ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಪುನೀತ್ ಅಭಿಮಾನಿಗಳಿಗೆ ರಾಜ್ ಕುಮಾರ್ ಕುಟುಂಬ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಹೆಚ್ಚು ಓದಿದ ಸ್ಟೋರಿಗಳು
ಹೌದು, ಇಂದಿಗೆ ಅಪ್ಪು ಅಗಲಿ 12 ನೇ ದಿನ. ಇಂದಿಗೂ ಜನ ವಿವಿಧೆಡೆಯಿಂದ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯತ್ತ ಪ್ರತಿನಿತ್ಯ ಸಾವಿರಾರುಗಟ್ಟಲೆ ಜನರು ಬರುತ್ತಿದ್ದಾರೆ. ಇಂದು ಅಪ್ಪು ಪುಣ್ಯಸ್ಮರಣೆಯ ಪ್ರಯುಕ್ತ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆಗೆ ಭರ್ಜರಿಯಾದ ವ್ಯವಸ್ಥೆ ಮಾಡಲಾಗಿತ್ತು. ನಟಸಾರ್ವಭೌಮ ಅಗಲಿದ, ಅನಂತರ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ರಾಜ್ಯದೆಲ್ಲೆಡೆ ಪುಣ್ಯಸ್ಮರಣೆಯನ್ನು ಆಯೋಜಿಸಿದ್ದರು. ಅಕಾಲಿಕ ಮರಣವನ್ನಪ್ಪಿದ ಅಪ್ಪುವಿನ ನೆನಪಲ್ಲೇ ಕರುನಾಡ ಜನ ಇಂದಿಗೂ ಕಣ್ಣೀರಿಡುತ್ತಿದ್ದಾರೆ.ಚಿತ್ರರಂಗದಲ್ಲಿ ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿಯೂ ನಟ ಪುನೀತ್ ಅವರ ಸೇವೆಗಳು ಎಂದಿಗೂ ನೆನಪಲ್ಲಿ ಉಳಿಯುತ್ತದೆ. ತಮ್ಮ ಮನೆಯಲ್ಲಿಯೇ ಒಬ್ಬರನ್ನು ಕಳೆದುಕೊಂಡಂತಹ ಅನುಭವ ನಾಡಿನ ಜನತೆಗೆ ಆಗಿದ್ದು ಸುಳ್ಳಲ್ಲ! ಮನೆ ಮಗನಿಗಾಗಿ ಹೇಳಿಕೊಂಡ ಹರಕೆಗಳು ನೂರಾರು. ಬಹುಷಃ ಇಂತಹ ಮಹಾನ್ ಕಲಾವಿದನ ನೆನಪು ಎಂದಿಗೂ ಅಜರಾಮರ.
ಬಾಳೆ ಎಲೆಯಲ್ಲಿಯೇ ಊಟ!
ಅಪ್ಪು ಅಭಿಮಾನಿಗಳಿಗೆ ತಯಾರಿಸಿದ ವಿವಿಧ ಬಗೆಯ ತಿನಸುಗಳು ಒಂದಕ್ಕೊಂದು ವಿಶೇಷವಾಗಿತ್ತು. ಸುಮಾರು 800ಕ್ಕೂ ಅಧಿಕ ಬಾಣಸಿಗರಿಂದ ಅಡುಗೆ ಮಾಡಲಾಗಿದ್ದು, ಸಸ್ಯಾಹಾರಿಗಳಿಗೆ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. ಅಪ್ಪು ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗಿದೆ. ಇದು ರಾಜ್ ಕುಟುಂಬದ ಸಂಪ್ರದಾಯದಂತೆ ನಡೆದಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಭೋಜನಕ್ಕೆ ಅಡುಗೆ ಆರಂಭವಾಗಿದ್ದು, 10 ಗಂಟೆಯೊಳಗೆ ಅಡುಗೆ ತಯಾರಿ ಕೆಲಸ ಮುಗಿದ ಬಳಿಕ 11 ಗಂಟೆಯ ನಂತರ ಅರಮನೆ ಮೈದಾನಕ್ಕೆ ಬರುವ ಅಪಾರ ಅಭಿಮಾನಿಗಳು, ಗಣ್ಯರಿಗೆ ಊಟ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸರಿಸುಮಾರು 30 ಸಾವಿರ ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದೆ.
ಆಹಾರ ಬಡಿಸುವ ಸಾಲಿನಲ್ಲಿ 15 ರಿಂದ 20 ಮಂದಿ ಸಿಬ್ಬಂದಿಗಳನ್ನು ಆಯೋಜಿಸಲಾಗಿತ್ತು.ಅಡುಗೆಗಾಗಿ ಅರಮನೆ ಮೈದಾನದಲ್ಲಿ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬ ಅರಮನೆ ಮೈದಾನಕ್ಕೆ ಪೂರೈಸಲಾಗಿತ್ತು. ರಾಶಿ ರಾಶಿ ಚಿಕನ್, ಮೊಟ್ಟೆ, ತರಕಾರಿಗಳನ್ನು ಕೂಡ ಪೂರೈಸಲಾಗಿತ್ತು. ಈ ವೇಳೆ ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು. ಅಭಿಮಾನಿಗಳ ಪ್ರೀತಿಗೆ ತಮ್ಮ ಕೈಯಾರೆ ಊಟ ಬಡಿಸಿ ಕಂಬನಿ ಹಾಕಿದರು.
ಸಸ್ಯಾಹಾರಿಗಳಿಗೆ ಏನೇನಿತ್ತು?
ಸಾಮಾನ್ಯವಾಗಿ ದೊಡ್ಮನೆ ಕಾರ್ಯಕ್ರಮ ಅಂದ್ರೇನೆ ಒಂದು ಘನತೆಯಿಂದ ಕೂಡಿರುತ್ತದೆ. ಅದೇನೇ ಕಾರ್ಯಕ್ರಮ ನಡೆದರೂ ರಾಜ್ ಕುಮಾರ್ ಕುಟುಂಬ ಊಟದಲ್ಲಿ ಎಂದಿಗೂ ಕಡಿಮೆ ಮಾಡುವುದಿಲ್ಲ. ಚೆನ್ನಾಗಿ ತಿನ್ನಬೇಕು ಎನ್ನುವುದು ಇವರ ವಾಡಿಕೆ. ಈ ಪ್ರಯುಕ್ತ, ಸಸ್ಯಾಹಾರಿ ಅಡುಗೆಯಲ್ಲಿ ಆಲೂಗಡ್ಡೆ ಕಬಾಬ್, ಬೇಬಿ ಕಾರ್ನ್, ಲಾಲಿಪಪ್, ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆಗಳು ಇದ್ದರೆ, ಸೌದೆ ಒಲೆಯಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬಾಣಸಿಗರು ತಯಾರಿಸುತ್ತಾ, ನೆರೆದಿರುವ ಅಭಿಮಾನಿಗಳಿಗೆ ಭೋಜನ ಬಡಿಸಿದರು.
ಮಾಂಸಾಹಾರಿಗಳಿಗೆ ಏನೇನಿತ್ತು?
ಪುನೀತ್ ರಾಜ್ ಕುಮಾರ್ ಅವರಿಗೆ ಮಾಂಸಾಹಾರ ಎಂದರೆ ಬಲು ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಇದರಿಂದ ಅವರ ಅಭಿಮಾನಿಗಳಿಗೂ ರಾಜ್ ಕುಮಾರ್ ಕುಟುಂಬ ನಿರಾಸೆ ಮಾಡಿಲ್ಲ. ನಾನ್ ವೆಜ್ ಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, 1 ಸಾವಿರ ಕೆ.ಜಿ.ಯ ಗೀ ರೈಸ್, ಅನ್ನ, ರಸಂಗಳನ್ನು ನೀಡಲಾಗಿತ್ತು.
ಕಾಲ್ನಡಿಗೆಯಲ್ಲೂ ಬಂದ ಜನ
ಪ್ಯಾಲೇಸ್ ಗ್ರೌಂಡ್ ಬಾಗಿಲ ಎದುರಿನಿಂದಲೇ ಜನರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದರು. ರಸ್ತೆಯ ಬದಿಯಲ್ಲಿ ಸರದಿ ಸಾಲಿನಲ್ಲಿ ಜನರು ಕುಟುಂಬ ಸಮೇತವಾಗಿ ಬರುತ್ತಿದ್ದರು. ಅನೇಕ ಜನರನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಕಣ್ಣೀರಲ್ಲೇ ಮಾತು ಶುರು ಮಾಡುತ್ತಿದ್ದರು. ಇದರಿಂದ ನೆಚ್ಚಿನ ನಟನ ಬಗೆಯಿರುವ ಪ್ರೀತಿ ವ್ಯಕ್ತವಾಗುತ್ತಿತ್ತು.
ಅರಮನೆ ಸುತ್ತ ಬಿಗಿ ಪೊಲೀಸ್ ಭದ್ರತೆ!
ಅನ್ನಸಂತರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ಯಾಲೇಸ್ ಗ್ರೌಂಡ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ಅದರ ಜೊತೆಗೆ ಮಧ್ಯರಾತ್ರಿಯಿಂದ ಸದಾಶಿವನಗರದ ಪುನೀತ್ ನಿವಾಸಕ್ಕೆ ಕೂಡ ಭದ್ರತೆ ಒದಗಿಸಲಾಗಿದೆ. ಅದೇನೆ ಇರಲಿ ನಟ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನೋವು ಇಂದಿಗೂ ಜನರಲ್ಲಿ ಅರಗಿಸಿಕೊಳ್ಳಲಾಗದ ನೋವಾಗಿಯೇ ಉಳಿದಿದೆ. ಅದೆಷ್ಟೋ ಮಂದಿ ನೆಚ್ಚಿನ ನಟನಿಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕರುನಾಡು ಮಾತ್ರವಲ್ಲದೇ, ದೇಶದ ಪ್ರಮುಖರು ನಿಬ್ಬೆರಗಾಗಿದ್ದು ಮಾತ್ರ ಸುಳ್ಳಲ್ಲ. ಕಲಾವಿದನಿಗೆ ಎಂದಿಗೂ ಸಾವಿಲ್ಲ ಎನ್ನುವುದಕ್ಕೆ ನಟ ಪುನೀತ್ ರಾಜ್ ಕುಮಾರ್ ಅವರೇ ಸಾಕ್ಷಿಯಾಗಿದ್ದಾರೆ.