ಕಳೆದ ಆಗಸ್ಟ್ 6 ರಂದು ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾಧೀಶರ ಭಾವಚಿತ್ರವನ್ನು ‘ಡಿಸ್ಪ್ಲೇ ಪಿಕ್ಚರ್’ ಹೊಂದಿರುವ ಫೋನ್ ಸಂಖ್ಯೆಯಿಂದ ಕರ್ನಾಟಕ ಹೈಕೋರ್ಟ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುರಳೀಧರ್ ಅವರಿಗೆ ಕೆಲವು ಉಡುಗೊರೆ ಚೀಟಿಗಳನ್ನು (gift voucher) ಖರೀದಿಸುವಂತೆ ವಾಟ್ಸಾಪ್ ಸಂದೇಶಗಳು ಬಂದಿದ್ದವು. ಪ್ರತಿಯೊಂದಕ್ಕೆ 10,000ರೂಗಳಂತೆ ಮುರಳೀಧರ್ ಅವರು ಒಂಬತ್ತು ಗಿಫ್ಟ್ ವೋಚರ್ಗಳಿಗೆ 90,000 ರೂ.ಗಳನ್ನು ಆನ್ಲೈನ್ನಲ್ಲಿ ಪಾವತಿಸಿದ್ದಾರೆ. ಆದರೆ ಅವರಿಗೆ ಯಾವುದೇ ಉಡುಗೊರೆ ಚೀಟಿಗಳು ಲಭಿಸಲಿಲ್ಲ ಎಂದಾದಾಗ ವಾಟ್ಸಾಪ್ ಸಂದೇಶಗಳನ್ನು ಸೈಬರ್ ಅಪರಾಧಿಗಳು ಕಳುಹಿಸಿದ್ದಾರೆಂದು ಅವರು ಅರಿತುಕೊಂಡರು. ಮುರಳೀಧರನ್ ಅವರನ್ನು ಮೋಸಗೊಳಿಸಲೆಂದೇ ಅವರು ಹಂಗಾಮಿ ಮುಖ್ಯ ನ್ಯಾಯಾಧೀಶರ ಚಿತ್ರವನ್ನು ಬಳಸಿಕೊಂಡಿದ್ದರು.
ಈ ವರ್ಷದ ಆರಂಭದಲ್ಲಿ ಖ್ಯಾತ ಕವಿ ಮತ್ತು ನಾಟಕಕಾರರಾದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ಸ್ನೇಹಿತರೂ ಕಂಬಾರರ ಹೆಸರಲ್ಲಿ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ದುಡ್ಡಿನ ಅಗತ್ಯವಿದೆ ಎಂಬಂತೆ ವಾಟ್ಸಾಪ್ ಸಂದೇಶ ಸ್ವೀಕರಿಸಿದ್ದರು.
ಅವರಲ್ಲಿ ಕೆಲವರು ಕಂಬಾರರೊಂದಿಗೆ ಸಂಪರ್ಕ ಸಾಧಿಸಿದರು ಮತ್ತು ಶೀಘ್ರದಲ್ಲೇ ಅಪರಾಧಿಗಳು ಅವರ ಫೋಟೋವನ್ನು ಅಪರಿಚಿತ ಫೋನ್ ಸಂಖ್ಯೆಗೆ ‘ಡಿಸ್ಪ್ಲೇ ಪಿಕ್ಚರ್’ ಆಗಿ ಲಗತ್ತಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಜನರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಸ್ಪಷ್ಟವಾಯಿತು.
ಇವೆರಡೇ ಘಟನೆಗಳು ಸಾಕು ಬೆಂಗಳೂರು ಭಾರತದ ‘ಐಟಿ ರಾಜಧಾನಿ’ಯಾಗಿ ಹೊರಹೊಮ್ಮಿದೆ ಎಂಬುವುದನ್ನು ದೃಢೀಕರಿಸಲು. ಆದರೆ ಇಲ್ಲಿ ಐಟಿ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ‘ಐಡೆಂಟಿಟಿ ಥೆಫ್ಟ್’ ಕೂಡ ಆಗಿರುವುದು ದುರಂತ. ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಾಗಿರುವ ಶಂಕರ್ ಎಂ ಬಿದರಿ ಮತ್ತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಕೂಡ ಇದೇ ರೀತಿಯ ಕಳ್ಳತನಕ್ಕೆ ಬಲಿಯಾಗಿರುವವರಲ್ಲಿ ಪ್ರಮುಖರು.
ಕಳೆದ ವರ್ಷ ದೇಶದ 19 ಪ್ರಮುಖ ನಗರಗಳಲ್ಲಿ 1685 ಐಡೆಂಟಿಟಿ ಥೆಫ್ಟ್ ಪ್ರಕರಣಗಳು ವರದಿಯಾಗಿದ್ದರೆ, ಅವುಗಳಲ್ಲಿ 1212 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ವರದಿ ಬಹಿರಂಗಪಡಿಸಿದೆ. ಕಾನ್ಪುರ 119 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು 109 ಪ್ರಕರಣಗಳೊಂದಿಗೆ ಸೂರತ್ ಮೂರನೇ ಸ್ಥಾನದಲ್ಲಿದೆ.
ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಗುರುತಿನ ಕಳ್ಳತನ ಪ್ರಕರಣಗಳು ನೋಂದಣಿಯಾಗುತ್ತಿರುವುದನ್ನು ಸಕಾರಾತ್ಮಕವಾಗಿ ನೋಡಬೇಕು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಏಕೆಂದರೆ ಜನರು ಅಂತಹ ಅಪರಾಧಗಳ ವರದಿ ಮಾಡುತ್ತಾರೆ ಎನ್ನುತ್ತಾರೆ ಅವರು. ಆದರೆ ಇಲ್ಲಿ ಹಲವು ಪ್ರಕರಣಗಳು ದಾಖಲಾಗುತ್ತಿದ್ದರೂ ಕೆಲವನ್ನು ಮಾತ್ರ ಭೇದಿಸಲಾಗುತ್ತಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಬಂಧಿಸಿದ ಪ್ರಕರಣಗಳಲ್ಲೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ.
“ಮೂಲತಃ, ಸೈಬರ್ ಅಪರಾಧಗಳು ಇಲ್ಲಿ ಹೆಚ್ಚು, ಏಕೆಂದರೆ ನಾವು ಎಲ್ಲಾ ರಾಜ್ಯಗಳ, ವಿಭಿನ್ನ ರೀತಿಯ ಜನ ಇಲ್ಲಿದ್ದಾರೆ. ಮತ್ತು ಇಲ್ಲಿನ ಜನರು ಆರ್ಥಿಕವಾಗಿಯೂ ತಕ್ಕಮಟ್ಟಿಗೆ ಆರಾಮದಾಯಕವಾಗಿದ್ದಾರೆ”ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಂ ಕೆ ನಾಗರಾಜ ಹೇಳುತ್ತಾರೆ. ನಾಗರಾಜ್ ಅವರೂ ಸಹ ಗುರುತಿನ ಕಳ್ಳತನಕ್ಕೆ ಬಲಿಯಾದವರೇ. “ಅಪರಾಧಿಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಸ್ನೇಹಿತರನ್ನು ಹೊಂದಿರುವ ಜನರನ್ನು ಗುರಿಯಾಗಿಸುತ್ತಾರೆ. ಸೈಬರ್ ಅಪರಾಧಗಳನ್ನು ತನಿಖೆ ಮಾಡಲು ಪೊಲೀಸರಿಗೆ ಸರಿಯಾದ ತರಬೇತಿಯ ಅಗತ್ಯವಿದೆ” ಎಂದೂ ಅವರು ಹೇಳುತ್ತಾರೆ.
112 ಅನ್ನು ಡಯಲ್ ಮಾಡುವ ಮೂಲಕ ಮತ್ತು 2020 ರ ಡಿಸೆಂಬರ್ನಲ್ಲಿ ಪರಿಚಯಿಸಲಾದ ‘ಸೈಬರ್ ಕ್ರೈಮ್ ವರದಿ’ ಸೌಲಭ್ಯದ ಪ್ರಯೋಜನವನ್ನು ಪಡೆಯುವ ಮೂಲಕ ಸಂತ್ರಸ್ತರು ಈಗ ಅಂತಹ ಅಪರಾಧಗಳನ್ನು ವರದಿ ಮಾಡಲು ಸುಲಭವಾಗುತ್ತಿದೆ ಎನ್ನುವ ಪೊಲೀಸ್ ಕಮಿಷನರ್ ಸಿ ಎಚ್ ಪ್ರತಾಪ್ ರೆಡ್ಡಿ “ನಮ್ಮ ಮುಖ್ಯ ಗಮನವು ವರದಿಗಳ ಸಂಖ್ಯೆಯನ್ನು ನೋಂದಾಯಿತ ಅಪರಾಧಗಳಾಗಿ ಪರಿವರ್ತಿಸುವುದಾಗಿದೆ. ಮತ್ತು ನಾವು ಅದನ್ನು ಮಾಡುತ್ತಿದ್ದೇವೆ” ಎಂದು ಹೇಳುತ್ತಾರೆ.
ಅಂತಹ ಅಪರಾಧಗಳನ್ನು ತಡೆಗಟ್ಟಲು ಸಿಮ್ ಕಾರ್ಡ್ಗಳನ್ನು ನೀಡುವಲ್ಲಿ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ನಿಯಂತ್ರಣವನ್ನು ತರುವುದು ಉತ್ತಮ ಮಾರ್ಗವಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ರಾಮನ್ ಗುಪ್ತಾ ಹೇಳುತ್ತಾರೆ.
ಬೆಂಗಳೂರು ನಗರ ಪೊಲೀಸರು ಗುರುತಿನ ‘Identity theft’ ಬಲಿಯಾಗಿರುವುದನ್ನು ಅರಿತುಕೊಂಡ ತಕ್ಷಣ ವರದಿ ಮಾಡಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದಾಗಿ ಪೊಲೀಸರು ಅಪರಾಧಿಗಳಿಗೆ ಸಂತ್ರಸ್ತರ ಗುರುತನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವ ಅವಕಾಶವನ್ನು ತಪ್ಪಿಸಬಹುದು.
ನಗರದ ಈಶಾನ್ಯ ಸಿಇಎನ್ (ಸೈಬರ್-ಎಕನಾಮಿಕ್-ನಾರ್ಕೋಟಿಕ್ಸ್) ಅಪರಾಧ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಸಂತೋಷ್ ರಾಮ್ ಆರ್, ನಾಗರಿಕರು ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಲಾಕ್ ಮಾಡಿದರೆ ಈ ಕಳ್ಳತನವನ್ನು ತಡೆಯಬಹುದು. ಲಾಗ್ ಇನ್ ಮಾಡಲು ಎರಡು ಹಂತದ ಪರಿಶೀಲನೆಯನ್ನು ಬಳಸಿ, ವಾಟ್ಸಾಪ್ ‘ಡಿಸ್ಪ್ಲೇ ಪಿಕ್ಚರ್’ನ್ನು ತಮ್ಮ ಸಂಪರ್ಕದಲ್ಲಿರುವವರಿಗೆ ಮಾತ್ರ ಗೋಚರಿಸುವುದರ ಮೂಲಕವೂ ತಡೆಯಬಹುದು ಎನ್ನುತ್ತಾರೆ.
ಸುಪ್ರೀಂ ಕೋರ್ಟ್ ವಕೀಲ ಮತ್ತು ಅಪರಾಧ ತಜ್ಞ ಟಿ ಪಿ ವಿಪಿನ್, ದೇಶದಲ್ಲಿ ಹೆಚ್ಚಿನ ಗುರುತಿನ ಕಳ್ಳತನ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗುತ್ತಿರುವುದು ಆಶ್ಚರ್ಯವೇನಿಲ್ಲ. ನಗರದಲ್ಲಿ ಜೀವನವು ತಂತ್ರಜ್ಞಾನದ ಸುತ್ತ ಸುತ್ತುತ್ತದೆ ಮತ್ತು ವಂಚಕರು ಟೆಕ್ ಪರಿಕರಗಳನ್ನು ಬಳಸಿಕೊಂಡು ಅಪರಾಧಗಳನ್ನು ಮಾಡುವುದು ಸುಲಭ ಎನ್ನುತ್ತಾರೆ.
ರಾಜ್ಯದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಅಕ್ಟೋಬರ್ 2020 ರಲ್ಲಿ ರಾಜಸ್ಥಾನದ ಭರತ್ಪುರದಿಂದ identity theftನಲ್ಲಿ ಭಾಗಿಯಾಗಿದ್ದಕ್ಕಾಗಿ ನಾಲ್ವರನ್ನು ಬಂಧಿಸಿದ್ದರು. ಅನ್ಸಾರ್, ಸದ್ದಾಂ, ಬಲ್ವಿಂದರ್ ಸಿಂಗ್ ಮತ್ತು ಸೈನಿ ಬಂಧಿತರಾಗಿದ್ದು ಈ ಗ್ಯಾಂಗ್ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಮುಖರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಆರ್ಥಿಕ ನೆರವು ಕೋರಿತ್ತು.
ಸಿಂಗ್ ಸಿಮ್ ಕಾರ್ಡ್ಗಳ ವಿತರಕರಾಗಿದ್ದರು. ಅವರು ಮತ್ತು ಅನ್ಸಾರ್ ಸಿಮ್ ಕಾರ್ಡ್ಗಳನ್ನು ಸಕ್ರಿಯಗೊಳಿಸಲು ಜನರ ಆಧಾರ್ ಕಾರ್ಡ್ಗಳನ್ನು ನಕಲಿಸುತ್ತಿದ್ದರು. ಸೈನಿ ಅವರು ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸುತ್ತಿದ್ದರು ಮತ್ತು ಸದ್ದಾಂ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವನೆಯಾಗುತ್ತಿತ್ತು. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ನಕಲಿ ಪ್ರೊಫೈಲ್ಗಳನ್ನು ಬಳಸಿ, ಅವರು ಸಂಭಾವ್ಯ ಸಂತ್ರಸ್ತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಮನವಿ ಸ್ವೀಕರಿಸಿದ ನಂತರ, ಅವರು ಆರ್ಥಿಕ ಸಹಾಯವನ್ನು ಕೇಳುತ್ತಿದ್ದರು.