“ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸದಾ ಸ್ಪಂದಿಸುತ್ತಿದ್ದ, ಸಾಮಾಜಿಕ ಪರಿಸರದಲ್ಲಿ ಸಾಮಾನ್ಯ ಜನತೆ ಎದುರಿಸುವ ಬದುಕು-ಜೀವನ-ಜೀವನೋಪಾಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ತುಡಿಯುತ್ತಿದ್ದ, ದುಡಿಯುವ ವರ್ಗಗಳು, ಶೋಷಿತ ಸಮುದಾಯಗಳು, ಮಹಿಳಾ ಸಮೂಹ ಮತ್ತು ಅವಕಾಶವಂಚಿತರ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ತಲ್ಲಣಗಳಿಗೆ ಸದಾ ಮಿಡಿಯುತ್ತಿದ್ದ, ವ್ಯವಸ್ಥೆಯ ಲೋಪದೋಷಗಳ ವಿರುದ್ಧ, ಆಳುವ ವರ್ಗಗಳ ದಬ್ಬಾಳಿಕೆಯ ವಿರುದ್ಧ, ಆಡಳಿತಾರೂಢ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸದಾ ಸಿಡಿದೇಳುತ್ತಿದ್ದ ” ಒಂದು ದಿಟ್ಟ ಜನಪರ ಧ್ವನಿ ಮೈಸೂರಿನಲ್ಲಿ 19 ಜನವರಿಯ ಮಧ್ಯಾಹ್ನ ಮೂರ ವೇಳೆಗೆ ಶಾಶ್ವತ ಮೌನಕ್ಕೆ ಜಾರಿಬಿಟ್ಟಿತು.
89ರ ವಯೋಮಾನದ ಚಿರಯುವಕ ಎನ್ನಬಹುದಾದ, ಹೋರಾಟದ ಒಂದು ಧ್ವನಿ, ಗಾಂಧಿವಾದಿ, ಸಮಾಜವಾದಿ ಮತ್ತು ಕನ್ನಡಪರ ಹೋರಾಟಗಾರರಾಗಿ ನ್ಯಾಯ ನಿಷ್ಠುರತೆಯಿಂದ, ಪ್ರಾಮಾಣಿಕ ಬದುಕಿಗಾಗಿ, ಸಮಾನತೆಯ ಆಶಯಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಮೈಸೂರಿನ ಎಲ್ಲ ರೀತಿಯ ಜನಾಂದೋಲನಗಳಿಗೆ ಮುಂಚೂಣಿ ದನಿಯಾಗಿ ಜನಸಾಮಾನ್ಯರ ನಡುವೆ ಇರುತ್ತಿದ್ದ ಹಿರಿಯ ಹೋರಾಟಗಾರ ಪ ಮಲ್ಲೇಶ್ ಈಗ ನಮ್ಮ ನಡುವೆ ಇಲ್ಲ. ಅವರ ಕನ್ನಡ ಪರ ನಿಲುವಿನ ಫಲವಾಗಿಯೇ ಇಂದು ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಏಕೈಕ ಸಂಸ್ಥೆ, ನೃಪತುಂಗ ಕನ್ನಡ ಶೈಕ್ಷಣಿಕ ವಿದ್ಯಾ ವಿಕಾಸ ಸಂಸ್ಥೆ, ಮೈಸೂರಿನಲ್ಲಿ ರಾರಾಜಿಸುತ್ತಿರುವುದು ಅವರ ತಾತ್ವಿಕ ನಿಲುಮೆಗೆ ಸಾಕ್ಷಿ. ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನೈತಿಕತೆಯನ್ನು ಸದಾ ಎತ್ತಿಹಿಡಿಯುತ್ತಿದ್ದ ಮಲ್ಲೇಶ್ ಅವರ ಹೋರಾಟದ ಬದುಕನ್ನು ದಾಖಲಿಸಿದರೆ ಒಂದು ಬೃಹತ್ ಗ್ರಂಥವೇ ಆಗಬಹುದು. ಯಾವುದೇ ರೀತಿಯ ಅನ್ಯಾಯದ ವಿರುದ್ಧ, ಅನ್ಯಾಯ ಎಸಗಿದವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಸಿಡಿದೇಳುತ್ತಿದ್ದ ಹಠಮಾರಿ ಸ್ವಭಾವದ ಹಿರಿಯ ಸಮಾಜವಾದಿ ಪ. ಮಲ್ಲೇಶ್ ಮೈಸೂರಿನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪ್ರಗತಿಪರ-ಎಡಪಂಥೀಯ ಹೋರಾಟಗಾರರಿಗೆ, ಮಹಿಳಾ ಹೋರಾಟಗಾರರಿಗೆ ಮತ್ತು ದುಡಿಯುವ ವರ್ಗಗಳಿಗೆ ಒಂದು ಹೋರಾಟದ ಪ್ರತಿಧ್ವನಿಯಾಗಿಯೇ ತಮ್ಮ ಪಯಣವನ್ನು ಮುಗಿಸಿದ್ದಾರೆ.

ಒಂದು ಜೀವದ ಅಗಲಿಕೆ ಆ ಕುಟುಂಬದೊಳಗೆ ನಿರ್ವಾತವನ್ನು ಸೃಷ್ಟಿಸುವುದು ಸಹಜ. ಕೆಲ ವರುಷಗಳು ಸಂದ ನಂತರ ವಿಸ್ಮೃತಿಗೆ ಜಾರುವುದೂ ಮಾನವ ಸಹಜ. ಆದರೆ ನಮ್ಮ ನಡುವಿನ ದಿಟ್ಟ ಜನಪರ ದನಿಯಾಗಿದ್ದ ಶ್ರೀಯುತ ಪ ಮಲ್ಲೇಶ್ ಅವರ ಅಗಲಿಕೆಯಿಂದ ಮೈಸೂರಿನಲ್ಲಿ ಸೃಷ್ಟಿಯಾಗಿರುವ ನಿರ್ವಾತ ಬಹುಶಃ ಶಾಶ್ವತವಾಗಿ ಉಳಿಯುವಂತಹುದು. ತುಂಬಲಾರದ ನಷ್ಟ ಎನ್ನುವ ಕ್ಲೀಷೆಯನ್ನು ದಾಟಿ ನೋಡಿದಾಗ, ಪ ಮಲ್ಲೇಶ್ ಅವರ ಅಗಲಿಕೆ, ಮೈಸೂರಿನ ಜನ ಚಳುವಳಿಗಳ ಪಾಲಿಗೆ ಮತ್ತು ಅವರ ಆದರ್ಶಪ್ರಾಯದಿಂದ ಬಹಳಷ್ಟು ಕಲಿಯಬಹುದಾಗಿದ್ದ ಮುಂದಿನ ತಲೆಮಾರಿನ ಪಾಲಿಗೆ, ಬಹುದೊಡ್ಡ ಪೆಟ್ಟು. ರಾಜಿಯಾಗದ ಮನೋಭಾವದೊಂದಿಗೇ ಬದುಕಿ ಬಾಳಿ, ಹೋರಾಟಗಳಲ್ಲೇ ಜೀವ ಸವೆಸಿದ ಹಿರಿಯ ನಾಯಕ ಕೊನೆಗೂ ಜವರಾಯನೊಂದಿಗೆ ರಾಜಿಯಾಗಲೇಬೇಕಾದ್ದು ಪ್ರಕೃತಿ ಸಹಜ.
ಪ ಮಲ್ಲೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರ ಆದರ್ಶ ಮತ್ತು ಹೋರಾಟದ ಸ್ಫೂರ್ತಿಯನ್ನು ನಮ್ಮೊಳಗೆ ಹಿಡಿದಿಟ್ಟುಕೊಳ್ಳುವುದೇ ಆಗಿರಲು ಸಾಧ್ಯ.
ನಾ ದಿವಾಕರ