ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಜನ ಪರ್ಯಾಯದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಇತ್ತೀಚೆಗೆ ಕೆಲ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಪಶ್ಚಿಮ ಬಂಗಾಳದಲ್ಲಿ ಮತ್ತು ಅದಕ್ಕೂ ಮಿಗಿಲಾಗಿ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ಆದ ಸೋಲು ಮೋದಿ ಜನಪ್ರಿಯತೆ ಇಳಿಮುಖವಾಗಿದೆ ಎಂಬುದನ್ನುಸಾಬೀತುಪಡಿಸಿವೆ. ಇವುಗಳ ಜೊತೆಯಲ್ಲಿ ಪರ್ಯಾಯ ಏನು? ಪರ್ಯಾಯ ನಾಯಕ ಯಾರು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಮೂರನೇ ಭಾರಿ ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಭಾರಿಸಿರುವುದರಿಂದ ಮಮತಾ ಬ್ಯಾನರ್ಜಿ ದಿಢೀರನೆ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ಆಗಬಹುದೇ ಎಂಬ ಚರ್ಚೆಗಳು ಹುಟ್ಟಿ ಕೊಂಡಿವೆ.

ಹೀಗೆ ದೇಶವೇ ಒಂದು ರೀತಿ ‘ನಾಯಕತ್ವ’ದ ಬಗ್ಗೆ ಯೋಚಿಸುತ್ತಿದ್ದರೆ ಶತಮಾನಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷವನ್ನು ‘ನಾಯಕತ್ವದ ಕೊರತೆ’ ತೀವ್ರವಾಗಿ ಕಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದು ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 2014ರಿಂದೀಚೆಗೆ ಎರಡು ಲೋಕಸಭಾ ಚುನಾವಣಾ ಸೋಲುಗಳು ಸೇರಿದಂತೆ ಕಾಂಗ್ರೆಸ್ ಹಲವು ಅಪಜಯಗಳನ್ನು ತನ್ನದಾಗಿಸಿಕೊಂಡಿದೆ. ಅವುಗಳ ಬಗ್ಗೆ ಸೂಕ್ತ ರೀತಿಯಲ್ಲಿ ಆತ್ಮಾವಲೋಕನ ಮಾಡಿಕೊಂಡಿಲ್ಲ. ಈಗ ಅಸ್ಸಾಂ, ಕೇರಳ, ತಮಿಳುನಾಡು, ಬಂಗಾಳ ಮತ್ತು ಪುದುಚೇರಿ ಚುನಾವಣೆಗಳ ವಿಷಯದಲ್ಲೂ ಅಷ್ಟೇ.

ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಂಸ್ಥೆ ಎಂದರೆ ಅದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ. ಇತ್ತೀಚೆಗೆ ನಡೆದ ಆ ಸಭೆಯಲ್ಲಿ ಅಸ್ಸಾಂ, ಕೇರಳ, ತಮಿಳುನಾಡು, ಬಂಗಾಳ ಮತ್ತು ಪುದುಚೇರಿ ಚುನಾವಣೆಗಳ ಸೋಲಿನ ಬಗ್ಗೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅಪಾರವಾದ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ‘ಕಳಪೆ ಪ್ರದರ್ಶನ’ದ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಇದೆಲ್ಲಾ ಆದ ಮೇಲೆ ಪಕ್ಷದ ನೂತನ ಅಧ್ಯಕ್ಷನ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆಯನ್ನು ಕರೋನಾ ಕಾರಣಕ್ಕಾಗಿ ಮಂದೂಡಲಾಗಿದೆ.

ವಾಸ್ತವವಾಗಿ ಈಗ ಐದು ರಾಜ್ಯಗಳಲ್ಲಿ ಮತ್ತು ಹಿಂದೆ ಇನ್ನೂ ಹಲವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸೋಲುವುದಕ್ಕೂ ಇದೇ ನಾಯಕತ್ವದ ಸಮಸ್ಯೆಯೇ ಕಾರಣ ಎನ್ನುವುದನ್ನು ಕಾಂಗ್ರೆಸ್ ಕಾರ್ಯಕಾರಿ ಮರೆತಂತಿದೆ. ಫಲಿತಾಂಶ ಮತ್ತು ನಾಯಕತ್ವವು ಒಂದಕ್ಕೊಂದು ಬೆಸೆದುಕೊಂಡಿವೆ ಎಂಬ ಸಾಮಾನ್ಯ ಸಂಗತಿಯನ್ನು ಮರೆತಿವೆ. ಮರೆತಿದ್ದರೆ ಪರವಾಗಿರಲಿಲ್ಲ, ಅದರೀಗ ಉದ್ದೇಶಪೂರ್ವಕವಾಗಿ ಮರೆತಂತಿದೆ.
ಸೂಕ್ತ ನಾಯಕತ್ವ ಇಲ್ಲದೆ ಸೂಕ್ತವಾದ ರಣತಂತ್ರ ರೂಪಿಸುವುದು ಕೂಡ ಸಾಧ್ಯವಾಗುವುದಿಲ್ಲ. 2014ರ ಲೋಕಸಭಾ ಚುನಾವಣೆಯ ಪರಾಭವದ ನಂತರ ಹಿರಿಯ ಮುಖಂಡ ಎ.ಕೆ. ಆಂಟನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ‘ಮುಂದೇನು ಮಾಡಬೇಕೆಂಬ ಕಾರ್ಯಯೋಜನೆ ಸಿದ್ದಪಡಿಸಲು’ ಸೂಚಿಸಲಾಗಿತ್ತು. ಆ ಸಮಿತಿಯ ಶಿಫಾರಸುಗಳು ಏನಾದವು ಎಂಬ ಮಾಹಿತಿ ಇಲ್ಲ. 2019 ರ ಚುನಾವಣೆಯ ನಂತರ ಮತ್ತದೇ ಪರಿಪಾಠ. 2014ರಿಂದ ಈಚೆಗೆ ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ಒಟ್ಟು 39 ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಆ ಪೈಕಿ ಗೆದ್ದಿರುವುದು ಕೇವಲ ಐದು ವಿಧಾನಸಭಾ ಚುನಾವಣೆಗಳಲ್ಲಿ.

ಈಗ ಅಸ್ಸಾಂನಲ್ಲಿ ಎಯುಡಿಎಫ್ ಜೊತೆ ಹೊಂದಾಣಿಕೆ ಮಾಡಿಕೊಂಡು ತಪ್ಪು ಮಾಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 20 ಲೋಕಸಭಾ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಕೇರಳದ ಪರಂಪರೆ ಮುರಿದು ಎಲ್ ಡಿಎಫ್ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವುದನ್ನು ತಡೆಯುವಲ್ಲಿ ವಿಫಲವಾಗಿದೆ. ಅಷ್ಟೇಯಲ್ಲ, ವೈನಾಡಿನ ಸಂಸದರೂ ಆಗಿರುವ ರಾಹುಲ್ ಗಾಂಧಿ ಅವರ ಪ್ರಚಾರದ ಹೊರತಾಗಿಯೂ ಹಲವು ದಶಕಗಳ ಬಳಿಕ 140 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಸ್ಥಾನಗಳಿಗೆ ಕುಸಿದಿದೆ. ಒಂದು ಕಾಲದಲ್ಲಿ ಪಶ್ಚಿಮ ಬಂಗಾಳವನ್ನು ಆಳಿದ್ದ ಕಾಂಗ್ರೆಸ್ ಪಕ್ಷದ್ದು ಈಗ ಅಲ್ಲಿ ಶೂನ್ಯ ಸಾಧನೆ.

ಇಂಥ ಸಾಧನೆಗೆ 2014ರಿಂದೀಚೆಗೆ ಪಕ್ಷವನ್ನು ಆವರಿಸಿರುವ ನಾಯಕತ್ವದ ಸಮಸ್ಯೆಯೇ ಮೂಲ ಕಾರಣ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಜೊತೆಗೆ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎರಡು ವರ್ಷಗಳು ಕಳೆದರೂ ಅವರನ್ನು ಮತ್ತೊಮ್ಮೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವೊಲಿಸಲು ಅಥವಾ ಬೇರೊಬ್ಬರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬದಲಿಗೆ ಅನಾರೋಗ್ಯ ಪೀಡಿತರಾಗಿರುವ ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರೆಸಲಾಗುತ್ತದೆ. ಜೂನ್ 23ರಂದು ನಡೆಯಬೇಕಿದ್ದ ಹೊಸ ಅಧ್ಯಕ್ಷರ ಚುನಾವಣೆಯನ್ನು ಈಗ ಕರೋನಾ ಕಾರಣಕೊಟ್ಟು ಮುಂದೂಡಲಾಗಿದೆ. ದೇಶ ಕರೋನಾದಿಂದ ಬಚಾವ್ ಆಗಬಹುದು ಆದರೆ ಕಾಂಗ್ರೆಸ್ ಪಕ್ಷ ಮಾತ್ರ ತನಗಂಟಿರುವ ಸೋಮಾರಿತನ, ಹೊಣಗೇಡಿತನದ ಸಮಸ್ಯೆಗಳಿಂದ ಪಾರಾಗುವುದು ಬಲುಕಷ್ಟ.