ಹಾವೇರಿ: (ಸವಣೂರು): ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳುವವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಸವಣೂರು ತಾಲೂಕಿನ ಹುರಳಿಕುಪ್ಪಿ, ಮೆಳ್ಳಾಗಟ್ಟಿ, ಮೆಳ್ಳಾಗಟ್ಡಿ ಪ್ಲಾಟ್, ತೋಂಡೂರ, ಹೊಸಳ್ಳಿ, ತಳ್ಳಿಹಳ್ಳಿ ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಉಪ ಚುನಾವಣೆ ಪೂರ್ವದಲ್ಲಿಯೇ ಬಂದು ನಿಮ್ಮನ್ನು ಭೇಟಿ ಮಾಡಿ ನೀವು ಕೊಟ್ಟಿರುವ ಪ್ರೀತಿ, ವಿಶ್ವಾಸ, ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಚುನಾವಣೆ ಘೋಷಣೆಯ ನಂತರ ಬಂದರೆ ಅದು ತಪ್ಪಾಗುತ್ತದೆ ಎಂದರು.
ನಾನು ಈಗ ಶಾಸಕ ಅಲ್ಲದಿದ್ದರೂ ನೀವು ನನಗೆ ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿ ಯಾಗಿ ಅಧಿಕಾರ ನಡೆಸುವ ಶಕ್ತಿ ಕೊಟ್ಟಿದ್ದೀರಿ, ಈಗ ನನಗೆ ವಿಧಾನಸಭೆಯಲ್ಲಿ ಶಾಸಕನಾಗಿ ಅಧಿಕಾರ ಇಲ್ಲದಿದ್ದರೂ, ನೀವು ಕೊಟ್ಟಿರುವ ಶಕ್ತಿಯಿಂದ ನಾನು ಮೊದಲು ಯಾವ ರೀತಿಕೆಲಸ ಮಾಡುತ್ತಿದ್ದೆ ಅದೇ ರೀತಿ ನಿಮ್ಮ ಕೆಲಸವನ್ನು ಮಾಡುತ್ತೇನೆ. ನೀವು ಯಾವುದೇ ರೀತಿಯ ಚಿಂತೆ ಮಾಡಬೇಡಿ ಎಂದು ಭರವಸೆ ನೀಡಿದರು.
ಮೊದಲು ಹೇಗೆ ನನ್ನೊಂದಿಗೆ ಪ್ರೀತಿ, ವಿಶ್ಬಾಸ ಹಕ್ಕಿನಿಂದ ಬಂದು ಕೇಳುತ್ತಿದ್ದಿರೋ ಅದೇ ಪ್ರೀತಿ ವಿಶ್ವಾಸದಿಂದ ಬನ್ನಿ, ನಾನು ಕ್ಷೇತ್ರದ ಹೊರಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ಷೇತ್ರದ ಒಳಗೆ ಬಂದಾಗ ಬಸವರಾಜ ಬೊಮ್ಮಾಯಿ ಮಾತ್ರ. ನಾನು ಈಗ ಶಾಸಕನಲ್ಲ, ನೀವು ಶಾಸಕ ಸ್ಥಾನಕ್ಕೆ ಗೌರವ ಕೊಟ್ಟಿದ್ದರೆ ಇಷ್ಟು ಜನ ಸೇರುತ್ತಿರಲಿಲ್ಲ. ನಮ್ಮ ನಿಮ್ಮ ನಡುವೆ ಇರುವ ಪ್ರೀತಿ ವಿಶ್ವಾಸಕ್ಕೆ, ಸಂಬಂಧಕ್ಕೆ ಗೌರವ ಕೊಟ್ಟಿದ್ದೀರಿ, ನಾನು ಮಾಡಿರುವ ಕೆಲಸ ಕಾರ್ಯಗಳಿಗೆ ಗೌರವಕೊಟ್ಟಿದ್ದೀರಿ ಇದು ಶಾಸ್ವತ ಎಂದು ಹೇಳಿದರು.
ನಾನು ನಿಮಗೆ ಕೋಟಿ ಕೋಟಿ ಧನ್ಯವಾದ ಅರ್ಪಿಸುವುದು ಒಂದು ಕಡೆ, ಈ ತಾಲೂಕಿನ ಅಭಿವೃದ್ಧಿ ನಿರಂತರ, ಒಂದಾದಮೇಲೆ ಒಂದು ಅಭಿವೃದ್ಧಿ ಕೆಲಸ ನಡೆಯಬೇಕು. ಅಭಿವೃದ್ಧಿ ವೇಗ ನಿರಂತರವಾಗಿ ಇರಬೇಕು. ಅದಕ್ಕಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮೊದಲಿಗಿಂತಲೂ ಹೆಚ್ಚು ನಿರಂತರವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹುರುಳಿಕುಪ್ಪೆ ಪಿಎಚ್ಸಿ ಕೇಂದ್ರವನ್ನು ನಾನು ಅನುಮತಿ ನೀಡಿದ್ದು ಆರೋಗ್ಯ ಸಚಿವರಿಗೆ ವೈದ್ಯರನ್ನು ನೀಡಿ ಉದ್ಘಾಟನೆ ಮಾಡುವಂತೆ ಮನವಿ ಮಾಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಸುಮಾರು 30 ಕೋಟಿ ವೆಚ್ಚದ ಕಾಮಗಾರಿ ಈಗ ಆರಂಭವಾಗಲಿದೆ. ನಿರಂತರವಾಗಿ ನಡೆಯುವ ಅಭಿವೃದ್ಧಿ ಕಾರ್ಯಗಳು ನಿಲ್ಲಬಾರದು ಎಂದು ನಾನು ಮಂಜೂರಾತಿ ನೀಡಿದ್ದೇನೆ. ಅವು ಪೂರ್ಣಗೊಳ್ಳುವವರೆಗೂ ನಾನು ವಿರಮಿಸುವುದಿಲ್ಲ ಎಂದು ಹೇಳಿದರು.
ಹುರುಳಿಕುಪ್ಪೆ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದು ಎಲ್ಲರೂ ಒಕ್ಕಟ್ಟಾಗಿ ಸಾಮರಸ್ಯದಿಂದ ಗ್ರಾಮದ ಅಭಿವೃದ್ಧಿ ಮಾಡಿಕೊಂಡು ಹೋಗಬೇಕು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ನಾನು ದೈವದಲ್ಲಿಯೇ ದೇವರನ್ನು ಕಾಣುತ್ತಿದ್ದೇನೆ. ಇವತ್ತಿನ ವ್ಯವಹಾರಿಕ ರಾಜಕಾರಣದಲ್ಲಿ ಬಹಳಷ್ಟು ಜನರು ನಾನು ಹೇಳುವ ಮಾತುಗಳನ್ನು ನಂಬುವುದಿಲ್ಲ. ಯಾರು ನಂಬುತ್ತಾರೊ ಬಿಡುತ್ತಾರೊ ಗೊತ್ತಿಲ್ಲ ಆದರೆ, ನನ್ನ ಹೃದಯದ ಅಂತರಾಳದ ಮಾತು ಹೇಳಿದ್ದೇನೆ. ನಿಮ್ಮ ಹೃದಯಕ್ಕೆ ಮುಟ್ಟಲಿ ಎಂದು ಹೇಳಿದ್ದೇನೆ. ಈ ಹೃದಯದಿಂದ ಹೃದಯದ ಸಂಬಂಧ ನಿರಂತರವಾಗಿರಲಿ, ನೀವು ನನ್ನಿಂದ ಬಯಸುವ ಎಲ್ಲ ಕೆಲಸವನ್ನು ಮಾಡುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಹೇಳಿದರು.

ನನಗೆ ರಾಜಕೀಯವಾಗಿ ಮೊದಲು ಹದಿನೈದು ವರ್ಷ ರಾಜಕೀಯವಾಗಿ ಅವಕಾಶಗಳು ಸಿಗಲಿಲ್ಲ. ನಾನು ಅನೇಕರನ್ನು ಶಾಸಕ, ಮಂತ್ರಿಯನ್ನಾಗಿ ಮಾಡಿದ್ದೆ. ನಾನು ಬಿಜೆಪಿ ಸೇರಿದಾಗ ನನಗೆ ಕುಂದಗೋಳ ಅಥವಾ ಶಿಗ್ಗಾವಿ ಎರಡಲ್ಲಿ ಒಂದು ಕ್ಷೇತ್ರಕೇಳಿದ್ದೆ, ನಮ್ಮ ತಾಯಿಯವರು 2002 ರಲ್ಲಿ ನಿಧನ ಹೊಂದಿದರು. ಅವರು ತಮ್ಮ ಕೊನೆಯ ದನಿಗಳಲ್ಲಿ ನನಗೆ ಮನೆಯ ವಿಚಾರ, ಧರ್ಮದ ವಿರೋಧಿ ವಿಚಾರ ಇರಬಹುದು. ಸಾರ್ವತ್ರಿಕ ವಿಚಾರ ಸೇರಿ ಹಲವು ವಿಚಾರಗಳನ್ನು ನನ್ನೊಡನೆ ಚರ್ಚೆ ಮಾಡಿದರು. ಅವರ ತವರು ಮನೆ ದುಂಢಸಿ, ಅವರು ಶಿಗ್ಗಾವಿ ಸವಣೂರಿನ ಜನರು ಬಹಳ ಒಳ್ಳೆಯವರು ನಿಮ್ಮ ಅಜ್ಜನಿಗೆ ಅನ್ನ ಮತ್ತು ಗೌರವ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಯಡಿಯೂರಪ್ಪ ಅವರು ಶಿಗ್ಗಾವಿ ಸವಣೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದಾಗ ನಾನು ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ, ಅವತ್ತು ನಾನು ತೆಗೆದುಕೊಂಡ ತೀರ್ಮಾನ ಅತ್ಯಂತ ಬಂಗಾರದಂತ ತೀರ್ಮಾನ ಎಂದು ಹೇಳಿದರು.
