ಬೆಂಗಳೂರು: ಬೆಂಗಳೂರು ನಗರದಲ್ಲಿ ಶವ ಸಂಸ್ಕಾರ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮಹಾನಗರ ಪಾಲಿಕೆ ಹೊಸ ನಿಯಮ ಜಾರಿಗೊಳಿಸಲು ಸಜ್ಜಾಗಿದೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಆನ್‌ಲೈನ್ ನೋಂದಣಿ ಕಡ್ಡಾಯವಾಗಲಿದೆ.

ಪಶ್ಚಿಮ ವಲಯದ 5 ವಿದ್ಯುತ್ ಚಿತಾಗಾರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಮೃತರ ಸಂಬಂಧಿಕರು ಚಿತಾಗಾರಕ್ಕೆ ಬರುವ ಮೊದಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪಾಲಿಕೆ ಸೂಚಿಸಿದೆ.

ನೋಂದಣಿಗಾಗಿ ಸಾರ್ವಜನಿಕರು ಪಾಲಿಕೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು. ಪ್ರತಿ ಶವ ಸಂಸ್ಕಾರಕ್ಕೆ ₹250 ಶುಲ್ಕ ನಿಗದಿಪಡಿಸಲಾಗಿದ್ದು, ಆನ್‌ಲೈನ್ ಮೂಲಕ ಪಾವತಿ ಮಾಡಿ ರಶೀದಿ ಪಡೆಯುವುದು ಕಡ್ಡಾಯವಾಗಿದೆ.

ಇನ್ನು ಮರಣ ವರದಿ ಮತ್ತು ಅರ್ಜಿ, ವೈದ್ಯಕೀಯ ಪ್ರಮಾಣಪತ್ರ, ಸಾವಿನ ಕಾರಣ ದೃಢೀಕರಿಸುವ ವೈದ್ಯರ Form-4A, ಮೃತರ ಗುರುತಿನ ಚೀಟಿ (ಆಧಾರ್, ಮತದಾರರ ಚೀಟಿ, ಪಡಿತರ ಚೀಟಿ ಅಥವಾ ಪ್ಯಾನ್ ಕಾರ್ಡ್) ಸೇರಿದಂತೆ ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ. ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ಅಂತ್ಯಸಂಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಲು ಈ ಹೊಸ ನಿಯಮ ಪಾಲಿಸುವಂತೆ ಪಾಲಿಕೆ ಮನವಿ ಮಾಡಿದೆ.





