ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಮುಸ್ಲಿಂ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವಲ್ಲಿ ಸತತವಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷಗಳು ಮತಕ್ಕಾಗಿ ಮುಸ್ಲಿಂ ಮಹಿಳೆಯರ ಪ್ರಗತಿಗೆ ಅಡ್ಡಿಯಾಗಿವೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಯುಪಿಯ ಸಹರಾನ್ಪುರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸುವ ಮೂಲಕ ಬಿಜೆಪಿ ಸರ್ಕಾರವು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದೆ. ಮುಸ್ಲಿಂ ಸಹೋದರಿಯರು ಮೋದಿಯನ್ನು ಹೊಗಳುವುದನ್ನು ಕಂಡಾಗ ವಿರೋಧ ಪಕ್ಷಗಳು ಅದನ್ನು ತಡೆಯಲು ಹೊಸ ಮಾರ್ಗಗಳೊಂದಿಗೆ ಬರುತ್ತಿದ್ದಾರೆ ಎಂದು ಕಿಡಿ ಕಾರಿದರು.
ಪ್ರತಿಯೊಬ್ಬ ಮುಸ್ಲಿಂ ಮಹಿಳೆಯೊಂದಿಗೆ ಬಿಜೆಪಿ ಸರ್ಕಾರ ನಿಂತಿದೆ. ಆದರೆ ನಮ್ಮ ಪಕ್ಷದ ವಿರೋಧಿಗಳು ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ವಿರೋಧಿಗಳು ಮುಸ್ಲಿಂ ಸಹೋದರಿಯರನ್ನು ಮೋಸಗೊಳಿಸುತ್ತಿದ್ದಾರೆ. ಇದರಿಂದ ಮುಸ್ಲಿಂ ಹೆಣ್ಣು ಮಕ್ಕಳ ಜೀವನವು ಯಾವಾಗಲೂ ಹಿಂದುಳಿಯುತ್ತದೆ. 2013ರ ಮುಝಾಫರ್ನಗರ ಗಲಭೆ ಮತ್ತು 2017ರ ಸಹರಾನ್ಪುರದಲ್ಲಿ ನಡೆದ ಹಿಂಸಾಚಾರಗಳಲ್ಲಿ ಜನರು ಹೇಗೆ ರಾಜಕೀಯ ದಾಳಕ್ಕೆ ಬಲಿಯಾದರು ಎಂಬುದಕ್ಕೆ ಇದು ಪುರಾವೆ ಎಂದು ಹೇಳಿದರು.

ಮುಂದುವರೆದು, ಉತ್ತರ ಪ್ರದೇಶವನ್ನು ಅಭಿವೃದ್ಧಿಪಡಿಸುವವರಿಗೆ ಮತ ಹಾಕಲು ಜನರು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶವನ್ನು ಗಲಭೆ ಮುಕ್ತವಾಗಿಡುವವರು, ನಮ್ಮ ತಾಯಿ ಮತ್ತು ಮಗಳನ್ನು ಭಯದಿಂದ ಮುಕ್ತವಾಗಿಡುವವರು, ಅಪರಾಧಿಗಳನ್ನು ಜೈಲಿನಲ್ಲಿ ಇಡುವವರಿಗೆ ಜನರು ಮತ ಹಾಕುತ್ತಾರೆ. ಸಮಾಜವಾದಿ ಪಕ್ಷವು ʼನಕಲಿ ಸಮಾಜವಾದʼ ದಲ್ಲಿ ತೊಡಗಿದೆ ಎಂದು ಎಸ್ಪಿ ವಿರುದ್ಧ ಹರಿಹಾಯ್ದರು.










