ಜಗತ್ತಿನ ಪ್ರಮುಖ ಅರ್ಥ ಶಾಸ್ತ್ರಜ್ಞರಲ್ಲೊಬ್ಬರೆಂದು ಗುರುತಿಸಲ್ಪಡುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಪಿ ವಿ ನರಸಿಂಹರಾವ್ ಅವರ ನೇತೃತ್ವದ ಸರ್ಕಾರದಲ್ಲಿ ಅರ್ಥಸಚಿವರಾಗಿದ್ದ ವೇಳೆ ಜಾರಿಗೆ ತಂದ ಉದಾರೀಕರಣಕ್ಕೆ ಮೂರು ದಶಕಗಳೇ ತುಂಬಿದೆ.
ಒಂದು ಹಂತದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು ದಿವಾಳಿಯಾಗದಂತೆ ತಡೆದ ಶ್ರೇಯಸ್ಸು ಅಂದು ಜಾರಿಗೆ ತಂದ ಉದಾರೀಕರಣಕ್ಕೆ ಸಲ್ಲುತ್ತದೆ. ಉದಾರೀಕರಣದ ಪರ-ವಿರೋಧ ಚರ್ಚೆ ಏನೇ ಇದ್ದರೂ, ಭಾರತದ ಸ್ವಾತಂತ್ರೋತ್ತರದ ಆರ್ಥಿಕ ಇತಿಹಾಸದಲ್ಲಿ ಉದಾರೀಕರಣ ಬಹು ಮುಖ್ಯ ಪಾತ್ರ ವಹಿಸುವುದಂತೂ ದಿಟ.
1965 ರಿಂದ ಭಾರತದ ಆರ್ಥಿಕ ಸ್ಥಿತಿಗತಿ ದೊಡ್ಡ ಮಟ್ಟದ ಏರಿಕೆ ಕಂಡಿರಲಿಲ್ಲ. 1991ಕ್ಕಾಗುವಾಗ ಭಾರತದ ಆರ್ಥಿಕತೆ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿತ್ತು. ಸರಕಾರಿ ಸ್ವಾಮ್ಯದ ಉದ್ದಿಮೆಗಳು ಕೂಡಾ ನಷ್ಟದ ಗೂಡಾಗಿದ್ದವು. ಖಾಸಗಿ ವಲಯದ ಉದ್ದಿಮೆಗಳಿಗೆ ನೂರೆಂಟು ಅಂಕುಶಗಳಿದ್ದು ಖಾಸಗಿ ವಲಯಗಳೂ ಕೂಡಾ ಆರ್ಥಿಕ ಕುಸಿತದಲ್ಲಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದಲ್ಲಿ ಆಮದು ಹೆಚ್ಚಿತ್ತೇ ವಿನಃ, ರಫ್ತು ಪ್ರಮಾಣ ಗಣನೀಯ ತಗ್ಗಿತ್ತು. 1965ರಿಂದಲೇ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತಾದರೂ, 1991ರ ವೇಳೆಗೆ ಅನೂಹ್ಯ ಮಟ್ಟಕ್ಕೆ ಬಿಗಡಾಯಿಸಿತ್ತು. ಈ ವೇಳೆ ಏಲ್ಲಾ ವಿರೋಧಗಳನ್ನೂ ಎದುರಿಸಿ ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣದ ಮೊರೆ ಹೋಯಿತು ಭಾರತ ಸರ್ಕಾರ. ಅಲ್ಲಿಂದ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿ ಪುಟಿದೆದ್ದಿತ್ತು. ಅದಾಗ್ಯೂ, ಉದಾರೀಕರಣ ಜಾಗತಿಕ ದೈತ್ಯ ಕಂಪೆನಿಗಳಿಗೆ ದೊಡ್ಡ ಮಾರುಕಟ್ಟೆಯನ್ನು ಒದಗಿಸಿದೆ ಎಂಬ ಅಪವಾದ ಇದೆ.
ವಿರೋಧಗಳೇನೇ ಇದ್ದರೂ, ಉದಾರೀಕರಣ ಜಾರಿ ಮನಮೋಹನ್ ಸಿಂಗ್ ಅವರ ಬಹುಮುಖ್ಯ ಸಾಧನೆಗಳಲ್ಲೊಂದು ಎಂದು ಗುರುತಿಸಲಾಗುತ್ತದೆ. ಉದಾರೀಕರಣದ ಬಳಿಕ 30 ಕೋಟಿ ಭಾರತೀಯರು ಬಡತನದಿಂದ ಮುಕ್ತವಾಗಿದ್ದಾರೆ ಎನ್ನುತ್ತದೆ ವರದಿಗಳು. ತನ್ನದೇ ಪಕ್ಷದ ವಿರೋಧಗಳನ್ನು ಎದುರಿಸಿ ಉದಾರೀಕರಣ, ಜಾಗತೀಕರಣ ಜಾರಿಗೆ ಗೊಳಿಸುವಂತೆ ಮಾಡಲು ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಮಾಡಿದ ಪ್ರಯತ್ನವನ್ನೂ ಮರೆಯುವಂತಿಲ್ಲ. ತಮ್ಮ ಮಹತ್ವಾಕಾಂಕ್ಷಿ ಯೋಜನೆ ಉದಾರೀಕರಣ ಜಾರಿಗೆ 30 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಮಾತನಾಡಿದ್ದಾರೆ.
ಉದಾರೀಕರಣದ ಸಂಧರ್ಭವನ್ನು ಮೆಲುಕು ಹಾಕಿಕೊಡ ಸಿಂಗ್, ಭಾರತದ ಪ್ರಸಕ್ತ ಆರ್ಥಿಕ ಪರಿಸ್ಥಿತಿ 1991 ರ ಪರಿಸ್ಥಿತಿಗಿಂತಲೂ ಭೀಕರವಾಗಿದೆ ಎಂದು ಹೇಳಿದ್ದಾರೆ.
ಕೋವಿಡ್, ಲಾಕ್‌ಡೌನ್‌ಗಳು ಕೋಟ್ಯಂತರ ಭಾರತೀಯರ ಜೀವನೋಪಾಯವನ್ನು ಕಸಿದುಕೊಂಡಿರುವುದು ಹಾಗೂ ಲಕ್ಷಾಂತರ ಮಂದಿಯ ಜೀವವನ್ನೇ ಕಸಿದುಕೊಂಡಿರುವುದು ನನಗೆ ದುಖ ತರಿಸಿದೆ. ಭಾರತದ ಸದ್ಯದ ಪರಿಸ್ಥಿತಿ 1991 ಕ್ಕಿಂತಲೂ ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ʼನಾನು ಮಲಗುವ ಮುನ್ನ ಸಾವಿರಾರು ಮೈಲುಗಳು ಕ್ರಮಿಸಬೇಕಿದೆʼ ಎಂಬ ವಿಕ್ಟರ್ ಹುಗೊ ಅವರ ಕವಿತೆ ಸಾಲೊಂದನ್ನು ಉದ್ದರಿಸಿದ ಸಿಂಗ್, ಪ್ರತಿಯೊಬ್ಬ ಭಾರತೀಯರ ಆರೋಗ್ಯಕರ ಹಾಗೂ ಘನತೆಯುಕ್ತ ಜೀವನ ನಮ್ಮ ರಾಷ್ಟ್ರೀಯ ಆದ್ಯತೆ ಆಗಬೇಕೆಂದು ಕರೆ ನೀಡಿದ್ದಾರೆ.
ಇದು ಸಂತೋಷ ಪಡುವ ಅಥವಾ ಸಂಭ್ರಮಿಸುವ ಕಾಲವಲ್ಲ. 1991 ರ ಬಿಕ್ಕಟ್ಟಿಗಿಂತಲೂ ಭೀಕರವಾದ ಸನ್ನಿವೇಶವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ʼ30 ವರ್ಷಗಳ ಹಿಂದೆ ಈ ದಿನದಂದು, ಕಾಂಗ್ರೆಸ್ ಪಕ್ಷವು ಭಾರತದ ಆರ್ಥಿಕತೆಯ ಮಹತ್ವದ ಸುಧಾರಣೆಗಳನ್ನು ತಂದಿತು, ರಾಷ್ಟ್ರದ ಆರ್ಥಿಕ ನೀತಿಗೆ ಹೊಸ ಹಾದಿಯನ್ನು ಸುಗಮಗೊಳಿಸಿತು. ಪರಿಣಾಮ, ಕಳೆದ ಮೂರು ದಶಕಗಳಲ್ಲಿ, ಸತತ ಸರ್ಕಾರಗಳು ರಾಷ್ಟ್ರವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಮತ್ತು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ ನಿಲ್ಲಿಸಿದವು.ʼ
ಅದಕ್ಕಿಂತ ಮುಖ್ಯವಾಗಿ, ಈ ಅವಧಿಯಲ್ಲಿ ಸುಮಾರು 30 ಕೋಟಿ ಭಾರತೀಯರನ್ನು ಬಡತನದಿಂದ ಮುಕ್ತಿಗೊಳಿಸಲಾಗಿದೆ ಮತ್ತು ಯುವಕರಿಗೆ ಕೋಟ್ಯಾಂತರ ಹೊಸ ಉದ್ಯೋಗಗಳನ್ನು ಒದಗಿಸಲಾಗಿದೆ ಎಂದು ಅವರು ಗಮನ ಸೆಳೆದರು.
ಸುಧಾರಣಾ ಪ್ರಕ್ರಿಯೆಯು ಮುಕ್ತ ಉದ್ಯಮದ ಉತ್ಸಾಹವನ್ನು ಹೆಚ್ಚಿಸಿದೆ, ಇದು ವಿಶ್ವ ದರ್ಜೆಯ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಕೇಂದ್ರಗಳನ್ನು ನಿರ್ಮಿಸಲು ಸಹಾಯ ಮಾಡಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡಿದೆ ಎಂದು ಸಿಂಗ್ ಹೇಳಿದ್ದಾರೆ.
“1991 ರಲ್ಲಿ ಆರ್ಥಿಕ ಉದಾರೀಕರಣ ಪ್ರಕ್ರಿಯೆಯು ನಮ್ಮ ರಾಷ್ಟ್ರವನ್ನು ಎದುರಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಪ್ರಚೋದಿಸಲ್ಪಟ್ಟಿತು, ಆದರೆ ಅದು ಬಿಕ್ಕಟ್ಟು ನಿರ್ವಹಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಕಳೆದ ಮೂರು ದಶಕಗಳಲ್ಲಿ ನಮ್ಮ ರಾಷ್ಟ್ರವು ಮಾಡಿರುವ ಪ್ರಚಂಡ ಆರ್ಥಿಕ ಪ್ರಗತಿಯ ಬಗ್ಗೆ ಹೆಮ್ಮೆಯಿಂದ ಹಿಂತಿರುಗಿ ನೋಡುವುದು ನಮಗೆ ಅಪಾರ ಸಂತೋಷವನ್ನು ನೀಡುತ್ತದೆ. ಆದರೆ COVID-19 ಸಾಂಕ್ರಾಮಿಕದಿಂದ ಉಂಟಾದ ವಿನಾಶ ಮತ್ತು ಲಕ್ಷಾಂತರ ಸಹ ಭಾರತೀಯರ ನಷ್ಟದ ಬಗ್ಗೆ ನಾನು ತುಂಬಾ ದುಃಖಿತನಾಗಿದ್ದೇನೆ, ಹಾಗಾಗಿ ಇದು ಸಂಭ್ರಮಿಸುವ ಸಮಯವಲ್ಲ ಎಂದು ಅವರು ಹೇಳಿದ್ದಾರೆ.