೆಯುತ್ತಿದ್ದಾನೆ. ಹಾಗಾಗಿಯೇ ನೈಸರ್ಗಿಕ ತಾಣಗಳು ಮನುಷ್ಯ ಸಮಾಜದ ದೃಷ್ಟಿಯಲ್ಲಿ ತಮ್ಮ ದಣಿವಾರಿಸಿಕೊಳ್ಳುವ ಆರಾಮಕುರ್ಚಿಗಳಾಗಿ ಕಾಣುತ್ತಿವೆ. ಇತ್ತೀಚಿನ ಉದಾಹರಣೆಯನ್ನು  ಕುಸಿಯುತ್ತಿರುವ ಜೋಷಿಮಠದಲ್ಲಿ ಕಾಣಬಹುದು.

ಭೂಮಂಡಲ ಎಂದರೆ ಅದು ಮನುಷ್ಯ ಜೀವಿಯ ಪರಮಾಧಿಕಾರದ ನೆಲೆ ಎಂದೇ ಭಾವಿಸಿರುವ ಆಧುನಿಕ ಜಗತ್ತಿಗೆ ಈ ಪ್ರಪಂಚದಲ್ಲಿ ಇತರ ಚರಾಚರಗಳಿಗೂ ಒಂದು ಅಸ್ತಿತ್ವ, ಅಸ್ಮಿತೆ ಇದೆ ಎನ್ನುವ ಪರಿಜ್ಞಾನವೇ ಇಲ್ಲದಂತಾಗಿದೆ. ಆದ್ದರಿಂದಲೇ ನಾವು ವನ್ಯಜೀವಿಗಳು ವಾಸಿಸುವ ಸುರಕ್ಷಿತ ತಾಣಗಳನ್ನೂ ಅತಿಕ್ರಮಿಸಿ ನಮ್ಮ ಐಷಾರಾಮಿ ನಗರಗಳನ್ನು ನಿರ್ಮಿಸುತ್ತಿದ್ದೇವೆ.  ಹಾಗೆಯೇ ಜಾನುವಾರುಗಳ ಅವಶ್ಯಕತೆಯನ್ನೂ ಕಡೆಗಣಿಸಿ ಕೆರೆ, ಹೊಂಡ, ತೊರೆಗಳನ್ನು ಸಪಾಟು ಮಾಡಿ ನಗರಗಳನ್ನು ನಿರ್ಮಿಸುತ್ತಿದ್ದೇವೆ. ಆಹಾರವನ್ನು ಅರಸಿ ಬರುವ ಹುಲಿ, ಚಿರತೆ, ಆನೆ ಮುಂತಾದ ವನ್ಯಜೀವಿಗಳು ತಮಗೆ ಅವಶ್ಯವಾದ ಆಹಾರ ಮತ್ತು ಅವಕಾಶ ಎರಡನ್ನೂ ಕಸಿದುಕೊಂಡಿರುವ ಮನುಷ್ಯನ ಮೇಲೆ ಎರಗುವುದು ಸಹಜವೇ ಅಲ್ಲವೇ ? ಆದರೂ ತನ್ನದೇನೂ ತಪ್ಪಿಲ್ಲ ಎನ್ನುವಂತೆ ಮಾನವ ಸಮಾಜ ಈ ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲಲೂ ಹಿಂಜರಿಯುತ್ತಿಲ್ಲ. ತನ್ನ ಉಳಿವಿಗಾಗಿ ಹಿಮಾಲಯವನ್ನೂ ತೆರವುಗೊಳಿಸುವ ಮಟ್ಟಿಗೆ ಆಧುನಿಕ ಮಾನವ ಜಗತ್ತು ತನ್ನ ಅಭಿವೃದ್ಧಿಯ ಚಿಂತನೆಗಳನ್ನು ರೂಢಿಸಿಕೊಂಡಿರುವುದು ಸ್ಪಷ್ಟ.

ಪ್ರಕೃತಿ ಸಮನ್ವಯದ ಯುಗಾದಿ

ಬದಲಾಗುತ್ತಿರುವ ಹವಾಮಾನ, ಏರುಪೇರಾಗುತ್ತಿರುವ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲಗಳು, ಏರುತ್ತಿರುವ ಜಾಗತಿಕ ತಾಪಮಾನ ಇವೆಲ್ಲದರ ನಡುವೆ ಮಾನವ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ತಲ್ಲಣಗಳನ್ನು ಒಮ್ಮೆ ನೆನೆಸಿಕೊಂಡಾಗ, ಭಾವನಾತ್ಮಕ ನೆಲೆಯಲ್ಲಾದರೂ ಪ್ರಕೃತಿ ಮಾನವ ಸಮಾಜದ ಮೇಲೆ ಮುನಿಸಿಕೊಂಡಿದೆ ಎನಿಸುವುದು ಸಹಜ. ಆದರೆ ವಾಸ್ತವದಲ್ಲಿ ಪ್ರಕೃತಿಗೆ ಕಿರುಕುಳ ಕೊಡುತ್ತಿರುವುದು ಇದೇ ಮನುಷ್ಯ ಜಗತ್ತು. ಒಂದು ಬೇವಿನ ಮರದ ಔಷಧೀಯ, ನೈಸರ್ಗಿಕ ಮತ್ತು ಮಾನವೀಯ ಉಪಯೋಗಗಳನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೂರಾರು ಪಕ್ಷಿಗಳಿಗೆ ಒಮ್ಮೆಲೆ ಆಶ್ರಯ ನೀಡುವ ಹಚ್ಚ ಹಸಿರಿನ ಈ ಅಮೂಲ್ಯ ವೃಕ್ಷವನ್ನು ಕಡಿಯಕೂಡದು ಎಂಬ ಅಲಿಖಿತ ನಿಯಮವನ್ನು ನಮ್ಮ ಪೂರ್ವಿಕರು ಮಾಡಿದ್ದುದೂ ಇದೇ ಕಾರಣಕ್ಕಾಗಿಯೇ. ಆದರೆ ಆಧುನಿಕ ಮಾನವ ಇದನ್ನು ಪೂಜಿಸುವ ಮೌಢ್ಯವನ್ನು ರೂಢಿಸಿಕೊಂಡಿದ್ದಾನೆಯೇ ಹೊರತು ರಕ್ಷಿಸುವ ವ್ಯವಧಾನವನ್ನಲ್ಲ. ನಮ್ಮ ಮನೆ ಎದುರಿನ 80 ಅಡಿ ರಸ್ತೆಗೋ, ಹೆದ್ದಾರಿಗೋ, ಮೇಲ್ಸೇತುವೆಗೋ ಅವಶ್ಯವೆಂದಾದಲ್ಲಿ ಬೇವಿನ ಮರವನ್ನೂ ಬುಡಮೇಲು ಮಾಡುತ್ತೇವೆ. ಹಾಗೆಯೇ ಬೆಲ್ಲದ ಮೂಲ ಧಾತು, ಕೃಷಿ ಭೂಮಿಯನ್ನೂ ಕಬಳಿಸುತ್ತೇವೆ.

ಪ್ರಕೃತಿಯೊಡನೆ ಸಂವಾದಿಸುತ್ತಾ ಸಮನ್ವಯ ಸಾಧಿಸುವ ವಿವೇಕವನ್ನೇ ಕಳೆದುಕೊಂಡಿರುವ ಆಧುನಿಕ ಮಾನವ ಸಮಾಜ, ಬೇವು-ಬೆಲ್ಲವನ್ನು ಹಂಚುವ ಮೂಲಕ ಸಾಧಿಸಲೆತ್ನಿಸುವ ಸಮನ್ವಯ ಅಥವಾ ಸೌಹಾರ್ದತೆ ನಮ್ಮ ಸ್ವಾರ್ಥ ಬದುಕಿನ ಒಂದು ಭಾಗವಷ್ಟೇ.  ನಾವು ಸಮನ್ವಯ ಸಾಧಿಸಬೇಕಿರುವುದು ಪ್ರಕೃತಿಯೊಡನೆ. ಪ್ರಕೃತಿಯ ಆರಾಧಕರಾಗಿ ಅಲ್ಲ ಸಂರಕ್ಷಕರಾಗಿ.  ಜಲಸ್ಪೋಟ, ಬೆಟ್ಟಗಳ ಕುಸಿತ, ಘಟ್ಟಗಳ ಕುಸಿತ, ಹಿಮಕುಸಿತ, ಕಾಡ್ಗಿಚ್ಚು ಇವೆಲ್ಲದರ ನಡುವೆಯೇ ನಾವು ಇತ್ತ ಯುಗಾದಿಯನ್ನೂ ಸಂಭ್ರಮಿಸುತ್ತೇವೆ. ಈ ಸಂಭ್ರಮದ ಪ್ರತಿ ಕ್ಷಣದಲ್ಲೂ ನಮಗೆ ನೆನಪಾಗಬೇಕಿರುವುದು ಪರಿಸರಕ್ಕೆ ನಾವು ಉಂಟುಮಾಡುತ್ತಿರುವ ಹಾನಿ ಮತ್ತು ಮಾಲಿನ್ಯ. ಹಕ್ಕಿಗಳಿಗೆ ಗೂಡು ಕಟ್ಟಲೂ ಜಾಗವಿಲ್ಲದಂತೆ ನಗರಾಭಿವೃದ್ಧಿಯತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ. ಗುಬ್ಬಚ್ಚಿಯ ಚಿಂವ್‌ಚಿಂವ್‌ ಸದ್ದು ಕೇಳಲು ಅಂತರ್ಜಾಲವನ್ನೋ, ಚಾಟ್‌ಜಿಪಿಟಿಯನ್ನೋ ಅವಲಂಬಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ. ಆದರೆ ನಾವು ಬದುಕಲೋಸುಗ ಸಮನ್ವಯ, ಸೌಹಾರ್ದತೆ, ಭ್ರಾತೃತ್ವವನ್ನು ಬೆಳೆಸಿಕೊಳ್ಳಲು ಬೇವು-ಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದೇವೆ.

ಮನುಜ ಸಮಾಜ ಎಂಬ ಬೇವು, ಪ್ರಕೃತಿಯೊಡಲಿನ ಬೆಲ್ಲ ಇವೆರಡನ್ನೂ ಸಮತೋಲನದಿಂದ ಕಾಪಾಡುವ ಮನುಷ್ಯ ವಿವೇಕವನ್ನು ಆಧುನಿಕತೆ, ಬಂಡವಾಳಶಾಹಿ ಅಭಿವೃದ್ಧಿಯ ಚಿಂತನೆಗಳು ಮತ್ತು ಮಾರುಕಟ್ಟೆಯ ಬದುಕು ನಿರಂತರವಾಗಿ ನಾಶಪಡಿಸುತ್ತಲೇ ಬರುತ್ತಿವೆ. ಬೇವು-ಬೆಲ್ಲ ಸೇವಿಸುವ ಮೂಲಕ ಸುಖ-ದುಃಖವನ್ನು ಸಮನಾಗಿ ಕಾಣಲು ಹಪಹಪಿಸುವ ಅಧುನಿಕ ಮನುಜ ಜಗತ್ತು, ಮಾನವ ಲೋಕದ ಭೋಗಜೀವನದ ಸುಖ ಮತ್ತು ನಿಸರ್ಗದೊಡಲಿನ ದುಃಖ ಇವೆರಡನ್ನೂ ಸಮಾನ ನೆಲೆಯಲ್ಲಿ ಗ್ರಹಿಸಿ, ಪರಿಸರವನ್ನು ರಕ್ಷಿಸಲು ಮುಂದಾದಾಗ ಮಾತ್ರ ನಾವು ಆಚರಿಸುವ ಯುಗಾದಿಯೂ ಅರ್ಥಪೂರ್ಣವಾದೀತು. ಬೇಂದ್ರೆಯವರ ಸಾಲುಗಳು, ಯುಗಾದಿ ಎಂಬ ಕವಿತೆ, ಸಾರ್ವಕಾಲಿಕವಾಗಿ ಪ್ರಸ್ತುತವಾಗುವುದೂ ಈ ಕಾರಣಕ್ಕಾಗಿಯೇ.

-೦-೦-೦-೦-

Tags: BengalorebevubellabevubelladhabbahindugallahabbahinduspestivalugadiUGADI CELEBRATIONugadihabbaugadikarnatakaugatipesival
Previous Post

ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು..! ; ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

Next Post

ಭಾರತ ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಸ್ವಾತಂತ್ರ್ಯವಿದೆ.. ಆದ್ರೆ ಹುಷಾರ್..

Related Posts

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
0

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹೋಳಾಗಿದ್ದು, ಜನರ ಪಾಲಿಗೆ ಗೋಳು ಹಾಗೂ ರೈತರಿಗೆ ಹೂಳು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ. https://youtu.be/08RCmq0_6ZY?si=TI6mlA8BZyxXTGUN ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ...

Read moreDetails
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

November 21, 2025
Next Post
ಭಾರತ ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಸ್ವಾತಂತ್ರ್ಯವಿದೆ.. ಆದ್ರೆ ಹುಷಾರ್..

ಭಾರತ ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಸ್ವಾತಂತ್ರ್ಯವಿದೆ.. ಆದ್ರೆ ಹುಷಾರ್..

Please login to join discussion

Recent News

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada