ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳೇ ಇಲ್ಲಿ ಸಾರ್ವಭೌಮರು. ಅದರ ಜೊತೆಗೆ ಭಾರತದಲ್ಲಿ ವಾಕ್ ಸ್ವಾತಂತ್ರ್ಯವಿದೆ. ಇದೆಲ್ಲದರ ನಡುವೆ ಹಿಂದುತ್ವದ ಬಗ್ಗೆ ನಟ ಚೇತನ್ ಒಂದು ಪೋಸ್ಟ್ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಬಂಧನ ಮಾಡಿದ್ದು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉರಿಗೌಡ ಹಾಗು ನಂಜೇಗೌಡ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವಾಗ, ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಲು ಮುಂದಾಗಿದ್ದ ನಟ ಚೇತನ್ ಅಹಿಂಸಾ, ಹಿಂದುತ್ವ ಹುಟ್ಟಿರುವುದೇ ಸುಳ್ಳಿನ ಆಧಾರದಲ್ಲಿ ಎಂದು ಕಟುವಾಗಿ ಟೀಕಿಸಿ, ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಹಿಂದೂ ಸಂಘಟನೆ ಮುಖಂಡ ಶಿವಕುಮಾರ್ ಎಂಬುವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ..!
ನಟ ಚೇತನ್ ಪೋಸ್ಟ್ನ ಸಾರಾಂಶ ಅಂದರೆ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆಯೇ ಕಟ್ಟಲಾಗಿದೆ. ಸಾರ್ವಕರ್ ಹೀಗೆ ಹೇಳಿದ್ದರು. ‘ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು’ ಇದು ಸುಳ್ಳು. ‘1992ರಲ್ಲಿ ಬಾಬರಿ ಮಸೀದಿ ರಾಮಜನ್ಮ ಭೂಮಿ’ ಇದು ಸುಳ್ಳು. ಈಗ 2023ರಲ್ಲಿ ‘ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು’ ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ ಎಂದು ಪೋಸ್ಟ್ ಹಾಕಿದ್ದರು. ಇದೊಂದು ಪೋಸ್ಟ್ ಆಧರಿಸಿ ದೂರು ದಾಖಲಾಗಿತ್ತು. ಕೂಡಲೇ ಅಖಾಡಕ್ಕೆ ಇಳಿದ ಶೇಷಾದ್ರಿಪುರಂ ಪೊಲೀಸ್ರು ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಕಳುಹಿಸಲಾಯ್ತು. ಇವರ ಮೇಲೆ ಹೊರಿಸಿರುವ ಆರೋಪ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ.

ಧಾರ್ಮಿಕ ಭಾವನೆಗೆ ಧಕ್ಕೆ, ಸಮಾಜಕ್ಕೆ ಸುಳ್ಳು ಮಾಹಿತಿ..!
ನಟ ಚೇತನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದು, ಶೇಷಾದ್ರಿಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸಂಬಂಧ ಪ್ರಕರಣ ದಾಖಲಾಗಿದೆ. ನಟ ಚೇತನ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಅದೇಶ ಮಾಡಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಸುಳ್ಳು ಮಾಹಿತಿಯನ್ನು ಹಂಚಿದ್ದು ಯಾರು..? ಯಾರೋ ಒಬ್ಬರು ದೂರು ಕೊಟ್ಟರು ಪೊಲೀಸರು ಬಂದು ಅರೆಸ್ಟ್ ಮಾಡಿದರು. ಇಂದು ಕೋರ್ಟ್ಗೆ ರಜೆ, ನಾಳೆ ಜಾಮೀನು ಅರ್ಜಿ ಸಲ್ಲಿಸಬೇಕಿದೆ. ಮತ್ತೆ ವಿಚಾರಣೆ ಮುಂದೂಡಿಕೆ ಆದರೆ ಒಂದು ವಾರ ಜೈಲಿನಲ್ಲಿ ಹಾಕಿಸಿದ ತೃಪ್ತಿ ಪಡೆಯುವ ಪ್ರಕರಣದಂತೆ ಕಾಣಿಸುತ್ತಿದೆ.
‘ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದರು’ ಇದು ಸುಳ್ಳಲ್ಲವೇ..?
ಸಚಿವ ಅಶ್ವತ್ಥ ನಾರಾಯಣ, ಸಿ.ಟಿ ರವಿ, ಆರ್ ಅಶೋಕ್, ಮುನಿರತ್ನ ಸೇರಿದಂತೆ ಹಲವಾರು ನಾಯಕರು ಟಿಪ್ಪು ಸುಲ್ತಾನನ್ನು ಕೊಂದಿದ್ದು ಉರಿಗೌಡ ಹಾಗು ನಂಜೇಗೌಡ ಎನ್ನುವ ಸುಳ್ಳು ಹೇಳಿಕೆ ನೀಡಿ ಒಕ್ಕಲಿಗ ಸಮುದಾಯಕ್ಕೆ ಅವಮಾನಿಸಿದ್ದು ತಪ್ಪಲ್ಲವೇ..? ಅದೇ ರೀತಿ ಉರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು ಎಂದಿದ್ದು ಪ್ರಚೋದನೆ ಆಗುವುದಿಲ್ಲವೇ..? ಒಕ್ಕಲಿಗ ಸಮುದಾಯದ ಮೇಲೆ ಮುಸ್ಲಿಂ ಸಮುದಾಯಕ್ಕೆ ದ್ವೇಷ ಬೆಳೆಸುವ ಸಂಚಲ್ಲವೇ..? ಎರಡು ಸಮುದಾಯದ ನಡುವೆ ಬೆಂಕಿ ಹಚ್ಚುವ ಪ್ರಯತ್ನ ಅಲ್ಲವೇ..? ಆಗ ಯಾವುದೇ ಪೊಲೀಸ್ರು ಕೇಸ್ ದಾಖಲಿಸಿಕೊಳ್ಳಲಿಲ್ಲ. ಯಾರನ್ನು ಬಂಧನ ಮಾಡಲಿಲ್ಲ. ಈ ಕೇಸ್ನಿಂದ ಭಾರೀ ಕೋಲಾಹಕ ಸೃಷ್ಟಿಯಾಗುವ ಭೀತಿ ಸಂಭವಿಸಿತ್ತೆ..? ಬೆಂಗಳೂರಿನಲ್ಲಿ ದಿನಕ್ಕೆ ಹತ್ತಾರು ಹೆಣಗಳು ಬೀಳುತ್ತಿವೆ. ರೌಡಿಗಳ ನಿಯಂತ್ರಣ ಮಾಡಲು ಸಾಧ್ಯವಾಗ್ತಿಲ್ಲ, ನಟ ಚೇತನ್ನನ್ನು ಬಂಧಿಸಿ, ಸಾಧಿಸಿದ ಹೆಮ್ಮೆ ನಮ್ಮ ಕರ್ನಾಟಕ ಪೊಲೀಸರಿಗೆ ಅಲ್ಲವೇ..?
ರಾಜಕಾರಣಿಗಳಾದರೆ ಎಲ್ಲವೂ ಸಹ್ಯ.. ಆದರೆ ರಾಜಕಾರಣಿಗಳ ವಿರೋಧಿಗಳಾದರೆ ಎಲ್ಲವೂ ವಿರುದ್ಧ. ಇದೇ ರೀತಿ ಟ್ವೀಟ್ ಮಾಡಿದವರನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದವರನ್ನು ಬಂಧಿಸುತ್ತಾ ಹೋದರೆ ಜೈಲಲ್ಲಿ ಜಾಗ ಇರುತ್ತಾ ಅನ್ನೋದನ್ನು ಪೊಲೀಸ್ರು ಮನಗಾಣಬೇಕಿದೆ. ಮಾಡಲು ನೂರಾರು ಕೆಲಸಗಳು ಇರುವಾಗ ಈ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಕಾರ್ಯೋನ್ಮುಖರಾದರೆ ಸಾರ್ವಜನಿಕವಾಗಿ ಪೊಲೀಸ್ ವ್ಯವಸ್ತೆ ಮೇಲಿರುವ ನಂಬಿಕೆ ಹುಸಿಯಾಗುವ ಸಾಧ್ಯತೆಗಲು ಹೆಚ್ಚಿವೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನ ಹರಿಸಬೇಕಿದೆ. ಸರ್ಕಾರ ಅಥವಾ ರಾಜಕಾರಣಿಗಳ ಒತ್ತಡದಿಂದ ಈ ಕೆಲಸ ಮಾಡಿದ್ದರೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ ಎನ್ನಬಹುದು.