ತಾಲಿಬಾನ್ ಉಗ್ರರ ಉಪಟಳದಿಂದಾಗಿ ಅಫ್ಘಾನಿಸ್ತಾನ ಪರಿಸ್ಥಿತಿ ಶೋಚನೀಯವಾಗಿದೆ. ತಾಲಿಬಾನ್ ಉಗ್ರರ ಜತೆ ಹೋರಾಡಲಾಗದೆ ಅಫ್ಘಾನ್ ಪಡೆಗಳು ಬಂದೂಕು ಕೆಳಗಿರಿಸಿವೆ. ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನಿಗಳಿಗೆ ಬೆದರಿ ಅಧಿಕಾರ ತ್ಯಜಿಸಿ ದೇಶದಿಂದಲೇ ಪಲಾಯನ ಮಾಡಿದ್ದಾರೆ. ಆದರೆ, ಇಲ್ಲೊಬ್ಬ ಏಕೈಕ ಮಹಿಳೆ ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಬಂದೂಕು ಹಿಡಿದಿದ್ದರು. ಈಗ ಬಂದೂಕು ಹಿಡಿದ ಮಹಿಳೆಯನ್ನು ತಾಲಿಬಾನ್ ಉಗ್ರರು ಬಂಧಿಸಿದ್ದಾರೆ.
ದೇಶದ ಅಧ್ಯಕ್ಷರೇ ತಾಲಿಬಾನಿಗಳ ಅಬ್ಬರಕ್ಕೆ ಹೆದರಿ ಪಲಾಯನವಾಗಿದ್ದಾರೆ. ಇಡೀ ಅಫ್ಘಾನಿಸ್ತಾನವೇ ಸಂಪೂರ್ಣವಾಗಿ ಶರಣಾಗತಿಯಲ್ಲಿದೆ. ಹೀಗಿರುವಾಗ ಆತಂಕದ ಕಾರ್ಮೋಡದ ನಡುವೆ ಒಬ್ಬ ಮಹಿಳೆ ಮಾತ್ರ ಗನ್ ಹಿಡಿದಿದ್ದು ರೋಚಕ. ಹೀಗೆ ತಾಲಿಬಾನ್ ವಿರುದ್ಧ ಬಂದೂಕು ಹಿಡಿಯಲು ಮನಸ್ಸು ಮಾಡಿದ್ದು ಮತ್ಯಾರು ಅಲ್ಲ, ಅಫ್ಘಾನಿಸ್ತಾನದ ಮೂವರು ರಾಜ್ಯಪಾಲರಲ್ಲಿ ಪೈಕಿ ಒಬ್ಬರಾದ ಸಲಿಮಾ ಮಜಾರಿ.
ನನ್ನ ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧನಿದ್ದೇನೆ. ತಾಲಿಬಾನ್ ಆಕ್ರಮಿತ ಆಫ್ಘಾನಿಸ್ತಾನದಲ್ಲಿ ಜನರಿಗಾಗಿ ಗನ್ ಹಿಡಿಯಲು ಹಿಂದೇಟು ಹಾಕುವುದಿಲ್ಲ ಎಂದು ಗಾರ್ಡಿಯನ್ ಸುದ್ದಿ ಸಂಸ್ಥೆಯೊಂದಿಗೆ ಸಲಿಮಾ ಮಜಾರಿ ತನ್ನ ಆಕ್ರೋಶ ಹೊರಹಾಕಿದ್ದರು. ಹೀಗೆ ತಾಲಿಬಾನ್ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಗನ್ ಹಿಡಿದಿದ್ದೇ ತಡ ಸಲಿಮಾ ಮಜಾರಿಯನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ.
ಸಲಿಮಾ ಮಜಾರಿ ಬಾಲ್ಖ ಪ್ರಾಂತ್ಯದ ರಾಜ್ಯಪಾಲೆ. ಆಕೆ ವಾಸಿಸುವ ಚಹರ್ ಜಿಲ್ಲೆ ಕೂಡ ತಾಲಿಬಾನಿಗಳ ಕೈವಶವಾಗಿದೆ. ತಾಲಿಬಾನಿಗಳು ದೇಶ ಆಕ್ರಮಿಸಿದ ಬಳಿಕ ಕೇವಲ ಮಹಿಳೆಯರು ಮಾತ್ರವಲ್ಲ ಎಲ್ಲರೂ ಶರಣಾಗಿದ್ದಾರೆ. ಬಹುತೇಕ ರಾಜಕಾರಣಿಗಳು ಪ್ರತಿರೋಧವೇ ಇಲ್ಲದೆ ತಾಲಿಬಾನಿಗಳ ಎದುರು ಮಂಡಿಯೂರಿದ್ದು ನೋಡಿ ಸಲಿಮಾ ಈ ಧೈರ್ಯ ಮಾಡಿದ್ದರು.
ತಮ್ಮ ಪ್ರಾಣಕ್ಕಾಗಿ ದೇಶ ಭ್ರಷ್ಟರಾದವರ ನಡುವೆ ಸಲಿಮಾ ಧೈರ್ಯ ಮಾತ್ರ ಮೆಚ್ಚಲೇಬೇಕು. ತಮ್ಮ ಜಿಲ್ಲೆ ಸೇರಿದಂತೆ ಬಲ್ಖ ಪ್ರಾಂತ್ಯವನ್ನು ತಾಲಿಬಾನಿಗಳ ಹಿಡಿತದಿಂದ ಪಾರು ಮಾಡಲು ಸಲಿಮಾ ಈ ಧೈರ್ಯ ಮಾಡಿದ್ದಾರೆ. ಆತಂಕದ ನಡುವೆಯೂ ತನ್ನೆಲ್ಲಾ ಶಕ್ತಿಯನ್ನು ಕೇಂದ್ರೀಕರಿಸಿ ಬಂಡುಕೋರರ ವಿರುದ್ಧ ಪ್ರತಿಯುದ್ಧ ಸಾರುವುದಾಗಿ ಸಲಿಮಾ. ಹೇಳಿದ್ದರು
ಇದುವರೆಗೂ ನಾನು ಯಾವುದೇ ಉಗ್ರರಿಗೂ ಶರಣಾಗಿಲ್ಲ. ನಮ್ಮ ಅಧಿಕಾರವನ್ನು ಮರು ಸ್ಥಾಪಿಸುವುದಾಗಿ ಸಲಿಮಾ ಹೇಳಿದ್ದರು.
ಇನ್ನೊಂದೆಡೆ ಪದಚ್ಯುತ ಉಪಾಧ್ಯಕ್ಷ ಅಮ್ರುಲ್ಲಾ ಸಲೆಹ್ ಕೂಡ ತಾವು ಯಾವುದೇ ಕಾರಣಕ್ಕೂ ತಾಲಿಬಾನಿಗಳಿಗೆ ಶರಣಾಗುವುದಿಲ್ಲ ಎಂದು ತಿಳಿಸಿದ್ದಾರೆ. ‘ನಾನು ಎಂದಿಗೂ, ಯಾವ ಸಂದರ್ಭದಲ್ಲಿಯೂ ತಾಲಿಬಾನ್ ಉಗ್ರರಿಗೆ ತಲೆ ಬಾಗುವುದಿಲ್ಲ. ನನ್ನ ಹೀರೋ, ಕಮಾಂಡರ್, ದಿಗ್ಗಜ ಹಾಗೂ ಮಾರ್ಗದರ್ಶಕ ಅಹ್ಮದ್ ಶಾ ಮಸೌದ್ ಅವರ ಆತ್ಮ ಮತ್ತು ಪರಂಪರೆಗೆ ನಾನು ವಂಚನೆ ಮಾಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ ಪ್ರವೇಶಿಸಿದ ಸುದ್ದಿ ಖಚಿತವಾಗುತ್ತಿದ್ದಂತೆಯೇ ಸಲೆಹ್ ಕಣ್ಮರೆಯಾಗಿದ್ದರು. ಕಾಬೂಲ್ನ ಈಶಾನ್ಯದಲ್ಲಿರುವ ಪಂಜ್ಶಿರ್ ಕಣಿವೆಯ ಅಡಗುದಾಣದಲ್ಲಿ ಅವಿತಿದ್ದಾರೆ ಎನ್ನಲಾಗಿತ್ತು.