ನಾವು ನಮ್ಮ ‘ನಸಲ್ ಮತ್ತು ಫಸಲ್’ (ಮುಂದಿನ ಪೀಳಿಗೆ ಮತ್ತು ಬೆಳೆ) ಗಾಗಿ ಹೋರಾಡುತ್ತಿದ್ದೇವೆ ಎಂಬುದು ಪ್ರಸ್ತುತ ರೈತ ಚಳುವಳಿಯ ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ. ರೈತರ ಕುರಿತು ಹೊರಬಂದ ಇತ್ತೀಚೆಗಿನ ಸಮೀಕ್ಷೆ ರೈತರ ಈ ಪರಿಸ್ಥಿತಿಗೆ ಸಾಕ್ಷಿಯಾಗಿದೆ. 2021ರ ಸೆಪ್ಟೆಂಬರ್ 10ರಂದು ಬಿಡುಗಡೆಗೊಂಡ ಈ ಪ್ರಮುಖ ಸರ್ಕಾರಿ ವರದಿಯು ರಾಜಕಾರಣಿಗಳಿಗೆ ಮತ್ತು ನೀತಿ ನಿರೂಪಕರಿಗೆ ಮಾತ್ರ ಎಚ್ಚರದ ಕರೆಯಾಗಿಲ್ಲ, ಬದಲಾಗಿ ಇದು ರೈತರು ಮತ್ತು ರೈತ ಚಳುವಳಿಗಳಿಗೂ ಎಚ್ಚರದ ಕರೆಯಾಗಿದೆ.
ಎನ್.ಎಸ್.ಎಸ್. ನ ಬಹುನಿರೀಕ್ಷಿತ 77ನೇ ಸುತ್ತಿನ “ಗ್ರಾಮೀಣ ಭಾರತದ ಕೃಷಿಕ ಕುಟುಂಬಗಳು ಮತ್ತು ಅವರ ಭೂಮಿ ಮತ್ತು ಜಾನುವಾರುಗಳ ಸ್ಥಿತಿಗತಿ ಮೌಲ್ಯಮಾಪನ, 2019” ಹೊರಬಂದಿದೆ. ಇದಕ್ಕೆ ಬಂದಂತಹ ಪ್ರತಿಕ್ರಿಯೆಗಳು ಇಲ್ಲಿಯ ವರೆಗು ಸಾಧಾರಣ ಕೃಷಿಕ ಕುಟುಂಬದ ಸಾಲಗಳ ಮೊತ್ತ ಏರಿಕೆಯಾಗಿರುವ ಸುದ್ದಿಯ ಕುರಿತು ಇವೆ. ಸಾಧಾರಣ ಕೃಷಿಕ ಕುಟುಂಬವೊಂದರ ಬಾಕಿಯಿರುವ ಸಾಲದ ಮೊತ್ತ 47,000 ರುಪಾಯಿಗಳಿಂದ 74,000 ರುಪಾಯಿಗಳಿಗೆ ಏರಿದೆ. ರೈತರ ಸ್ಥಿತಿಗತಿ ಉತ್ತಮವಿದ್ದಷ್ಟು ಅವರು ತೀರಿಸಬೇಕಾದ ಸಾಲ ಹೆಚ್ಚು ಉಳಿದಿದೆ ಎಂಬುದು ಅಡಗಿರುವ ಸತ್ಯವಾಗಿರುವುದರಿಂದ ಈ ಮಾಹಿತಿಯು ಚಿಂತಾದಾಯಕವಾಗಿದೆ. ಆದರೂ ಇದು ಕೇವಲ ರೋಗಲಕ್ಷಣವಾಗಿದೆ, ಖಾಯಿಲೆಯಲ್ಲ. ಇಲ್ಲಿನ ಅಸಲಿ ವಿಷಯ ರೈತರ ಆದಾಯ ಅಥವಾ ಅದರ ಕೊರತೆ.
ಕೆಲವು ವರದಿಗಳು ಈ ಸಮೀಕ್ಷೆಯು ರೈತರ ಆದಾಯದ ಬಗ್ಗೆ ಏನನ್ನು ಹೇಳುತ್ತದೆ ಎಂಬುದನ್ನು ಗಮನಿಸಿವೆ. ಒಂದು ಸಾಧಾರಣ ಕೃಷಿಕ ಕುಟುಂಬ ತಿಂಗಳಿಗೆ ಸುಮಾರು 10,000 ರುಪಾಯಿಗಳನ್ನು ಗಳಿಸುತ್ತದೆ. ಇದು ದೊಡ್ಡ ನಗರಗಳಲ್ಲಿ ಮನೆಗೆಲಸದವರು ಸಂಪಾದಿಸುವ ಹಣಕ್ಕಿಂತಲೂ ಕಡಿಮೆಯಿದೆ. 2013ರ ಇದೇ ರೀತಿಯ ಸಮೀಕ್ಷೆಯಲ್ಲಿ ಕಂಡುಬಂದ ಆದಾಯ 6,442 ರುಪಾಯಿಗಳು. ಇದು ಈಗ 10,218 ರುಪಾಯಿಗಳಿಗೆ ತೆವಳಿ ಏರಿದೆ.
ಈ ಸಂಖ್ಯೆಗಳು ಎಷ್ಟೇ ಆಘಾತಕಾರಿಯಾಗಿದ್ದರೂ, ಇವು ಬಿಚ್ಚಿಡುವುದಕ್ಕಿಂತ ಹೆಚ್ಚು ಅಡಗಿಸಿಡುತ್ತಿವೆ. ಕೃಷಿ ಚಟುವಟಿಕೆ ತಿಂಗಳಿಗೆ ಸುಮಾರು 10,000 ರುಪಾಯಿಗಳಷ್ಟು ಆದಾಯವನ್ನು ನೀಡುತ್ತದೆ ಎಂದು ಬಿಂಬಿಸಿ ಕಳೆದ ಸಮೀಕ್ಷೆಗಿಂತ ಆದಾಯ ಹೆಚ್ಚಾಗಿದೆ ಎಂಬ ಸಕಾರಾತ್ಮಕ ಛಾಯೆಯನ್ನು ಉಳಿಸಲು ಪ್ರಯತ್ನಿಸುತ್ತದೆ. ಆದರೆ ಈ ತಿಳುವಳಿಕೆಗಿಂತ ಹಾದಿ ತಪ್ಪಿದ ತಿಳುವಳಿಕೆ ಬೇರೊಂದಿಲ್ಲ. ಇದಕ್ಕೆ ಕಾರಣಗಳು ಇಂತಿವೆ.
ಎನ್.ಎಸ್.ಎಸ್. ನ ಸಮೀಕ್ಷೆಯ ಸಂಖ್ಯೆಗಳೊಂದಿಗಿನ ಗೊಂದಲಗಳು
ಮೊದಲೆನೆಯದಾಗಿ, ಆದಾಯ ಸರಾಸರಿಯಾಗಿದೆ. ಸರಾಸರಿಯು 10 ಎಕರೆಗಳಿಗೂ ಹೆಚ್ಚು ಭೂಮಿ ಉಳ್ಳುವ, ತಿಂಗಳಿಗೆ ಹೆಚ್ಚು ಕಡಿಮೆ 30,000 ರುಪಾಯಿಗಳನ್ನು ದುಡಿಯುವ ದೊಡ್ಡ ದೊಡ್ಡ ರೈತರನ್ನೂ ಒಳಗೊಳುತ್ತದೆ. ಈ ಆದಾಯ ಸರಕಾರದ ಕ್ಲಾಸ್ 4 ನೌಕರರ ಆದಾಯವನ್ನು ಮೀರಿದ್ದಲ್ಲ. ಒಂದು ಅಥವಾ ಎರಡೂವರೆ ಎಕರೆಗಳ ನಡುವಿನ ಭೂಮಿಯಲ್ಲಿ ಕೃಷಿ ನಡೆಸುವ ಮಧ್ಯಮ ಕೃಷಿಕನ ಆದಾಯ ತಿಂಗಳಿಗೆ 8,571 ರುಪಾಯಿಗಳಷ್ಟು ಕಡಿಮೆಯಿದೆ.
ಎರಡನೆಯದಾಗಿ, ಇದು ಕೃಷಿಯಿಂದ ಉಂಟಾಗುವ ಆದಾಯವಲ್ಲ, ಬದಲಾಗಿ ಕೃಷಿಕ ಕುಟುಂಬದ ಆದಾಯ. ಇದು ಕೂದಲು ಸೀಳುವ ವಾದವಲ್ಲ – ಇದನ್ನು ಅರ್ಥೈಸಿಕೊಂಡರೆ ಮಾತ್ರ ನಿಜವಾದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಕೃಷಿಕ ಕುಟುಂಬದ ಎಲ್ಲರೂ ಕೃಷಿಕರಲ್ಲ. ಜೊತೆಗೆ, ಒಬ್ಬ ಕೃಷಿಕನ ಸಂಪಾದನೆಯಲ್ಲಿ ಎಲ್ಲವೂ ಕೃಷಿಯಿಂದಲೇ ಬರುವುದಲ್ಲ. ಈ ಸಮೀಕ್ಷೆಯ ಕೃಷಿಕ ಕುಟುಂಬದ ವ್ಯಾಖ್ಯಾನ ಬಹಳ ವಿಸ್ತಾರವಾಗಿದೆ: ಕೃಷಿ ಮತ್ತು ಪಶು ಸಾಕಾಣಿಕೆಯಿಂದ ಯಾವುದೇ ರೀತಿಯ ಸಣ್ಣ ಆದಾಯವನ್ನು ಒಂದು ಗ್ರಾಮೀಣ ಕುಟುಂಬ ಪಡೆದರೆ, ಅದನ್ನು ಕೃಷಿಕ ಕುಟುಂಬ ಎಂದು ಪರಿಗಣಿಸಲಾಗಿದೆ. ಹಾಗಾಗಿ ತಂದೆ ಗದ್ದೆಯನ್ನು ನೋಡಿಕೊಳ್ಳುವ, ತಾಯಿ ಪಶುಗಳನ್ನು ಸಾಕುವ, ಮಗಳು ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮತ್ತು ಮಗ ಪೆಟ್ಟಿಗೆ ಅಂಗಡಿ ನಡೆಸುವ ಕುಟುಂಬವೂ ಈ ಸಮೀಕ್ಷೆಯ ಪ್ರಕಾರ ಕೃಷಿಕ ಕುಟುಂಬವೇ. ಈ ಎಲ್ಲವುದರ ಒಟ್ಟು ಮೊತ್ತವೇ ಆ ಆದಾಯ. ಇದರಲ್ಲಿ ಕೃಷಿಯಿಂದ ಬರುವ ಆದಾಯ ಬಹಳ ಕಡಿಮೆಯಾಗಿರಬಹುದು.
ಇದೊಂದು ಕಲ್ಪಿತವಾದ ಉದಾಹರಣೆಯಲ್ಲ. ಇತ್ತೀಚೆಗಿನ ಸಮೀಕ್ಷೆಯು ಕೃಷಿಯಿಂದ ಸೃಷ್ಟಿಯಾಗುವ ಆದಾಯ ಕುಟುಂಬದ ಮೂರನೇ ಒಂದು ಭಾಗಕ್ಕಿಂತ ಸ್ವಲ್ಪ ಹೆಚ್ಚಿದೆ ಎಂಬುದನ್ನು ತೋರಿಸುತ್ತದೆ. ಒಂದು ತಿಂಗಳಲ್ಲಿ ಈ ಸಾಧಾರಣ ಕುಟುಂಬ ವಿವಿಧ ರೀತಿಯ ಬೆಳೆಗಳನ್ನು ಬೆಳೆದು 3,798 ರುಪಾಯಿಗಳನ್ನು, ಪಶು ಸಾಕುವಿಕೆಯಿಂದ 1,582 ರುಪಾಯಿಗಳನ್ನು, ವ್ಯವಹಾರಗಳಿಂದ 641 ರುಪಾಯಿಗಳನ್ನು ಮತ್ತು ಪಗಾರಗಳಿಂದ 4,063 ರುಪಾಯಿಗಳನ್ನು ಸಂಪಾದಿಸುತ್ತದೆ. ಈ ಕುಟುಂಬಕ್ಕೆ ತನ್ನ ಶ್ರಮವನ್ನು ಗದ್ದೆಗಳಲ್ಲಿ ತೊಡಗಿಸುವುದಕ್ಕಿಂತ ಹೆಚ್ಚು ಆದಾಯ ಬೇರೆಡೆ ಶ್ರಮವನ್ನು ಮಾರುವುದರಲ್ಲಿ ದಕ್ಕುತ್ತದೆ. ಹಾಗಾಗಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಖ್ಯೆಯು ಬೆಳೆಗಳ ಆದಾಯವಾದ 3,798 ರುಪಾಯಿಗಳು. ಯಾಕೆ ಎಲ್ಲರೂ ನಗರಗಳಿಗೆ ವಲಸೆ ಹೋಗುತ್ತಾರೆ ಮತ್ತು ಸರಕಾರಿ ನೌಕರಿಯ ಹಿಂದೆ ಬೀಳುತ್ತಾರೆ ಎಂಬುದನ್ನು ಇದು ಸ್ಪಷ್ಟವಾಗಿ ವಿವರಿಸುತ್ತದೆ.
ಮೂರನೆಯದ್ದಾಗಿ, ಈ ಸಣ್ಣ ಸಂಖ್ಯೆಯನ್ನೂ ಸಹ ಉಬ್ಬಿಸಲಾಗಿದೆ. ಇದು ರೈತರ ಆದಾಯವನ್ನು ಬಹಳ ಉದಾತ್ತ ದೃಷ್ಟಿಕೋನದಿಂದ ಕಾಣುತ್ತದೆ. ಈ ಲೆಕ್ಕಾಚಾರವು ರೈತರಿಗೆ ಸಿಗುವ ಎಲ್ಲಾ ಹಣದಿಂದ ಅವರ ನೇರ ಖರ್ಚುಗಳನ್ನು ಕಳೆದಾಗ ಸಿಗುವ ಸಂಖ್ಯೆಯಾಗಿದೆ. ಈ ಅಂತರವನ್ನು ರೈತರ ಲಾಭ ಎಂದು ಪರಿಗಣಿಸಲಾಗಿದೆ. ಕುಟುಂಬದ ಸ್ವಂತ ಶ್ರಮವನ್ನು ಮತ್ತು ಇತರ ಹೂಡುವಳಿಗಳನ್ನು ನಿರ್ಲ್ಯಕ್ಷಿಸಿ ಸಮೀಕ್ಷೆ ಈ ಲಾಭವನ್ನು ಹಿಗ್ಗಿಸುತ್ತದೆ. ಹಣದಿಂದ ಖರೀದಿಸಲಾಗದ ಈ ಎಲ್ಲಾ ಖರ್ಚುಗಳನ್ನು ಒಳಗೊಂಡರೆ, ರೈತರ ಖರ್ಚು ಲಾಭಕ್ಕಿಂತ ಹೆಚ್ಚಾಗುತ್ತದೆ. ಲೆಕ್ಕಾಚಾರದ ಸರಿಯಾದ ವಿಧಾನವನ್ನು ಅನುಸರಿಸಿದರೆ, ಕೃಷಿಯ ಮಾಸಿಕ ಆದಾಯ 3,058 ರುಪಾಯಯಿಗಳಿಗೆ ಇಳಿಯುತ್ತದೆ ಮತ್ತು ಪಶು ಸಾಕಾಣಿಕೆಯ ಮಾಸಿಕ ಆದಾಯ 441 ರುಪಾಯಿಗಳಿಗೆ ಇಳಿಯುತ್ತದೆ. ಇದರ ಒಟ್ಟು ಆದಾಯ ತಿಂಗಳಿಗೆ ಕೇವಲ 8,337 ರುಪಾಯಿಗಳು.
ನಾಲ್ಕನೆಯದಾಗಿ, ಈ ಆರೋಗ್ಯಕರ ಬೆಳವಣಿಗೆಯ ಎಣಿಕೆ ತಪ್ಪಾದದ್ದು ಯಾಕೆಂದರೆ ಇದು ಪ್ರಾತಿನಿಧಿಕ ಬೆಲೆಗಳನ್ನು ಗಣನೆಗೆ ತೆಗೆದುಕೊಂಡು ಬೆಲೆಯೇರಿಕೆಯನ್ನು ಪರಿಗಣಿಸುವುದಿಲ್ಲ. 2013 ರಿಂದ 2019 ರ ವರೆಗೆ, ಅಂದರೆ ಕಳೆದ ಸಮೀಕ್ಷೆಯ ಹಾಗು ಇತ್ತೀಚೆಗಿನ ಸಮೀಕ್ಷೆಯ ನಡುವಿನ ಸಮಯದಲ್ಲಿ ರೈತರ ಪ್ರಾತಿನಿಧಿಕ ಆದಾಯ 59 ಪ್ರತೀಶತದಷ್ಟು ಹೆಚ್ಚಾಗಿದೆ. ಆದರೆ, ಬೆಲೆಯೇರಿಕೆಯನ್ನು ಪರಿಗಣಿಸಿದಾಗ (2012 ಮೂಲ ವರ್ಷ, 2019ರ ಗ್ರಾಮೀಣ ಭಾರತದ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ), ಈ ಹೆಚ್ಚುಗಾರಿಕೆ ಕೇವಲ 22 ಪ್ರತೀಶತಕ್ಕೆ ಇಳಿಯುತ್ತದೆ. ಈಗಾಗಲೇ ಗಮನಿಸಿದಂತೆಯೇ ಈ ಆದಾಯ ಕೃಷಿಯೇತರ ಚಟುವಟಿಕೆಗಳಿಂದಲೂ ಬಂದಿರುವಂತದ್ದು. ಕೇವಲ ಕೃಷಿಯಾಧಾರಿತ ಆದಾಯವನ್ನು ಗಮನಿಸಿದರೆ, ರೈತರ ಆದಾಯ ಈ ಆರು ವರ್ಷಗಳಲ್ಲಿ ಇನ್ನಷ್ಟು ಕುಸಿದಿದೆ. 2013ರಲ್ಲಿ, ಒಬ್ಬ ರೈತ ಕೇವಲ ಕೃಷಿಯಿಂದ 3,081 ರುಪಾಯಿಗಳನ್ನು ಸಂಪಾದಿಸುತ್ತಿದ್ದ. 2012ರ ಮೂಲ ವರ್ಷದ ಬೆಲೆ, 2770 ರುಪಾಯಿಗಳಿಗೆ ಅದು ಸಮಾನವಾಗಿತ್ತು. ಅದೇ ಮೂಲವರ್ಷವನ್ನು ನಾವು ಉಳಿಸಿಕೊಂಡರೆ, ಇತ್ತೀಚೆಗಿನ ರೈತರ ಕೃಷಿಯಾಧಾರಿತ ಮಾಸಿಕ ಆದಾಯ (3,798 ರುಪಾಯಿಗಳು) 2,645 ರುಪಾಯಿಗಳಿಗೆ ಸಮವಾಗುತ್ತದೆ. ಇದು ಆರು ವರ್ಷಗಳಲ್ಲಿ 5 ಪ್ರತೀಶತ ಕುಸಿತವನ್ನು ತೋರಿಸುತ್ತದೆ.
ಹಾಗಾಗಿ ಸಮೀಕ್ಷೆಯ ನಿಜವಾದ ಮುಖ್ಯಾಂಶ ಹೀಗಿರಬೇಕಿತ್ತು: “ರೈತರ ಆದಾಯ ಐತಿಹಾಸಿಕವಾಗಿ ದುಪ್ಪಟ್ಟಾಗಿರುವುದು ಐತಿಹಾಸಿಕ ಹಿನ್ನಡೆಗೆ ಕಾರಣವಾಗಿದೆ.”
ರೈತರ ಆದಾಯದ ದುಪ್ಪಟ್ಟೀಕರಣದ ಅಂಕಪಟ್ಟಿ
ಫೆಬ್ರವರಿ 2016ರಲ್ಲಿ ಬಹಳಷ್ಟು ಸದ್ದಿನೊಂದಿಗೆ ಘೋಷಿಸಲಾದ ರೈತರ ಆದಾಯದ ದುಪ್ಪಟ್ಟೀಕರಣದ ಪ್ರಖ್ಯಾತ ಆರು ವರ್ಷಗಳ ಯೋಜನೆಯ ಮೊದಲ ಅಂಕಪಟ್ಟಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ಸಮೀಕ್ಷೆಯಾಗಿದೆ. ಈ ಸಮೀಕ್ಷೆಯ ವರದಿಯ ಆರು ವರ್ಷಾವಧಿ (2013-2019) ಮತ್ತು ಯೋಜನೆಯ ಆರು ವರ್ಷಾವಧಿ (2016-22) ಬೇರೆ ಬೇರೆಯಿದ್ದರೂ, 2019ರ ನಂತರದ ವರ್ಷಗಳು ಸಾಂಕ್ರಾಮಿಕಕ್ಕೆ ಬಲಿಯಾದ ಕಾರಣ, ಯೋಜನೆಯ ಪರಿಣಾಮ ಹೆಚ್ಚೇನು ಬದಲಾಗಲಾರದು ಎಂದು ಭಾವಿಸಬಹುದು. ಬೆಲೆಯೇರಿಕೆಯನ್ನು ಒಳಗೊಂಡ ರೈತರ ನೈಜ ಆದಾಯವು 22 ಪ್ರತೀಶತಕ್ಕಿಂತ ಹೆಚ್ಚಿರಲಾರದು ಎಂದು ಈ ಸಮೀಕ್ಷೆ ನಿದರ್ಶಿಸಿದೆ. ಈ ಮುಂಚೆಯೇ ವಾದಿಸಿದಂತೆ, ಇದು 100 ಪ್ರತೀಶತ ಏರಿಕೆಯ ಬೊಗಳೆಗಿಂತ ಬಹಳಷ್ಟು ದೂರವಾಗಿರುವುದರ ಜೊತೆಗೆ ಇದು ಕಳೆದ ಹತ್ತು ವರ್ಷಗಳ ಸಾಧಾರಣ ಕೃಷಿ ಬೆಳವಣಿಗೆಯ ಮಟ್ಟಕ್ಕೂ ಕಡಿಮೆಯಿದೆ. ಇದು ನೈಜ ಐತಿಹಾಸಿಕ ಸಾಧನೆಯೇ ಬಿಡಿ!
ಇದು ಯೋಜನೆಯ ಮೊದಲ ಮೂರು ವರ್ಷಗಳನ್ನು ವ್ಯಾಪಿಸಿರುವುದರಿಂದ ಈ ಸಮೀಕ್ಷೆಯನ್ನು ಕೇವಲ ಮಧ್ಯಾವಧಿ ಅಂಕಪಟ್ಟಿಯೆಂದು ನೋಡಿದರೂ, ನರೇಂದ್ರ ಮೋದಿಯವರ ಯೋಜನೆಯ ಸಮಿತಿಯು ಅಂದಾಜಿಸಿದಂತೆ ನೈಜ ಆದಾಯದ 35 ಪ್ರತೀಶತ ಏರಿಕೆಗೆ ವಾಸ್ತವ ಯಾವುದೇ ರೀತಿಯಲ್ಲಿ ಹತ್ತಿರವಿಲ್ಲ. ಕೃಷಿಕ ಕುಟುಂಬಗಳಿಗೆ ಕೃಷಿಯಾಧಾರಿತ ಆದಾಯ ಕಡಿಮೆಯಾಗುತ್ತಲೇ ಇದೆ, ಯೋಜನೆಯ ಸಮಿತಿ ಅಂದಾಜಿಸಿದಂತೆ ಹೆಚ್ಚಾಗುತ್ತಿಲ್ಲ. ಹಾಗಾಗಿ ಈ ಮಧ್ಯಾವಧಿ ಅಂಕಿಪಟ್ಟಿಯಲ್ಲಿ ಎಲ್ಲೆಡೆಯಲ್ಲೂ ‘ಫೆಯ್ಲ್’ ಎಂದು ದಪ್ಪಾಕ್ಷರದಲ್ಲಿ ಬರೆಯಲಾಗಿದೆ.
ಈ ಸಮೀಕ್ಷೆಯನ್ನು ಮೋದಿ ಸರಕಾರದ ಸುಳ್ಳು ಭರವಸೆಗಳನ್ನು ಮತ್ತು ಬಡಾಯಿಗಳನ್ನು ನಾಶ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವ ಹಾಗಿಲ್ಲ. ಈ ಸಮೀಕ್ಷೆಯ ಆಳದ ಸತ್ಯಗಳು ಆಧುನಿಕ ಕೃಷಿಯು ಎದುರಿಸುತ್ತಿರುವ ರಚನಾತ್ಮಕ ಬಿಕ್ಕಟ್ಟನ್ನು ನಿರೂಪಿಸುತ್ತದೆ: ಸಣ್ಣ ಪುಟ್ಟ ಕೃಷಿ ಕ್ಷೇತ್ರಗಳು, ಭೂರಹಿತ ಕಾರ್ಮಿಕರ ಬೃಹತ್ ಸಂಖ್ಯೆ, ಕೃಷಿ ವಿಮೆಗಳ ವೈಫಲ್ಯ, ಕನಿಷ್ಟ ಬೆಂಬಲ ಬೆಲೆಯ ಇಲ್ಲದಿರುವಿಕೆ ಹಾಗು ‘ಸರಕಾರಿ’ ಕೃಷಿ ಪ್ರೋತ್ಸಾಹ ಮತ್ತು ರೈತರ ನಡುವಿನ ಅಂತರ.
ವಿಪರೀತ ಆಚರಣೆಗೆ ಒಳಗಾದ ‘ಹಸಿರು ಕ್ರಾಂತಿ’ಯ ಕೃಷಿವಿಧಾನ ಭಾರತದಲ್ಲಿ ಅಂತ್ಯವನ್ನು ಕಂಡಿದೆ. ಭಾರತದ ಕೃಷಿ ಕ್ಷೇತ್ರಕ್ಕೆ ಸಬ್ಸೀಡಿ ಮತ್ತು ಸಾರ್ವಜನಿಕ ವಲಯದ ಬೃಹತ್ ಹೂಡಿಕೆಯ ಅವಶ್ಯಕತೆಯಿದೆ. ಮತ್ತು ಇಷ್ಟೇ ಸಾಲುವುದಿಲ್ಲ. ನಮ್ಮ ‘ನಸಲ್ ಮತ್ತು ಫಸಲ್’ ಅನ್ನು ಉಳಿಸಿಕೊಳ್ಳುವುದರ ಬಗ್ಗೆ ನಾವು ಗಂಭೀರವಾಗಿದ್ದರೆ, ನಮ್ಮ ಇಂದಿನ ಕೃಷಿ ವಿಧಾನದ ಬಗ್ಗೆ ಪುನರಾಲೋಚನೆ ನಡೆಸಬೇಕಿದೆ: ರೈತರು ಕೃಷಿ ಕಾರ್ಮಿಕರಾಗಿ ಬದಲಾಗುತ್ತಿರುವ ಈ ಅಲೆಯೊಂದಿಗೆ ಹೇಗೆ ಈಜಬೇಕಿದೆ? ನಮ್ಮ ಸಣ್ಣ ಪುಟ್ಟ ಕೃಷಿ ಕ್ಷೇತ್ರಗಳನ್ನು ಹೇಗೆ ಲಾಭದಾಯಕವಾಗಿಸುವುದು? ಅನಾವಶ್ಯಕವವಾದ ಕೃಷಿ ಕಾಯ್ದೆಗಳನ್ನು ರದ್ದು ಗೊಳಿಸಿದ ಬಳಿಕ ಮತ್ತು ಉತ್ತಮ ಬೆಲೆಗಳನ್ನು ಪಡೆದುಕೊಂಡ ಬಳಿಕ ರೈತರ ಚಳುವಳಿ ಈ ದಿಕ್ಕಿನಲ್ಲಿ ಸಾಗಬೇಕಿದೆ. ರೈತರ ಈ ಸ್ಥಿತಿಗತಿಯ ಸಮೀಕ್ಷೆಯು ರೈತರ ಚಳುವಳಿಯು ಸಮಯಕ್ಕೂ ಮುನ್ನವೇ ಆಗಮಿಸಿಲ್ಲ ಎಂಬುದನ್ನು ನೆನಪಿಸುತ್ತದೆ.
ಯೋಗೇಂದ್ರ ಯಾದವ್ ಅವರು ಜೈ ಕಿಸಾನ್ ಆಂದೋಲನದ ಸಹ ಸಂಸ್ಥಾಪಕರಾಗಿದ್ದು ಸ್ವರಾಜ್ ಇಂಡಿಯಾದ ಸದಸ್ಯರಾಗಿದ್ದಾರೆ.
ಮೂಲ: ಯೋಗೇಂದ್ರ ಯಾದವ್
ಅನುವಾದ: ಸೂರ್ಯ ಸಾಥಿ