ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12 ರಂದು ಲೋಕಾರ್ಪಣೆ ಮಾಡಿ 2 ದಿನಗಳು ಕಳೆದಿಲ್ಲ. ಆಗಲೇ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿರುವ ಕೆಲಸಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯ ಟೋಲ್ ಇಂದಿನಿಂದ ಓಪನ್ ಆಗಿದೆ. ಬೆಂಗಳೂರು – ನಿಡಘಟ್ಟ ನಡುವೆ ಸಿಗುವ ಶೇಷಗಿರಿಹಳ್ಳಿ ಬಳಿಯ ಟೋಲ್ ಕಾರ್ಯಾರಂಭ ಮಾಡಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಿಧಿಸಲಾಗ್ತಿದೆ. ಈ ಹಿಂದೆಯೇ ಟೋಲ್ ಪಡೆಯುವ ಪ್ರಕ್ರಿಯೆ ಆರಂಭ ಆಗಿತ್ತಾದರೂ ಪ್ರಧಾನಿ ಮೋದಿ ಬಂದು ಹೋಗುವ ಮುನ್ನವೇ ಹಣ ವಸೂಲಿ ಕೆಲಸ ಶುರುವಾದರೆ ಜನರು ಆಕ್ರೋಶ ವ್ಯಕ್ತಪಟಿಸುವ ಭೀತಿಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಲೋಕಾರ್ಪಣೆ ಆಗಿರುವ ಬೆನ್ನಲ್ಲೇ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಇಂದಿನಿಂದ ದುಬಾರಿಯಾಯ್ತು ದಶಪಥ ಹೆದ್ದಾರಿ ಸಂಚಾರ..!
ಕೇಂದ್ರ ಹಾಗು ರಾಜ್ಯದ ಡಬಲ್ ಎಂಜಿನ್ ಸರ್ಕಾರದ ಸಾಧನೆ, ಕಾಂಗ್ರೆಸ್ ಪಕ್ಷದಲ್ಲಿ ಶುರುವಾಗಿದ್ದ ಕೆಲಸ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆರಂಭ ಆಗಿದ್ದ ಕಾಮಗಾರಿ ಹೀಗೆ ನಾನಾ ರೀತಿಯಲ್ಲಿ ನಮ್ಮದೇ ಸಾಧನೆ ಎನ್ನುವಂತಹ ಮಾತುಗಳನ್ನು ರಾಜಕಾರಣಿಗಳು ಹೇಳಿದ್ದರು. ಆದರೆ ಇಂದಿನಿಂದ ಹೆದ್ದಾರಿ ಪ್ರಾಧಿಕಾರ ದುಬಾರಿ ಬರೆ ಎಳೆಯುವ ಕೆಲಸ ಶುರು ಮಾಡಿದೆ. ಬೆಂಗಳೂರಿನಿಂದ ಮೈಸೂರು ತನಕ ಇನ್ನೂ ರಸ್ತೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಆದರೂ ಚುನಾವಣೆ ಘೋಷಣೆ ಆಗುವ ಭೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಉದ್ಘಾಟನೆ ಮಾಡಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿಸಿದೆ. ಕೆಲಸ ಸಂಪೂರ್ಣ ಆಗುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಸಂಘಟನೆಗಳು ಆಗ್ರಹ ಮಾಡಿವೆ. ಪ್ರತಿಭಟನೆ ಕೂಡ ನಡೆಸಿವೆ.

ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಫೀ ಎಷ್ಟು..?
ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಸಂಗ್ರಹದ ಪ್ರಕಟಣೆ ಹೊರಡಿಸಲಾಗಿದ್ದು, ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಸರ್ವೀಸ್ ರಸ್ತೆ ಹೊರತು ಪಡಿಸಿ, ಉಳಿದ ಆರುಪಥದ ರಸ್ತೆ ಶುಲ್ಕ ಅನ್ವಯವಾಗಲಿದೆ. ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135 ರೂಪಾಯಿ, ಅದೇ ದಿನ ಮರು ಸಂಚಾರ ಮಾಡುವಂತಿದ್ದ ಟು ವೇ 205 ರೂಪಾಯಿ. ಸ್ಥಳೀಯ ವಾಹನಗಳಿಗೆ 70 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಸ್ಥಳೀಯರ ಪಾಸ್ಗೆ 4,525 ರೂಪಾಯಿ ದರ ನಿಗದಿ ಮಾಡಲಾಗಿದೆ. ಲಘು ವಾಣಿಜ್ಯ ವಾಹನಗಳು ಅತವಾ ಲಘು ಸರಕು ವಾಹನಗಳು ಅಥವಾ ಮಿನಿ ಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂಪಾಯಿ, ಅದೇ ದಿನ ವಾಪಸ್ ಸಂಚಾರ ಮಾಡುವುದಿದ್ದರೆ ಟು ವೇ ಸಂಚಾರಕ್ಕೆ 320 ರೂಪಾಯಿ. ಸ್ಥಳೀಯ ವಾಹನಗಳಿಗೆ 110 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 7,315 ರೂಪಾಯಿ ದರ ನಿಗದಿ ಮಾಡಲಾಗಿದೆ. ಬಸ್ ಅಥವಾ ಟ್ರಕ್ (ಎರಡು ಆಕ್ಸೆಲ್) ಏಕಮುಖ ಸಂಚಾರಕ್ಕೆ 460 ರೂಪಾಯಿ, ಅದೇ ದಿನ ಮರು ಸಂಚಾರ ಮಾಡುವುದಿದ್ದರೆ ಒಟ್ಟು ಟು ವೇ 690 ರೂಪಾಯಿ. ಸ್ಥಳೀಯ ವಾಹನಗಳಿಗೆ 230 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 15,325 ರೂಪಾಯಿ ದರ ನಿಗದಿ ಮಾಡಲಾಗಿದೆ.
ವಂದೇ ಮಾತರಂ ರೈಲಿಗೂ ಮಿಗಿಲು ಟೋಲ್ ದರ..!
ವಂದೇ ಮಾತರಂ ರೈಲಿನಲ್ಲಿ ಹೋಗುವುದಕ್ಕೆ Bengaluru to Mysuru costs Rs 515, ಹಾಗು Mysuru to Bengaluru costs Rs 720 ಆಗಿದೆ. ಆದರೆ ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್) ಏಕಮುಖ ಸಂಚಾರಕ್ಕೆ 500 ರೂಪಾಯಿ, ಅದೇ ದಿನ ಮರು ಸಂಚಾರ ಮಾಡುವುದಿದ್ದರೆ ಟು ವೇ ದರ 750 ರೂಪಾಯಿ ನಿಗದಿ ಮಾಡಲಾಗಿದೆ. ಸ್ಥಳೀಯ ವಾಹನಗಳಿಗೆ 250 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 16,715 ರೂಪಾಯಿ ದರ ನಿಗದಿ ಮಾಡಲಾಗಿದೆ. ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) ಏಕಮುಖ ಸಂಚಾರಕ್ಕೆ 720 ರೂಪಾಯಿ, ಅದೇ ದಿನ ಮರು ಸಂಚಾರಕ್ಕೆ 1,080 ರೂಪಾಯಿ. ಸ್ಥಳೀಯ ವಾಹನಗಳಿಗೆ 360 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 24,030ರೂ ದರ ನಿಗದಿ ಆಗಿದೆ. ಬೃಹತ್ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್) ಏಕಮುಖ ಸಂಚಾರಕ್ಕೆ 880 ರೂಪಾಯಿ ಹಾಗು ಅದೇ ದಿನ ಮರು ಸಂಚಾರಕ್ಕೆ 1,315 ರೂಪಾಯಿ. ಸ್ಥಳೀಯ ವಾಹನಗಳಿಗೆ 440 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 29,255 ರೂಪಾಯಿ ದರ ನಿಗದಿಯಾಗಿದೆ. ಇದರ ನಡುವೆ ಬೈಕ್, ಆಟೋಗಳಿಗೆ ಪ್ರವೇಶ ಇಲ್ಲ ಎನ್ನಲಾಗಿದ್ದು, ಕೋಟಿ ಕುಭೇರರು ಮಾತ್ರ ಸಂಚಾರ ಮಾಡುವ ರಸ್ತೆ ಎನ್ನುವ ಖ್ಯಾತಿ ಪಡೆದುಕೊಂಡಿದೆ ಎನ್ನಬಹುದು.