—-ನಾ ದಿವಾಕರ —
ಆಗಾಗ್ಗೆ ನಡೆಯುವ ಚುನಾವಣೆಗಳು ತಳ ಸಮಾಜದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ
ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕ ಕಾಲದಲ್ಲಿ ಚುನಾವಣೆಗಳನ್ನು ನಡೆಸುವ ನರೇಂದ್ರ ಮೋದಿ ಸರ್ಕಾರದ ಆಲೋಚನೆ ಕಳೆದೆರಡು ವರ್ಷಗಳಲ್ಲಿ ಗಂಭೀರ ಸಾರ್ವಜನಿಕ ಚರ್ಚೆಗೊಳಗಾಗಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ತಳಮಟ್ಟದ ಸಮಾಜದಲ್ಲಿ ಪ್ರಜಾತಂತ್ರದ ಮೌಲ್ಯಗಳು ಜಾಗೃತವಾಗಿರುವುದನ್ನು ಬಿಂಬಿಸುವಂತೆಯೇ, ಈ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲೂ ಸಹ ಉತ್ತೇಜಕವಾಗುತ್ತವೆ. ಜನರಿಂದಲೇ ಆಯ್ಕೆಯಾಗುವ ಶಾಸನಸಭೆಗಳ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯ ವಿಭಿನ್ನ ಸ್ತರಗಳನ್ನು ಪ್ರತಿನಿಧಿಸುತ್ತಲೇ, ತಮ್ಮ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಅಥವಾ ತಮ್ಮ ಕ್ಷೇತ್ರ ಕಾರ್ಯದ ಸಾರ್ಥಕತೆಯನ್ನು ಅಳೆಯಲು ಚುನಾವಣೆಗಳನ್ನೇ ಅವಲಂಬಿಸುತ್ತಾರೆ. ಹಾಗಾಗಿ ಮತದಾರರ ಬಳಿಗೆ ಮತಯಾಚನೆಗಾಗಿ ಹೋಗುವುದು ರಾಜಕಾರಣಿಗಳಿಗೆ ಅಗ್ನಿಪರೀಕ್ಷೆಯಂತಿರುತ್ತದೆ.
ಬದಲಾಗುತ್ತಿರುವ ಭಾರತದಲ್ಲಿ ಚುನಾವಣೆ ಎನ್ನುವುದು ಬಂಡವಾಳ, ಹಣ, ಜಾತಿ ಮತ್ತು ಸಾಮಾಜಿಕ ಪ್ರಾಬಲ್ಯದ ಆಡುಂಬೊಲ ಆಗಿರುವುದು ವಾಸ್ತವವೇ ಆದರೂ, ಭಾರತೀಯ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಬಹುಸಂಖ್ಯಾತ ಜನತೆಗೆ ಈ ಚುನಾವಣೆಗಳು ಆಳುವವರನ್ನು ಎಚ್ಚರಿಸುವ ಒಂದು ಅವಕಾಶವಾಗಿ ಕಾಣುವುದು ಸತ್ಯ. ತಮ್ಮ ದುಡಿಮೆ, ಆದಾಯ ಮತ್ತು ಶ್ರಮವನ್ನೇ ಅವಲಂಬಿಸಿ ಬದುಕುವ ಈ ಜನಸಮುದಾಯಗಳು, ಭಾರತ ಒಪ್ಪಿಕೊಂಡಿರುವ ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯಿಂದ ತಮ್ಮ ಬದುಕು ಹಸನಾಗುವ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂಬ ನಿರೀಕ್ಷೆಯಲ್ಲೇ ಇರುತ್ತವೆ. 77 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಈ ನಿರೀಕ್ಷೆ ಕಡಿಮೆಯಾಗಿಲ್ಲ ಎಂದರೆ, ಇಷ್ಟು ವರ್ಷಗಳ ಆಳ್ವಿಕೆಯಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ತಳಸಮಾಜದ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲ ಎಂದೇ ಅರ್ಥ ಅಲ್ಲವೇ ?
ಆದಾಗ್ಯೂ ಭಾರತದಲ್ಲಿ ಪ್ರಜಾಪ್ರಭುತ್ವ ಮೌಲಿಕವಾಗಿ ಉಳಿದಿರುವುದು ಈ ತಳಸಮಾಜದ ಜನರಿಂದಲೇ ಎನ್ನುವುದು ವಾಸ್ತವ. ಸ್ಥಳೀಯ ಗ್ರಾಮಪಂಚಾಯತ್ ಮಟ್ಟದಿಂದ ಲೋಕಸಭೆಯವರೆಗೂ ವಿಸ್ತರಿಸುವ ಅಧಿಕಾರ ರಾಜಕಾರಣದ ವಾರಸುದಾರ ಪಕ್ಷಗಳು ಜಾತಿ, ಮತ, ಧರ್ಮ ಮತ್ತಾವುದೇ ರೀತಿಯ ಪ್ರಲೋಭನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋದರೂ, ಅಂತಿಮವಾಗಿ ಈ ಪಕ್ಷಗಳ ಕಾರ್ಯದಕ್ಷತೆ, ವ್ಯಕ್ತಿಗತ ಪ್ರಾಮಾಣಿಕತೆ, ಆಡಳಿತಾತ್ಮಕ ನೈತಿಕತೆ ಮತ್ತು ಜನಸ್ಪಂದನೆಯ ಮಾದರಿಯೇ ಒಂದು ಮಾನದಂಡವಾಗಿ ಪರಿಣಮಿಸಿರುವುದನ್ನು ಚುನಾವಣೆಗಳು ನಿರೂಪಿಸುತ್ತಲೇ ಬಂದಿವೆ. ಭಾರತವನ್ನು ಶಾಶ್ವತವಾಗಿ ಆಳುತ್ತೇವೆ ಎಂಬ ಮಹತ್ವಾಕಾಂಕ್ಷೆಯ “ ಅಬ್ ಕಿ ಬಾರ್ ಚಾರ್ ಸೌ ಪಾರ್ ” ಘೋಷಣೆಯನ್ನೂ ವಿಫಲಗೊಳಿಸುವ ಮೂಲಕ ಭಾರತದ ಮತದಾರರು ಪ್ರಜಾಪ್ರಭುತ್ವದ ಆಂತರಿಕ ಶಕ್ತಿಯನ್ನು ಸ್ಪಷ್ಟವಾಗಿ ಬಿಂಬಿಸಿರುವುದನ್ನು 2024ರ ಲೋಕಸಭಾ ಚುನಾವಣೆಗಳಲ್ಲಿ ಕಂಡಿದ್ದೇವೆ.
ಅಧಿಕಾರ ಕೇಂದ್ರಗಳ ಸ್ತರೀಯ ರೂಪ
ಇದು ಹೇಗೆ ಸಾಧ್ಯವಾಗುತ್ತದೆ ? ಇದಕ್ಕೆ ಕಾರಣ ರಾಜಕೀಯ ಅಧಿಕಾರದ ವಿವಿಧ ಸ್ತರಗಳಲ್ಲಿ ಆಳ್ವಿಕೆಯ ಕೇಂದ್ರಗಳನ್ನು ಆಕ್ರಮಿಸಲು ಅಪೇಕ್ಷಿಸುವ ಪಕ್ಷಗಳು ದೇಶಾದ್ಯಂತ ವಿವಿಧ ಸ್ತರಗಳಲ್ಲಿ, ವಿವಿಧ ವಲಯಗಳಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಲು ಜನರ ಬಳಿಗೆ ಪದೇಪದೇ ಹೋಗುತ್ತಲೇ ಇರುವ ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಮೌಲಿಕ ನೆಲೆಗಟ್ಟಿನಲ್ಲಿ ನೋಡಿದಾಗ ನಮಗೆ ಹಲವಾರು ಲೋಪದೋಷಗಳು, ಕೊರತೆಗಳು, ಅಪಸವ್ಯಗಳು ಕಾಣುವುದಾದರೂ, ಅಂತಿಮವಾಗಿ ಜನಸಾಮಾನ್ಯರ ದೃಷ್ಟಿಯಲ್ಲಿ ಮುಖ್ಯವಾಗುವುದು ಚುನಾಯಿತ ಪ್ರತಿನಿಧಿಗಳ ಪ್ರಾಮಾಣಿಕತೆ, ದಕ್ಷತೆ ಮತ್ತು ಸಂವಿಧಾನಬದ್ದತೆ. ಹಾಗಾಗಿ ಈ ಪ್ರಕ್ರಿಯೆಯ ನಿರಂತರತೆಯೇ ಪ್ರಜಾಪ್ರಭುತ್ವವನ್ನು ಸದಾ ಚಾಲನೆಯಲ್ಲಿಡುವ ಒಂದು ಶಕ್ತಿಯಾಗಿ ಪರಿಣಮಿಸುತ್ತದೆ. ರಾಜಕೀಯ ಅಧಿಕಾರದ ಒಂದು ಸ್ತರದಲ್ಲಿ ಸ್ಥಾನಪಡೆಯುವ ಪಕ್ಷಗಳು ಮತ್ತೊಂದು ಸ್ತರದಲ್ಲಿ ಆಯ್ಕೆಯಾಗಲು ಮತದಾರರ ಬಳಿಗೆ ಹೋಗಲೇಬೇಕಾಗುತ್ತದೆ.
ಸಂಸದೀಯ ಪ್ರಜಾತಂತ್ರದ ಸೌಂದರ್ಯ ಇರುವುದು ಇಲ್ಲಿಯೇ. ಈ ಸೌಂದರ್ಯವನ್ನು ವಿರೂಪಗೊಳಿಸುವ ಒಂದು ಮಾದರಿ “ ಒಂದು ದೇಶ ಒಂದು ಚುನಾವಣೆ ” ಎಂಬ ಕಲ್ಪನೆ. ಬಿಜೆಪಿ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ಮುಂದಾಗಿದ್ದು ದೇಶಾದ್ಯಂತ ಏಕ ಕಾಲಕ್ಕೆ ಚುನಾವಣೆ ನಡೆಸುವ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯು ತನ್ನ ಅಂತಿಮ ಶಿಫಾರಸುಗಳನ್ನು ಮಾರ್ಚ್ ತಿಂಗಳಲ್ಲೇ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದರೂ 2024ರ ಚುನಾವಣೆಗಳಲ್ಲಿ ಇದು ಬಿಜೆಪಿಗೆ ನೆರವಾಗಿಲ್ಲ ಎನ್ನುವುದು ಸ್ಪಷ್ಟ. ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿರುವ 18,626 ಪುಟಗಳ ಈ ವರದಿಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದು, ಇನ್ನು ಸಂವಿಧಾನ ತಿದ್ದುಪಡಿಗಳನ್ನು ಮಾಡಿದ ನಂತರವಷ್ಟೇ ಇದು ಜಾರಿಯಾಗಬೇಕಿದೆ.
ಸಮಿತಿಯ ಶಿಫಾರಸು ಮತ್ತು ಪ್ರಸ್ತಾಪಗಳು
ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವ ಸಂವಿಧಾನ ತಿದ್ದುಪಡಿ ವಿಧೇಯಕ ಅನುಮೋದನೆ ಪಡೆಯಬೇಕಾದರೆ ಒಟ್ಟು ಸದಸ್ಯರ ಮೂರನೆ ಎರಡರಷ್ಟು ಸಂಸದ̧ರು ಅಂದರೆ 362 ಸಂಸದರು ಈ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ. ಮಸೂದೆಯನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸಿ ಚರ್ಚೆಗಳನ್ನು ಪೂರೈಸಿದ ನಂತರ ಪರಿಗಣನೆಗಾಗಿ ವಿಶೇಷ ಬಹುಮತಕ್ಕಾಗಿ ಮತ ಹಾಕಲು ಪರಿಯಚಯಿಸಲಾಗುತ್ತದೆ. ಈ ಹಂತದಲ್ಲಿ ಬಹುಶಃ ಪ್ರಸ್ತುತ ಮಸೂದೆಯು ಸೋಲು ಅನುಭವಿಸುವ ಸಾಧ್ಯತೆಗಳಿವೆ. ಏಕೆಂದರೆ ಎಲ್ಲ ವಿರೋಧ ಪಕ್ಷಗಳೂ ಈ ಯೋಜನೆಯನ್ನು ವಿರೋಧಿಸುತ್ತಿರುವುದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಗಳಿಸುವುದು ದುಸ್ತರವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಸಂವಿಧಾನ ತಿದ್ದುಪಡಿಯನ್ನೂ ವಿರೋಧ ಪಕ್ಷದ ಬೆಂಬಲವಿಲ್ಲದೆ ಅಳವಡಿಸಲಾಗುವುದಿಲ್ಲ ಎಂಬ ವಾಸ್ತವ ಸರ್ಕಾರಕ್ಕೆ ಅರ್ಥವಾಗಬೇಕಿದೆ.
ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿಯು ಏಕಕಾಲದ ಚುನಾವಣೆಗಳನ್ನು ಎರಡು ಕಾರಣಗಳಿಗಾಗಿ ಪ್ರಸ್ತಾಪಿಸಿದೆ . ಮೊದಲನೆಯದು ಆಗಾಗ್ಗೆ ನಡೆಯುವ ಚುನಾವಣೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ವೆಚ್ಚವನ್ನು ಕಡಿಮೆ ಮಾಡುವುದು. ಎಲ್ಲ ಚುನಾವಣೆಗಳನ್ನೂ ಒಮ್ಮೆಲೇ ನಡೆಸಿದರೆ ವೆಚ್ಚ ತಗ್ಗಿಸಬಹುದು ಎಂದು ಹೇಳಲಾಗಿದೆ. ಆದರೆ ಚುನಾವಣಾ ಆಯೋಗವು ನಡೆಸುವ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳಿಗೆ ಅಗತ್ಯವಾದ ಹಣಕಾಸನ್ನು ವಾರ್ಷಿಕ ಬಜೆಟ್‌ನ ಒಂದು ಭಾಗವಾಗಿ ಒದಗಿಸಲಾಗುತ್ತದೆ. ಸಂವಿಧಾನ ಅನುಚ್ಛೇದ 324ರ ಅನ್ವಯ ಚುನಾವಣಾ ಆಯೋಗ ಇದನ್ನು ನಿರ್ವಹಿಸುತ್ತದೆ. ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಆಯೋಗವನ್ನೇ ಅವಲಂಬಿಸಲಾಗುತ್ತದೆ. ರಾಜ್ಯಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ವೆಚ್ಚವನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ಹಣಕಾಸು ಒದಗಿಸಬೇಕಾಗುತ್ತದೆ.
ಹೀಗಿರುವಾಗ ಚುನಾವಣೆಗಳು ಒಂದೇ ಬಾರಿಗೆ ನಡೆದರೂ ಸಹ ಈ ವೆಚ್ಚಗಳೇನೂ ಕಡಿಮೆಯಾಗುವುದಿಲ್ಲ. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ವೆಚ್ಚ ಮಾಡುತ್ತಿರುವ ಅಪಾರ ಮೊತ್ತದಲ್ಲಿ ಕೊಂಚ ಉಳಿಕೆ ಇದ್ದರೂ ಸಹ ಪಕ್ಷಗಳು ಅದನ್ನು ರಸ್ತೆ, ಆಸ್ಪತ್ರೆ, ಶಾಲೆ ಇತ್ಯಾದಿ ಮೂಲ ಸೌಕರ್ಯಗಳಿಗಾಗಿ ಮೀಸಲಿಡುವುದಿಲ್ಲ. ಇದು ವಾಸ್ತವ. 1951 ರಿಂದ 1967ರವರೆಗೆ ಏಕಕಾಲದ ಚುನಾವಣೆಗಳೇ ನಡೆಯುತ್ತಿದ್ದವು ಆದರೂ ಯಾವುದೇ ರಾಜಕೀಯ ಪಕ್ಷವೂ ತನ್ನ ಉಳಿಕೆಯ ಹಣವನ್ನು ಜನಸೌಕರ್ಯಗಳಿಗಾಗಿ ವೆಚ್ಚ ಮಾಡಿರುವ ಉದಾಹರಣೆಗಳಿಲ್ಲ. ಹಾಗಾಗಿ ಏಕಕಾಲಿಕ ಚುನಾವಣೆಗಳಿಂದ ಉಳಿತಾಯವಾಗುವ ಹಣವನ್ನು ಮೂಲ ನಾಗರಿಕ ಸೌಕರ್ಯಗಳಿಗಾಗಿ ಬಳಸಬಹುದು ಎಂದು ನಿಖರವಾಗಿ ಹೇಳಲು ಯಾವುದೇ ಪೂರ್ವ ನಿದರ್ಶನಗಳಿಲ್ಲ. ಬಂಡವಾಳಿಗರ-ಕಾರ್ಪೋರೇಟ್ ಉದ್ಯಮಿಗಳ ಮೂಲಕ ರಾಜಕೀಯ ಪಕ್ಷಗಳು ಹರಿಸುವ ಹಣದ ಹೊಳೆ ಈ ಬದಲಾವಣೆಯಿಂದ ಯಾವುದೇ ರೀತಿಯಲ್ಲಿ ಪ್ರಭಾವಕ್ಕೊಳಗಾಗುವುದಿಲ್ಲ.
ಸಮಿತಿಯು ಮುಂದಿಡುವ ಎರಡನೆಯ ಕಾರಣ ಎಂದರೆ ಆಗಾಗ್ಗೆ ಚುನಾವಣೆಗಳನ್ನು ನಡೆಸಿದರೆ, ಚುನಾವಣಾ ನೀತಿ ಸಂಹಿತೆಗಳು ಚಾಲ್ತಿಯಲ್ಲಿರುವುದರಿಂದ ಅಭಿವೃದ್ಧಿ ಯೋಜನೆಗಳು ಮತ್ತು ಸರ್ಕಾರಿ ಪ್ರಾಯೋಜಿತ ಮೂಲ ಸೌಕರ್ಯದ ಕಾಮಗಾರಿಗಳಿಗೆ ಅಡ್ಡಿಯುಂಟಾಗುತ್ತದೆ ಎನ್ನುವುದು. ಇದು ಆಧಾರ ತಹಿತವಾದ ಅಭಿಪ್ರಾಯ ಎನ್ನಬಹುದು. 77 ವರ್ಷಗಳ ನಡಿಗೆಯಲ್ಲಿ ಯಾವ ಸಂದರ್ಭದಲ್ಲೂ ಈ ರೀತಿಯ ಅಡಚಣೆಯಾಗಿರುವುದನ್ನು ಗುರುತಿಸಲಾಗುವುದಿಲ್ಲ. 1967ರಿಂದ ಈವರೆಗೂ ನಡೆದಿರುವ ಚುನಾವಣೆಗಳನ್ನು ಗಮನಿಸಿದರೆ, ಎಲ್ಲಿಯೂ ಸಹ ಅಭಿವೃದ್ಧಿ ಯೋಜನೆಗಳು, ಆ ಕಾರಣದಿಂದಲೇ ಸ್ಥಗಿತಗೊಂಡಿರುವ ಉದಾಹರಣೆಗಳು ಕಾಣುವುದಿಲ್ಲ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗಲೇ ನೋಟುಅಮಾನ್ಯೀಕರಣದ ಮೂಲಕ ಶೇಕಡಾ 85ರಷ್ಟು ನಗದನ್ನು ಅಮಾನ್ಯಗೊಳಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಚುನಾವಣಾ ವೆಚ್ಚಗಳನ್ನು ಯಾವ ರೀತಿಯಲ್ಲೂ ಬಾಧಿಸಲಿಲ್ಲ.
ಸಾಂವಿಧಾನಿಕ ಸಿಕ್ಕುಗಳು
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರಾಜ್ಯ ವಿಧಾನಸಭೆಗಳ ಅಧಿಕಾರಾವಧಿಯನ್ನು ಲೋಕಸಭೆಯ ಅವಧಿಯೊಡನೆ ಸಮನ್ವಯಗೊಳಿಸುವ ಆಲೋಚನೆಯೇ ಒಕ್ಕೂಟ ವ್ಯವಸ್ಥೆಯ ಮೂಲ ನಿಯಮಗಳಿಗೆ ಧಕ್ಕೆ ಉಂಟುಮಾಡುತ್ತದೆ. ಭಾರತದ ಸಂವಿಧಾನದ ಅಡಿಯಲ್ಲಿ ರಾಜ್ಯ ವಿಧಾನಸಭೆಗಳು ಒಂದು ಸ್ವಾಯತ್ತವಾದ, ಕಾಯ್ದೆ ಕಾನೂನುಗಳನ್ನು ರೂಪಿಸುವ ಹಕ್ಕು ಹೊಂದಿರುವ ಸಾಂವಿಧಾನಿಕ ಸಂಸ್ಥೆಗಳಾಗಿದ್ದು, ಇದು ಸಂಸತ್ತಿನಿಂದ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಲೋಕಸಭೆಯ ಅವಧಿಯಿಂದ ಸ್ವತಂತ್ರವಾಗಿ ರಾಜ್ಯ ಶಾಸನಸಭೆಗಳಿಗೆ ನಿಗದಿತ ಅಧಿಕಾರಾವಧಿಯನ್ನು ನಿಗದಿಪಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೂಲ ನೀತಿಯಾಗಿದೆ. ಇದು ಸಂವಿಧಾನದ ಮೂಲ ಸಂರಚನೆಗೆ (Basic Structure of the Costitution) ಸಂಬಂಧಿಸಿದ ವಿಷಯವಾಗಿದ್ದು, ಸುಪ್ರೀಂಕೋರ್ಟ್‌ನ ಕೇಶವಾನಂದ ಭಾರತಿ ತೀರ್ಪಿನ ಅನುಸಾರ, ಇದನ್ನು ಯಾವುದೇ ಕಾರಣಕ್ಕೂ ತಿದ್ದುಪಡಿಮಾಡಲಾಗುವುದಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯೂ ಇದರ ಒಂದು ಭಾಗವಾಗಿದೆ.
ರಾಮನಾಥ್ ಕೋವಿಂದ್ ಸಮಿತಿ ನೀಡಿರುವ ಶಿಫಾರಸುಗಳು, ರಾಜ್ಯ ವಿಧಾನಸಭೆಗಳ ನಿಗದಿತ ಅವಧಿಯನ್ನು ಪಲ್ಲಟಗೊಳಿಸುವ ಮೂಲಕ ಸಂವಿಧಾನದ ಈ ಮೂಲ ಸಂರಚನೆಯನ್ನೇ ತಿದ್ದುಪಡಿ ಮಾಡುವ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ ಈ ತಿದ್ದುಪಡಿ ಸಾಧ್ಯವಾದರೂ, ಇದನ್ನು ರಾಜ್ಯ ವಿಧಾನಸಭೆಗಳು ಅನುಮೋದಿಸಬೇಕೋ ಬೇಡವೋ ಎಂಬ ಜಿಜ್ಞಾಸೆ ಮುನ್ನಲೆಗೆ ಬರುತ್ತದೆ. ಇದನ್ನು ಹೊರತಾಗಿ ಯೋಚಿಸಿದರೂ, ಹಲವು ರಾಜ್ಯ ವಿಧಾನಸಭೆಗಳು ತಮ್ಮ ಪೂರ್ಣಾವಧಿಯನ್ನು ಕಳೆದುಕೊಳ್ಳುವುದಂತೂ ನಿಶ್ಚಿತ. ಇದರಿಂದ ಆಯಾ ರಾಜ್ಯದ ಜನತೆಯ ಸಾಂವಿಧಾನಿಕ ಆಯ್ಕೆ ಮತ್ತು ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ರಾಜ್ಯಗಳಲ್ಲಿ ಚುನಾಯಿತವಾಗುವ ಸರ್ಕಾರಗಳಿಗೆ ಮುಂದಿನ ಐದು ವರ್ಷಗಳ ಅವಧಿ ಖಾಯಂ ಆಗುವುದರಿಂದ ಆಡಳಿತ ನೀತಿಗಳು ನಾಗರಿಕ ದೃಷ್ಟಿಕೋನವನ್ನು ಕಳೆದುಕೊಳ್ಳುತ್ತವೆ.
ಇತ್ತೀಚಿನ ದಿನಗಳಲ್ಲಿ ಚುನಾಯಿತ ಸರ್ಕಾರಗಳನ್ನು ಪಲ್ಲಟಗೊಳಿಸಲು ಸಾರಾಸಗಟಾಗಿ ಬೇಲಿ ಜಿಗಿತ ಮಾಡುವ ಒಂದು ಪರಂಪರೆಯನ್ನು ಭಾರತದ ಪ್ರಜಾತಂತ್ರ ರೂಢಿಸಿಕೊಂಡಿದೆ. ಏಕಕಾಲದ ಚುನಾವಣೆಗಳು ಜಾರಿಯಾದರೆ ಈ ರೀತಿ ಪಕ್ಷಾಂತರಗಳ ಪರಿಣಾಮ ಪದಚ್ಯುತಗೊಳ್ಳುವ ಸರ್ಕಾರಗಳು ಏನಾಗುತ್ತವೆ ? ಹೇಗಾದರೂ ಸಾಹಸ ಮಾಡಿ ಪೂರ್ಣಾವಧಿಯನ್ನು ಪೂರೈಸುವ ಸಲುವಾಗಿ, ರಾಜಕೀಯ ಪಕ್ಷಗಳು ಎಲ್ಲ ರೀತಿಯ ವಾಮಮಾರ್ಗಗಳನ್ನೂ ಅನುಸರಿಸಲಾರಂಭಿಸುತ್ತವೆ. ಬೇಲಿ ಜಿಗಿತದ ಪರಿಣಾಮವಾಗಿ ಯಾವ ಪಕ್ಷವೂ ಸರ್ಕಾರ ರಚಿಸುವ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ, ಉಳಿದ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ಮುನ್ನಡೆಸುವ ಹೊಣೆ ಯಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಷ್ಟ್ರಪತಿ ಆಳ್ವಿಕೆಯ ಮೂಲಕ ರಾಜ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಸಂಭಾವ್ಯ ಜಟಿಲ ಪ್ರಶ್ನೆಗಳಿಗೆ ಕಾನೂನು-ಸಂವಿಧಾನ ತಜ್ಞರು ಇನ್ನೂ ಉತ್ತರ ಶೋಧಿಸಬೇಕಿದೆ.
ಚುನಾವಣೆಗಳ ಮತ್ತೊಂದು ಆಯಾಮ
ಮೂಲತಃ ಪದೇಪದೇ ಚುನಾವಣೆಗಳು ನಡೆಯುವುದರಿಂದ ಜನಸಾಮಾನ್ಯರ ದೃಷ್ಟಿಯಿಂದ ಹಲವು ಪ್ರಯೋಜನಗಳಿವೆ. ಬಹಳ ಮುಖ್ಯವಾಗಿ ಸ್ತರೀಯ ನೆಲೆಯಲ್ಲಿ ಯೋಚಿಸಿದಾಗ, ಜಿಲ್ಲಾ/ತಾಲ್ಲೂಕು ಪಂಚಾಯತಿ. ಪುರಸಭೆ/ನಗರಸಭೆ ಚುನಾವಣೆಗಳನ್ನು ಎದುರಿಸುವಾಗ ಚುನಾಯಿತ ಸರ್ಕಾರವನ್ನೇ ಹೊಂದಿದ್ದರೂ ರಾಜಕೀಯ ಪಕ್ಷಗಳು ಮತದಾರರ ಮುಂದೆ ತಮ್ಮ ಕ್ಷಮತೆ ಮತ್ತು ಪ್ರಾಮಾಣಿಕತೆಯನ್ನು ಮತ್ತೆಮತ್ತೆ ನಿರೂಪಿಸಬೇಕಾಗುತ್ತದೆ. ಇದೇ ಸೂತ್ರವನ್ನು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೂ ವಿಸ್ತರಿಸಬಹುದು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಮಾತ್ರಕ್ಕೆ ಯಾವ ರಾಜಕೀಯ ಪಕ್ಷವೂ ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಅಥವಾ ಬಹುಮತ ನಿಶ್ಚಿತ ಎಂದು ಖಾತರಿಪಡಿಸಲಾಗುವುದಿಲ್ಲ. ಜನಸಾಮಾನ್ಯರಿಗೆ ಬೇರೆಯದೇ ಆಯ್ಕೆಗಳಿರುತ್ತವೆ. 2024ರ ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಇದನ್ನು ನಿರೂಪಿಸಿದ್ದಾರೆ.
ಹಾಗಾಗಿ ವಿವಿಧ ಸ್ತರಗಳ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗಿಂದಾಗ್ಗೆ ಚುನಾವಣೆಗಳು ನಡೆಯುವುದರಿಂದ ಸಂಭಾವ್ಯ ಜನಪ್ರತಿನಿಧಿಗಳಲ್ಲಿ ನೈತಿಕ ಭಯ ಇರುತ್ತದೆ. ತಾವು ಮತ್ತೊಮ್ಮೆ ಮತದಾರರನ್ನು ಎದುರಿಸಬೇಕಾದ ಸನ್ನಿವೇಶವೇ ಅವರೊಳಗಿನ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಮೊನಚುಗೊಳಿಸುತ್ತದೆ. ರಾಜ್ಯ ಸರ್ಕಾರಗಳು ಅನುಸರಿಸುವ ಹಲವು ಜನವಿರೋಧಿ ಆಡಳಿತ ನೀತಿಗಳು ಲೋಕಸಭಾ ಚುನಾವಣೆಗಳಲ್ಲಿ ಮತದಾರರಿಂದ ತಿರಸ್ಕೃತವಾಗುವ ಸನ್ನಿವೇಶವನ್ನು ಸಾಕಷ್ಟು ನೋಡಿದ್ದೇವೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ತಾತ್ವಿಕ ನಿಲುವುಗಳನ್ನು ಸರಿಪಡಿಸಿಕೊಂಡು, ಜನಮತ ಅಪೇಕ್ಷಿಸುತ್ತವೆ. ಏಕಕಾಲದ ಚುನಾವಣೆಗಳು ಜಾರಿಯಾದರೆ, ಒಮ್ಮೆ ಆಯ್ಕೆಯಾದ ಪ್ರತಿನಿಧಿಗೆ ಮುಂದಿನ ಐದು ವರ್ಷಗಳ ಅವಧಿಯು ʼ ಆನೆ ನಡೆದದ್ದೇ ಹಾದಿ ʼ ಎನ್ನುವಂತಾಗುತ್ತದೆ. ಇದು ತಳಮಟ್ಟದ ಸಾಮಾಜಿಕ ವಲಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಶಿಥಿಲಗೊಳಿಸಲು ಕಾರಣವಾಗುತ್ತದೆ.
ಒಟ್ಟಾರೆಯಾಗಿ ನೋಡಿದರೆ, “ ಒಂದು ದೇಶ ಒಂದು ಚುನಾವಣೆ ” ಕಲ್ಪನೆಯು ಬಾಹ್ಯನೋಟಕ್ಕೆ ಅಪ್ಯಾಯಮಾನವಾಗಿ ಕಂಡರೂ, ಭಾರತದ ಸಂದರ್ಭದಲ್ಲಿ ಇದು ಹಲವು ಅನಪೇಕ್ಷಿತ ಬೆಳವಣಿಗೆಗಳಿಗೆ ದಾರಿಮಾಡಿಕೊಡುತ್ತದೆ. ಕೇಂದ್ರದಲ್ಲಿ ಅಧಿಕಾರ ಗಳಿಸುವ ರಾಜಕೀಯ ಪಕ್ಷವೇ ಇಡೀ ಚುನಾವಣಾ ಪ್ರಕ್ರಿಯೆಯನ್ನು ಪ್ರಭಾವಿಸುವ ಅಪಾಯವನ್ನೂ ಸೃಷ್ಟಿಸುತ್ತದೆ. ಈ ಪ್ರಭಾವಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಕಾರ್ಪೋರೇಟ್ ಮಾರುಕಟ್ಟೆ ಮತ್ತು ಔದ್ಯಮಿಕ ವಲಯದ ಪಾತ್ರವನ್ನು. ಕೇಂದ್ರ ಸರ್ಕಾರಗಳು ಅನುಸರಿಸುವ ಆಪ್ತ ಬಂಡವಾಳಶಾಹಿ (Crony Capitalism) ಆರ್ಥಿಕ ನೀತಿಗಳು ಅಧಿಕಾರಾರೂಢ ಪಕ್ಷದ ಪ್ರಭಾವವನ್ನು ವಿಸ್ತರಿಸಲು ನೆರವಾಗುತ್ತವೆ. ಆಗಾಗ ನಡೆಯುವ ಚುನಾವಣೆಗಳಲ್ಲೂ ಈ ಪ್ರಭಾವವನ್ನು ಕಾಣಬಹುದಾದರೂ, ಇದರ ಪರಿಣಾಮ ಭಿನ್ನವಾಗಿರಲು ಸಾಧ್ಯ. ಏಕಕಾಲದ ಚುನಾವಣೆಗಳು ಈ ಕಾರ್ಪೋರೇಟ್ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತವೆ.
ಸಂಸದೀಯ ವ್ಯವಸ್ಥೆಯ ಮೇಲರಿಮೆ
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಕೇವಲ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಯಾಂತ್ರಿಕ ಪ್ರಕ್ರಿಯೆಯಲ್ಲ. ಅದು ಚುನಾಯಿತ ಸರ್ಕಾರಗಳ ಹಾಗೂ ಪರಾಜಿತ ವಿರೋಧ ಪಕ್ಷಗಳ ಪ್ರತಿನಿಧಿಗಳನ್ನು ನಿಷ್ಕರ್ಷೆಗೊಡ್ಡಲು ತಳಮಟ್ಟದ ಸಮಾಜಕ್ಕೆ ಇರುವಂತಹ ಒಂದು ಉತ್ತಮ ಅವಕಾಶ. ವರ್ತಮಾನದ ಭಾರತದಕ್ಕು ತಮಗಿತ್ತ ಅವಕಾಶವನ್ನು ಜನಪರ ಕಾಳಜಿಯಿಂದ ಪ್ರಾಮಾಣಿಕವಾಗಿ ನಿಭಾಯಿಸುವ ರಾಜಕೀಯ ನಾಯಕರು ಬೆರಳೆಣಿಕೆಯಷ್ಟಿರುವುದು ವಾಸ್ತವ. ಹಾಗಾಗಿ ಈ ಸಂಭಾವ್ಯ ಪ್ರತಿನಿಧಿಗಳಿಗೆ ಮತದಾರರ ಬಳಿಗೆ ಆಗಾಗ್ಗೆ ಹೋಗಲೇಬೇಕಾದ ಅನಿವಾರ್ಯತೆಯೇ ಒಂದು ನೈತಿಕ ಭೀತಿಯನ್ನು ಸೃಷ್ಟಿಸಿರುತ್ತದೆ. ಏಕ ಕಾಲದ ಚುನಾವಣೆಗಳು ಈ ಭೀತಿಯನ್ನು ಇಲ್ಲವಾಗಿಸುತ್ತದೆ. ಸಾಮಾನ್ಯ ಜನತೆಯೂ ತಮ್ಮ ಈ ಸಾಂವಿಧಾನಿಕ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ತಾವು ಚುನಾಯಿಸಿದ ಪ್ರತಿನಿಧಿಯನ್ನು ಮತದಾರರು ಅನ್ಯ ಮಾರ್ಗವಿಲ್ಲದೆ ಐದು ವರ್ಷಗಳ ಕಾಲ ಸಹಿಸಿಕೊಳ್ಳಲೇಬೇಕಾಗುತ್ತದೆ.
ಇದು ಪ್ರಜಾಪ್ರಭುತ್ವದ ಮೂಲ ತಳಹದಿಯನ್ನೇ ಸಡಿಲಗೊಳಿಸುವ ಒಂದು ವಿದ್ಯಮಾನ. ಒಂದು ದೇಶ ಒಂದು ಚುನಾವಣೆ ಎಂಬ ಕಲ್ಪನೆಯ ಔದಾತ್ಯ ಏನೇ ಇದ್ದರೂ, ಸಾಮಾನ್ಯ ಜನತೆಯ ದೃಷ್ಟಿಯಿಂದ ಮತ್ತು ಇವರನ್ನೇ ಪ್ರತಿನಿಧಿಸುವ ಸಂಸದೀಯ ಪ್ರಜಾಪ್ರಭುತ್ವದ ದೃಷ್ಟಿಯಿಂದ ಇದು ಅಪೇಕ್ಷಣೀಯವಾಗಿ ಕಾಣುವುದಿಲ್ಲ. ಬಹುಸಂಖ್ಯಾವಾದದ ರಾಜಕಾರಣ ( Majoritarian Politics) ಮತ್ತು ಏಕಪಕ್ಷದ ಆಧಿಪತ್ಯದ ಪ್ರಯತ್ನ ಮತ್ತು ಆಕಾಂಕ್ಷೆಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಏಕಕಾಲದ ಚುನಾವಣೆ ಎಂಬ ಚಿಂತನೆ ಅಪಾಯಕಾರಿಯಾಗಿಯೂ ಕಾಣುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಪಕ್ವವಾಗಿಲ್ಲ, ಬೆಳೆಯುತ್ತಿರುವ ಹಂತದಲ್ಲಿದೆ. ಇನ್ನೂ ಸಾಕಷ್ಟು ಕಲಿಯುವುದಿದೆ. ಈ ಸನ್ನಿವೇಶದಲ್ಲಿ ಪ್ರಯೋಗಗಳಿಗೆ ಮುಂದಾಗುವುದಕ್ಕಿಂತಲೂ ಅತ್ಮಾವಲೋಕನಕ್ಕೆ ತೆರೆದುಕೊಂಡು, ಪ್ರಜಾಪ್ರಭುತ್ವವನ್ನು ಮತ್ತಷ್ಟು ಆಳವಾಗಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುವುದು ಒಳಿತು.
(ಈ ಲೇಖನದ ಕೆಲವು ಅಭಿಪ್ರಾಯಗಳನ್ನು ದ ಹಿಂದೂ ಪತ್ರಿಕೆಯ ದಿನಾಂಕ 26 ಸೆಪ್ಟಂಬರ್ ಸಂಚಿಕೆಯಲ್ಲಿ ಪ್ರಕಟವಾದ The Misplaced move of One nation One election – P.D.T. Achary ಅವರ ಲೇಖನದಿಂದ ಪಡೆಯಲಾಗಿದೆ)
-೦-೦-೦-೦-