ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 13 ದಿನ ಆಗಿದೆ. ಈ 13 ದಿನಗಳಲ್ಲಿ ಭಾರತೀಯ ಸೇನೆ ಶತ್ರುಗಳ ಸಂಹರಿಸಲು ಸಕಲ ತಯಾರಿ ಮಾಡಿಕೊಳ್ತಿದೆ. ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಉಗ್ರರ ಬೇಟೆ ಆಡಲು ಬೇಕಾದ ವ್ಯವಸ್ಥೆ ಆಗ್ತಿದೆ. ನೌಕಾಪಡೆ, ವಾಯುಸೇನೆ ವಿಮಾನಗಳು, ಹೆಲಿಕಾಪ್ಟರ್ಗಳು, ಫೈಟರ್ ಜೆಟ್ಗಳು ತಾಲೀಮು ನಡೆಸುತ್ತಿವೆ.

ಉತ್ತರಪ್ರದೇಶದ ಗಂಗಾ ಎಕ್ಸ್ಪ್ರೆಸ್ವೇನಲ್ಲಿ ಡೇ ಅಂಡ್ ನೈಟ್ ತಾಲೀಮು ನಡೀತಿದ್ದು, ಅತ್ತ ಪಾಕಿಸ್ತಾನ ಕೂಡ ಭಾರತದ ದಾಳಿ ತಪ್ಪಿಸಿಕೊಳ್ಳನು ಏನು ಮಾಡಬೇಕು ಅದನ್ನೇಲ್ಲಾ ಮಾಡುತ್ತಿದೆ. ಜೊತೆಗೆ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆಯನ್ನೂ ಹಾಕಿದೆ. ಪಾಕಿಸ್ತಾನ ಸಮುದ್ರದಲ್ಲಿ ಸೇನೆ ತಯಾರಾಗಿದೆ ಅಂತ ವಿಡಿಯೋ ಹರಿಬಿಟ್ಟಿದೆ. ಆದ್ರೆ ಈ ವಿಡಿಯೋ 2 ತಿಂಗಳ ಹಿಂದಿನದ್ದು ಎನ್ನಲಾಗ್ತಿದೆ. ಚೀನಾ ಮತ್ತು ಬಾಂಗ್ಲಾ ದೇಶದ ಜೊತೆ ಜಂಟಿ ಸಮರಾಭ್ಯಾಸ ನಡೆಸಿದ ವಿಡಿಯೋ ರೀ ಪೋಸ್ಟ್ ಮಾಡಿ ಬಿಲ್ಡಪ್ ಕೊಟ್ಟಿದೆ ಅನ್ನೋ ಸಂಗತಿಯೂ ಹರಿದಾಡಿದೆ.

ಪಿಒಕೆ ಭಾಗದ 13 ವಿಧಾನಸಭಾ ಕ್ಷೇತ್ರಗಳ ಜನರಿಗೆ 2 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನ ಸಂಗ್ರಹ ಮಾಡಿಕೊಳ್ಳಲು ಪಾಕಿಸ್ತಾನ ಸೂಚನೆ ಕೊಟ್ಟಿದೆ ಅನ್ನೋ ವರದಿ ಆಗಿದೆ. ಭಾರತ ಯುದ್ಧ ಸಾರುವುದು ಖಚಿತ ಎಂದು ನಂಬಿರುವ ಪಾಕಿಸ್ತಾನ ಕುಪ್ವಾರಾ, ಉರಿ ಮತ್ತು ಅಖ್ನೂರ್ ಪ್ರದೇಶಗಳ ಗಡಿರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮಾಡ್ತಿದ್ದು, ಭಾರತವನ್ನು ಯುದ್ಧಕ್ಕೆ ಕಾಲ್ಕೆರೆದು ಕರೆಯುವಂತಿದೆ.

ಒಂದ್ಕಡೆ ಅಣುಬಾಂಬ್ ಇದೆ ಎಂದು ಬೆದರಿಕೆ ಹಾಕುವ ಪಾಕಿಸ್ತಾನ, ಅಮೆರಿಕದ ಬಳಿ ಹೋಗಿ ಯುದ್ಧವನ್ನು ತಡೆಯುವಂತೆ ಬೇಡಿಕೊಂಡಿತ್ತು. ಇದೀಗ ಭಾರತದ ಸಂಭಾವ್ಯ ದಾಳಿಯನ್ನ ನಿಲ್ಲಿಸಿ ಮುಸ್ಲಿಂ ರಾಷ್ಟ್ರಗಳ ಬೆನ್ನತ್ತಿದೆ. ನಿಮ್ಮ ಪ್ರಭಾವ ಬಳಸಿ ಭಾರತ ಯುದ್ಧ ಮಾಡದಂತೆ ತಡೆಯಿರಿ ಅಂತ ಅಂಗಲಾಚುತ್ತಿದೆ ಎನ್ನಲಾಗಿದೆ. ಭಾರತಕ್ಕೂ ಮಿತ್ರ ರಾಷ್ಟ್ರಗಳಾಗಿರುವ ಸೌದಿ ಅರೇಬಿಯಾ, ಯುಎಇ, ಕುವೈತ್‌ನ ಪಾಕಿಸ್ತಾನ ರಾಯಭಾರಿಗಳನ್ನು ಭೇಟಿಯಾಗಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.






