(ಕೃಪೆ : ಸಂವಾದ ಮಾಸಪತ್ರಿಕೆ ಆಗಸ್ಟ್ 2026)
ಭಾಗ 1
ವಸಾಹತುಶಾಹಿಯನ್ನು ಯಾವುದೇ ಕಾಲಘಟ್ಟದಲ್ಲಿ ನಿಂತು ವ್ಯಾಖ್ಯಾನಿಸಿದರೂ ಸಮಾನ ಎಳೆಯ ಎರಡು ಅಂಶಗಳು ಮುನ್ನಲೆಗೆ ಬರುತ್ತವೆ. ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ ರಾಜಪ್ರಭುತ್ವದ ಆಳ್ವಿಕೆಯಲ್ಲಿದ್ದ ಅನೇಕ ಭೂ ಪ್ರದೇಶಗಳು ವ್ಯಾಪಾರ, ವಾಣಿಜ್ಯ ಮತ್ತು ಸರಕು ಸಾಗಾಣಿಕೆಯನ್ನು ಕಡಲ ಸಾರಿಗೆಯ ಮುಖಾಂತರವೇ ನಿರ್ವಹಿಸುತ್ತಿದ್ದು, ಬಲಾಢ್ಯ ವರ್ಗಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ನಿರ್ಮಿಸಿಕೊಂಡಿದ್ದವು. ಯೂರೋಪ್ನಲ್ಲಿ ಮತ್ತು ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕ್ರಮೇಣ ನೆಲೆಯೂರುತ್ತಿದ್ದ ಸಂದರ್ಭದಲ್ಲೂ ಭಾರತೀಯ ಉಪಖಂಡದಲ್ಲಿ ಹಾಗೂ ಏಷ್ಯಾ ಖಂಡದ ಹಲವು ದೇಶಗಳಲ್ಲಿ ರಾಜಪ್ರಭುತ್ವದ ಊಳಿಗಮಾನ್ಯ ಆಳ್ವಿಕೆಯೇ ಪ್ರಧಾನವಾಗಿತ್ತು. ಈ ಕಾಲಘಟ್ಟದಲ್ಲಿ ಆಳುವವರು ಮತ್ತು ಆಳ್ವಿಕೆಗೊಳಪಟ್ಟವರ ನಡುವೆ ಅಪಾರ ಅಂತರ ಇದ್ದರೂ, ಕೆಳಸ್ತರದ ಸಮಾಜದಲ್ಲಿ ದುಡಿಯುವ ವರ್ಗಗಳು ದನಿಯಿಲ್ಲದವರಾಗಿದ್ದುದೇ ಹೆಚ್ಚು.

ಸಾಂಪ್ರದಾಯಿಕ ಸಮಾಜಗಳನ್ನೊಳಗೊಂಡ, ಪ್ರಾಚೀನ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಂಡ ಹಾಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲು-ಕೀಳುಗಳನ್ನು ಸ್ವಾಭಾವಿಕ ಎಂದೇ ಭಾವಿಸಿದ್ದಂತಹ ಭಾರತದಲ್ಲಿ ಸಾಮಾಜಿಕ ಅಂತಸ್ತು-ಅಧಿಕಾರ, ಆರ್ಥಿಕ ಸಂಪತ್ತು-ಒಡೆತನ, ಸಾಂಸ್ಕೃತಿಕ ಪಾರಮ್ಯ-ಮೇಲರಿಮೆ ಇವೆಲ್ಲವೂ ಸಹ ಅಸಮಾನತೆಗಳ ಚೌಕಟ್ಟಿನಲ್ಲೇ ಕಾಣಬಹುದಿತ್ತು. ಇತಿಹಾಸದುದ್ದಕ್ಕೂ ಭಾರತದ ರಾಜಪ್ರಭುತ್ವಗಳನ್ನು ದಾಖಲಿಸಿರುವ ಸಾಹಿತ್ಯದಲ್ಲಿ ಈ ಅಸಮಾನತೆಗಳನ್ನು ಪ್ರಸ್ತಾಪಿಸಿರುವುದು ಅಪರೂಪ (Rare) ಅಥವಾ ಅಪವಾದ (Exception) ಎನ್ನಬಹುದು̤ ಗುಪ್ತರದ ʼ ಸುವರ್ಣಯುಗ ʼ ದಿಂದ ವಿಜಯನಗರದ ʼ ವೈಭವ ʼದವರೆಗೂ, ತದನಂತರದ ಮೊಘಲ್ ಆಳ್ವಿಕೆಯವರೆಗೂ ದಾಖಲಿತ ಇತಿಹಾಸದಲ್ಲಿ ಶ್ರಮಜೀವಿಗಳ ಜೀವನ, ಜೀವನೋಪಾಯ ಮತ್ತು ಸಾಮುದಾಯಿಕ ಸ್ಥಿತಿಗತಿಗಳನ್ನು ಹೆಚ್ಚಾಗಿ ಗುರುತಿಸಲಾಗುವುದಿಲ್ಲ.
ಇದಕ್ಕೆ ಕಾರಣ ಬ್ರಿಟೀಷರ ಆಗಮನಕ್ಕೂ ಮುನ್ನ ಭಾರತದಲ್ಲಿ ಲಿಖಿತ ರೂಪದಲ್ಲಿ ದಾಖಲಿಸುವ ಪರಂಪರೆಯೇ ಇರಲಿಲ್ಲ. ಹಾಗಾಗಿ ವಿದೇಶೀ ಪ್ರಯಾಣಿಕರು ಕಟ್ಟಿಕೊಟ್ಟಿರುವ ಭಾರತವನ್ನೇ ನಾವು ಇಂದಿಗೂ ಚಾರಿತ್ರಿಕ ವಾಸ್ತವ ಎಂದು ಭಾವಿಸುತ್ತೇವೆ. ರಾಜಪ್ರಭುತ್ವಗಳ ಆಶ್ರಯದಲ್ಲೇ ರಚನೆಯಾದ ಈ ಐತಿಹ್ಯಗಳು ಮತ್ತು ಚಾರಿತ್ರಿಕ ಬೆಳವಣಿಗೆಗಳು, ಸಾಮ್ರಾಜ್ಯ, ಸಂಸ್ಥಾನಗಳನ್ನು ವೈಭವೀಕರಿಸುವಷ್ಟು , ಆ ಕಾಲಘಟ್ಟದ ಬಡತನ, ಶೋಷಣೆ, ಹಸಿವು ಮತ್ತು ನಿಕೃಷ್ಟ ಬದುಕಿನ ಚಿತ್ರಣವನ್ನು ವಿವರಿಸುವುದಿಲ್ಲ. ಬಹುಸಂಖ್ಯಾತ ಜನತೆಗೆ , ಅಂದರೆ ತಳಸಮುದಾಯಗಳಿಗೆ (Subaltren Communities) ಔಪಚಾರಿಕ ಶಿಕ್ಷಣ (Formal Education) ಅಲಭ್ಯವಾಗಿದ್ದ ಈ ಅವಧಿಯಲ್ಲಿ, ಪ್ರಬಲ ಸಾಮಾಜಿಕ ವರ್ಗಗಳು ಹಾಗೂ ಧಾರ್ಮಿಕ ಗುಂಪುಗಳು ದಾಖಲಿಸಿದ ಸಂಗತಿಗಳೇ ಅಧಿಕೃತ ಚರಿತ್ರೆಯಾಗಿಯೂ ಗುರುತಿಸಲ್ಪಟ್ಟಿತ್ತು.

ವಸಾಹತುಶಾಹಿಯ ಆಗಮನ-ಬೆಳವಣಿಗೆ
18ನೆ ಶತಮಾನದ ಕೈಗಾರಿಕಾ ಕ್ರಾಂತಿ ಇವೆಲ್ಲವನ್ನೂ ತಲೆಕೆಳಗು ಮಾಡಿತ್ತು. 15-16ನೆ ಶತಮಾನದ ಪ್ರಜಾಪ್ರಭುತ್ವದ ಉಗಮ ಮತ್ತು ಫ್ರೆಂಚ್ ಕ್ರಾಂತಿಯ ಪರಿಣಾಮವಾಗಿ ವಿಶ್ವದ ದುಡಿಯುವ ವರ್ಗಗಳು ತಮ್ಮ ಪ್ರಜಾತಾಂತ್ರಿಕ ಹಕ್ಕುಗಳನ್ನು ಪ್ರತಿಪಾದಿಸುವುದೇ ಅಲ್ಲದೆ, ರಾಜಕೀಯ ಅಧಿಕಾರವನ್ನು ಆಕ್ರಮಿಸುವ ಒಂದು ವಿದ್ಯಮಾನಕ್ಕೆ ಈ ಶತಮಾನ ಸಾಕ್ಷಿಯಾಗಿತ್ತು. ಸಮಾನಾಂತರವಾಗಿ ಇದೇ ಸಮಯದಲ್ಲೇ ಕೈಗಾರಿಕಾ ದೇಶಗಳು ತಮ್ಮ ಸುತ್ತಲಿನ, ದೂರದ ಸಣ್ಣ ಪುಟ್ಟ ದೇಶಗಳಿಗೆ, ಭಾರತದಂತಹ ವಿಶಾಲ ದೇಶಗಳಿಗೂ ತಮ್ಮ ವ್ಯಾಪಾರ, ವಾಣಿಜ್ಯ, ಸಾರಿಗೆ ಮತ್ತು ಸಂಪರ್ಕ ಸೇತುವೆಗಳನ್ನು ವಿಸ್ತರಿಸುವ ಮೂಲಕ, ವಸಾಹತುಗಳನ್ನು (Colonies) ಪರಂಪರೆಗೆ ನಾಂದಿ ಹಾಡಿದ್ದವು. ಅಮೆರಿಕದ ವಿಮೋಚನೆ, ಫ್ರೆಂಚ್ ಕ್ರಾಂತಿ, ಪ್ಯಾರಿಸ್ ಕಮ್ಯೂನ್ ಮೊದಲಾದ ಹೊಸ ಬೆಳವಣಿಗೆಗಳ ಹೊರತಾಗಿಯೂ ಈ ವಸಾಹತುಗಳನ್ನು ರೂಪಿಸುವ ಕೈಗಾರಿಕಾ ಬಂಡವಾಳಶಾಹಿಯ ಪ್ರಯತ್ನಗಳು ನಿಲ್ಲಲಿಲ್ಲ.
ಬ್ರಿಟೀಷರು ಮತ್ತು ಫ್ರೆಂಚರು 17ನೆ ಶತಮಾನದಲ್ಲೇ ಕ್ರಮವಾಗಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಗಳು ಮೂಲಕ ಭಾರತಕ್ಕೆ ಪ್ರವೇಶಿಸಿದ್ದರೂ, ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿ ಭಾರತದ ಮೇಲೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗಿದ್ದು 1757ರ ನಂತರದಲ್ಲಿ. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಚಾರಿತ್ರಿಕವಾಗಿ ಗುರುತಿಸಲ್ಪಡುವ ವೇಳೆಗೆ ಬ್ರಿಟೀಷರು ಭಾರತದ ವಿವಿಧ ಪ್ರಾಂತ್ಯಗಳನ್ನು ಆಳುತ್ತಿದ್ದ ರಾಜ್ಯಗಳನ್ನು, ಸಂಸ್ಥಾನಗಳನ್ನು, ಪಾಳೆಯಗಾರರನ್ನು ಹಾಗೂ ಸ್ಥಳೀಯ ನಾಯಕರನ್ನು ವ್ಯಾಪಾರ ಸಂಬಂಧಗಳ ಮುಖಾಂತರವೇ ಅತಿಕ್ರಮಿಸಿದ್ದರು. 1857ರ ಗೆಲುವಿನ ಪರಿಣಾಮವಾಗಿ ಬ್ರಿಟೀಷ್ ಸಾಮ್ರಾಜ್ಯ ಭಾರತದಲ್ಲಿ ತನ್ನದೇ ಆದ ಆಡಳಿತವನ್ನು ಸ್ಥಾಪಿಸಲು ಸಾಧ್ಯವಾಗಿತ್ತು. 190 ವರ್ಷಗಳ ಈ ಆಳ್ವಿಕೆಯನ್ನು ವರ್ತಮಾನದಲ್ಲಿ ನಿಂತು ವಿಶ್ಲೇಷಿಸುವಾಗ ನಮಗೆ ಭಾರತದ ಬಹುಸಂಖ್ಯಾತ ಶೋಷಿತ ಸಮುದಾಯಗಳ ಬದುಕು, ಬವಣೆ, ಜೀವನ, ಜೀವನೋಪಾಯ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು ಮುಖ್ಯವಾಗುತ್ತವೆ.

ಭಾರತ ವಸಾಹತು ದಾಸ್ಯದಿಂದ ವಿಮೋಚನೆ ಪಡೆದು 80 ವರ್ಷಗಳನ್ನು ಪೂರೈಸಲಿರುವ ಈ ಹೊತ್ತಿನಲ್ಲಿ ದೇಶದ ತಳವರ್ಗದ ಸಾಮಾಜಿಕ ಸ್ಥಿತ್ಯಂತರಗಳನ್ನು, ಆರ್ಥಿಕ ಸ್ಥಾನಮಾನಗಳನ್ನು ಹಾಗೂ ಸಾಂಸ್ಕೃತಿಕ-ಶೈಕ್ಷಣಿಕ ಸಬಲೀಕರಣವನ್ನು ಪರಾಮರ್ಶಿಸುವಾಗ ನಮಗೆ ವಸಾಹತು ಕಾಲದ ಬ್ರಿಟೀಷ್ ಆಳ್ವಿಕೆಯಲ್ಲಿ ಕಾಣುವಂತಹ ಸಕಾರಾತ್ಮಕ ಬೆಳವಣಿಗೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಬ್ರಿಟೀಷ್ ವಸಾಹತು ಆಳ್ವಿಕೆಯ ದೌರ್ಜನ್ಯ, ದಬ್ಬಾಳಿಕೆ, ಸಂಪತ್ತಿನ ಲೂಟಿ ಇತ್ಯಾದಿಗಳನ್ನು ಸಮ್ಮತಿಸಲು ಸಾಧ್ಯವೇ ಇಲ್ಲ. ಇದನ್ನು ಮನಗಂಡೇ ವರ್ತಮಾನ ಭಾರತದ ತಳಸ್ತರದ ಜಾತಿ ಸಮಾಜಗಳ ಕಣ್ಣೋಟದಿಂದ ಬ್ರಿಟೀಷ್ ಆಳ್ವಿಕೆಯನ್ನು ಗಮನಿಸುವಾಗ ಕೆಲವಾದರೂ ಹೊಳಹುಗಳು, ಭವಿಷ್ಯದ ಬೆಳಕಿಂಡಿಗಳು ಕಾಣುತ್ತವೆ. ಇದನ್ನು ಅನುಭಾವಾತ್ಮಕವಾಗಿಯಾದರೂ ಸ್ಮರಿಸುವುದು ನೈತಿಕತೆಯ ಪ್ರಶ್ನೆ.
ವರ್ತಮಾನವನ್ನು ಕಾಡುವ ಜಿಜ್ಞಾಸೆಗಳು
ನಾವು ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬಹುದು. ಒಂದು ವೇಳೆ ಬ್ರಿಟೀಷರ ಆಗಮನ ಆಗದೆ ಹೋಗಿದ್ದರೆ ಭಾರತದಲ್ಲಿದ್ದಂತಹ ವೈದಿಕಶಾಹಿ-ಬ್ರಾಹ್ಮಣಶಾಹಿ ಸಾಂಸ್ಕೃತಿಕ ವಾತಾವರಣದಲ್ಲಿ ʼ ಔಪಚಾರಿಕ ಶಿಕ್ಷಣ ʼ (Forma Education) ಸಾರ್ವತ್ರಿಕ ರೂಪ ಪಡೆಯುತ್ತಿತ್ತೇ ? ಅರಿವಿನ ವಿಸ್ತರಣೆ ಮತ್ತು ಜ್ಞಾನದ ಪ್ರಸರಣಕ್ಕೆ ಅವಕಾಶಗಳು ಎಲ್ಲ ಜಾತಿಗಳಿಗೂ, ಅಸ್ಪೃಶ್ಯರಿಗೂ ಸೇರಿದಂತೆ ತೆರೆದುಕೊಳ್ಳುತ್ತಿದ್ದವೇ ? ಕೇವಲ ಮೇಲ್ಜಾತಿಗೆ ಸೀಮಿತವಾಗಿದ್ದ ಗುರುಕುಲ ಪದ್ಧತಿಯಿಂದ ಭಾರತದ ವಿಮೋಚನೆ ಸಾಧ್ಯವಾಗುತ್ತಿತ್ತೇ ? ತಳಸಮಾಜದ ಶ್ರಮಜೀವಿಗಳ ದೃಷ್ಟಿಯಿಂದ ದೈಹಿಕ ದುಡಿಮೆಗೆ ಮತ್ತು ದುಡಿಮೆಗಾರರಿಗೆ ಸಾಮಾಜಿಕ ಸಮ್ಮಾನ ಸಾಧ್ಯವಾಗುತ್ತಿತ್ತೇ ? 18ನೆಯ ಶತಮಾನದಿಂದಲೇ ಸಮಾಜ ಸುಧಾರಕರು ಕ್ರಿಯಾಶೀಲವಾಗಿ ಉದಾತ್ತ ಚಿಂತನೆಗಳನ್ನು ಬಿತ್ತುತ್ತಾ ಬಂದಿದ್ದರೂ, ಅವೆಲ್ಲವೂ ಸಾಂಸ್ಥಿಕ ರೂಪದಲ್ಲಿ (Institutional Form), ಸಾಮುದಾಯಿಕ ಸ್ತರದಲ್ಲಿ (Community level) ಸ್ಥಾಪಿತವಾಗುತ್ತಿದ್ದವೇ ?

ಈ ಸಾಂಸ್ಥಿಕ ಭೂಮಿಕೆಗಳು ಪ್ರಶಸ್ತ ನೆಲೆಯಾಗಿ ಭಾರತದಾದ್ಯಂತ ವಿಸ್ತರಿಸದೆ ಹೋಗಿದ್ದರೆ ಭೀಮರಾವ್ ರಾಮ್ಜಿ ಭವಿಷ್ಯದ ಅಂಬೇಡ್ಕರ್ ಆಗುತ್ತಿದ್ದರೇ ? ಅಥವಾ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಮೊದಲಾದವರು ಶೋಷಿತರ ಶೈಕ್ಷಣಿಕ ದೀವಿಗೆಯನ್ನು ಬೆಳಗಿಸಲು ಸಾಧ್ಯವಾಗುತ್ತಿತ್ತೇ ? ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಅವರಿಂದ ಅಂಬೇಡ್ಕರ್ವರೆಗೆ ನಾವು ದಾಖಲಿಸುವ ಸಮಾಜ ಸುಧಾರಣೆಯ ಹೆಜ್ಜೆಗಳು ಸಫಲವಾಗುತ್ತಿದ್ದವೇ ? ದಲಿತ-ಅಸ್ಪೃಶ್ಯ ಸಮಾಜದಿಂದ ಶಿಕ್ಷಕರು, ಬೋಧಕರು, ವಿಜ್ಞಾನಿಗಳು, ಅಧಿಕಾರಿಗಳು ಹೊರಹೊಮ್ಮುವುದು, ಸ್ವಂತ ಉಳುಮೆಯ ಭೂಮಿ ಹೊಂದುವುದು ಸಾಧ್ಯವಾಗುತ್ತಿತ್ತೇ ? ಈ ಪ್ರಶ್ನೆಗಳಿಗೆ ʼ ದೇಶಭಕ್ತಿ-ದೇಶಪ್ರೇಮʼ ದ ಭಾವಾವೇಶದ ಕ್ಲೀಷೆಗಳಿಂದ ಹೊರಬಂದು ಉತ್ತರ ಕಂಡುಕೊಳ್ಳಬೇಕಿದೆ.
ಈ ಭಿನ್ನ ದೃಷ್ಟಿಕೋನದಿಂದ ಬ್ರಿಟೀಷ್ ವಸಾಹತು ಆಳ್ವಿಕೆಯನ್ನು ಪರಾಮರ್ಶಿಸಿದಾಗ ಈಗಲೂ ನಾವು ಕಾಣುತ್ತಿರುವ ಆಡಳಿತಾತ್ಮಕ (Administrative) ಮತ್ತು ಆಳ್ವಿಕೆಯ (Governance) ಲಕ್ಷಣಗಳನ್ನೂ ಗುರುತಿಸಬಹುದು. ಮೂಲತಃ ಇದು ಉಗಮಿಸುವುದು ದೇಶಗಳ ಭೌಗೋಳಿಕ ಸ್ವರೂಪಗಳಿಂದ ಅಲ್ಲ, ಬದಲಾಗಿ ಆಯಾ ಪ್ರದೇಶದ ಆರ್ಥಿಕ ನೆಲೆಗಳಲ್ಲಿ. ಉತ್ಪಾದನೆಯ ಮೂಲ (Source of Producation) ಮತ್ತು ಅದರ ಒಡೆತನ, ಉತ್ಪಾದನಾ ವಿಧಾನಗಳು/ಸಾಧನಗಳು (Means of Production) ಮತ್ತು ಅದರ ಬಳಕೆದಾರರು, ಉತ್ಪಾದಕೀಯ ಶಕ್ತಿಗಳ (Productive forces) ಮೇಲಿನ ನಿಯಂತ್ರಣ ಮತ್ತು ಸಮಗ್ರ ಸಂಪತ್ತಿನ ಒಡೆತನ ಈ ಅಂಶಗಳು ಆಯಾ ದೇಶಗಳ ಆಳ್ವಿಕೆ ಮತ್ತು ಆಡಳಿತಗಳಿಗೆ ಸಾಂಸ್ಥಿಕ ರೂಪ ಒದಗಿಸುತ್ತವೆ.
ಬಂಡವಾಳಶಾಹಿಯ ವರ್ಗಹಿತಾಸಕ್ತಿ
ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಎಲ್ಲ ನೆಲೆಗಳ ಮೇಲೆ ಯಜಮಾನಿಕ ಸ್ಥಾಪಿಸುವುದು ಬಂಡವಾಳಿಗರೇ ಹೊರತು ಸಾಮಾನ್ಯ ಕೆಳಸ್ತರದ ಜನತೆ ಅಲ್ಲ. ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಕೈಗಾರಿಕಾ ಬಂಡವಾಳ ಮತ್ತು ಬಂಡವಾಳಿಗರು ಈ ಸಂಪನ್ಮೂಲಗಳ ವಾರಸುರದಾರರಾಗಿದ್ದರು. ಈ ವರ್ಗಗಳಿಗೆ ಅಗತ್ಯವಾದ ಅಧಿಕಾರಶಾಹಿಯನ್ನು ರೂಪಿಸುವುದು ಪ್ರಥಮ ಆದ್ಯತೆಯಾಗಿದ್ದರೆ, ಈ ಪ್ರಕ್ರಿಯೆಯಲ್ಲಿ ಅಗತ್ಯವಾಗುವ ಮಾನವ ಸಂಪನ್ಮೂಲಗಳನ್ನು (Human Resources) ಉತ್ಪಾದಿಸುವುದು ಎರಡನೆಯ ಆದ್ಯತೆಯಾಗಿರುತ್ತದೆ. ಹಾಗಾಗಿಯೇ ಕೈಗಾರಿಕಾ ಬಂಡವಾಳಶಾಹಿಯಲ್ಲಿ (Industrial Capitalism) ಆಡಳಿತ ಯಂತ್ರಗಳನ್ನು (Administrative Machnery) ನಿರ್ವಹಿಸಲು ಬೇಕಾದ ಕಚೇರಿ ಗುಮಾಸ್ತರನ್ನು, ಅಧಿಕಾರಿಗಳನ್ನು, ಕೈಗಾರಿಕೀಕರಣಕ್ಕೆ ಅಗತ್ಯವಾದ ಇಂಜಿನಿಯರ್ಗಳನ್ನು ತಯಾರು ಮಾಡುವ ದೃಷ್ಟಿಯಿಂದಲೇ ಇಡೀ ಶಿಕ್ಷಣ ವ್ಯವಸ್ಥೆಯನ್ನೂ, ಪಠ್ಯ ಮಾದರಿಗಳನ್ನೂ ಸೃಷ್ಟಿಸಲಾಗಿತ್ತು.

ಬಂಡವಾಳಶಾಹಿ ಆರ್ಥಿಕತೆಯನ್ನು ಅಳವಡಿಸುವ ಎಲ್ಲ ದೇಶಗಳಲ್ಲೂ, ಇಂದಿಗೂ ಸಹ ಇದೇ ಮಾದರಿಯನ್ನು ಕಾಣಬಹುದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ ಕ್ಷಿಪ್ರ ಬದಲಾವಣೆಗಳು, 2020ರ ನೂತನ ಶಿಕ್ಷಣ ನೀತಿ, ಎನ್ಸಿಇಆರ್ಟಿ ಪಠ್ಯಕ್ರಮ, ಪ್ರವೇಶ ಪರೀಕ್ಷೆಗಳ ಕೇಂದ್ರೀಕರಣ (NEET etc) ಮತ್ತು ಪ್ರಾಥಮಿಕ ಹಂತದಿಂದಲೇ ಶಾಲಾ ಪಠ್ಯಕ್ರಮಗಳಲ್ಲಿ ಅಳವಡಿಸಲಾಗುವ ಸಾಂಪ್ರದಾಯಿಕ ಅವೈಜ್ಞಾನಿಕ ಚಿಂತನಾ ವಾಹಿನಿಗಳು, ಪ್ರಾಚೀನ ಅವೈಚಾರಿಕ ಚಿಂತನೆಗಳು ಮತ್ತು ಚಿಕಿತ್ಸಾ ವಿಧಾನಗಳು, ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿಯ ಹಿಂದುತ್ವ ರಾಜಕಾರಣದ ಕಾರ್ಯಸೂಚಿಯನ್ನು ಗ್ರಹಿಸಬಹುದು. ಭವಿಷ್ಯದ ಡಿಜಿಟಲ್ ಮಾರುಕಟ್ಟೆಗೆ ಅಗತ್ಯವಾಗುವ/ಉಪಯುಕ್ತವಾಗುವ ದುಡಿಮೆಯ ಕೈಗಳನ್ನು ತಯಾರಿಸುವ ದೃಷ್ಟಿಯಿಂದಲೇ ಪಠ್ಯಕ್ರಮಗಳನ್ನೂ ಪುನಾರಚಿಸಲಾಗುತ್ತಿದೆ.
ಕೈಗಾರಿಕಾ ಬಂಡವಾಳದಿಂದ 2026ರ ಡಿಜಿಟಲ್ ಕಾರ್ಪೋರೇಟ್ ಬಂಡವಾಳಶಾಹಿಯವರೆಗೂ ಆಳುವ ವರ್ಗಗಳು ಇದೇ ಮಾದರಿ ಅನುಸರಿಸಿರುವುದನ್ನು ಕಾಣಬಹುದು. ಈ ದೃಷ್ಟಿಯಿಂದ ಭಾರತದಲ್ಲಿ 18-19ನೆ ಶತಮಾನದ ಬ್ರಿಟೀಷ್ ವಸಾಹತು ಆಳ್ವಿಕೆ ಅನುಸರಿಸಿದ ಶೈಕ್ಷಣಿಕ ಮಾದರಿಗಳು, ಉದ್ಯೋಗಾವಕಾಶಗಳನ್ನು ಮೇಲ್ಜಾತಿಗಳ ಏಕಸ್ವಾಮ್ಯದಿಂದ ಬಿಡುಗಡೆ ಮಾಡಿ ತಳಸ್ತರದ ಸಮಾಜಗಳಿಗೂ ವಿಸ್ತರಿಸಿದ್ದನ್ನು ಗಮನಿಸಬೇಕು. ಕೈಗಾರಿಕೆಗಳು ಅಭಿವೃದ್ಧಿಯಾಗುತ್ತಿದ್ದಾಗ ಅಸ್ಪೃಶ್ಯ ಸಮುದಾಯಗಳಿಗೆ ಜವಳಿ ಗಿರಣಿಗಳಲ್ಲೂ ನೌಕರಿ ಲಭ್ಯವಾಗದ ಪರಿಸ್ಥಿತಿಯಲ್ಲಿ ಬ್ರಿಟೀಷ್ ಸೇನೆಯಲ್ಲಿ ದಮನಿತ ಸಮಾಜಗಳಿಗೆ ಅವಕಾಶ ಲಭ್ಯವಾಗಿತ್ತು. ಡಾ. ಬಿ. ಆರ್. ಅಂಬೇಡ್ಕರ್ ಈ ಔದ್ಯೋಗಿಕ ವ್ಯವಸ್ಥೆಯ ಒಂದು ಉತ್ಪನ್ನ.
ಆಧುನಿಕ ಶಿಕ್ಷಣ ಮತ್ತು ಬ್ರಿಟೀಷ್ ಆಳ್ವಿಕೆ
ಸಾಮಾನ್ಯವಾಗಿ ಬ್ರಿಟೀಷ್ ಆಳ್ವಿಕೆಯ ಶಿಕ್ಷಣ ವ್ಯವಸ್ಥೆಯನ್ನು ಮ್ಯಾಕುಲೇ ಮಾದರಿಯೊಂದಿಗೆ ಸಮೀಕರಿಸಲಾಗುತ್ತದೆ. ಮ್ಯಾಕುಲೇ ತನ್ನ ಶೈಕ್ಷಣಿಕ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು 1835ರಲ್ಲಿ. ಅದಕ್ಕೂ ಮುಂಚಿತವಾಗಿಯೇ, ಬ್ರಿಟೀಷ್ ಆಳ್ವಿಕೆಯಲ್ಲಿ ಪಾಶ್ಚಿಮಾತ್ಯ ಮಾದರಿಯ ಆಡಳಿತ ಮತ್ತು ಕಾನೂನು ವ್ಯವಸ್ಥೆಗೆ ಅಗತ್ಯವಾದ ಬೌದ್ಧಿಕ ಸಂಪನ್ಮೂಲಗಳನ್ನು ಉತ್ಪಾದಿಸುವ ಪ್ರಯತ್ನಗಳು ನಡೆದಿದ್ದವು. 1781ರಲ್ಲಿ ವಾರೆನ್ ಹೇಸ್ಟಿಂಗ್ಸ್ ಸ್ಥಾಪಿಸಿದ ಕಲ್ಕತ್ತಾ ಮದ್ರಸ್ಸಾ (Calcutta Madrassa) ಈ ಪ್ರಯತ್ನಗಳ ಪ್ರಾರಂಭಿಕ ಹೆಜ್ಜೆ. ತದನಂತರ 1791ರಲ್ಲಿ ಜೋನಾಥನ್ ಡಂಕನ್ ಹಿಂದೂ ತತ್ವಶಾಸ್ತ್ರ ಮತ್ತು ಕಾನೂನುಗಳ ವ್ಯಾಸಂಗಕ್ಕೆ ಅನುಕೂಲವಾಗಲು ವಾರಣಾಸಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದರು. ಈ ಸಾಂಸ್ಥಿಕ ನೆಲೆಗಳನ್ನು ನಿರ್ವಹಿಸಿ ಭದ್ರಪಡಿಸುವ ಸಲುವಾಗಿ 1813ರಲ್ಲಿ ಚಾರ್ಟರ್ ಕಾಯ್ದೆಯನ್ನು ಜಾರಿಗೊಳಿಸಿ, ವರ್ಷಕ್ಕೆ ಒಂದು ಲಕ್ಷ ರೂಗಳ ನಿಧಿಯನ್ನು ಒದಗಿಸಲಾಗಿತ್ತು. ವಿಜ್ಞಾನ ಮತ್ತು ಸಾಹಿತ್ಯದ ಅಧ್ಯಯನಕ್ಕೆ ಇದು ನೆರವಾಗಿತ್ತು.

ಮ್ಯಾಕುಲೇ ಪ್ರಸ್ತಾಪಿಸಿದ ಶೈಕ್ಷಣಿಕ ಮಾದರಿ ಮುಖ್ಯವಾಗಿ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ವಿಜ್ಞಾನವನ್ನು ಆಂಗ್ಲಭಾಷೆಯ ಮೂಲಕ ಒದಗಿಸುವ ಉದ್ದೇಶ ಹೊಂದಿತ್ತು. 1835ರ ಇಂಗ್ಲಿಷ್ ಎಜುಕೇಷನ್ ಕಾಯ್ದೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಬಹುಶಃ ಬ್ರಿಟೀಷ್ ಆಳ್ವಿಕೆಯ ಈ ಹೆಜ್ಜೆಯೇ ಭವಿಷ್ಯ ಭಾರತದ ಶೈಕ್ಷಣಿಕ ವಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆಂಗ್ಲ ಸಾಹಿತ್ಯವನ್ನು ಎಲ್ಲ ವರ್ಗಗಳಿಗೂ ತಲುಪಿಸಲು ನೆರವಾಗಿತ್ತು. ತದನಂತರ 1882ರ ಹಂಟರ್ ಆಯೋಗ, 1904ರ ಭಾರತೀಯ ವಿಶ್ವವಿದ್ಯಾಲಯಗಳ ಕಾಯ್ದೆ, 1917ರ ಸಾಡ್ಲರ್ ಆಯೋಗ, 1937ರ ವಾರ್ಧಾ ಯೋಝನೆ, 1944ರ ಸಾರ್ಜೆಂಟ್ ಯೋಜನೆ ಇವೆಲ್ಲವೂ ಸಹ ಭಾರತದಲ್ಲಿ ಶಿಕ್ಷಣದ ಸಾರ್ವತ್ರೀಕರಣಕ್ಕೆ ನೆರವಾದ ಆಡಳಿತಾತ್ಮಕ ಕ್ರಮಗಳು. ಇಂದಿಗೂ ಸಹ ಮೇಲ್ಜಾತಿ ಸಮಾಜಗಳಲ್ಲಿ, ಬೌದ್ಧಿಕ ವಲಯಗಳಲ್ಲಿ ಈ ನೀತಿಗಳನ್ನು ವಕ್ರದೃಷ್ಟಿಯಿಂದ ನೋಡುವ ಅಭ್ಯಾಸ ಇದ್ದರೂ, ಈ ನೀತಿಗಳ ಪ್ರಧಾನ ಫಲಾನುಭವಿಗಳು ಮೇಲ್ವರ್ಗಗಳೇ ಆಗಿದ್ದುದು ಚಾರಿತ್ರಿಕ ಸತ್ಯ.
ಆದರೆ ಸಮಾನಾಂತರವಾಗಿ ದಲಿತ-ಅಸ್ಪೃಶ್ಯ-ಶೂದ್ರ ಸಮಾಜಗಳಲ್ಲೂ ಸಹ ವಸಾಹತು ಆಳ್ವಿಕೆಯ ಈ ಉಪಕ್ರಮಗಳು ಶಿಕ್ಷಣದ ಅರಿವು ಮತ್ತು ಅಗತ್ಯತೆಯನ್ನು ಮನವರಿಕೆ ಮಾಡಿದ್ದವು. ಈ ಕೆಲವು ಕಾಯ್ದೆಗಳ ಮೂಲಕ ಬ್ರಿಟೀಷರು ಜಾರಿಗೊಳಿಸಿದ ಆಂಗ್ಲ ಭಾಷಾ ಶಿಕ್ಷಣ ಮತ್ತು ವಿಜ್ಞಾನ ಪಠ್ಯಗಳು, ವಿದ್ಯಾವಂತ ಸಮಾಜಗಳಲ್ಲಿ ವೈಚಾರಿಕತೆಯನ್ನೂ, ವೈಜ್ಞಾನಿಕ ಮನೋಭಾವವನ್ನೂ, ಆಧುನಿಕ ವಿಜ್ಞಾನದ (Modern sceience) ಹೊಸ ಅನ್ವೇಷಣೆ, ಅವಿಷ್ಕಾರಗಳನ್ನೂ ಹರಡುವುದರಲ್ಲಿ ಯಶಸ್ವಿಯಾಗಿದ್ದವು. ಈ ಪರ್ವದ ಫಲಾನುಭವಿಗಳ ಪೈಕಿ ನಮಗೆ ಎದ್ದು ಕಾಣುವುದು ಡಾ. ಬಿ.ಆರ್. ಅಂಬೇಡ್ಕರ್ ಅವರೇ. 5000 ವರ್ಷಗಳ ಭರತಖಂಡದ ಚರಿತ್ರೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಸಂಶೋಧನೆ ಕೈಗೊಂಡು ಜಾತಿ ವ್ಯವಸ್ಥೆಯ ಮೂಲ ಬೇರುಗಳನ್ನು ಜಗತ್ತಿನ ಮುಂದಿಡಲು ಅಂಬೇಡ್ಕರ್ ಅವರಿಗೆ ನೆರವಾಗಿದ್ದು ಆಂಗ್ಲ ಶಿಕ್ಷಣ, ವೈಜ್ಞಾನಿಕ ಕಲಿಕೆ ಮತ್ತು ಇತಿಹಾಸದ ಅಧ್ಯಯನ.

ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಕೈಗೊಂಡ ಶೈಕ್ಷಣಿಕ ಸುಧಾರಣೆಗಳು ಮತ್ತು ಕಾನೂನಾತ್ಮಕ ಉಪಕ್ರಮಗಳೇ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮುಂದುವರೆದಿದ್ದು, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾರ್ವತ್ರಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರಿಂದ, ದಲಿತರು-ಅಸ್ಪೃಶ್ಯರು, ಅಂಚಿನಲ್ಲಿರುವ ಸಮುದಾಯಗಳು, ಅವಕಾಶವಂಚಿತ ಮಹಿಳೆಯರು ಸಾಕ್ಷರತೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಈ ಸಾಧನೆಯನ್ನು ಆಗುಮಾಡಿದವರು ಸ್ವತಂತ್ರ ಭಾರತದ ದಾರ್ಶನಿಕ ನಾಯಕರೇ ಆದರೂ, ಮೂಲತಃ ತಳಸ್ತರದ ಸಮಾಜಕ್ಕೆ ಶಿಕ್ಷಣ-ಜ್ಞಾನದ ಸ್ಪರ್ಶವೇ ಇಲ್ಲದಂತಿದ್ದ ಸಮಾಜದಲ್ಲಿ ಎಲ್ಲರಿಗೂ ಅಕ್ಷರ ಜ್ಞಾನ ತಲುಪಲು ಅವಕಾಶ ಮಾಡಿಕೊಟ್ಟ ಬ್ರಿಟೀಷ್ ವಸಾಹತು ಆಳ್ವಿಕೆಯ ಕೊಡುಗೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ.
ಮುಂದುವರೆಯುತ್ತದೆ..






