ನವೆಂಬರ್ 19 ರಂದು ಪಾರ್ಶ್ವ ಚಂದ್ರಗ್ರಹಣವು ಗೋಚರಿಸಲಿದ್ದು 580 ವರ್ಷಗಳಲ್ಲಿ ಇದು ಅತ್ಯಂತ ಸುದೀರ್ಘ ಚಂದ್ರಗ್ರಹಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಫೆಬ್ರವರಿ 18, 1440 ರಂದು ಕೊನೆಯ ಬಾರಿಗೆ ಅಂತಹ ದೀರ್ಘ ಪಾರ್ಶ್ವ ಚಂದ್ರಗ್ರಹಣ ಸಂಭವಿಸಿತ್ತು ಮತ್ತು ಮುಂದಿನ ಬಾರಿ ಇದೇ ರೀತಿಯ ಗ್ರಹಣವು ಫೆಬ್ರವರಿ 8, 2669 ರಂದು ಸಂಭವಿಸಲಿದೆ ಎಂದು ಖಗೋಳ ವಿಜ್ಞಾನಿಗಳು ವಿವರಿಸಿದ್ದಾರೆ.
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಸಾಮಾನ್ಯವಾಗಿ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿದ್ದಾಗ ಗ್ರಹಣ ಸಭವಿಸುತ್ತದೆ. ಆದರೆ ಪಾರ್ಶ್ವ ಚಂದ್ರಗ್ರಹಣವು ಇವು ಪರಿಪೂರ್ಣ ಸರಳ ರೇಖೆಯಲ್ಲಿ ಇಲ್ಲದಿದ್ದಾಗ ಮಾತ್ರ ಸಂಭವಿಸುತ್ತದೆ. ಚಂದ್ರನ ಒಂದು ಸಣ್ಣ ಭಾಗವು ಭೂಮಿಯ ನೆರಳಿನಿಂದ ಮುಚ್ಚಲ್ಪಟ್ಟು ನಾವು ಕೆಂಪು ಚಂದ್ರನನ್ನೂ ನೋಡಬಹುದು.
ಭಾಗಶಃ ಚಂದ್ರಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಗೋಚರಿಸಲಿದೆ. ಭಾರತದಲ್ಲಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಒಂದು ಸಣ್ಣ ಭಾಗದಲ್ಲಿ ಭಾಗಶಃ ಗ್ರಹಣವು ಗೋಚರಿಸಲಿದೆ ಎಂದು ಎಂಪಿ ಬಿರ್ಲಾ ತಾರಾಲಯದ ಸಂಶೋಧನಾ ಮತ್ತು ಶೈಕ್ಷಣಿಕ ನಿರ್ದೇಶಕ ಡಬಿಪ್ರೋಸಾದ್ ದುವಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ದುವಾರಿ ಅವರು “ಪಾರ್ಶ್ವ ಗ್ರಹಣವು ಸುಮಾರು 12:48 IST ಗೆ ಪ್ರಾರಂಭವಾಗುತ್ತದೆ ಮತ್ತು 16:17 IST ಗೆ ಕೊನೆಗೊಳ್ಳುತ್ತದೆ. ಭಾಗಶಃ ಗ್ರಹಣದ ಅವಧಿಯು 3 ಗಂಟೆ 28 ನಿಮಿಷಗಳು ಮತ್ತು 24 ಸೆಕೆಂಡುಗಳವರೆಗೆ ಇರುತ್ತದೆ, ಇದು 21 ನೇ ಶತಮಾನದ ಸುದೀರ್ಘ ಗ್ರಹಣವಾಗಿದೆ ಮತ್ತು ಕಳೆದ 600 ವರ್ಷಗಳಲ್ಲಿ ಅತಿ ಉದ್ದವಾಗಿದೆ” ಎಂದಿದ್ದಾರೆ.

ಭಾಗಶಃ ಚಂದ್ರಗ್ರಹಣ ಮಾತ್ರವಲ್ಲದೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನವರು ಪೆನಂಬ್ರಲ್ ಗ್ರಹಣದ ಕೊನೆಯ ಭಾಗವನ್ನು ಅದೇ ದಿನ ನೋಡಬಹುದು. ಚಂದ್ರ, ಸೂರ್ಯ ಮತ್ತು ಭೂಮಿಯನ್ನು ಅಪೂರ್ಣವಾಗಿ ಜೋಡಿಸಿದಾಗ ಮತ್ತು ಚಂದ್ರನು ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಹೊರ ಭಾಗದ ಮೂಲಕ ಚಲಿಸಿದಾಗ ಪೆನಂಬ್ರಾಲ್ ಚಂದ್ರ ಗ್ರಹಣ ಸಂಭವಿಸುತ್ತದೆ ಎಂದು ಖಗೋಳ ವಿಜ್ಞಾನಿಗಳು ವಿವರಿಸಿದ್ದಾರೆ.
ಭಾಗಶಃ ಗ್ರಹಣಕ್ಕೆ ಮುಂಚಿನ ಮತ್ತು ನಂತರದ ಪೆನಂಬ್ರಾಲ್ ಗ್ರಹಣವು ಸುಮಾರು 11:32 IST ಗೆ ಪ್ರಾರಂಭವಾಗಿ ಮತ್ತು 17:33 IST ಕ್ಕೆ ಕೊನೆಗೊಳ್ಳಲಿದೆ. ಭಾಗಶಃ ಗ್ರಹಣದಲ್ಲಿ, ಭಾರತೀಯ ಕಾಲಮಾನದ ಪ್ರಕಾರ ಸುಮಾರು 14:34ಕ್ಕೆ ಚಂದ್ರನ 97% ಭೂಮಿಯ ನೆರಳಿನಿಂದ ಮುಚ್ಚಲ್ಪಡುತ್ತದೆ ಮತ್ತು ಚಂದ್ರನು ರಕ್ತ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಇದು ಸೂರ್ಯನ ಬೆಳಕಿನ ಕೆಂಪು ಭಾಗವು ಭೂಮಿಯ ಮೂಲಕ ಹಾದುಹೋಗಬೇಕಾಗಿದ್ದು ಆದರೆ ವಾತಾವರಣದ ಕಡಿಮೆ ವಿಚಲನದಿಂದಾಗಿ ನೇರವಾಗಿ ಚಂದ್ರನ ಮೇಲೆ ಬೀಳುವುದರಿಂದ ಸಂಭವಿಸಲಿದೆ. ಇದು ಚಂದ್ರನಿಗೆ ಅಪರೂಪದ ಕೆಂಪು ಛಾಯೆ ನೀಡಲಿದೆ.
ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೇ 16, 2022 ರಂದು ಸಂಭವಿಸಲಿದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ನವೆಂಬರ್ 8, 2022 ರಂದು ಭಾರತದಲ್ಲಿ ಮುಂದಿನ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
