• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಪರಾಧಿಕ ಚೌಕಟ್ಟಿನಲ್ಲಿ ಲಿಂಗತ್ವ ಸೂಕ್ಷ್ಮತೆ ಹುಡುಕಾಟ

ನಾ ದಿವಾಕರ by ನಾ ದಿವಾಕರ
August 26, 2024
in Top Story, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

—–ನಾ ದಿವಾಕರ —–

ADVERTISEMENT

ನಾಗರಿಕ ಪ್ರಪಂಚದಲ್ಲಿ ಸಂವೇದನೆ ಇಲ್ಲವಾದಾಗ ಲಿಂಗತ್ವ ಸೂಕ್ಷ್ಮತೆ ಮರೀಚಿಕೆಯಾಗೇ ಉಳಿಯುತ್ತದೆ

ಸಮಕಾಲೀನ ಭಾರತ ಹಲವಾರು ದ್ವಂದ್ವಗಳ ನಡುವೆ ಬದುಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳ ನಡುವೆ ಸಮಾಜದ ವಸ್ತುಸ್ಥಿತಿಯನ್ನು, ನೆಲದ ವಾಸ್ತವವನ್ನು ಅರಿಯದ ಸಮಾಜ ಈ ದ್ವಂದ್ವಗಳಿಗೆ ಸಾಕ್ಷಿಯಾಗಿದೆ. ಸರ್ಕಾರಗಳು ವೇದಿಕೆಗಳ ಮೇಲೆ ನಿಂತು ಬೆನ್ನುತಟ್ಟಿಕೊಳ್ಳುತ್ತಿರುವಾಗಲೇ ಪರದೆಯ ತೆರೆಮರೆಯಲ್ಲಿ ಅತ್ಯಾಚಾರ, ದೌರ್ಜನ್ಯ, ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿವೆ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೆರವಣಿಗೆಯ ನಡುವೆಯೇ ದುರ್ಭರ ಜೀವನ ನಡೆಸುವ ಅಸಂಖ್ಯಾತ ಅವಕಾಶವಂಚಿತರ ಕೂಗು ಮುಗಿಲುಮುಟ್ಟುವಂತಿದೆ. 16 ನಿಮಿಷಕ್ಕೊಂದು ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವಾಗಲೂ ಮಹಿಳಾ ಸಬಲೀಕರಣ ಮತ್ತು ದೌರ್ಜನ್ಯತಡೆಯ ಭರವಸೆಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿವೆ.

ಮತ್ತೊಂದೆಡೆ ಭಾರತದ ಮಹಿಳಾ ಸಂಕುಲಕ್ಕೆ ಸಾಂತ್ವನ ನೀಡುವ ರಾಜಕೀಯ ಆಶ್ವಾಸನೆಗಳ ನಡುವೆಯೇ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ (ADR) ನಡೆಸಿರುವ ಸಮೀಕ್ಷೆಯೊಂದು, ಕಾನೂನು ನಿರೂಪಕರ ನೈತಿಕತೆಯನ್ನೇ ಪ್ರಶ್ನಿಸುವಂತಿದೆ. 2019 ರಿಂದ 2024ರ ಅವಧಿಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಶಾಸಕರು ಮತ್ತು ಸಂಸದರು ಸಲ್ಲಿಸಿರುವ ಪ್ರಮಾಣಪತ್ರಗಳ ಪರಿಶೀಲನೆಯಲ್ಲಿ, 16 ಸಂಸದರು 135 ಶಾಸಕರು ಮಹಿಳೆಯರ ವಿರುದ್ಧ ಅಪರಾಧ ಎಸಗಿರುವುದು ಕಂಡುಬಂದಿದೆ. ಇವರ ಪೈಕಿ ಇಬ್ಬರು ಸಂಸದರು 14 ಶಾಸಕರು ಐಪಿಸಿ ಸೆಕ್ಷನ್‌ 376ರ ಅಡಿ ಕನಿಷ್ಠ ಹತ್ತು ವರ್ಷ ಶಿಕ್ಷೆಗೊಳಗಾಗಬಹುದಾದ ಅಪರಾಧಗಳನ್ನು ಎಸಗಿರುವುದು ದಾಖಲಾಗಿದೆ. ಬೇಲಿ ಜಿಗಿತ ವ್ಯಾಪಕವಾಗಿರುವ ಇಂದಿನ ಸನ್ನಿವೇಶದಲ್ಲಿ ಈ ದತ್ತಾಂಶಗಳನ್ನು ಪಕ್ಷಾವಾರು ವಿಂಗಡಿಸುವ ಅಗತ್ಯತೆಯಿಲ್ಲ.

ರಾಜಕೀಯ ವಾಗ್ದಾನಗಳ ಭ್ರಮೆಯಲ್ಲಿ

ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯದಿನದ ಕೆಂಪುಕೋಟೆಯ ಭಾಷಣದಲ್ಲಿ ಪ್ರಧಾನಿ ಮೋದಿ “ ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಾಪಕವಾಗಿದೆ. ಈ ಆಕ್ರೋಶ ನನಗೆ ಅರ್ಥವಾಗುತ್ತದೆ. ನಮ್ಮ ಇಡೀ ಸಮಾಜ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮಹಿಳೆಯರ ವಿರುದ್ಧದ ಅಪರಾಧಗಳನ್ನು ಆದಷ್ಟು ಬೇಗ ತನಿಖೆ ಮಾಡಬೇಕು, ರಾಕ್ಷಸ ಕೃತ್ಯಗಳಲ್ಲಿ ಭಾಗಿಯಾಗಿರುವವರು ಆದಷ್ಟು ಬೇಗ ಕಠಿಣ ಶಿಕ್ಷೆಯನ್ನು ಎದುರಿಸಬೇಕು, ಸಮಾಜದಲ್ಲಿ ನಂಬಿಕೆಯನ್ನು ಮೂಡಿಸಲು ಇದು ಅವಶ್ಯಕ ” ಎಂದು ಅವರು ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ “ ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸಲು ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸುತ್ತೇವೆ ” ಎಂದೂ ಹೇಳಿದ್ದಾರೆ.

ಈ ಆಶಾದಾಯಕ ಭರವಸೆಗಳ ನಡುವೆಯೇ ಪ್ರಕಟವಾಗಿರುವ ಕರ್ನಾಟಕ ಸರ್ಕಾರದ ಪೊಲೀಸ್‌ ಇಲಾಖೆಯ ವರದಿಗಳ ಅನುಸಾರ ಪ್ರಸಕ್ತ ವರ್ಷ ಜುಲೈವರೆಗೆ ರಾಜ್ಯದಲ್ಲಿ 340 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 234 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ, ಉಳಿದವು ಬಾಕಿ ಉಳಿದಿವೆ. ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2024ರ ಜುಲೈ ಮಾಸದವರೆಗೆ ರಾಜ್ಯದಲ್ಲಿ 2089 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. (ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ಪೋಕ್ಸೋ ಕಾಯ್ದೆಯಡಿ ದಾಖಲಿಸಲಾಗುತ್ತದೆ). ಒಟ್ಟು 3643 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 3863, 2022ರಲ್ಲಿ 3194 ಪೋಕ್ಸೋ ಪ್ರಕರಣಗಳು, ಇದೇ ವರ್ಷಗಳಲ್ಲಿ ಕ್ರಮವಾಗಿ 607 ಮತ್ತು 537  ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಈ ಮಾಹಿತಿ ದತ್ತಾಂಶಗಳು ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದನ್ನೂ, ಪ್ರತಿವರ್ಷ ಹೆಚ್ಚಾಗುತ್ತಿರುವುದನ್ನೂ ಸ್ಪಷ್ಟವಾಗಿ ಸೂಚಿಸುತ್ತವೆ ಅಲ್ಲವೇ ?

ಏತನ್ಮಧ್ಯೆ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಅವರು” ಗೃಹಸಚಿವರ ಉಡಾಫೆಯ ಹೇಳಿಕೆ ಮತ್ತು ರಾಜ್ಯ ಸರ್ಕಾರದ ಬೇಜವಾಬ್ದಾರಿತನದ ಆಡಳಿತದಿಂದಲೇ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಹೆಚ್ಚಾಗುತ್ತಿದೆ, ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗುತ್ತಿವೆ ,,,,,” ಎಂದು ಹೇಳಿದ್ದಾರೆ. (ಆಂದೋಲನ 26-08-2024). ಕಳೆದ ವಾರ ಕೊಲ್ಕತ್ತಾದ ಆರ್‌ಜಿ ಕಾರ್‌ ಆಸ್ಪತ್ರೆಯಲ್ಲಿ ನಡೆದ ಭೀಭತ್ಸ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ದೌರ್ಜನ್ಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ವಿಷಯವಾಗಿರುವಾಗಲೇ ಮಹಾರಾಷ್ಟ್ರದ ಧಾರಾಶಿವಾದಲ್ಲಿ 15 ವರ್ಷದ ಬಾಲಕಿ, ಪಾಲ್ಘಾರ್‌ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ, ಠಾಣೆ ಜಿಲ್ಲೆಯ ಕಲ್ಯಾಣ್‌ ಪಟ್ಟಣದಲ್ಲಿ 10 ವರ್ಷದ ಬಾಲಕಿ, ಅಸ್ಸಾಂನ ನಾಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಅತ್ಯಾಚಾರಕ್ಕೆ ಗುರಿಯಾಗಿರುವುದು ವರದಿಯಾಗಿದೆ. ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಸಂಜಯ್‌ ರಾಯ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಜಕೀಯ ವಾರೆನೋಟ ಮತ್ತು ವಕ್ರದೃಷ್ಟಿ

ದೇಶಾದ್ಯಂತ ಅವ್ಯಾಹತವಾಗಿ ನಿರ್ಭೀತಿಯಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು, ದೌರ್ಜನ್ಯ-ಹತ್ಯೆಗಳು ಏನನ್ನು ಸೂಚಿಸುತ್ತವೆ. ರಾಜಕೀಯ ಪಕ್ಷಗಳು ಈ ಎಲ್ಲ ಘಟನೆಗಳನ್ನೂ ರಾಜಕೀಯ ಮಸೂರ ತೊಟ್ಟು ನೋಡುತ್ತವೆ. ಹಾಗಾಗಿ ಅತ್ಯಾಚಾರ-ದೌರ್ಜನ್ಯಕ್ಕೊಳಗಾದ ಬಾಲಕಿ ಅಥವಾ ಯುವತಿಯಲ್ಲಿ ಒಬ್ಬ ಸಂತ್ರಸ್ತೆ ಅಥವಾ ನೊಂದ ಹೆಣ್ಣು ಜೀವ ಕಾಣುವ ಬದಲು, ಘಟನೆಯ ಸ್ಥಳ, ಆ ರಾಜ್ಯದಲ್ಲಿರುವ ಸರ್ಕಾರ ಅಥವಾ ಆರೋಪಿಯ ಧರ್ಮ-ಜಾತಿ ಅಥವಾ ಹಲ್ಲೆಗೊಳಗಾದ ಜೀವದ ಜಾತಿ-ಧರ್ಮ ಇಷ್ಟು ಮಾತ್ರವೇ ಕಾಣುತ್ತದೆ. ಮುಖ್ಯವಾಹಿನಿ ಮಾಧ್ಯಮಗಳೂ ಸಹ ಇದೇ ಕನ್ನಡಕ ಧರಿಸುವುದರಿಂದ ಅಲ್ಲಿಯೂ ಸಹ ನರಕ ಯಾತನೆ ಅನುಭವಿಸುವ ಅಪ್ರಾಪ್ತ-ವಯಸ್ಕ-ವೃದ್ಧ ಮಹಿಳೆಯರು ಕಾಣುವುದೇ ಇಲ್ಲ. ಕಂಡರೂ ಅವರ ಯಾತನಾಮಯ ಕೂಗು ಇದೇ ಅಸ್ಮಿತೆಗಳ ಚೌಕಟ್ಟಿನಲ್ಲೇ ಕೇಳಿಸುತ್ತದೆ. ಸರ್ಕಾರಗಳು, ಪಕ್ಷಗಳು ಯಾವುದೇ ಇರಲಿ, ಮಹಿಳಾ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ ಎನ್ನುವ ವಾಸ್ತವವನ್ನು ಅರಿಯಲು ಇಷ್ಟು ಮಾಹಿತಿ ಸಾಕಲ್ಲವೇ ?  ವಿವೇಕ ಇದ್ದರೆ ಸಾಕು.

ಈ ನಡುವೆಯೇ ಪ್ರಧಾನಿ ಮೋದಿಯವರ ಭರವಸೆಯ ಮಾತುಗಳೂ ವ್ಯಕ್ತವಾಗಿವೆ. ಇದನ್ನು ಸ್ವಾಗತಿಸೋಣ. ಆದರೆ ಕಠಿಣ ಕಾಯ್ದೆ ಕಾನೂನುಗಳು ಯಾವುದೇ ಅಪರಾಧಗಳಿಗಾದರೂ ಪ್ರತಿಬಂಧಕವಾಗುತ್ತವೆಯೇ ಹೊರತು, ಮೇಲ್‌ ಸ್ತರದ ಸಮಾಜದಿಂದ ತಳಸ್ತರದವರೆಗೂ ದೌರ್ಜನ್ಯಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವೇ ? ಸರ್ಕಾರಗಳು ಮಹಿಳಾ ರಕ್ಷಣೆಯ ಬಗ್ಗೆ ಹೆಚ್ಚು ಮಾತನಾಡುತ್ತವೆ. ಆದರೆ ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳಾ ದೌರ್ಜನ್ಯರಹಿತ ಸಾಮಾಜಿಕ ವಾತಾವರಣವನ್ನು  ರೂಪಿಸುವ ನಿಟ್ಟಿನಲ್ಲಿ ಯಾವ ಸರ್ಕಾರವೇ ಆದರೂ ಒಂದು ಕಾರ್ಯಸೂಚಿ-ಕಾರ್ಯಯೋಜನೆ ಸಿದ್ಧಪಡಿಸಿದೆಯೇ ? ಸಮಾಜದಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಲಿಂಗತ್ವ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯ ಬಗ್ಗೆ ಗಮನಹರಿಸದೆ ಹೋದರೆ ಕೇವಲ ಪ್ರತಿಬಂಧಕ ಕಾಯ್ದೆಗಳಿಂದ ಮಹಿಳೆಯರ ರಕ್ಷಣೆ ಸಾಧ್ಯವೇ ?

ಈ ಪ್ರಶ್ನೆಗೆ ಎಲ್ಲ ರಾಜಕೀಯ ಪಕ್ಷಗಳೂ, ಸರ್ಕಾರಗಳೂ ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳಬೇಕಿದೆ. ಎಡಿಆರ್‌ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವ 151 ಜನಪ್ರತಿನಿಧಿಗಳ ವಿರುದ್ಧ ಯಾವ ಪಕ್ಷ ಯಾವ ರೀತಿಯ ಶಿಸ್ತು ಕ್ರಮ ಕೈಗೊಂಡಿವೆ. ಒಲಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳ-ದೌರ್ಜನ್ಯಗಳಿಂದ ನೊಂದು ಇಡೀ ವಿಶ್ವಕ್ಕೆ ಕಾಣುವಂತೆ ಕಣ್ಣೀರುಗರೆದಾಗ ನಮ್ಮ ಸಮಾಜ ಅಥವಾ ಸರ್ಕಾರಗಳು ಆ ಹೆಣ್ಣು ಮಕ್ಕಳಿಗೆ ಹೇಗೆ ಸ್ಪಂದಿಸಿವೆ ? ಇದೇ ಸಮಾಜದ ಒಂದು ವರ್ಗ ಸಾಕ್ಷಿಮಲ್ಲಿಕ್‌, ವಿನೇಶ್‌ ಪೋಗಟ್‌ ಅವರನ್ನು ದೇಶದ್ರೋಹಿಗಳಂತೆ ಬಿಂಬಿಸಿದರೆ ಮತ್ತೊಂದು ವರ್ಗ ಬಿಲ್ಕಿಸ್‌ ಬಾನೋ ಪ್ರಕರಣದ ಅಪರಾಧಿಗಳನ್ನು ಹಾರ ತುರಾಯಿಗಳೊಂದಿಗೆ ಸನ್ಮಾನಿಸಿದೆ. ಕುಸ್ತಿಪಟುಗಳ ಕಂಬನಿ ಹನಿಗಳಿಗೆ ಮಾನ್ಯತೆಯೇ ನೀಡದ ಈ ಸಮಾಜದಲ್ಲಿ, ಆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ರಾಜಕೀಯ ನಾಯಕ ಇಂದಿಗೂ ಪಕ್ಷದ ಸದಸ್ಯನಾಗಿಯೇ ಮುಂದುವರೆದಿದ್ದಾನೆ.

ಸಾಮಾಜಿಕ ಕ್ರೌರ್ಯ ಮತ್ತು ಗಂಡಾಳ್ವಿಕೆ

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪೋಕ್ಸೋ ಆರೋಪಗಳನ್ನು ಎದುರಿಸುತ್ತಿರುವ ರಾಜಕೀಯ ನಾಯಕರಿಗೆ ಪಕ್ಷಗಳೇ ಆಸರೆ-ಸಮ್ಮಾನ ನೀಡುತ್ತವೆ, ಬಾಹ್ಯ ಸಮಾಜದ ಇಂತಹ ಆರೋಪಿಗಳನ್ನು ರಕ್ಷಿಸಲು ಜಾತಿ-ಧರ್ಮಗಳ ಅಧಿಕಾರಯುತ ಚೌಕಟ್ಟುಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತದೆ. ವಿಶ್ವದಲ್ಲೇ ಅತ್ಯುನ್ನತ ಪ್ರತಿಷ್ಠಿತ ಸ್ಥಾನ ಗಳಿಸಿರುವ ನ್ಯಾಯಾಂಗವನ್ನು ಹೊಂದಿರುವ ಭಾರತದಲ್ಲಿ ಇಂದಿಗೂ ಖಾಪ್‌ ಪಂಚಾಯತ್‌ಗಳು, ಗ್ರಾಮ ಪಂಚಾಯತ್‌ಗಳು ಮಹಿಳೆಯರನ್ನು ಶಿಕ್ಷೆಗೊಳಪಡಿಸುವ ಅಧಿಕಾರವನ್ನು ಚಲಾಯಿಸುತ್ತಿರುವುದು ವಿಪರ್ಯಾಸವಲ್ಲವೇ ? ಇತ್ತೀಚಿನ ಘಟನೆಯೊಂದರಲ್ಲಿ ಒಡಿಷಾದ ಭುವನೇಶ್ವರ ಜಿಲ್ಲೆಯ ಝಾರಸುಗುಡ ಗ್ರಾಮದಲ್ಲಿ ತನ್ನ ಗಂಡನಿಗೆ ಹೊಡೆದಿದ್ದಳು ಎಂಬ ಆರೋಪದ ಮೇಲೆ ಅಲ್ಲಿನ ಗ್ರಾಮಪಂಚಾಯತ್‌ ಮಹಿಳೆಗೆ ಉಗ್ರ ಶಿಕ್ಷೆ ವಿಧಿಸಿ ತಲೆ ಬೋಳಿಸಿ, ಬಹಿಷ್ಕಾರ ಹೇರಿ 5000 ರೂಗಳ ದಂಡ ವಿಧಿಸಿದೆ. ಈ ಅಧಿಕಾರ ಚಲಾಯಿಸುವ ಹಕ್ಕನ್ನು ಯಾವ ಸಂವಿಧಾನ ಅಥವಾ ಸಂವಿಧಾನದ ಯಾವ ಅನುಚ್ಛೇದ ನೀಡಿದೆ ?

ಭಾರತದ ತಳಮಟ್ಟದ ಸಮಾಜದಲ್ಲಿ ಇಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಲವ್‌ ಜಿಹಾದ್‌, ಕೇರಳ ಫೈಲ್ ಕುರಿತು ಭಾವಾತಿರೇಕದ ಹೇಳಿಕೆಗಳನ್ನು ನೀಡುವ ಬಿಜೆಪಿ ನಾಯಕರಿಗೆ ಇಲ್ಲೇಕೆ ಯಾವುದೇ ಜಿಹಾದ್‌ ಅಥವಾ ಫೈಲುಗಳು ಕಾಣುವುದಿಲ್ಲ ? ಇಲ್ಲಿ ಕಲಹ ಇರುವುದು ಮಾನವ ಧರ್ಮ ಮತ್ತು ಪಿತೃಪ್ರಧಾನತೆಯ ರಕ್ಕಸ ಸಂಸ್ಕೃತಿಯ ನಡುವೆ ಅಲ್ಲವೇ ? ಜಾತಿ ನಿಬಂಧನೆಗಳನ್ನು ಮೀರಿ ವಿವಾಹವಾಗುವ ಹೆಣ್ಣುಮಕ್ಕಳನ್ನು ಹತ್ಯೆಮಾಡುವ ಅಥವಾ ಅಂತಹ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರುವ ಒಂದು ʼಅರಣ್ಯ ನ್ಯಾಯʼ  77 ವರ್ಷಗಳ ಸ್ವತಂತ್ರ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ ಎಂದರೆ ಸಾಮಾನ್ಯ ಮಹಿಳೆಯರು ಯಾರ ಮೊರೆ ಹೋಗಬೇಕು. ಅತ್ಯಾಚಾರ ಎಸಗುವವರನ್ನು ರಾಜಕೀಯ ವ್ಯವಸ್ಥೆಯೇ ಹೇಗೆ ರಕ್ಷಿಸುತ್ತದೆ ಎಂದು ನಿರೂಪಿಸುವ ಪ್ರಸಂಗಗಳಿಗೇನೂ ಭಾರತದಲ್ಲಿ ಕೊರತೆಯಿಲ್ಲ. ಉತ್ತರ ಪ್ರದೇಶದ ಉನ್ನಾವೋ ಇತ್ತೀಚಿನ ನಿದರ್ಶನವಷ್ಟೇ.

ಈ ಸಂದಿಗ್ಧತೆಯ ನಡುವೆಯೇ ಲಿಂಗತ್ವ ಸೂಕ್ಷ್ಮತೆಯ ಪ್ರಶ್ನೆ ಉದ್ಭವಿಸುತ್ತದೆ. ಪ್ರತಿಕ್ಷಣವೂ ಮನುಷ್ಯ ಜೀವಗಳೊಡನೆ ಒಡನಾಟ ಹೊಂದಿರುವ, ಮನುಷ್ಯನ ನೋವುಗಳಿಗೆ ಸ್ಪಂದಿಸಿ ಶಮನ ಮಾಡುವ ವೈದ್ಯಕೀಯ ಲೋಕವೇ ಈ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಕೊಲ್ಕತ್ತಾ ಆರ್‌ಜಿ ಕಾರ್‌ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಸಮಾಜದ ಅತ್ಯಂತ ಕೆಳಸ್ತರದಿಂದ ಉನ್ನತ ಹಂತದವರೆಗೂ ವ್ಯಾಪಿಸಿರುವ ಪಿತೃಪ್ರಧಾನ ಧೋರಣೆ ಮತ್ತು ಇದನ್ನು ನಿರ್ದೇಶಿಸುವ ಗಂಡಾಳ್ವಿಕೆಯ ಕೇಂದ್ರಗಳಲ್ಲಿ ಲಿಂಗತ್ವ ಸೂಕ್ಷ್ಮತೆಯ ಬಗ್ಗೆ ಗಂಭೀರ ಆಲೋಚನೆಯಾದರೂ ನುಸುಳಿದೆಯೇ ? ಇಲ್ಲವೆಂದೇ ಕಾಣುತ್ತದೆ. ಏಕೆಂದರೆ ಭಾರತದ ಯಾವುದೇ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ಸಾಮಾಜಿಕ ಚಳುವಳಿಗಳು ಸಾಂಸ್ಥಿಕ ನೆಲೆಯಲ್ಲಾಗಲೀ, ಸಾಂಘಿಕ ನೆಲೆಯಲ್ಲಾಗಲೀ ಸಮಾಜದಲ್ಲಿ ನೆಲಮಟ್ಟದಿಂದಲೇ ಲಿಂಗತ್ವ ಸೂಕ್ಷ್ಮತೆಯನ್ನು ಬೆಳೆಸುವ ಸಣ್ಣ ಯೋಚನೆಯನ್ನೂ ಮಾಡಿದಂತೆ ಕಾಣುವುದಿಲ್ಲ.

ಮಹಿಳಾ ದೌರ್ಜನ್ಯ ಅಥವಾ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳ ಬಗ್ಗೆ ನಿಗಾವಹಿಸಲು ರೂಪಿಸಲಾಗಿರುವ ಆಂತರಿಕ ದೂರು ಸಮಿತಿಗಳು (ICC) ಬಹುತೇಕ ವಲಯಗಳಲ್ಲಿ ಪುರುಷಾಡಳಿತದ ಪ್ರಭಾವಕ್ಕೊಳಗಾಗಿ ನಿಷ್ಕ್ರಿಯವಾಗಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಕೇರಳದ ಮಲಯಾಳಿ ಚಿತ್ರರಂಗದಲ್ಲಿ ಮಹಿಳಾ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಈ ICCಗಳು ತಪ್ಪೆಸಗುವವರಿಂದ ಅಥವಾ ಉದ್ಯೋಗಸ್ಥರಿಂದಲೇ ಪ್ರಭಾವಿತವಾಗುತ್ತವೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಇಂದಿಗೂ ಪುರುಷಾಧಿಪತ್ಯದಲ್ಲೇ ನಡೆಯುವ ಬಹುತೇಕ ಸಾಮಾಜಿಕ ಹೋರಾಟಗಳು ಮತ್ತು ಕಾರ್ಮಿಕ ಸಂಘಟನೆಗಳು, ಕಮ್ಯುನಿಸ್ಟ್‌ ಪಕ್ಷಗಳೂ ಸಹ ತಮ್ಮ ಆಂತರಿಕ ಚೌಕಟ್ಟಿನೊಳಗೇ ಕಾರ್ಯಕರ್ತರಲ್ಲಿ ಲಿಂಗತ್ವ ಸೂಕ್ಷ್ಮತೆ ಬೆಳೆಸಲು ಯಾವ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಲಿಂಗತ್ವ ಸೂಕ್ಷ್ಮತೆ-ಉತ್ತರದಾಯಿತ್ವದ ಪ್ರಶ್ನೆ

ಈ ನೆಲೆಯಲ್ಲಿ ನಿಂತು ನೋಡಿದಾಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದು ಪ್ರತಿ 16 ನಿಮಿಷಕ್ಕೊಂದು ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳಿಗೆ ಉತ್ತರದಾಯಿ ಯಾರು ? ಎರಡನೆಯ ಪ್ರಶ್ನೆ ಸಮಾಜದಲ್ಲಿ ನೆಲಮಟ್ಟದಿಂದಲೂ ಲಿಂಗತ್ವ ಸೂಕ್ಷ್ಮತೆ-ಮಹಿಳಾ ಸಂವೇದನೆಯನ್ನು ಬೆಳೆಸದೆಯೇ ಈ ದೌರ್ಜನ್ಯಗಳನ್ನು ಕೇವಲ ಪ್ರತಿಬಂಧಕ ಕಾನೂನುಗಳಿಂದ ತಡೆಗಟ್ಟಲು ಸಾಧ್ಯವೇ ? ಈ ಎರಡೂ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗುವ ಸರ್ಕಾರಗಳು ಮತ್ತು ಈ ಸರ್ಕಾರಗಳನ್ನು ನಿರ್ವಹಿಸುವ ಅಥವಾ ವಿರೋಧಿಸುವ ರಾಜಕೀಯ ಪಕ್ಷಗಳು. ಇದನ್ನೂ ಮೀರಿ ಇಡೀ ಸಾಮಾಜಿಕ-ರಾಜಕೀಯ ವ್ಯವಸ್ಥೆಯನ್ನು ಹಾಗೂ ಸಾಂಸ್ಕೃತಿಕ ಜಗತ್ತನ್ನು ತನ್ನ ಆಧಿಪತ್ಯದಲ್ಲಿ ಬಂಧಿಸಿರುವ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆ ಇದಕ್ಕೆ ಉತ್ತರಿಸಬೇಕಾಗುತ್ತದೆ.

ಈ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಸಂಘಸಂಸ್ಥೆಗಳು, ಸಂಘಟನೆಗಳು ಆದ್ಯತೆಯ ಮೇಲೆ ಲಿಂಗತ್ವ ಸೂಕ್ಷ್ಮತೆಯ ಬಗ್ಗೆ ಯೋಚಿಸಬೇಕಿದೆ. ಮಹಿಳಾ ಸಂಕುಲಕ್ಕೆ ಅದರ ನೈಸರ್ಗಿಕ-ಸಾಂವಿಧಾನಿಕ ಹಕ್ಕು ಎಂದೇ ಹೇಳಬಹುದಾದ ಸಮಾನ ಪ್ರಾತಿನಿಧ್ಯವನ್ನೇ ನೀಡಲೊಪ್ಪದ ಒಂದು ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆ ಸಮಾಜವನ್ನು ನಿರ್ವಹಿಸಿ, ನಿರ್ದೇಶಿಸುತ್ತಿರುವ ಹೊತ್ತಿನಲ್ಲಿ ಈ ಸವಾಲು ನಾಗರಿಕ ಎನಿಸಿಕೊಳ್ಳುವ ಜನತೆಯ ಹೆಗಲೇರುತ್ತದೆ. ಅಕ್ಷರಗಳಲ್ಲಿ, ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ, ದೃಶ್ಯರೂಪಕಗಳಲ್ಲಿ ವ್ಯಕ್ತವಾಗುವ ಮಹಿಳಾ ಸಂವೇದನೆ ಅಥವಾ ಲಿಂಗತ್ವ ಸೂಕ್ಷ್ಮತೆ ಹೊರಜಗತ್ತಿಗೆ ಬಂದ ಕೂಡಲೇ ಮರೆಯಾಗುವುದಾದರೂ ಹೇಗೆ ? ಈ ಸಂಕೀರ್ಣ ಪ್ರಶ್ನೆಗೆ ಗಂಡಾಳ್ವಿಕೆಯ ಸಾಂಸ್ಕೃತಿಕ ಜಗತ್ತು ಉತ್ತರಿಸಲೇಬೇಕಿದೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಶೈಕ್ಷಣಿಕ ವಲಯವೂ ಪುರುಷಾಹಮಿಕೆಯ ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ ಅಬಾಲವೃದ್ಧೆಯರಾದಿಯಾಗಿ ಮಹಿಳೆಯರು ಯಾರಿಂದ ರಕ್ಷಣೆ ಅಪೇಕ್ಷಿಸಬಹುದು ? ಈ ಪ್ರಶ್ನೆಗೆ ಸಮಾಜ ಉತ್ತರಿಸಬೇಕಿದೆ.

ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಲೈಂಗಿಕ ಶಿಕ್ಷಣ ನೀಡುವುದರ ಮೂಲಕ, ಎಳೆಯರಲ್ಲಿ ಲಿಂಗತ್ವದ ಅರಿವು ಮೂಡಿಸುವ ಹಾಗೂ ಬೆಳವಣಿಗೆಯ ಹಂತದಲ್ಲೇ ಲಿಂಗತ್ವ ಸೂಕ್ಷ್ಮತೆಯನ್ನು ಬೋಧಿಸುವ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಕ್ರಿಯಾಶೀಲವಾಗಿ ಯೋಚಿಸಬೇಕಿದೆ. ಪ್ರತಿಯೊಂದು ಸಂಸ್ಥೆಯಲ್ಲಿ, ಸಾಮಾಜಿಕ-ರಾಜಕೀಯ ಸಂಘಟನೆಯಲ್ಲಿ, ಚಳುವಳಿಗಳಲ್ಲಿ, ಹೋರಾಟ ಕೇಂದ್ರಗಳಲ್ಲಿ, ಸೇವಾ ವಲಯಗಳಲ್ಲಿ ಲಿಂಗತ್ವ ಸೂಕ್ಷ್ಮತೆಯನ್ನು ಬೋಧಿಸುವ ಮಾರ್ಗೋಪಾಯಗಳನ್ನು ರೂಪಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಈ ಜವಾಬ್ದಾರಿ ಇರುವುದು ಕೇವಲ ಮಹಿಳಾ ಸಂಘಟನೆಗಳ ಮೇಲಲ್ಲ. ಆ ಕೆಲಸ ನಡೆಯುತ್ತಲೇ ಇದೆ.  ಬದಲಾಗಿ ಪುರುಷ ಸಮಾಜದ ಮೇಲೆ, ಇಡೀ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನ ಮೇಲೆ ಈ ಜವಾಬ್ದಾರಿ ಇದೆ. ಈ ನೈತಿಕ ಜವಾಬ್ದಾರಿ ನಮ್ಮ ಹೆಗಲ ಮೇಲಿರುವುದನ್ನು ಅರಿತು ಮುನ್ನಡೆಯುವ ಪ್ರಾಮಾಣಿಕತೆ ನಮ್ಮಲ್ಲಿ ಅವಶ್ಯವಾಗಿ ಇರಲೇಬೇಕಲ್ಲವೇ ? ಇದೆಯೇ ?????

-೦-೦-೦-೦-೦-

Tags: BJPCongress PartyKarnatakakarnataka bjp politicsKARNATAKA CMKarnataka Congresskarnataka crisisKarnataka ElectionKarnataka Election 2023karnataka election newsKarnataka Electionskarnataka elections 2023Karnataka Governmentkarnataka latest newskarnataka newskarnataka news livekarnataka political crisiskarnataka political developmentskarnataka political newsKarnataka Politicspolitics in karnatakapolitics karnatakaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದರ್ಶನ್‌ ಪ್ರಕರಣ:ಸಂಬಂಧಪಟ್ಟವರ ವಿರುದ್ಧ ಕ್ರಮ; ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ರಷ್ಯಾದ ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದ ಉಕ್ರೇನ್‌ನ ಡ್ರೋನ್‌; ಭಯಾನಕ ದಾಳಿಯ ವಿಡಿಯೊ ಇಲ್ಲಿದೆ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post

ರಷ್ಯಾದ ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದ ಉಕ್ರೇನ್‌ನ ಡ್ರೋನ್‌; ಭಯಾನಕ ದಾಳಿಯ ವಿಡಿಯೊ ಇಲ್ಲಿದೆ

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada