ರಾಜ್ಯದಲ್ಲಿ ಪ್ರತಿ ದಿನ ಹೊಸ ಹೊಸ ವಿವಾದಗಳು ಹುಟ್ಟು ಪಡೆದುಕೊಳ್ಳುತ್ತಿದೆ. ಹಲಾಲ್ ವರ್ಸಸ್ ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಿಜಾಬ್ ಹೀಗೆ ಹಲವು ವಿವಾದಗಳು ಮುಂದುವರೆದು ಇದೀಗ ಟ್ರಾವೆಲ್ಸ್ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ. ಆದರೆ ಟ್ರಾವೆಲ್ಸ್ ಕ್ಷೇತ್ರ ಒಗ್ಗಟ್ಟಾಗಿ ನಿಂತಿದೆ.
ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಹಿಂದೂ ಸಂಘಟನೆಗಳ ಕರೆ !
ಪ್ರತಿ ದಿನ ಬೆಳಗಾಗುವುದರಲ್ಲಿ ಒಂದಲ್ಲಾ ಒಂದು ವಿವಾದಗಳು ಸೃಷ್ಟಿಯಾಗ್ತಿವೆ. ಆರಂಭದಲ್ಲಿ ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಕಾಡ್ಗಿಚ್ಚಿನಂತೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಯ್ತು. ಅದಾಗಿ ಹಿಜಾಬ್ ವಿಚಾರ ತಣ್ಣಗಾಗುತ್ತಿದ್ದಂತೆ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಹೇರುವ ಅಭಿಯಾನ ಶುರುವಾಯಿತು. ಅಲ್ಲಿಂದ ಒಂದರ ಹಿಂದೆ ಮತ್ತೊಂದು ವಿವಾದಗಳು ಅಭಿಯಾನದ ರೂಪದಲ್ಲಿ ಹುಟ್ಟಿಕೊಳ್ಳಲಾರಂಭಿಸಿತು. ಅದರದ್ದೇ ಭಾಗವಾಗಿ ಈಗ ಮುಸ್ಲಿಮರು ಚಾಲಕರು ಅಥವಾ ಮಾಲೀಕರು ಆಗಿರುವ ವಾಹನಗಳನ್ನು ಬಾಡಿಗೆಗೆ ಪಡೆಯದಂತೆ ಹಿಂದೂ ಸಂಘಟನೆಗಳು ಹಿಂದೂಗಳಿಗೆ ಕರೆ ಕೊಟ್ಟಿದೆ.
ಭಾರತ ರಕ್ಷಣಾ ವೇದಿಕೆ ಮುಖಂಡನಿಂದ ಮುಸ್ಲಿಮರ ಬಹಿಷ್ಕಾರಕ್ಕೆ ಕರೆ !
ಕರಾವಳಿ ಭಾಗದ ಭಾರತ ರಕ್ಷಣಾ ವೇದಿಕೆ ಎಂಬ ಹಿಂದೂ ಸಂಘಟನೆಯ ಮುಖಂಡ ಪ್ರಶಾಂತ್ ಬಂಗೇರಾ ಎಂಬಾತ ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಲಿ, ಮುಸ್ಲಿಮರ ವಾಹನ ಬಾಡಿಗೆಗೆ ಬಳಕೆ ಬೇಡ ಎಂದು ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾನೆ. ಈ ಬಗ್ಗೆ ಒಂದು ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಈಗಾಗಲೇ ಹಿಂದೂ ಸಮಾಜ ಒಂದಾಗಿ ಸಾಕಷ್ಟು ಅಭಿಯಾನ ಮಾಡಿ ಯಶಸ್ವಿಯಾಗಿದೆ. ನಾವು ಮತ್ತೊಂದು ಹೊಸ ಅಭಿಯಾನ ಆರಂಭ ಮಾಡಬೇಕಿದೆ. ಯಾರು ನಮ್ಮ ದೇವರನ್ನು ನಂಬುವುದಿಲ್ಲ, ನಮ್ಮ ಕಾನೂನಿಗೆ ಬೆಲೆ ಕೊಡುವುದಿಲ್ಲವೋ ಅವರ ವಾಹನದಲ್ಲಿ ಹೋಗಿ ಅಲ್ಲಿ ನಮ್ಮ ದೇವರಿಗೆ ಹರಕೆ ಪೂಜೆ ಸಲ್ಲಿಸುತ್ತಿದ್ದೆವೆ. ಆದರಿಂದ ಇಂದಿನಿಂದ ಹಿಂದೂ ಮಾಲೀಕರು ಮತ್ತು ಡ್ರೈವರ್ ಗಳ ಜೊತೆಯಲ್ಲೇ ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಬೇಕು. ಹಿಂದೂ ಚಾಲಕರಿಗೆ ನಾವು ಆರ್ಥಿಕವಾಗಿ ಬೆಂಬಲ ನೀಡಬೇಕು ಎಂದು ಹೊಸ ವಿವಾದದ ಕಿಡಿ ಹಚ್ಚಿಸಿದ್ದಾನೆ.

ಹಿಂದೂ ಸಂಘಟನೆಗಳ ‘ಮುಸ್ಲಿಂ ನಿಷೇಧ’ದ ಕರೆಗೆ ಕೆಂಡಾಮಂಡಲವಾದ ಟ್ರಾವೆಲ್ಸ್ ಮಾಲೀಕರು !
ಹಿಂದೂ ಸಂಘಟನೆಗಳು ಟ್ರಾವೆಲ್ಸ್ ಕ್ಷೇತ್ರದಿಂದ ಮುಸ್ಲಿಮರ ಬಹಿಷ್ಕಾರಕ್ಕೆ ಕೊಟ್ಟ ಕರೆಗೆ ಇಡೀ ಟ್ರಾವೆಲ್ಸ್ ಕ್ಷೇತ್ರವು ಒಕ್ಕೊರಲಿನಿಂದ ಖಂಡಿಸಿದೆ. ರಾಜ್ಯ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಓಲಾ ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು ಹಿಂದೂ ಸಂಘನಟೆಗಳ ಅಭಿಯಾನಕ್ಕೆ ಸೆಡ್ಡು ಹೊಡೆದಿದ್ದಾರೆ. ಅಲ್ಲದೆ ನಮಗೆ ವಾಹನವೇ ಮಸೀದಿ, ಮಂದಿರ, ಚರ್ಚ್ ಎಂದು ಹೇಳಿದೆ. ಹೀಗೆ ರಾಜ್ಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದ್ದು ಮುಸ್ಲಿಮ್ ವಾಹನ ಚಾಲಕ ಮಾಲಕರ ವಿರುದ್ಧ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್‌ಗಳು ಈ ಬಗ್ಗೆ ಖಂಡನೆ ವ್ಯಕ್ತ ಪಡಿಸಿದ್ದು ಅಸಮಾಧಾನ ಹೊರಹಾಕಿದೆ.






