ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತೈಲ ಬಾಂಡ್ ಗಳಿಗೆ ಬಡ್ಡಿ ಮತ್ತು ಅಸಲು ತೀರಿಸುವ ಗೋಳು ಇಲ್ಲದೇ ಹೋಗಿದ್ದರೆ, ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಅನಿವಾರ್ಯತೆಯೇ ಇರುತ್ತಿರಲಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಜನರಿಗೆ ಅಗ್ಗದ ದರದಲ್ಲಿಯೇ ಸಿಗುತ್ತಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆ ಮೂಲಕ ಅವರು, ಮೊದಲನೆಯದಾಗಿ ಇಂದಿನ ದುಬಾರಿ ತೈಲ ಬೆಲೆಗೆ ಯುಪಿಎ ಸರ್ಕಾರದ ತೈಲ ಬಾಂಡ್ ಗಳೇ ಕಾರಣ ಎಂದಿದ್ದಾರೆ. ಎರಡನೆಯದಾಗಿ ದುಬಾರಿ ಬೆಲೆಯ ಹೊರೆ ಇಳಿಸುವ ಉದ್ದೇಶ ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದ್ದರೂ, ಆ ತೈಲ ಬಾಂಡ್ ಗಳ ಬಡ್ಡಿ ಮತ್ತು ಅಸಲು ತೀರಿಸಲು ಹಣಕಾಸು ಕ್ರೋಡೀಕರಣದ ಅನಿವಾರ್ಯತೆ ಇರುವುದರಿಂದ ಪೆಟ್ರೋಲ್- ಡೀಸೆಲ್ ತೆರಿಗೆ ಕಡಿತ ಮಾಡಲಾಗದಂತೆ ಕೈಕಟ್ಟಿ ಹಾಕಲಾಗಿದೆ ಎಂದೂ ಹೇಳಿದ್ದಾರೆ.
ಕರೋನಾ ಸಂಕಷ್ಟದ ನಡುವೆಯೂ ಜನರ ಸಾಮಾನ್ಯರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ನಿರಂತರವಾಗಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿ, ಲೀಟರಿಗೆ ನೂರು ರೂ. ಗಡಿ ದಾಟುವಂತೆ ಮಾಡಿದ ತಮ್ಮ ಸರ್ಕಾರದ ಕ್ರಮವನ್ನು ಸಚಿವರು ಈ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಸಹಜವಾಗೇ ಈ ಸಮರ್ಥನೆಯ ಬಗ್ಗೆ ಸಾರ್ವಜನಿಕ ವಲಯದಿಂದ ಮತ್ತು ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಅಂತೂ, ಅಂಕಿಅಂಶಗಳ ಸಹಿತ ತೈಲ ಬಾಂಡ್ ಗಳ ಬಡ್ಡಿ ಮತ್ತು ಅಸಲಿ ಪಾವತಿಯ ವಿವರ ನೀಡಿ, ವಾಸ್ತವವಾಗಿ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮೂಲಕ ಸಂಗ್ರಹಿಸುತ್ತಿರುವ ಮೊತ್ತಕ್ಕೂ, ಅದಕ್ಕೆ ಪ್ರತಿಯಾಗಿ ಪಾವತಿ ಮಾಡುತ್ತಿರುವ ತೈಲ ಬಾಂಡ್ ಬಡ್ಡಿಗೂ ಇರುವ ಭಾರೀ ವ್ಯತ್ಯಾಸದ ಕಡೆ ಬೊಟ್ಟು ಮಾಡಿ, ಸಚಿವರು ಹೇಳುತ್ತಿರುವುದು ಎಷ್ಟು ಅವಾಸ್ತವಿಕ ಎಂಬುದನ್ನು ಜನರ ಮುಂದಿಟ್ಟಿದೆ.
ಅಲ್ಲದೆ, ಸ್ವತಃ ನಿರ್ಮಲಾ ಸೀತಾರಾಮನ್ ಅವರದೇ ಹಣಕಾಸು ಸಚಿವಾಲಯ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರವೇ ಸಚಿವರ ತೈಲ ಬಾಂಡ್ ಬಡ್ಡಿ ಕುರಿತ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂಬುದು ಜಗಜ್ಜಾಹೀರಾಗಿದೆ.
ಸಚಿವೆ ತೈಲ ಬೆಲೆ ಸಮರ್ಥಿಸಿಕೊಳ್ಳುತ್ತಾ, ತಮ್ಮ ಸರ್ಕಾರ ತೈಲ ಬಾಂಡ್ ಗಳಿಗೆ 70,195 ಕೋಟಿ ರೂ. ಬಡ್ಡಿ ಕಟ್ಟಿದೆ. 2026ರ ಹೊತ್ತಿಗೆ ಇನ್ನೂ 37,340 ಕೋಟಿ ರೂ. ಬಡ್ಡಿ ಕಟ್ಟಬೇಕಿದೆ. ಅಷ್ಟೊಂದು ದೊಡ್ಡ ಪ್ರಮಾಣದ ಬಡ್ಡಿ ಕಟ್ಟಲು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳ ಅನಿವಾರ್ಯ. ಇಂತಹ ಹೊರೆ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಜನರಿಗೆ ದೊಡ್ಡ ಲಾಭ ಸಿಕ್ಕಿರುತ್ತಿತ್ತು ಎಂದೂ ಹೇಳಿದ್ದಾರೆ.
ವಾಸ್ತವವಾಗಿ 2012ರಲ್ಲಿ ಅಂದಿನ ಯುಪಿಎ ಸರ್ಕಾರ, ತೈಲ ಬೆಲೆಯನ್ನು ಸರ್ಕಾರಿ ನಿಯಂತ್ರಣಮುಕ್ತಗೊಳಿಸುವ ತನ್ನ ನೀತಿಯ ಭಾಗವಾಗಿ ಸಬ್ಸಿಡಿ ಹೊರೆಯಿಂದ ಪಾರಾಗಲು, ತೈಲ ಬಾಂಡ್ ಜಾರಿಗೊಳಿಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಛಾ ತೈಲ ಬೆಲೆಯ ಏರಿಳಿತಕ್ಕೆ ಅನುಗುಣವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಳಿಕೆ ಮಾಡುವ ಸ್ವಾತಂತ್ರ್ಯವನ್ನು ತೈಲ ಕಂಪನಿಗಳಿಗೆ ಕೊಡುವ ಜೊತೆಗೆ ಅವರಿಗೆ ಈವರೆಗೆ ಆಗಿರುವ ನಷ್ಟವನ್ನು ಸರಿದೂಗಿಸಲು ತೈಲ ಬಾಂಡ್ ಮೂಲಕ 1.34 ಲಕ್ಷ ಕೋಟಿ ಮೊತ್ತದ ತೈಲ ಬಾಂಡ್ ನೀಡಲಾಗಿತ್ತು. ಈ ಎಲ್ಲದರ ಅಂತಿಮ ಉದ್ದೇಶ ಗ್ರಾಹಕರಿಗೆ ಪೆಟ್ರೋಲ್ ಡೀಸೆಲ್ ನ್ಯಾಯಸಮ್ಮತ ದರದಲ್ಲಿ ಸಿಗಬೇಕು ಎಂಬುದಾಗಿದ್ದರೂ, ವಾಸ್ತವವಾಗಿ ಲಾಭವಾಗಿದ್ದು ತೈಲ ಬೆಲೆಯ ಮೇಲೆ ಮೂರ್ನಾಲ್ಕು ಪಟ್ಟು ತೆರಿಗೆ ಹೇಳಿ ದೇಶದ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಸರ್ಕಾರಗಳಿಗೇ ಎಂಬುದು ಕಟುವಾಸ್ತವ.
ಸಚಿವರು ಹೇಳಿದಂತೆ, 1.34 ಲಕ್ಷ ಕೋಟಿ ಮೊತ್ತದ ತೈಲ ಬಾಂಡ್ ಗಳಿಗೆ ಕಳೆದ ಏಳು ವರ್ಷಗಳಲ್ಲಿ ಸರ್ಕಾರ ಪ್ರತಿ ವರ್ಷ ಸರಿಸುಮಾರು 10 ಸಾವಿರ ಕೋಟಿ ರೂ.ಗಳ ಲೆಕ್ಕದಲ್ಲಿ ಈವರೆಗೆ ಸುಮಾರು 70 ಸಾವಿರ ಕೋಟಿ ರೂ. ಪಾವತಿಸಿದೆ. ಆ ಪೈಕಿ 1.34 ಲಕ್ಷ ಕೋಟಿ ಅಸಲಿನಲ್ಲಿ ಈವರೆಗೆ ಪಾವತಿ ಮಾಡಿರುವುದು ಕೇವಲ 3,500 ಕೋಟಿ ರೂ. ಮಾತ್ರ! ಉಳಿದದ್ದು ಬಡ್ಡಿ ಪಾವತಿಗೆ ಹೋಗಿದೆ. ಉಳಿದ ಅಸಲಿನ ಪೈಕಿ, ಪ್ರಸ್ತುತ 2021-22ನೇ ಸಾಲಿಗೆ 10 ಸಾವಿರ ಕೋಟಿ, 23-24ನೇ ಸಾಲಿಗೆ 31,150 ಕೋಟಿ, 24-25ನೇ ಸಾಲಿಗೆ 52,680 ಕೋಟಿ ಮತ್ತು 25-26ನೇ ಸಾಲಿಗೆ 36,913 ಕೋಟಿ ರೂ. ನಂತೆ ಕಂತುಗಳಲ್ಲಿ ಪಾವತಿಸಬೇಕಿದೆ. ಅಸಲು ಕಡಿತವಾದಂತೆ ಬಡ್ಡಿ ದರ ಕೂಡ ಕಡಿತವಾಗಲಿದ್ದು, ವರ್ಷದಿಂದ ವರ್ಷಕ್ಕೆ ಬಡ್ಡಿ ಹೊರೆ ಕೂಡ ಕಡಿತವಾಗಲಿದೆ.
ಇದು ತೈಲ ಬಾಂಡ್ ಹಣಕಾಸು ಹೊರೆಯ ಲೆಕ್ಕಾಚಾರ.
ಆದರೆ, ಕೇವಲ ತೈಲ ಬಾಂಡ್ ಹೊರೆಯನ್ನೇ ಮುಂದಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಸಚಿವರು, ಬಿಜೆಪಿ ಸರ್ಕಾರ ಮತ್ತು ಅದರ ಬೆಂಬಲಿಗರು ಜಾಣತನದಿಂದ ಮರೆಮಾಚುವ ಸಂಗತಿ ಎಂದರೆ; ಅದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಮತ್ತು ಕಳೆದ ಏಳು ವರ್ಷಗಳಲ್ಲಿ ಆ ತೆರಿಗೆ ಆದಾಯದಲ್ಲಿ ಆಗಿರುವ ಭಾರೀ ಹೆಚ್ಚಳ. ಲೋಕಸಭೆಗೆ ಹಣಕಾಸು ಸಚಿವಾಲಯ ನೀಡಿದ ಮಾಹಿತಿ ಪ್ರಕಾರವೇ, 2020-21ನೇ ಸಾಲಿನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.45.6ರಷ್ಟು ಏರಿಕೆಯಾಗಿ 4.18 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಕೇವಲ ಅಬಕಾರಿ ಸುಂಕದ ಪ್ರಮಾಣದಲ್ಲೇ ಶೇ.74ರಷ್ಟು ಏರಿಕೆಯಾಗಿದ್ದು, 2020-21ರಲ್ಲಿ ಬರೋಬ್ಬರಿ 3.45 ಲಕ್ಷ ಕೋಟಿ ರೂ. ಅಬಕಾರಿ ಸುಂಕವೇ ಕೇಂದ್ರ ಸರ್ಕಾರಕ್ಕೆ ಸಂದಾಯವಾಗಿದೆ.
ವರ್ಷವೊಂದಕ್ಕೆ ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯಿಂದ ಕೇಂದ್ರ ಸರ್ಕಾರವೇ ನೇರವಾಗಿ ಸಂಗ್ರಹಿಸುವ(ರಾಜ್ಯಗಳ ಸೆಸ್ ಮತ್ತು ತೆರಿಗೆ ಪಾಲು ಬೇರೆ) ಮೊತ್ತವೇ ಬರೋಬ್ಬರಿ 3.5 ರಿಂದ 4 ಲಕ್ಷ ಕೋಟಿ ರೂ. ಇರುವಾಗ, ವಾರ್ಷಿಕ ಕೇವಲ 10 ಸಾವಿರ ಕೋಟಿ ರೂ. ಪಾವತಿಸಲು ತಮ್ಮ ಸರ್ಕಾರದ ಕೈ ಕಟ್ಟಿ ಹಾಕಿದಂತಾಗಿದೆ. ಆ ಮೊತ್ತ ಪಾವತಿಗಾಗಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಸಲಾಗಿದೆ. ಆ ಹಣಕಾಸು ಹೊರೆಯ ಕಾರಣಕ್ಕಾಗಿ ಕರೋನಾ ಸಂಕಷ್ಟದ ನಡುವೆಯೂ ಜನರ ಜೇಬಿಗೆ ಕತ್ತರಿ ಹಾಕುವುದು ಅನಿವಾರ್ಯವಾಗಿದೆ ಎಂಬ ಸಚಿವೆ ನಿರ್ಮಲಾ ಮಾತುಗಳು ಎಷ್ಟು ಪ್ರಾಮಾಣಿಕ ಎಂಬುದನ್ನು ತೀರ್ಮಾನಿಸಬಹುದು.
ಹಾಗೇ, 1.3 ಲಕ್ಷ ಕೋಟಿ ತೈಲ ಬಾಂಡ್ ನೀಡುವ ಮೂಲಕ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಮ್ಮ ಸರ್ಕಾರದ ಮೇಲೆ ದೊಡ್ಡ ಹೊರೆ ಹೊರಿಸಿಹೋಗಿದೆ. ಅಂತಹ ಹೊರೆ ಇಲ್ಲದೇ ಹೋಗಿದ್ದರೆ, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಾರೂ ಊಹೆ ಮಾಡದಷ್ಟು ಅಗ್ಗವಾಗಿರುತ್ತಿದ್ದವು ಎಂಬರ್ಥದ ಮಾತುಗಳನ್ನು ಆಡಿರುವ ಸಚಿವೆ, ವರ್ಷವೊಂದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯೊಂದರಿಂದಲೇ ತಮ್ಮ ಸರ್ಕಾರ ಸಂಗ್ರಹಿಸುವ 3.5-4 ಲಕ್ಷ ಕೋಟಿಯಷ್ಟು ಬೃಹತ್ ಮೊತ್ತಕ್ಕೆ ಹೋಲಿಸಿದರೆ, ಕೇವಲ 1.4 ಲಕ್ಷ ಕೋಟಿ ಮೊತ್ತದ ತೈಲ ಬಾಂಡ್ ಹೊರೆ ಯಾವ ಪ್ರಮಾಣದ್ದು? ಈ ಏಳು ವರ್ಷಗಳಲ್ಲಿ ತಮ್ಮ ಸರ್ಕಾರ ಕೇವಲ ಪೆಟ್ರೋಲ್- ಡೀಸೆಲ್ ತೆರಿಗೆಯೊಂದರಿಂದಲೇ ಸಂಗ್ರಹಿಸಿರುವ ಸುಮಾರು 16.5 ಲಕ್ಷ ಕೋಟಿ ರೂ. ಬೃಹತ್ ಮೊತ್ತದ ಹಣದಲ್ಲಿ ವಾರ್ಷಿಕ 10 ಸಾವಿರ ಕೋಟಿಯಷ್ಟು ತೈಲ ಬಾಂಡ್ ಬಡ್ಡಿ ಪಾವತಿಸುವಷ್ಟೂ ಹಣ ಉಳಿತಾಯವಾಗಿಲ್ಲ ಏಕೆ? ಎಂಬುದನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಡುತ್ತಾರೆ!
ಹಾಗೇ ತೈಲ ಬಾಂಡ್ ವ್ಯವಸ್ಥೆಯನ್ನು ಜಾರಿಗೆ ತಂದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ದೇಶದ ಜನತೆಗೆ ಮಾಡಬಾರದ ಅನ್ಯಾಯ ಮಾಡಿಬಿಟ್ಟಿದೆ. ಅಂತಹ ವ್ಯವಸ್ಥೆ ಇಲ್ಲದೇ ಹೋಗಿದ್ದರೆ, ದೇಶದ ಜನತೆ ಇಂದು ಕರೋನಾ ಸಂಕಷ್ಟ, ಲಾಕ್ ಡೌನ್ ನಷ್ಟದ ನಡುವೆಯೂ ಬರೋಬ್ಬರಿ ಲೀಟರಿಗೆ ನೂರು ರೂಪಾಯಿಯಷ್ಟು ದುಬಾರಿ ಬೆಲೆ ತೆತ್ತು ಪೆಟ್ರೋಲ್ ಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಅಂದರೆ, ಈ ಬಾಂಡ್ ವ್ಯವಸ್ಥೆಯೇ ಜನರ ಹಣವನ್ನು ಯಾರದೋ ಲಾಭಕ್ಕೆ ಬಳಸುವ ಸುಲಿಗೆಕೋರತನ ಎಂಬುದು ಬಿಜೆಪಿ ಬಿಂಬಿಸುತ್ತಿರುವ ಅಭಿಪ್ರಾಯ. ಆದರೆ, 2017ರಿಂದ ಈಚೆಗೆ ಸ್ವತಃ ಬಿಜೆಪಿ ಸರ್ಕಾರವೇ ಸಾರ್ವಜನಿಕ ವಲಯದ ರೋಗಗ್ರಸ್ತ ಬ್ಯಾಂಕುಗಳ ಪುನರುಜ್ಜೀವನಕ್ಕಾಗಿ ಬರೋಬ್ಬರಿ 3.1 ಲಕ್ಷ ಕೋಟಿ ಬೃಹತ್ ಮೊತ್ತದ ಪುನರ್ಧನ(ರೀಕ್ಯಾಪಿಟೇಷನ್) ಬಾಂಡ್ ಗಳನ್ನು ನೀಡಿದೆ. ಎಕ್ಸಿಮ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಐಐಎಫ್ ಸಿಲ್ ಬ್ಯಾಂಕುಗಳಿಗೆ ಈ ಬೃಹತ್ ಮೊತ್ತದ ಬಾಂಡ್ ಗಳನ್ನು ನೀಡಲಾಗಿದೆ ಎಂಬುದನ್ನು ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ತಯಾರಿಸಿದ ಬಜೆಟ್ ದಾಖಲೆಗಳೇ ಸಾರಿ ಹೇಳುತ್ತಿವೆ!
ಹಾಗಾದರೆ, ಸಚಿವೆ ಹೇಳುವ ಪ್ರಕಾರ, ಹಿಂದಿನ ಯುಪಿಎ ಸರ್ಕಾರದ ತೈಲ ಬಾಂಡ್ ಗಳು ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದರೆ, ಹಾಲಿ ಬಿಜೆಪಿ ಸರ್ಕಾರ ನೀಡಿರುವ ತೈಲ ಬಾಂಡುಗಳಿಗೂ ಮೂರು ಪಟ್ಟು ಹೆಚ್ಚು ಪುನರ್ಧನ ಬಾಂಡುಗಳು ಜನರ ಹೊರೆಯನ್ನು ಇಳಿಸುತ್ತಿವೆಯೇ? ಎಂಬುದು ಕೂಡ ಉತ್ತರವಿಲ್ಲದ ಪ್ರಶ್ನೆ. ಹಾಗೇ, ಈಗಾಗಲೇ ಕೇಂದ್ರ ಸರ್ಕಾರ ಮಾಡಿರುವ 116.21 ಲಕ್ಷ ಕೋಟಿ ಸಾಲ ಮತ್ತು ಅದಕ್ಕೆ ಪಾವತಿಸುತ್ತಿರುವ ಬರೋಬ್ಬರಿ 7 ಲಕ್ಷ ಕೋಟಿ ಬಡ್ಡಿಗೆ ಹೋಲಿಸಿದರೆ, ಸಚಿವೆ ಮಾತಿನಂತೆ ದಿಕ್ಕೆಟ್ಟ ಜನರ ಗಾಯದ ಮೇಲೆ ಬರೆ ಎಳೆದು ಕಟ್ಟಬೇಕಿರುವ ವಾರ್ಷಿಕ ಹತ್ತು ಸಾವಿರ ಕೋಟಿ ತೈಲ ಬಾಂಡ್ ಬಡ್ಡಿಯ ಪ್ರಮಾಣ ಯಾವ ಲೆಕ್ಕದ್ದು? ಎಂಬುದು ಕೂಡ ದೇಶದ ಜನರಿಗೆ ಗೊತ್ತಾಗಬೇಕಿದೆ.
ಆದರೆ, ಯೋಚನಾಶಕ್ತಿ, ತಾರ್ಕಿಕತೆಯ ಜಾಗದಲ್ಲಿ ಅಂಧಾಭಿಮಾನ ಮತ್ತು ಮೂಢ ಭಕ್ತಿಗಳೇ ತುಂಬಿರುವ ಸಮಾಜವನ್ನು ಕಟ್ಟುಕತೆಗಳ ಮೂಲಕ, ಸುಳ್ಳಿನ ಕಂತೆಯ ಮೂಲಕ ದಿಕ್ಕುತಪ್ಪಿಸುವುದು ಬಹಳ ಸರಳವಿರುವಾಗ, ಇಂತಹ ಪ್ರಶ್ನೆಗಳಿಗೆ ಅಧಿಕಾರಸ್ಥರು ಉತ್ತರ ಕೊಡುತ್ತಾರೆ ಎಂದು ನಿರೀಕ್ಷಿಸಲಾಗದು!