ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮೇ 2 ನೇ ತಾರೀಕಿನಂದು ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಘಟನೆ ಇಡೀ ದೇಶಾದ್ಯಂತ ದೊಡ್ಡ ಮಟ್ಟದ ಸುದ್ದಿ ಆಗುತ್ತಿರುವಂತೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪ್ರಕರಣದ ಹೊಣೆ ಹೊತ್ತು ರಾಜ್ಯ ಆರೋಗ್ಯ ಸಚಿವ ಡಾ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಅವರೂ ರಾಜೀನಾಮೆ ನೀಡಬೇಕೆಂಬ ಒತ್ತಾಯವೂ ಕೇಳಿ ಬಂದಿತು. ನಂತರ ರಾಜ್ಯ ಹೈ ಕೋರ್ಟ್ ರಚಿಸಿದ ಮೂವರು ಸದಸ್ಯರ ಸಮಿತಿಯು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಕೊರತೆಗೆ ಜಿಲ್ಲಾಧಿಕಾರಿ ಮತ್ತು ಅರೋಗ್ಯಾಧಿಕಾರಿಗಳೇ ಕಾರಣ ಎಂದು ವರದಿ ನೀಡಿತ್ತು. ಸದರಿ ವರದಿಯಲ್ಲಿ ಅಸ್ಪತ್ರೆಯ ಆಕ್ಸಿಜನ್ ರಿಜಿಸ್ಟರ್ ನ ದಾಖಲೆಗಳನ್ನೂ ತಿದ್ದಿರುವ ಸಂಶಯ ವ್ಯಕ್ತಪಡಿಸಿ ದಾಖಲಾತಿಗಳನ್ನು ನ್ಯಾಯಾಲಯವೇ ವಶಕ್ಕೆ ಪಡೆದುಕೊಳ್ಳುವಂತೆಯೂ ಸೂಚಿಸಿತ್ತು.
ಇದಕ್ಕೂ ಮುನ್ನ ಚಾಮರಾಜನಗರ ಜಿಲ್ಲೆಗೆ ಸರಬರಾಜಾಗುವ ಆಕ್ಸಿಜನ್ ಮರುಪೂರಣ ಘಟಕಕ್ಕೆ ಮೌಕಿಕ ಸೂಚನೆ ನೀಡಿ ಸರಬರಾಜಿಗೆ ತಡೆ ಒಡ್ಡಿದ್ದರೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಅರೋಪ ಮಾಡಲಾಗಿತ್ತು. ಈ ಆರೋಪವನ್ನು ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಅವರೇ ಮಾಡಿದ್ದರು. ಆದರೆ ಇದನ್ನು ರೋಹಿಣಿ ತಳ್ಳಿ ಹಾಕಿದ್ದರು ಅಲ್ಲದೆ ಆಮ್ಲ ಜನಕ ಸರಬರಾಜು ಆಗಿರುವ ದಾಖಲೆಗಳನ್ನೂ ಪ್ರದರ್ಶಿಸಿದ್ದರು. ಇಬ್ಬರೂ ಜಿಲ್ಲಾಧಿಕಾರಿಗಳ ಪರಸ್ಪರ ಆರೋಪಗಳಿಂದ ರಾಜ್ಯ ಸರ್ಕಾರಕ್ಕೆ ಮುಜುಗರವೂ ಆಗಿದ್ದು ಇಬ್ಬರನ್ನೂ ಸ್ಥಳ ತೋರಿಸದೆ ವರ್ಗಾವಣೆ ಮಾಡುವ ಕುರಿತೂ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗೃಹ ಸಚಿವ ಬೊಮ್ಮಾಯಿ ಅವರ ಜತೆ ಗಂಭೀರ ಚರ್ಚೆ ನಡೆಸಿದ್ದರೆಂದೂ ಸರ್ಕಾರದ ಉನ್ನತ ಮೂಲಗಳು ತಿಳಿಸಿದ್ದವು. ಆದರೆ ವಾರ ಕಳೆದರೂ ಯಾವುದೇ ವರ್ಗಾವಣೆ ಆಗಿರಲಿಲ್ಲ.
ಆದರೆ ಬುಧವಾರ ರಾತ್ರಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಅರ್ ರವಿ ಅವರ ವರ್ಗಾವಣೆ ಆದೇಶ ಹೊರಬಿದ್ದಿದ್ದು ಡಾ ಬಿ ಸಿ ಸತೀಶ್ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಾಗಿತ್ತು. ಆಧರೆ ಗುರುವಾರ ಬೆಳಿಗ್ಗೆಯೇ ಈ ಆದೇಶ ರದ್ದಾಗಿದೆ ಎಂದು ತಿಳಿದು ಬಂದಿದೆ. ವರ್ಗಾವಣೆ ಆಗಿರುವ ಕುರಿತು ಕೆಲ ಮಾಧ್ಯಮಗಳೂ ವೆಬ್ ಎಡಿಷನ್ ನಲ್ಲಿ ಸುದ್ದಿ ಪ್ರಕಟಿಸಿದ್ದವು. ಇದೀಗ ವರ್ಗಾವಣೆಯೇ ರದ್ದಾಗಿರುವುದು ಅಚ್ಚರಿ ಮೂಡಿಸಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಿದ್ದ ಡಾ.ಬಿ.ಸಿ. ಸತೀಶ್ ಅವರು ಈ ಬಗ್ಗೆ ವರದಿಗಾರರೊಬ್ಬರ ಜತೆ ಮಾತನಾಡಿ, ನಿನ್ನೆ ರಾತ್ರಿ ವರ್ಗಾವಣೆ ಆಗಿತ್ತು. ಬೆಳಗ್ಗೆ ಬದಲಾಗಿದೆ. ನಾನು ಚಾಮರಾಜನಗರಕ್ಕೆ ಬರುತ್ತಿಲ್ಲ ಎಂದು ಹೇಳಿದರು..ಸರ್ಕಾರ ಕೆಲ ತಿಂಗಳ ಹಿಂದೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾಗ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಬೆಂಗಳೂರಿನ ಸಕಾಲ ಮಿಷನ್ ನ ಹೆಚ್ಚುವರಿ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಿತ್ತು. ಚಾಮರಾಜನಗರ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಬಿ.ಸಿ.ಸತೀಶ್ ಅವರನ್ನು ನಿಯುಕ್ತಿಗೊಳಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ರವಿ ವರ್ಗಾವಣೆ ಮಾತ್ರ ಆಗಲಿಲ್ಲ. ಅವರೇ ಈವರೆಗೂ ಮುಂದುವರಿದಿದ್ದಾರೆ. ಆಮ್ಲಜನಕ ದುರಂತದಲ್ಲಿ ಹೈಕೋರ್ಟ್ ನೇಮಸಿದ್ದ ಸಮಿತಿ ಸತ್ಯಶೋಧನೆ ನಡೆಸಿ ಜಿಲ್ಲಾಧಿಕಾರಿ ವೈಫಲ್ಯವನ್ನು ಎತ್ತಿ ತೋರಿಸಿದೆ.. ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೇಲೆ ಶಿಸ್ತು ಕ್ರಮಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. .
ಇದರ ಪರಿಣಾಮವಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವರ್ಗಾವಣೆ ಆಗಿದೆ ಎಂದು ಹೇಳಲಾಗಿತ್ತು. ಗುಂಡ್ಲುಪೇಟೆ ಬಿಜೆಪಿ ಶಾಸಕ ಮತ್ತು ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಸಹ ಗುರುವಾರ ಬೆಳಗ್ಗೆ ಡಿಸಿ ರವಿ ವರ್ಗಾವಣೆ ಆಗಿರುವುದಾಗಿ ತಿಳಿಸಿದ್ದರು. ಆದರೆ, ಬುಧವಾರ ವರ್ಗಾವಣೆ ಆಗಿ ಗುರುವಾರ ಬೆಳಗ್ಗೆ ಬದಲಾಗಿರುವುದು ಪ್ರಭಾವಿಗಳ ಕೃಪೆಯಿಂದ ಡಿಸಿ ರವಿ ಚಾಮರಾಜನಗರದಲ್ಲೇ ಉಳಿದುಕೊಂಡಿರಬಹುದು ಎಂಬ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಡಾ.ಬಿ.ಸಿ.ಸತೀಶ್ ಅವರನ್ನು ಎರಡು ಬಾರಿ ಜಿಲ್ಲೆಗೆ ಕಳುಹಿಸಲು ಮುಂದಾಗಿ ಮತ್ತೆ ವಾಪಸ್ ಕರೆಸಲಾಗಿದೆ. ಅವರಿಗೆ ಸರ್ಕಾರ ಇನ್ನು ಯಾವುದೇ ಹುದ್ದೆ ತೋರಿಲ್ಲ. ಈ ಕುರಿತು ಮಾಧ್ಯಮಗಳಿಗೆ ಕೋಪದಲ್ಲೇ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ನಾನು ಇಲ್ಲೇ ಇದ್ದೀನಲ್ಲಪ್ಪಾ, ಇಲ್ಲೆ ಇದ್ದೀನಿ. ವರ್ಗಾವಣೆ ಆಗಿಲ್ಲ ಎಂದಿದ್ದಾರೆ.
ಬಿಜೆಪಿ ಮುಖಂಡರ ಒಂದು ಗುಂಪು ಜಿಲ್ಲಾದಿಕಾರಿ ರವಿ ಅವರ ವರ್ಗಾವಣೆ ಮಾಡದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದೆ ಎಂದು ಮೂಲಗಳು ತಿಳಿಸಿವೆ. ಈ ಗುಂಪು ರಾಜ್ಯ ಹೈ ಕೋರ್ಟ್ ಆಕ್ಸಿಜನ್ ದುರಂತದ ಪ್ರಕರಣದ ತನಿಖೆ ನಡೆಸಲು ನೇಮಿಸಿರುವ ಏಕಸದಸ್ಯ ಆಯೋಗವು ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸುವವರೆಗೆ ರವಿ ಅವರನ್ನು ವರ್ಗಾವಣೆ ಮಾಡದಂತೆ ಪ್ರಬಲ ಒತ್ತಡ ಹೇರಿದೆ ಎಂದು ಮೂಲಗಳು ತಿಳಿಸಿವೆ. ಈ ಗುಂಪು ಚಾಮರಾಜನಗರಕ್ಕೆ ಅಕ್ಸಿಜನ್ ಸರಬರಾಜಿನಲ್ಲಿ ತಡೆ ಉಂಟಾಗಿದ್ದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಅವರು ಆಕ್ಸಿಜನ್ ಸರಬರಾಜುದಾರರಿಗೆ ಮೌಕಿಕವಾಗಿ ಸೂಚಿಸಿದ್ದೇ ಕಾರಣ ಎಂದು ಪ್ರತಿಪಾದಿಸುತಿದ್ದು ಹೈ ಕೋರ್ಟ್ ನ ಮೂವರ ಸದಸ್ಯರ ಸಮಿತಿ ಈ ಕುರಿತ ಅರೋಪದ ಬಗ್ಗೆ ತನಿಖೆಯನ್ನೇ ಮಾಡದೆ ರೋಹಿಣಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಹೇಳುತ್ತಿದೆ. ಹಾಗೊಂದು ವೇಳೆ ವರ್ಗಾವಣೆ ಮಾಡುವುದೇ ಆದಲ್ಲಿ ಇಬ್ಬರೂ ಜಿಲ್ಲಾಧಿಕಾರಿಗಳನ್ನೂ ವರ್ಗವಣೆ ಮಾಡಿ ಎಂದು ಪಟ್ಟು ಹಿಡಿದಿದೆ ಎಂದು ಹೇಳಲಾಗಿದ್ದು ಒಟ್ಟಿನಲ್ಲಿ ಈ ಹಗ್ಗ ಜಗ್ಗಾಟ ಈಗಲೂ ಮುಂದುವರೆದಿದೆ ಎನ್ನಲಾಗಿದೆ.