ದೇಶವಿನ್ನೂ ಕರೋನಾದಿಂದ ಸಂಪೂರ್ಣ ನಿಟ್ಟುಸಿರು ಬಿಡುವಷ್ಟು ಚೇತರಿಸಿಕೊಂಡಿಲ್ಲ, ಆದರೆ, ಅದಾಗಲೇ ಬ್ಲ್ಯಾಕ್ ಫಂಗಸ್ ಎಂಬ ಇನ್ನೊಂದು ರೋಗ ದೇಶದಲ್ಲಿ ಸದ್ದು ಮಾಡುತ್ತಿದೆ. ಕರೋನಾಗಿಂತಲೂ ಮಾರಣಾಂತಿಕವಾಗಿ ಪರಿಣಮಿಸಿದೆ. ಅದೇ ಬ್ಲ್ಯಾಕ್ ಫಂಗಸ್. ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸೋತಿರುವ ಸರ್ಕಾರಗಳು ಬ್ಲ್ಯಾಕ್ ಫಂಗಸ್‌ಅನ್ನು ಯಾವ ರೀತಿ ನಿಭಾಯಿಸಲಿದೆ ಅನ್ನುವುದೇ ಗೊತ್ತಿಲ್ಲ.
ಈಗಾಗಲೇ ಸಾಂಕ್ರಾಮಿಕ ರೋಗವೆಂದು ಅಂಗೀಕರಿಸಿರುವ ಈ ರೋಗಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಕಪ್ಪು ಫಂಗಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಕೇಂದ್ರ ಕೈಗೊಂಡಿರುವ ನೀತಿ ಏನು ಎಂದು ಪ್ರಶ್ನಿಸಿ ಸರ್ಕಾರದ ಎದುರು ಮೂರು ಮಹತ್ವದ ಪ್ರಶ್ನೆಗಳನ್ನಿಟ್ಟಿದ್ದಾರೆ. ಅಲ್ಲದೆ, ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದೂ ತಾಕೀತು ಮಾಡಿದ್ದಾರೆ.
ಕಪ್ಪು ಫಂಗಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಏನು ಮಾಡಿದೆಯೆಂದು ಪ್ರಶ್ನಿಸಿರುವ ರಾಹುಲ್, ಒಂದನೆಯದಾಗಿ ಸೋಂಕಿಗೆ ಬಳಸುವ ಆಂಫೊಟೆರಿಸಿನ್-ಬಿ ಔಷಧದ ಕೊರತೆಗೆ ಸರ್ಕಾರ ಏನು ಮಾಡುತ್ತಿದೆ. ಎರಡನೆಯದ್ದು ಈ ಔಷಧಿಯನ್ನು ರೋಗಿಗಳಿಗೆ ತಲುಪಿಸುವ ವಿಧಾನವೇನು? ಮೂರನೆಯದಾಗಿ, ಚಿಕಿತ್ಸೆ ನೀಡುವ ಬದಲು ಮೋದಿ ಸರ್ಕಾರವು ಜನತೆಯನ್ನು ಔಪಚಾರಿಕತೆಗೆ ಯಾಕೆ ಸಿಲುಕಿಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯ ಪ್ರಶ್ನೆ ಕೇವಲ ರಾಹುಲ್ ಗಾಂಧಿಯದ್ದು ಮಾತ್ರವಲ್ಲ. ದೇಶದ ಹಲವು ತಜ್ಞರು ಇದೇ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರಧಾನಮಂತ್ರಿಯನ್ನಾದರೂ ಕೇಳೋಣವೆಂದರೆ ಅವರೂ ಸುದ್ದಿ ಮಾಧ್ಯಮಗಳ ಸಂಪರ್ಕಕ್ಕೆ ಸಿಗುತ್ತಿಲ್ಲ.