ಇಂದು ಪ್ರಕೃತಿಯ ಮೇಲೆ ಮಾನವ ಮಾಡುತ್ತಿರುವ ದೌರ್ಜನ್ಯದಿಂದಾಗಿ ಹವಾಮಾನ ವೈಪರೀತ್ಯ ಅಗುತ್ತಿದೆ. ಇದರಿಂದಾಗಿ ಬೇಸಿಗೆ ಗಾಲದಲ್ಲೂ ಕೆಲವೊಮ್ಮೆ ಮಳೆ , ಮಳೆಗಾಲದಲ್ಲೂ ಚೆನ್ನಾಗಿ ಬಿರು ಬಿಸಿಲು ಇರುವ ದಿನಗಳನ್ನೂ ನಾವು ನೋಡುತಿದ್ದೇವೆ. ಮನುಷ್ಯನ ಸ್ವಾರ್ಥಕ್ಕಾಗಿ ಮಾಡುತ್ತಿರುವ ಈ ಅವೈಜ್ಞಾನಿಕ ಕೆಲಸದಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದರೂ ನಾವು ಇನ್ನೂ ಎಚ್ಚತ್ತುಕೊಂಡಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಅವೈಜ್ಞಾನಿಕ ಭೂ ಕಾಮಗಾರಿಯಿಂದಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯದ ವಿವಿದೆಡೆ ಭೂ ಕುಸಿತ ಸಂಭವಿಸಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯೂ ಕೂಡ ಅವೈಜ್ಞಾನಿಕ ಭೂ ಅಗೆತವೇ ಭೂ ಕುಸಿತಕ್ಕೆ ಕಾರಣ ಎಂದು ಸ್ಪಷ್ಟವಾಗಿಯೇ ಬೊಟ್ಟು ಮಾಡಿ ತೋರಿಸಿದೆ. ಇದೀಗ ಇಂತಹುದ್ದೇ ಒಂದು ಬೃಹತ್ ಅರಣ್ಯ ನಾಶದ ರೈಲ್ವೇ ಯೋಜನೆಯೊಂದಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸುವ ತೀರ್ಮಾನ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕ ಸರ್ಕಾರವು ಕೇರಳ ರಾಜ್ಯ ಸರ್ಕಾರದ ಜಂಟಿ ಉದ್ಯಮ ಕಂಪನಿಯಾದ ಕೇರಳ ರೈಲು ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆ-ರೈಲು) ಅಡಿಯಲ್ಲಿ ತಲಚೇರಿ – ವಯನಾಡ್-ಮೈಸೂರು ರೈಲು ಮಾರ್ಗವನ್ನು ಅಭಿವೃದ್ಧಿಪಡಿಸುವ ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಸ್ತಾಪವನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಅರಣ್ಯ ಇಲಾಖೆಯು ಈ ಉದ್ದೇಶಿತ ಯೋಜನೆಗೆ ಆಕ್ಷೇಪ ಎತ್ತಿರುವುದಕ್ಕೇ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರವು ಯೋಜನೆಯನ್ನೇ ಕೈ ಬಿಟ್ಟಿದೆ ಎನ್ನಲಾಗಿದೆ. ಈ ರೈಲು ಯೋಜನೆಯ ಒಟ್ಟು ಮೊತ್ತ ೫೦೦೦ ಕೋಟಿ ರೂಪಾಯಿಗಳಾಗಿದ್ದು ಎರಡೂ ರಾಜ್ಯಗಳ ದಟ್ಟಾರಣ್ಯದಲ್ಲಿ ಹಾದು ಹೋಗಬೇಕಾಗಿತ್ತು.
ವಯನಾಡ್ ವನ್ಯಜೀವಿ ಅಭಯಾರಣ್ಯ, ಬಂಡೀಪುರ ಹುಲಿ ಮೀಸಲು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಪ್ರದೇಶಗಳನ್ನು ಉಳಿಸಲು ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸುರಂಗವನ್ನು ನಿರ್ಮಿಸುವ ಈ ಬೃಹತ್ ಯೋಜನೆಯು ಕಾರ್ಯಸಾಧ್ಯವಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಪ್ರತಿಧ್ವನಿಗೆ ತಿಳಿಸಿವೆ. ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳ ನಡುವಿನ ಸಮೃದ್ಧ ಜೀವವೈವಿಧ್ಯ ಕಾರಿಡಾರ್ ಮೇಲೆ ಹಾನಿಕಾರಕ ಪರಿಣಾಮ ಬೀರುವುದರ ಜೊತೆಗೆ ಭೂಗತ ಸುರಂಗಗಳ ಮೂಲಕ ರೈಲು ಮಾರ್ಗವನ್ನು ನಿರ್ಮಿಸಿದರೂ ಸಹ, ಇದು ಭೂಮಿಯ ಕೆಳಗಿರುವ ನೀರಿನ ಸೆಲೆಗಳ ಮರುಪೂರಣಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಅಷ್ಟೇ ಅಲ್ಲ , ಆ ಮೂಲಕ ಪ್ರಾಕೃತಿಕ ವ್ಯವಸ್ಥೆಗೆ ತೊಂದರೆಯಾಗಿ ತೀವ್ರ ಪರಿಸರ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ರಾಜ್ಯ ಅರಣ್ಯ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದೂ ಮೂಲಗಳು ದೃಢಪಡಿಸಿವೆ.
ಭಾರತೀಯ ವಿಜ್ಞಾನ ಸಂಸ್ಥೆ, ವನ್ಯಜೀವಿ ಸಂಸ್ಥೆ ಅಥವಾ ಯಾವುದೇ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡೆಸಿದ ಯಾವುದೇ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕರ್ನಾಟಕ ಅರಣ್ಯ ಇಲಾಖೆ ಈ ತೀರ್ಮಾನಕ್ಕೆ ಬಂದಿದೆಯೆ ಎಂದು ತಿಳಿದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ನಿರ್ಧಾರವು ಕೇರಳದ ಉತ್ತರ ಭಾಗದ ಜನರ ಬಹುದಿನಗಳ ಕನಸಿಗೆ ಗಂಭೀರ ಹಿನ್ನಡೆಯಾಗಲಿದೆ ಎಂದು ಅವರು ಹೇಳಿದರು. ಈ ಉದ್ದೇಶಿತ ರೈಲು ಮಾರ್ಗವು ನಾಗರಹೊಳೆ ಅಭಯಾರಣ್ಯ ಮತ್ತು ಬಂಡೀಪುರ ನಡುವಿನ ಭೂಗತ ಸುರಂಗದ ಮೂಲಕ ಕರ್ನಾಟಕದ ಹೆಚ್ ಡಿ ಕೋಟೆ ತಾಲ್ಲೂಕಿನ ಮೂಲಕ ಕೇರಳದ ಪುಲ್ಪಲ್ಲಿವರೆಗೆ ಹಾದುಹೋಗುತ್ತದೆ. ಕೇರಳದಲ್ಲಿ, ಇದು ಕಣ್ಣೂರು ಜಿಲ್ಲೆಯ ತಲಚೇರಿ ಮತ್ತು ಪನೂರ್ , ಕೋಜಿಕೋಡ್ ಜಿಲ್ಲೆಯ ವಿಲಂಗಡ್ ಮತ್ತು ವಯನಾಡ್ ಜಿಲ್ಲೆಯ ನೀರವಿಲ್ಪುಜ, ತರುವಾನಾ, ಕಲ್ಪೆತ್ತ, ಮೀನಂಗಡಿ ಮೂಲಕ ಪುಲ್ಪಲ್ಲಿಯನ್ನು ಸಂಪರ್ಕಿಸುತ್ತದೆ.
“ರಾಜಕೀಯ ಇಚ್ಚಾ ಶಕ್ತಿ ಮತ್ತು ಎರಡು ರಾಜ್ಯ ಸರ್ಕಾರಗಳ ನಡುವೆ ಒಮ್ಮತದಿಂದ ಮಾತ್ರ ಈ ಯೋಜನೆಯು ವಾಸ್ತವವಾಗಬಹುದು. ಅಲ್ಲದೆ, ಈ ಬೃಹತ್ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ತಿಳಿಯಲು ವೈಜ್ಞಾನಿಕ ಅಧ್ಯಯನ ನಡೆಸಲು ಕೇರಳ ಸರ್ಕಾರ ಮುಂದಾಗಬೇಕು ಎಂದು ಕೇರಳದ ಉದ್ಯಮಿಗಳು ಒತ್ತಾಯಿಸುತಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ, ಕೆ-ರೈಲು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ಹಾದು ಹೋಗುವುದನ್ನು ತಪ್ಪಿಸಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕು ಮತ್ತು ವಯನಾಡ್ ಮೂಲಕ ತಲಚೇರಿಯಿಂದ ಮೈಸೂರಿಗೆ ರೈಲ್ವೇ ಮಾರ್ಗದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ನಂತರ ಕರ್ನಾಟಕ ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳು ಈ ಪ್ರಸ್ತಾಪವನ್ನು ತಾತ್ವಿಕವಾಗಿ ಒಪ್ಪಿಕೊಂಡರು, ಆದರೆ ಕೊಡಗಿನ ಜನತೆಯ ತೀವ್ರ ಪ್ರತಿರೋಧದ ಕಾರಣದಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.

ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರವು ನೀಲಂಬೂರ್-ನಂಜನಗೂಡು ಮತ್ತು ತಲಶೇರಿ- ಮೈಸೂರು ರೈಲ್ವೇ ಯೋಜನೆಗಳನ್ನು ಕಾರ್ಯಗತಗೊಳಿಸಲು ಆಸಕ್ತಿ ತೋರಿತು. ಈ ಎರಡೂ ಯೋಜನೆಗಳಿಗೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ವಿವರವಾದ ಯೋಜನಾ ವರದಿಯನ್ನು (ಡಿಪಿಆರ್ ) ಸಿದ್ಧಪಡಿಸಿದೆ. ಅದರೆ ಎರಡೂ ಮಾರ್ಗಗಳು ಸಂರಕ್ಷಿತ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತಿರುವುದರಿಂದ ಕರ್ನಾಟಕ ಅರಣ್ಯ ಇಲಾಖೆ ಈ ಯೋಜನೆಗೆ ಆಕ್ಷೇಪ ಸಲ್ಲಿಸಿತು ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಯೋಜನೆಗೆ ಅನುಮತಿ ನೀಡದೆ, ಅರಣ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು ಈ ತೀರ್ಮಾನ ಬದಲಾಗದಿರಲಿ ಎಂದು ಲಕ್ಷಾಂತರ ಪರಿಸರಪ್ರೇಮಿಗಳ ಆಶಯವಾಗಿದೆ.