ನಾ ದಿವಾಕರ
ಬೆಂಗಳೂರು : ಮಾ.೨೮: ಯಾವುದೇ ಸಮಾಜದಲ್ಲಾದರೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕೆಂದರೆ ಅದರ ಹಿಂದೆ ಸಮಸ್ತ ಜನಹಿತ ಬಯಸುವ ಮನಸುಗಳು ಸದಾ ಜಾಗೃತಾವಸ್ಥೆಯಲ್ಲಿರುವುದು ಅತ್ಯವಶ್ಯ. ವಿಶಾಲ ಸಮಾಜದಲ್ಲಿ ಸಾಮಾಜಿಕ ಕಾಳಜಿ, ಕಳಕಳಿ ಮತ್ತು ಸರ್ವಜನ ಹಿತಾಸಕ್ತಿಗಾಗಿ ಮಿಡಿಯುವ ಮನಸುಗಳು ಅಪಾರ ಸಂಖ್ಯೆಯಲ್ಲಿರುತ್ತವೆ. ಸುತ್ತಲಿನ ಸಮಾಜದಲ್ಲಿ ದಿನನಿತ್ಯ ಎದುರಾಗುವ ಜಟಿಲ ಸಮಸ್ಯೆಗಳು, ಕಣ್ಣಿಗೆ ರಾಚುವ ತಾರತಮ್ಯಗಳು, ಮನಸ್ಸನ್ನು ಪ್ರಕ್ಷುಬ್ಧಗೊಳಿಸುವ ದೌರ್ಜನ್ಯಗಳು, ಹೃದಯ ತಲ್ಲಣಗೊಳಿಸುವಂತಹ ಅಮಾನುಷ ವರ್ತನೆಗಳು ಇವೆಲ್ಲವೂ ಸಮಾಜಮುಖಿ ಮನಸ್ಸುಗಳನ್ನು ಪ್ರಕ್ಷುಬ್ಧತೆಯಲ್ಲೇ ಇರಿಸುತ್ತವೆ. ಈ ಮಾನಸಿಕ ತುಮುಲಗಳನ್ನು ಹೇಗೆ ಅರ್ಥೈಸುವುದು ? ಹೇಗೆ ವ್ಯಾಖ್ಯಾನಿಸುವುದು ? ಈ ವ್ಯತ್ಯಯಗಳಿಗೆ ಕಾರಣವಾದರೂ ಏನು ? ಯಾರು ? ಇಂತಹ ಸಿಕ್ಕುಗಳ ನಡುವೆಯೇ ಪ್ರಜ್ಞಾವಂತ ನಾಗರಿಕ ಮನಸ್ಸುಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗಲು ತವಕಿಸುತ್ತಿರುತ್ತವೆ.
ಇದರೊಟ್ಟಿಗೇ ಆಳುವ ವರ್ಗಗಳು ಜಾರಿಗೊಳಿಸುವ, ಅನುಸರಿಸುವ ಆಡಳಿತ ನೀತಿಗಳು ವಿಶಾಲ ಸಮಾಜದಲ್ಲಿ ಜನಸಮುದಾಯಗಳ ನಡುವೆ ಉಂಟುಮಾಡುವ ಅಸಮಾಧಾನಗಳು ಹಲವು ರೀತಿಯ ಸಾಮಾಜಿಕ-ಸಾಂಸ್ಕೃತಿಕ ಕ್ಷೋಭೆಗಳಿಗೆ ಕಾರಣವಾಗುತ್ತವೆ. ಅಧಿಕಾರ ರಾಜಕಾರಣದಲ್ಲಿ ಆಡಳಿತಾರೂಢ ಪಕ್ಷಗಳು ಜಾರಿಗೊಳಿಸುವ ನೀತಿಗಳು ಸಮಾಜದಲ್ಲಿ ಅಶಾಂತಿಯನ್ನೂ ಸೃಷ್ಟಿಸುವುದು ಸಹಜ. ಮತ್ತೊಂದೆಡೆ ವರ್ತಮಾನದ ಸಂದರ್ಭದಲ್ಲೇ ನೋಡಿದಾಗ ಕೋಮುವಾದ, ಮತಾಂಧತೆ, ಜಾತಿ ರಾಜಕಾರಣ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆಯಂತಹ ಜಟಿಲ ಸಮಸ್ಯೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ನಿರಂತರವಾಗಿ ಧಕ್ಕೆ ಉಂಟುಮಾಡುತ್ತಿರುತ್ತವೆ. ಈ ಸಿಕ್ಕುಗಳ ನಡುವೆಯೇ ತಳಮಟ್ಟದ ದುಡಿಯುವ ವರ್ಗಗಳು ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ನಿರಂತರ ಹೋರಾಟಗಳಲ್ಲಿ ತೊಡಗಿರುವುದು ವಾಸ್ತವ. ಹೋರಾಟ, ಪ್ರತಿರೋಧ ಮತ್ತು ಪ್ರತಿಭಟನೆಗಳು ಇಲ್ಲದೆ ಹೋದರೆ ಸಾಮಾನ್ಯ ಜನತೆಗೆ ದಕ್ಕಬೇಕಾದ ಸಾಂವಿಧಾನಿಕ ಸವಲತ್ತುಗಳು, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಸೌಲಭ್ಯಗಳು ದಕ್ಕುವುದೇ ದುಸ್ತರವಾಗಿರುವ ವರ್ತಮಾನದ ಸನ್ನಿವೇಶದಲ್ಲಿ, ಶೋಷಿತ, ಅವಕಾಶವಂಚಿತ, ಅಂಚಿಗೆತಳ್ಳಲ್ಪಟ್ಟ ಸಾಮಾನ್ಯ ಜನತೆ ಸಹಜವಾಗಿಯೇ ಮಾನಸಿಕ ಕ್ಷೋಭೆಯನ್ನು ನಿರಂತರವಾಗಿ ಎದುರಿಸುತ್ತಿರುತ್ತಾರೆ.
ಇಂತಹ ಒಂದು ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶದಲ್ಲಿ ಯುವ ಸಮೂಹ, ಮಹಿಳೆಯರು, ಶೋಷಿತರು, ಶ್ರಮಜೀವಿಗಳು ಮತ್ತು ರೈತಾಪಿ ಸಮುದಾಯ ತಮ್ಮ ಹಕ್ಕೊತ್ತಾಯಗಳನ್ನು ಸಮರ್ಪಕವಾಗಿ ಆಳುವ ವರ್ಗಗಳ ಮುಂದಿಟ್ಟು, ನ್ಯಾಯ ಪಡೆಯಲು ಹೋರಾಟದ ಮಾರ್ಗಗಳನ್ನು ಅರಸುವುದು ಸಹಜ. ಇಂತಹ ಹೋರಾಟಗಳಿಗೆ ಸೈದ್ಧಾಂತಿಕ ನೆಲೆಯಲ್ಲಿ ಗಾಂಧಿ, ಅಂಬೇಡ್ಕರ್, ಪೆರಿಯಾರ್, ಭಗತ್‌ಸಿಂಗ್, ಮಾರ್ಕ್ಸ್, ಲೆನಿನ್, ಮಾವೋ, ಲಿಂಕನ್, ಮಂಡೇಲಾ ಮುಂತಾದ ಚಾರಿತ್ರಿಕ ವ್ಯಕ್ತಿಗಳು ವಿಭಿನ್ನ ಆಯಾಮಗಳಿಂದ ಆದರ್ಶಪ್ರಾಯರಾಗಿ, ಚೇತೋಹಾರಿಯಾಗಿ ಕಾಣುತ್ತಾರೆ. ಹಾಗೆಯೇ ಚರಿತ್ರೆಯ ಪರಿವೆಯೂ ಇಲ್ಲದ, ಭವಿಷ್ಯದ ಚಿಂತೆಯೂ ಇಲ್ಲದ ಒಂದು ಬೃಹತ್‌ಯುವ ಜನಕೋಟಿಗೆ ಪ್ರಸ್ತುತ ಸಮಾಜದಲ್ಲೂ ಆದರ್ಶಗಳು ಬೇಕಾಗುತ್ತವೆ. ಅಂಬೇಡ್ಕರ್‌ನಂತರ ಭಾರತ ಅಂತಹ ಒಂದು ಆದರ್ಶವನ್ನು ಸೃಷ್ಟಿಸಿಲ್ಲ ಎನ್ನುವ ವಿಷಾದದೊಂದಿಗೇ, ತಕ್ಷಣದ ಸಮಾಜದಲ್ಲೇ ಕಾಣಬಹುದಾದಂತಹ, ಸಾಮಾಜಿಕ ಕಾಳಜಿ ಮತ್ತು ಕಳಕಳಿ ಇರುವ ಹೋರಾಟಗಾರರನ್ನೋ, ಚಿಂತಕರನ್ನೋ ಯುವ ಸಮಾಜ ಹುಡುಕಾಡಬೇಕಾಗುತ್ತದೆ. ಇಂತಹ ಹುಡುಕಾಟದ ನಡುವೆ ಮೈಸೂರು ಸುತ್ತಮುತ್ತಲಿನ ಯುವ ಸಮೂಹಕ್ಕೆ ಆದರ್ಶಪ್ರಾಯರಾಗಿದ್ದ ದಣಿವರಿಯದ ಹೋರಾಟಗಾರರೆಂದರೆ ದಿವಂಗತ ಪ. ಮಲ್ಲೇಶ್.
ಅಪ್ಪಟ ಗಾಂಧಿವಾದಿ, ಲೋಹಿಯಾ ವಿಚಾರಧಾರೆಯ ಅನುಯಾಯಿಯಾಗಿ ಪ. ಮಲ್ಲೇಶ್‌ಮೈಸೂರಿನ ಜನಪರ ಮನಸುಗಳಿಗೆ ಆದರ್ಶಪ್ರಾಯರಾಗಿದ್ದುದು ವಾಸ್ತವ. ಸೈದ್ಧಾಂತಿಕ-ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಒಪ್ಪಿಕೊಳ್ಳಬಹುದಾದಂತಹ ವ್ಯಕ್ತಿತ್ವವನ್ನು ಹೊಂದಿದ್ದ ಪ. ಮಲ್ಲೇಶ್‌ಅವರ ವ್ಯಕ್ತಿತ್ವದಲ್ಲಿ ಕಾಣಬಹುದಾಗಿದ್ದ ಅಂಶಗಳೆಂದರೆ ಮಾನವೀಯ ಅಂತಃಕರಣ, ಪ್ರಾಮಾಣಿಕತೆ, ಶಿಸ್ತು, ಸಾಮಾಜಿಕ ಬದ್ಧತೆ, ಗುರಿಮುಟ್ಟುವವರೆಗೂ ಸೆಣಸುವ ಛಲ ಮತ್ತು ಹಠಮಾರಿತನ ಮತ್ತು ಅವರು ಸದಾ ತೊಡುತ್ತಿದ್ದ ಶ್ವೇತವಸ್ತ್ರದಂತೆಯೇ ಪರಿಶುಭ್ರವಾದ ಮನಸು. ಹಾಗೆಂದ ಮಾತ್ರಕ್ಕೆ ಮಾನವ ಸಹಜ ಗುಣಗಳಾದ ಸಿಟ್ಟು, ಸೆಡವು, ಮುಂಗೋಪಗಳಿಂದ ಅವರೇನೂ ಮುಕ್ತರಾಗಿರಲಿಲ್ಲ. ಆದರೆ ಇವುಗಳ ನಡುವೆಯೇ, ಜನಸಾಮಾನ್ಯರು ತಮ್ಮ ನಿತ್ಯ ಬದುಕಿನಲ್ಲಿ ಎದುರಿಸುತ್ತಿದ್ದ ಪರಿಹರಿಸಲಾಗದ ಅಥವಾ ಜಟಿಲವಾದ ಸಾಮಾಜಿಕ-ಸಾಂಸ್ಕೃತಿಕ-ಬೌದ್ಧಿಕ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತಹ ಮಾನವೀಯ ಹೃದಯ ಅವರಲ್ಲಿತ್ತು. ಇದು ಯಾವುದೇ ಗಾಂಧಿವಾದಿಯ ಮುಖ್ಯ ಲಕ್ಷಣ.
ಸೈದ್ಧಾಂತಿಕ ಅಂಟುಗಳಿಗೆ ಸಿಲುಕದೆ, ತಾತ್ವಿಕ ಜಡತ್ವಕ್ಕೆ ಮಣಿಯದೆ ಮುಕ್ತ ಮನಸ್ಸಿನೊಂದಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ವಿಶಾಲ ನೆಲೆಯಲ್ಲಿ ನೋಡುವ ಒಂದು ಮನಸ್ಸು ಪ. ಮಲ್ಲೇಶ್‌ಅವರಲ್ಲಿತ್ತು. ಅನ್ಯಾಯದ ವಿರುದ್ಧ ಅವರಲ್ಲಿ ಮೂಡುತ್ತಿದ್ದ ಆಕ್ರೋಶ ಸಾತ್ವಿಕ ನೆಲೆಯಲ್ಲೇ ವ್ಯಕ್ತವಾದರೂ, ಯಾವುದೇ ಅನ್ಯಾಯದ ವಿರುದ್ಧ ತಕ್ಷಣವೇ ದನಿ ಎತ್ತಬೇಕು ಎನ್ನುವ ಸೈದ್ಧಾಂತಿಕ-ಜನಪರ ನಿಷ್ಠೆ ಪ. ಮಲ್ಲೇಶ್‌ಅವರಲ್ಲಿ ಕಾಣಬಹುದಿತ್ತು. ತಾವು ಜೀವನಪರ್ಯಂತ ಅಳವಡಿಸಿಕೊಂಡಿದ್ದ ಗಾಂಧಿ ತತ್ವಗಳನ್ನು ಒಪ್ಪದವರೊಡನೆಯೂ ಸಂವಾದಿಸುತ್ತಾ, ಭಿನ್ನ ಚಿಂತನೆಗಳಿಗೂ ಮುಖಾಮುಖಿಯಾಗುತ್ತಾ ಮೂಲತಃ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗೋಪಾಯಗಳ ಬಗ್ಗೆಯೇ ಯೋಚಿಸುತ್ತಿದ್ದ ಪ. ಮಲ್ಲೇಶ್, ಈ ವಿಶಾಲ ಮುಕ್ತ ಮನಸ್ಸು ಹೊಂದಿದ್ದುದರಿಂದಲೇ ಯಾವುದೇ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಭಾಷೆಯ ಉಳಿವಿಗಾಗಿ, ಮತಾಂಧತೆ-ಕೋಮುವಾದದ ವಿರುದ್ಧ- ಜಾತಿ ದೌರ್ಜನ್ಯದ ವಿರುದ್ಧ, ಅಸ್ಪೃಶ್ಯತೆ, ಅತ್ಯಾಚಾರ, ಭ್ರಷ್ಟಾಚಾರಗಳಂತಹ ಹೀನಾಚರಣೆಗಳ ವಿರುದ್ಧ, ಮಹಿಳಾ ದೌರ್ಜನ್ಯದ ವಿರುದ್ಧ ಹಾಗೂ ಮೂಲತಃ ರಾಜಕೀಯ ನಿರಂಕುಶಾಧಿಕಾರದ ವಿರುದ್ಧ ಯಾವುದೇ ಹೋರಾಟಗಳು ನಡೆದರೂ ಅಲ್ಲಿ ತಮ್ಮ ದನಿಗೂಡಿಸುವುದೇ ಅಲ್ಲದೆ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಪ್ರೇರಣೆಯನ್ನು ನೀಡುತ್ತಿದ್ದವರು ಪ. ಮಲ್ಲೇಶ್.
1970ರ ಸಾಮಾಜಿಕ ಚಳುವಳಿಗಳು, ದಲಿತ ಚಳುವಳಿ, ಕಾರ್ಮಿಕರ ಹೋರಾಟಗಳು, ತುರ್ತುಪರಿಸ್ಥಿತಿ-ಗೋಕಾಕ್‌ಚಳುವಳಿಯ ಹಂತದಿಂದ ಇತ್ತೀಚಿನ ರೈತಮುಷ್ಕರದವರೆಗೆ, ಮಥುರಾ ಪ್ರಕರಣದಿಂದ ಮುರುಘಾಮಠದ ಪ್ರಕರಣದವರೆಗೆ ಪ. ಮಲ್ಲೇಶ್‌ಅವರ ಹೋರಾಟದ ಹೆಜ್ಜೆಗಳನ್ನು ಎಷ್ಟೇ ಸೂಕ್ಷ್ಮತೆಯಿಂದ ಗಮನಿಸಿದರೂ ಯಾವುದೇ ರೀತಿಯಲ್ಲೂ ಎಡ-ಬಲ-ಮಧ್ಯ ಪಂಥೀಯ ಧೋರಣೆಗಳನ್ನು ಗುರುತಿಸಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ವರ್ತಮಾನದ ಸಮಾಜದಲ್ಲಿ ಶೋಷಣೆಗೊಳಗಾಗುವ, ಅತ್ಯಾಚಾರ ದೌರ್ಜನ್ಯಗಳಿಗೊಳಗಾಗುವ ಮತ್ತು ದಬ್ಬಾಳಿಕೆಗೊಳಗಾಗುವ ಯಾವುದೇ ಜನಸಮುದಾಯಗಳ ಹಕ್ಕೊತ್ತಾಯದ ದನಿಗೆ ಪ. ಮಲ್ಲೇಶ್‌ಒತ್ತಾಸೆಯಾಗಿ ನಿಲ್ಲುತ್ತಿದ್ದರು. ಪ್ರಜಾಪ್ರಭುತ್ವವನ್ನು ಗೌರವಿಸುವ, ಸಂವಿಧಾನವನ್ನು ಅಪ್ಪಿಕೊಳ್ಳುವ ಮತ್ತು ಜನಹಿತವನ್ನೇ ಪ್ರಧಾನವಾಗಿ ಬಯಸುವ ಯಾವುದೇ ಹೋರಾಟಗಾರನ ಹೃದಯದಲ್ಲಿರಬೇಕಾದ ಮುಕ್ತ ಚಿಂತನೆ ಪ. ಮಲ್ಲೇಶ್‌ಅವರಲ್ಲಿತ್ತು. ಆಡಳಿತಾರೂಢರ ವಿರುದ್ಧ ನಡೆಯುವ ಸಾಮಾನ್ಯ ಜನತೆಯ ಪರ ಇರುವ ಹೋರಾಟಗಳೆಲ್ಲವನ್ನೂ ʼ ಎಡ ʼ ಎಂದು ಭಾವಿಸಿದಲ್ಲಿ ಪ. ಮಲ್ಲೇಶ್‌ಎಡಪಂಥೀಯರಾಗುತ್ತಾರೆ. ಹಾಗೆಯೇ ಸಂವಿಧಾನ ರಕ್ಷಣೆಗಾಗಿ ಹೊರಹೊಮ್ಮುವ ಆಗ್ರಹಗಳೆಲ್ಲವೂ ʼ ಅಂಬೇಡ್ಕರ್ʼ ವಾದ ಎಂದಾದರೆ ಪ. ಮಲ್ಲೇಶ್‌ಅಂಬೇಡ್ಕರ್‌ವಾದಿಯಾಗಿ ಕಾಣುತ್ತಾರೆ. ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟಗಳೆಲ್ಲವೂ ʼ ಪ್ರಜಾತಂತ್ರವಾದಿ ʼ ಎಂದು ಭಾವಿಸಿದಲ್ಲಿ ಪ. ಮಲ್ಲೇಶ್ ʼ ಪ್ರಜಾಪ್ರಭುತ್ವವಾದಿ ʼ ಆಗಿಯೇ ಕಾಣುತ್ತಾರೆ.
ಆದರೆ ಯಾವುದೇ ಕೋನದಿಂದ ನೋಡಿದರೂ ದಿವಂಗತ ಪ. ಮಲ್ಲೇಶ್‌ಅವರನ್ನು ಜಾತಿವಾದಿಯಾಗಿ, ಮತೀಯವಾದಿಯಾಗಿ, ನಿರ್ದಿಷ್ಟ ಕೋಮುಗಳ ಪರವಾಗಿ ನಿಲ್ಲುವ ಕೋಮುವಾದಿಯಾಗಿ, ಒಂದು ಜಾತಿ-ಧರ್ಮದ ಪ್ರತಿಪಾದಕರಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಒಬ್ಬ ಗಾಂಧಿವಾದಿಯಲ್ಲಿ ಇರಬೇಕಾದ ಪ್ರಧಾನ ಲಕ್ಷಣ ಇದು. 1960ರ ದಶಕದ ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಈಗ ನಡೆಯುತ್ತಿರುವ ಕೋಚನಹಳ್ಳಿ ರೈತ ಹೋರಾಟದವರೆಗೂ ವಿಸ್ತರಿಸುವ ಆರು ದಶಕಗಳ ತಮ್ಮ ಹೋರಾಟದ ನಡಿಗೆಯಲ್ಲಿ, ಅಧಿಕಾರಸ್ತರೊಂದಿಗೆ ಎಲ್ಲಿಯೂ ರಾಜಿಯಾಗದೆ, ವ್ಯವಸ್ಥೆಯ ಲೋಪಗಳ ವಿರುದ್ಧ ನಿರಂತರವಾಗಿ ತಮ್ಮ ಪ್ರತಿರೋಧದ ದನಿಯನ್ನು ಎತ್ತರಿಸುತ್ತಲೇ 88 ವರ್ಷಗಳು ಬಾಳಿ ಬದುಕಿದ ಪ. ಮಲ್ಲೇಶ್‌ಮೈಸೂರಿನ ಮತ್ತು ವಿಶಾಲ ಕರ್ನಾಟಕದ ಜನಪರ ಮನಸುಗಳಲ್ಲಿ ಚಿರಸ್ಥಾಯಿಯಾಗಿ ನೆಲೆಸುತ್ತಾರೆ. ಅವರ ಹೋರಾಟದ ಸ್ಪೂರ್ತಿಯೇ ಮುಂದಿನ ಪೀಳಿಗೆಗೆ ಆಶಾದೀವಿಗೆಯಾಗಿ ಮುಂದುವರೆಯಲಿದೆ.
ಬನ್ನಿ ಪ. ಮಲ್ಲೇಶ್‌ಅವರನ್ನು ಮತ್ತೊಮ್ಮೆ, ಮಗದೊಮ್ಮೆ ನೆನೆಯೋಣ.