ನಾ ದಿವಾಕರ
ಬಂಡವಾಳಶಾಹಿ ಆರ್ಥಿಕತೆಯಲ್ಲಿ ಕೊಡುಕೊಳ್ಳುವ ವ್ಯವಹಾರಗಳೇ ಭ್ರಷ್ಟಾಚಾರದ ಮೂಲ
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆಳುವ ಪಕ್ಷಗಳಿಗೂ, ಜನಸಾಮಾನ್ಯರಿಗಾಗಿ ಮೂಲ ಸೌಕರ್ಯ-ಸೇವೆಗಳನ್ನು ಒದಗಿಸುವ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೂ ಅವಿನಾಭಾವ ಸಂಬಂಧಗಳಿರುತ್ತವೆ. ಮಾರುಕಟ್ಟೆಯಲ್ಲಿ ತಮ್ಮ ಬಂಡವಾಳದ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಸರ್ಕಾರಗಳೊಡನೆ ನಿಕಟ-ಸೌಹಾರ್ದಯುತ ಸಂಬಂಧಗಳನ್ನು ಕಟ್ಟಿಕೊಳ್ಳುವ ಔದ್ಯಮಿಕ ಜಗತ್ತು, ತಾನು ಗಳಿಸುವ ಲಾಭದ ಒಂದಂಶವನ್ನು ಆಡಳಿತಗಾರರಿಗೆ, ಅಧಿಕಾರಶಾಹಿಗೆ, ತನ್ಮೂಲಕ ಅಧಿಕಾರಾರೂಢ ಪಕ್ಷಗಳಿಗೆ ಮರಳಿಸುವುದು ಮಾರುಕಟ್ಟೆಯ ಒಂದು ಅಲಿಖಿತ ನಿಯಮ. ಭಾರತ ಸಾಗುತ್ತಿರುವ ಆಪ್ತ ಬಂಡವಾಳಶಾಹಿಯ ಮಾರ್ಗದಲ್ಲಿ ಇದು ಮತ್ತಷ್ಟು ಚುರುಕಾಗಿ, ಕೆಲವೇ ಬೆರಳೆಣಿಕೆಯಷ್ಟು ಉದ್ಯಮಗಳನ್ನು ಬೆಳೆಸುವ ಪ್ರಕ್ರಿಯೆಯಾಗುತ್ತದೆ. ವಿಶಾಲಾರ್ಥದಲ್ಲಿ ಈ ಪ್ರಕ್ರಿಯೆಯನ್ನು ʼಭ್ರಷ್ಟಾಚಾರ-ಹಗರಣʼ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತದೆ. ಭಾರತದ ಪ್ರಸಕ್ತ ರಾಜಕಾರಣದಲ್ಲಿ ಭ್ರಷ್ಟಾಚಾರ ಎನ್ನುವುದು ಸಾರ್ವತ್ರಿಕವಾಗಿರುವುದರಿಂದ, ಹಗರಣಗಳನ್ನೂ ತುಲನಾತ್ಮಕವಾಗಿ ನೋಡುತ್ತಾ, ಯಾರು ಹೆಚ್ಚು ಅಥವಾ ಕಡಿಮೆ ಭ್ರಷ್ಟರು ಎಂದಷ್ಟೇ ನಿರ್ಧರಿಸಲು ಸಾಧ್ಯ.

ಸ್ವತಂತ್ರ ಭಾರತದ ಅತಿದೊಡ್ಡ ಭ್ರಷ್ಟಾಚಾರ ಹಗರಣವಾಗಿರುವ ಚುನಾವಣಾ ಬಾಂಡ್ ಇಂತಹ ಒಂದು ನಿರ್ಣಾಯಕ ಘಟ್ಟದ ವಿದ್ಯಮಾನವಾಗಿದೆ. ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೇನಲ್ಲ ಎಂದು ಸಾರ್ವತ್ರಿಕವಾಗಿ ಎಲ್ಲ ಪಕ್ಷಗಳೂ (ಎಡಪಕ್ಷಗಳನ್ನು ಹೊರತುಪಡಿಸಿ) ಒಪ್ಪಿರುವಾಗ, ಯಾವ ಪಕ್ಷ ಯಾವ ಉದ್ಯಮಿಯಿಂದ ಎಷ್ಟು ಹೆಚ್ಚು ಅಥವಾ ಕಡಿಮೆ ಪಡೆದಿದೆ ಎನ್ನುವುದೊಂದೇ ಮಾನದಂಡವಾಗುತ್ತದೆ . ಮತ್ತೊಂದು ಬದಿಯಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಯಾವ ರೀತಿಯಲ್ಲಿ ತಾವು ಪಡೆದ ದಕ್ಷಿಣೆಗೆ ಪ್ರತಿಯಾಗಿ ಉದ್ಯಮಿಗಳಿಗೆ ಮೂಲ ಸೌಕರ್ಯಗಳ ಗುತ್ತಿಗೆ ನೀಡಿವೆ ಎನ್ನುವುದು ಚರ್ಚೆಗೊಳಗಾಗುತ್ತದೆ. “ ಭ್ರಷ್ಟ–ಅತಿಭ್ರಷ್ಟ–ಕಡುಭ್ರಷ್ಟ-ಭ್ರಷ್ಟಾತಿಭ್ರಷ್ಟ ” ಈ ಶ್ರೇಣೀಕರಣದ ಸೂತ್ರ ಬಳಕೆಯಾಗುವುದು ಇಲ್ಲಿಯೇ.
2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಂಜೂರು ಮಾಡಿದ್ದ 122 ಟೆಲಿಕಾಂ ಪರವಾನಗಿಗಳನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ , ಟೆಲಿಕಾಂ ಸ್ಪೆಕ್ಟ್ರಮ್ಗಳನ್ನು ಸರ್ಕಾರಗಳು ತಮ್ಮ ವಿವೇಚನೆಯ ಅನುಗುಣವಾಗಿ ಮಂಜೂರು ಮಾಡುವುದಕ್ಕಿಂತಲೂ ಹರಾಜು ಪ್ರಕ್ರಿಯೆಯ ಮೂಲಕ ಹಂಚುವುದು ಸೂಕ್ತ ಎಂದು ಆದೇಶಿಸಿತ್ತು. ವಿವೇಚನಾತ್ಮಕ ಮಂಜೂರು ಮಾಡುವುದರಿಂದ ಸರ್ಕಾರಗಳು ತಮ್ಮ ನಿಕಟವರ್ತಿ ಉದ್ಯಮಿಗಳ ಪರವಾಗಿ ಪಕ್ಷಪಾತ ಮಾಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಹರಾಜು ಪ್ರಕ್ರಿಯೆಯಲ್ಲಿ ಕೊಂಚ ಮಟ್ಟಿಗಾದರೂ ಪಾರದರ್ಶಕತೆ ಇರುತ್ತದೆ ಎಂಬ ಕಾರಣಕ್ಕಾಗಿಯೆ ಸುಪ್ರೀಂಕೋರ್ಟ್ ಈ ಅದೇಶವನ್ನು ನೀಡಿತ್ತು. 2ಜಿ ಸ್ಪೆಕ್ಟ್ರಂ ಹಗರಣ ಎಂದೇ ಕುಖ್ಯಾತವಾಗಿದ್ದ ಈ ಪ್ರಕರಣವು ಯುಪಿಎ ಸರ್ಕಾರದ ಪತನಕ್ಕೂ ಕಾರಣವಾಗಿತ್ತು. ಈ ಹಗರಣದಲ್ಲಿ 1 ಲಕ್ಷ 76 ಸಾವಿರ ಕೋಟಿ ರೂಗಳ ನಷ್ಟ ಆಗಿದೆ ಎಂದು ಅಂದಾಜು ಮಾಡಲಾಗಿತ್ತು. ಈ ಹಗರಣವೇ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲು ಚಿಮ್ಮುಹಲಗೆಯಾಗಿ ಪರಿಣಮಿಸಿತ್ತು. 2017ರಲ್ಲಿ ಈ ಹಗರಣಕ್ಕೆ ಸಮಾಪ್ತಿ ಹಾಡಲಾಗಿ, ಎಲ್ಲ ಆರೋಪಿಗಳನ್ನೂ ಖುಲಾಸೆ ಮಾಡಿದ್ದರೂ ಇಂದಿಗೂ ಸಹ 2ಜಿ ಹಗರಣ ಸದ್ದುಮಾಡುತ್ತಲೇ ಇದೆ.
2023ರ ಟೆಲಿಕಾಂ ಮಸೂದೆ
ಈ ನಡುವೆ ನರೇಂದ್ರ ಮೋದಿ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗದೆ, ಟೆಲಿಕಾಂ ಕಾಯ್ದೆಯನ್ನೇ ತಿದ್ದುಪಡಿ ಮಾಡುವ ಮೂಲಕ ಮತ್ತೊಮ್ಮೆ ವಿವೇಚನಾತ್ಮಕ ಹಂಚಿಕೆಯ ಮಾರ್ಗ ಹಿಡಿದಿದೆ. ಭಾರತದಲ್ಲಿ ಪ್ರಸ್ತುತ ದೂರ ಸಂಪರ್ಕ ಇತರ ಸಂವಹನ ಸೇವೆಗಳನ್ನು ಒದಗಿಸಲು ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ಗಳನ್ನು ಅವಲಂಬಿಸಲಾಗುತ್ತಿದೆ. ದೇಶೀಯ ರಿಲಯನ್ಸ್, ಭಾರ್ತಿ ಏರ್ಟೆಲ್, ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ಮೊದಲಾದ ಕಾರ್ಪೋರೇಟ್ ಉದ್ದಿಮೆಗಳು ಈ ಮಾರುಕಟ್ಟೆಯ ಪ್ರಮುಖ ಪಾತ್ರಧಾರಿಗಳಾಗಿವೆ.

ಉಪಗ್ರಹದ ಮೂಲಕ ಒದಗಿಸಲಾಗುವ ಸ್ಪೆಕ್ಟ್ರಮ್ಗಳನ್ನು ಹೇಗೆ ಹಂಚಿಕೆ ಮಾಡಬೇಕು ಎಂದು ನಿರ್ಧರಿಸಲು ನರೇಂದ್ರ ಮೋದಿ ಸರ್ಕಾರ 2023ರಲ್ಲಿ ಸಾರ್ವಜನಿಕ ಸಮಾಲೋಚನೆಯನ್ನು ಆರಂಭಿಸಿತ್ತು. ರಿಲಯನ್ಸ್ ಮತ್ತು ವೊಡಾಫೋನ್ ಕಂಪನಿಗಳು ಹರಾಜು ಪ್ರಕ್ರಿಯೆಗೆ ಬೆಂಬಲಿಸಿದ್ದವು. ಭಾರತಿ ಏರ್ಟೆಲ್, ಅಮೆಜಾನ್ ಮತ್ತು ಸ್ಟಾರ್ಲಿಂಕ್ ಕಂಪನಿಗಳು ಅದರ ವಿರುದ್ಧವಾಗಿ ವಾದ ಮಂಡಿಸಿದ್ದವು. ಮೂಲತಃ ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ ಹಂಚಿಕೆಗೊಳಪಡಬೇಕಾದ ಸ್ವಾಭಾವಿಕ ಸಂಪನ್ಮೂಲವಾಗಿರುವುದರಿಂದ, ಅದನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ಭಾರ್ತಿ ಕಂಪನಿ ವಾದಿಸಿತ್ತು. ಹರಾಜು ಪ್ರಕ್ರಿಯೆಗೊಳಪಡಿಸುವುದರಿಂದ ಸ್ಪೆಕ್ಟ್ರಮ್ಗಳು ವಿಶೇಷ ಸಂಪನ್ಮೂಲಗಳಾಗಿ ರೂಪುಗೊಳ್ಳುತ್ತವೆ, ಆಗ ಮಾರುಕಟ್ಟೆ ಪೈಪೋಟಿಯಲ್ಲಿರುವ ಉದ್ದಿಮೆಗಳಿಗೆ ಇದನ್ನು ನಿರ್ಬಂಧಿಸಲು ಅಥವಾ ಸಂಗ್ರಹಿಸಿಡಲು ಅನುಕೂಲವಾಗುತ್ತದೆ ಎಂದು ಭಾರ್ತಿ ಕಂಪನಿ ಪ್ರತಿಪಾದಿಸಿತ್ತು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ್ದ ರಿಲಯನ್ಸ್ “ಯಾವುದೇ ಮಧ್ಯಸ್ಥಗಾರರಿಗೆ ಆದ್ಯತೆ ನೀಡದೆ, ಸ್ಪರ್ಧಾತ್ಮಕ ಸೇವೆಗಳನ್ನು ನೀಡುವ ನೆಟ್ವರ್ಕ್ಗಳಿಗೆ ಸ್ಪೆಕ್ಟ್ರಮ್ ನಿಯೋಜನೆ ನಿಯಮಗಳು ಏಕರೂಪ ಮತ್ತು ನ್ಯಾಯಯುತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ” ಎಂದು ಹೇಳಿತ್ತು. 2012ರ 2ಜಿ ಹಗರಣದ ತೀರ್ಪಿನಲ್ಲಿ ಉಪಸ್ಥಿತರಿದ್ದ ನ್ಯಾಯಾಧೀಶ ನ್ಯಾ.. ಕೆ.ಎಸ್. ರಾಧಾಕೃಷ್ಣನ್ ಅವರ ಕಾನೂನು ಅಭಿಪ್ರಾಯವನ್ನೇ ರಿಲಯನ್ಸ್ ವಾದದಲ್ಲಿ ಕಾಣಬಹುದು. ಆದರೆ 2023ರ ಟೆಲಿಕಾಂ ಕಾಯ್ದೆಯನ್ನು ರೂಪಿಸುವಲ್ಲಿ ಬಿಜೆಪಿ ಸರ್ಕಾರ ಈ ಯಾವುದೇ ವಿವೇಕಯುತ ಅಭಿಪ್ರಾಯಗಳನ್ನು ಪರಿಗಣಿಸಿಯೇ ಇಲ್ಲ.
ಏತನ್ಮಧ್ಯೆ 2023ರ ಡಿಸೆಂಬರ್ 18ರಂದು ಹೊಸ ಟೆಲಿಕಾಂ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಅಂತರ್ಜಾಲವನ್ನು ಅಮಾನತುಗೊಳಿಸುವುದು ಮತ್ತು ಜಾಲತಾಣಗಳ ಮೇಲೆ ಕಣ್ಗಾವಲು ಹೆಚ್ಚಿಸುವಂತಹ ಕಠೋರ ಅಧಿಕಾರಗಳನ್ನು ಹೊಂದಿರುವುದಷ್ಟೇ ಅಲ್ಲದೆ, ಸ್ಪೆಕ್ಟ್ರಮ್ ನಿರ್ವಹಣೆಯಲ್ಲಿ ಭಾರತವು ಈವರೆಗೂ ಅನುಸರಿಸುತ್ತಿದ್ದ ವಿಧಾನವನ್ನೇ ಬದಲಾಯಿಸುವ ಸೂಚನೆಯನ್ನು ಈ ಮಸೂದೆಯಲ್ಲಿ ನೀಡಲಾಗಿತ್ತು. ಹರಾಜಿನ ಮೂಲಕ ಕಂಪನಿಗಳು ಸ್ಪೆಕ್ಟ್ರಮ್ ಪಡೆಯಲು ಸ್ಪರ್ಧೆ ನಡೆಸುವ ಬದಲು, ಕೆಲವು ಉಪಗ್ರಹ ಆಧಾರಿತ ಸೇವೆಗಳಿಗೆ ಆಡಳಿತದ ನೆಲೆಯಲ್ಲೇ ವಿವೇಚನಾತ್ಮಕ ಹಂಚಿಕೆ ಮಾಡಿಕೊಡುವ ನಿಯಮಗಳನ್ನು ಮಸೂದೆಯಲ್ಲಿ ಸೇರಿಸಲಾಗಿತ್ತು. ಉಪಗ್ರಹಗಳಿಂದ ಪಡೆಯಲಾಗುವ ʼ ಜಾಗತಿಕ ವೈಯುಕ್ತಿಕ ಮೊಬೈಲ್ ಸಂವಹನʼ (GMPCS) ವನ್ನು ಹೊರತುಪಡಿಸಿ ಉಳಿದಂತೆ ಸ್ಪೆಕ್ಟ್ರಮ್ಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿತ್ತು.

ಈ ಮಸೂದೆಯನ್ನು ಸಂಸತ್ತಿನಲ್ಲಿ ಚರ್ಚೆಗೊಳಪಡಿಸಿದ್ದರೆ 2 ಜಿ ಸ್ಪೆಕ್ಟ್ರಮ್ ಹಗರಣವನ್ನೂ ಸೇರಿದಂತೆ, 2012ರ ಸುಪ್ರೀಂಕೋರ್ಟ್ ಆದೇಶವೂ ಸಹ ವ್ಯಾಪಕ ಚರ್ಚೆಗೊಳಗಾಗುವ ಸಾಧ್ಯತೆಗಳಿದ್ದವು. 2008ರಲ್ಲಿ ಹರಾಜು ಪ್ರಕ್ರಿಯೆ ಇಲ್ಲದೆ ಹೋದುದರಿಂದಲೇ ಅಂದಿನ ಸರ್ಕಾರ ತನ್ನ ಆಪ್ತ ಉದ್ಯಮಿಗಳಿಗೆ ಸ್ಪೆಕ್ಟ್ರಮ್ಗಳನ್ನು ಹಂಚುವ ಮೂಲಕ ಪಕ್ಷಪಾತದ ಮಾರ್ಗ ಅನುಸರಿಸುತ್ತು ಎನ್ನುವುದನ್ನು ಸುಪ್ರೀಂಕೋರ್ಟ್ ಆ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು. ಹಾಗಾಗಿಯೇ ಹರಾಜು ಪ್ರಕ್ರಿಯೆಯನ್ನೇ ಕಡ್ಡಾಯವಾಗಿ ಅನುಸರಿಸಲು ಆದೇಶಿಸಿತ್ತು. ಆದರೆ 2023ರ ಮಸೂದೆಯಲ್ಲಿ ಈ ಆದೇಶಕ್ಕೆ ತದ್ವಿರುದ್ಧವಾದ ಅಂಶಗಳಿದ್ದುದರಿಂದ ಬಿಜೆಪಿ ಸರ್ಕಾರವು, 143 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದ ಸಂದರ್ಭದಲ್ಲಿ, ಡಿಸೆಂಬರ್ 20 ರಂದು ಮಸೂದೆಯನ್ನು ಅಂಗೀಕರಿಸಿತ್ತು.
ಹೀಗೆ ಡಿಸೆಂಬರ್ 2023ರಲ್ಲಿ ತರಾತುರಿಯಲ್ಲಿ ಟೆಲಿಕಾಂ ಕಾಯ್ದೆಯನ್ನು ಜಾರಿಗೊಳಿಸಿದ ಬಿಜೆಪಿ ಸರ್ಕಾರ ಆಡಳಿತಾತ್ಮಕ ವಿವೇಚನೆಯ ಮೂಲಕ ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ಗಳನ್ನು ಹಂಚಿಕೆ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಿದೆ. ಸುಪ್ರೀಂಕೋರ್ಟ್ ಆದೇಶಿಸಿದ್ದ ಹರಾಜು ಪ್ರಕ್ರಿಯೆ ಮತ್ತೊಮ್ಮೆ ನಿರ್ಲಕ್ಷಿಸಲ್ಪಟ್ಟಿದೆ.
ಆಪ್ತ ಬಂಡವಾಳಶಾಹಿಯ ನಮೂನೆ
ಹೊಸ ಟೆಲಿಕಾಂ ಕಾಯ್ದೆಯನ್ನು ಜಾರಿಗೊಳಿಸುವುದಕ್ಕೂ ಮುನ್ನ ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ ಪಡೆಯುವಾಗ ಇರುವ ಎರಡು ಅಡೆತಡೆಗಳನ್ನು ಕೇವಲ ಒಂದು ಕಂಪನಿ ಮಾತ್ರ ತೆರವುಗೊಳಿಸಿತ್ತು. ಸ್ಪೆಕ್ಟ್ರಮ್ಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಪರವಾನಗಿ ಮತ್ತು ಬಾಹ್ಯಾಕಾಶ ಧೃಢೀಕರಣ ಈ ಎರಡೂ ಅವಕಾಶಗಳನ್ನು ಒನ್ವೆಬ್ ಇಂಡಿಯಾ ಕಂಪನಿಯು ಪಡೆದುಕೊಂಡಿತ್ತು. ಒನ್ವೆಬ್ ಇಂಡಿಯಾ, ಅಂತರರಾಷ್ಟ್ರೀಯ ಉಪಗ್ರಹ ಕಂಪನಿಯಾದ ಯು ಟೆಲ್ಸಾಟ್ ಒನ್ವೆಬ್ನ ಭಾರತೀಯ ಅಂಗಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ಲಂಡನ್ನಲ್ಲಿದೆ. ಈ ಕಂಪನಿಯ ಅತಿದೊಡ್ಡ ಷೇರುದಾರ ಉದ್ದಿಮೆ ಏರ್ಟೆಲ್ನ ಮಾತೃಕಂಪನಿಯಾಗಿರುವ ಭಾರ್ತಿ ಎಂಟರ್ಪ್ರೈಸಸ್. ಈ ಬಹುರಾಷ್ಟ್ರೀಯ ಕಂಪನಿಯು ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು ದೂರಸಂಪರ್ಕ, ಡಿಜಿಟಲ್ ಮೂಲ ಸೌಕರ್ಯಗಳು, ಬಾಹ್ಯಾಕಾಶ ಸಂವಹನ, ಹಣಕಾಸು ಸೇವೆಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಹರಡಿಕೊಂಡಿದೆ.
ಭಾರತೀಯ ದೂರ ಸಂಪರ್ಕ ಇಲಾಖೆಯಿಂದ 2021ರ ಆಗಸ್ಟ್ 24ರಂದು GMPCS ಪರವಾನಗಿ ಮೂಲಕ ವೈಯುಕ್ತಿಕ ಜಾಗತಿಕ ಮೊಬೈಲ್ ಸಂವಹನಗಳ ಸೇವೆಗೆ ಅವಕಾಶ ಪಡೆದ ಮೊದಲ ಕಂಪನಿ ಒನ್ವೆಬ್ ಆಗಿದೆ. 2023ರ ನವಂಬರ್ 21ರಂದು ಉಪಗ್ರಹ ಸಾಮರ್ಥ್ಯದ ಬಳಕೆಗಾಗಿ ಭಾರತೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರವು (IN-SPACE) ಇದಕ್ಕೆ ಅನುಮೋದನೆ ನೀಡಿತ್ತು. ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಸೇವೆಗಳಿಗಾಗಿ ಸ್ಪೆಕ್ಟ್ರಮ್ಗಳಿಗೆ ಅರ್ಜಿ ಸಲ್ಲಿಸಲು ಈ ಎರಡು ಹಂತಗಳು ಪೂರ್ವಾಪೇಕ್ಷಿತವಾಗಿವೆ. ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ಗಳನ್ನು ಸರ್ಕಾರ ಇನ್ನೂ ಹಂಚಿಕೆ ಮಾಡದಿದ್ದರೂ, ಇತ್ತೀಚೆಗೆ ಬಿಡುಗಡೆಯಾದ ಚುನಾವಣಾ ಬಾಂಡ್ ವಿವರಗಳು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತವೆ.
ಸ್ಪೆಕ್ಟ್ರಮ್ ಹರಾಜಿನ ಅಗತ್ಯವನ್ನು ತೆಗೆದುಹಾಕುವ ಹೊಸ ಕಾನೂನು ಪರಿಚಯಿಸುವುದಕ್ಕೂ ಮುನ್ನ ಹಾಗೂ ಆನಂತರ 150 ಕೋಟಿ ರೂಗಳ ಎರಡು ಸೆಟ್ ಬಾಂಡ್ಗಳನ್ನು ಖರೀದಿಸಿರುವ ಭಾರ್ತಿ ಸಮೂಹವು ಬಿಜೆಪಿಗೆ ಈ ದೇಣಿಗೆಯನ್ನು ನೀಡಿರುವುದಾಗಿ ವರದಿಯಾಗಿದೆ. ಭಾರ್ತಿ ಎಂಟರ್ಪ್ರೈಸಸ್ ಹೊರತುಪಡಿಸಿ ಯು ಟೆಲ್ಸಾಟ್ ಒನ್ವೆಬ್ ಕಂಪನಿಯಲ್ಲಿ ಬ್ರಿಟನ್ನಿನ ಸರ್ಕಾರ, ಫ್ರಾನ್ಸ್ನ ಉಪಗ್ರಹ ಪೂರೈಕೆದಾರ ಕಂಪನಿಯಾದ ಯು ಟೆಲ್ಸಾಟ್ ಮತ್ತು ಜಪಾನಿನ ಹೂಡಿಕೆ ಬ್ಯಾಂಕ್ ಸಾಫ್ಟ್ ಬ್ಯಾಂಕ್ ಸಹ ಷೇರುದಾರರಾಗಿದ್ದು, ಈ ದೇಶಗಳಲ್ಲಿನ ಕಠಿಣ ಭ್ರಷ್ಟಾಚಾರ ನಿಯಂತ್ರಣ ಮಾನದಂಡಗಳನ್ನು ಗಮನಿಸಿದಾಗ, ಚುನಾವಣಾ ಬಾಂಡ್ ವಿವರಗಳು ವಿದೇಶದಲ್ಲೂ ವ್ಯಾಪಕವಾಗಿ ಚರ್ಚೆಗೊಳಗಾಗಬಹುದು ಎಂದು ತಜ್ಞರು ಹೇಳುತ್ತಾರೆ. ಬ್ರಿಟನ್ನಿನ ಕಾಯ್ದೆಯಡಿ ಇದು ಕ್ರಿಮಿನಲ್ ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು Transparency International ಕಾನೂನು ತಜ್ಞ ಕುಶ್ ಅಮೀನ್ ಹೇಳುತ್ತಾರೆ.
ಚುನಾವಣಾ ಬಾಂಡ್ ಸುತ್ತ
ಟೆಲಿಕಾಂ ಕಾಯ್ದೆಯು ಡಿಸೆಂಬರ್ 2023ರಲ್ಲಿ ಜಾರಿಯಾಗುವುದಕ್ಕೂ ಮುನ್ನ ಕೆಲವು ಪ್ರಸಂಗಗಳು ನಡೆದಿರುವುದು ಗಮನಾರ್ಹವಾಗಿದೆ. ನವಂಬರ್ 9 2023ರಂದು ಭಾರ್ತಿ ಏರ್ಟೆಲ್ ಲಿಮಿಟೆಡ್ 100 ಕೋಟಿ ರೂಗಳ ಚುನಾವಣಾ ಬಾಂಡ್ಗಳನ್ನು ಖರೀದಿಸಿ, ಸಂಪೂರ್ಣ ಮೊತ್ತವನ್ನು ಬಿಜೆಪಿಗೆ ದೇಣಿಗೆ ನೀಡಿರುವುದಾಗಿ ವರದಿಯಾಗಿದೆ. ಇದಾದ ನಾಲ್ಕು ದಿನಗಳ ನಂತರ ಬಿಜೆಪಿ ಎಲ್ಲ ಬಾಂಡ್ಗಳನ್ನೂ ನಗದೀಕರಿಸಿದೆ. ಈ ಮೊದಲೇ ಹೇಳಿರುವಂತೆ ನವಂಬರ್ 21ರಂದು ಒನ್ವೆಬ್ IN-SPACE ಮೂಲಕ ಉಪಗ್ರಹ ಅನುಮೋದನೆ ಪಡೆಯುತ್ತದೆ. ಅಷ್ಟೇ ಅಲ್ಲದೆ ಭಾರ್ತಿ ಏರ್ಟೆಲ್ ಸರ್ಕಾರದಿಂದ ಉಪಗ್ರಹ ಆಧಾರಿತ ಸ್ಪೆಕ್ಟ್ರಮ್ ಪಡೆಯಲು ಅರ್ಹತೆ ಪಡೆದ ಏಕೈಕ ಕಂಪನಿಯಾಗಿದೆ. 2024ರ ಆರಂಭದಲ್ಲೇ ಭಾರ್ತಿ ಏರ್ಟೆಲ್ 50 ಕೋಟಿ ರೂಗಳ ಬಾಂಡ್ ಖರೀದಿಸಿದ್ದು, ಇದನ್ನು ಬಿಜೆಪಿ ಜನವರಿ 12ರಂದು ನಗದೀಕರಿಸಿಕೊಂಡಿರುವುದಾಗಿ ವರದಿಯಾಗಿದೆ.
ಭಾರ್ತಿ ಎಂಟರ್ಪ್ರೈಸಸ್ ಭಾರತದ ರಾಜಕೀಯ ಪಕ್ಷಗಳಿಗೆ ಔಪಚಾರಿಕವಾಗಿ ಧನಸಹಾಯ ನೀಡಲು ಎರಡು ವಿಧಾನಗಳನ್ನು ಬಳಸಿದೆ. ಒಂದು ಚುನಾವಣಾ ಬಾಂಡ್ಗಳನ್ನು ಖರೀದಿಸುವುದು, ಮತ್ತೊಂದು ಲಾಭರಹಿತ ಚುನಾವಣಾ ಟ್ರಸ್ಟ್ ಮೂಲಕ ನೀಡುವುದು. 2013ರಲ್ಲಿ ಭಾರ್ತಿ ಏರ್ಟೆಲ್ ಸಮೂಹವು , ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಎಂಬ ಲಾಭರಹಿತ ಸಂಸ್ಥೆಯನ್ನು ಆರಂಭಿಸಿತು. ಈ ಪ್ರೂಡೆಂಟ್ ಕಂಪನಿ ಎಲ್ಲ ರಾಜಕೀಯ ಪಕ್ಷಗಳಿಗೂ ದೇಣಿಗೆ ನೀಡುತ್ತಾ ಬಂದಿದ್ದರೂ ಬಿಜೆಪಿ ಅತಿ ದೊಡ್ಡ ಫಲಾನುಭವಿಯಾಗಿದೆ. 2019ರಲ್ಲಿ ಭಾರ್ತಿ ಕಂಪನಿಯು ಪ್ರೂಡೆಂಟ್ ಸಂಸ್ಥೆಗೆ 27.25 ಕೋಟಿ ರೂ ನೀಡಿದ್ದರೆ, ಅದೇ ವರ್ಷ ಪ್ರೂಡೆಂಟ್ ಬಿಜೆಪಿಗೆ 218 ಕೋಟಿ ರೂ ದೇಣಿಗೆ ನೀಡಿದೆ. ಇದೇ ವರ್ಷದಲ್ಲಿ ಭಾರ್ತಿ ಕಂಪನಿಯು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ 51.4 ಕೋಟಿ, ಕಾಂಗ್ರೆಸ್ಗೆ 8 ಕೋಟಿ, ಜೆಡಿಯು ಮತ್ತು ಶಿರೋಮಣಿ ಅಕಾಲಿದಳಕ್ಕೆ ತಲಾ 1 ಕೋಟಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ 50 ಲಕ್ಷ, ಆರ್ಜೆಡಿ ಪಕ್ಷಕ್ಕೆ 10 ಲಕ್ಷ ರೂಗಳ ದೇಣಿಗೆಯನ್ನೂ ನೀಡಿದೆ.
ವಾಸ್ತವವಾಗಿ, ಯು ಟೆಲ್ಸಾಟ್ ಒನ್ವೆಬ್ ಕಂಪನಿಯ ಅತಿದೊಡ್ಡ ಷೇರುದಾರರಾದ ಭಾರ್ತಿ ಎಂಟರಪ್ರೈಸಸ್ ಚುನಾವಣಾ ಬಾಂಡ್ಗಳ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿದೆ ಎಂದು ಇತ್ತೀಚೆಗೆ ಎಸ್ಬಿಐ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಕಂಡುಬರುತ್ತದೆ. 2019 ಮತ್ತು 2024 ರ ನಡುವೆ, ಸಮೂಹ ಕಂಪನಿಗಳಾದ ಭಾರ್ತಿ ಏರ್ಟೆಲ್ ಲಿಮಿಟೆಡ್, ಭಾರ್ತಿ ಇನ್ಫ್ರಾ ಟೆಲ್ ಲಿಮಿಟೆಡ್ ಮತ್ತು ಭಾರ್ತಿ ಟೆಲಿಮೀಡಿಯಾ ಲಿಮಿಟೆಡ್ ಒಟ್ಟಾಗಿ 247 ಕೋಟಿ ರೂ.ಗಳ ಬಾಂಡ್ಗಳನ್ನು ಖರೀದಿಸಿದ್ದು ಆಡಳಿತಾರೂಢ ಬಿಜೆಪಿಗೆ 236.4 ಕೋಟಿ ರೂಗಳನ್ನು ದೇಣಿಗೆಯಾಗಿ ನೀಡಿದೆ.
ಆಪ್ತ ಬಂಡವಾಳಶಾಹಿ ಲಕ್ಷಣ
ಈ ಒಂದು ಪ್ರಕರಣವೇ ಚುನಾವಣಾ ಬಾಂಡ್ ಎಂಬ ಅಸಾಂವಿಧಾನಿಕ ಯೋಜನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯು ಈ ರೀತಿಯಾಗಿ ಉದ್ಯಮ-ಸರ್ಕಾರ-ಆಳುವ ಪಕ್ಷಗಳ ನಡುವೆ ಸಂಬಂಧವನ್ನು ಗಟ್ಟಿಗೊಳಿಸುವುದು ಜಾಗತಿಕ ವಿದ್ಯಮಾನವಾಗಿದ್ದು, ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯನ್ನು ಅಪ್ಪಿಕೊಳ್ಳುತ್ತಿರುವ ನವ ಭಾರತವೂ ಇದೇ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆಪ್ತ ಬಂಡವಾಳಶಾಹಿಯಲ್ಲಿ ( Croney Capitalism) ಹೇಗೆ ಕೆಲವೇ ಉದ್ಯಮಗಳು ತಮ್ಮ ಮಾರುಕಟ್ಟೆ ವ್ಯಾಪ್ತಿ ಹಾಗೂ ಬಂಡವಾಳದ ಹರಿವನ್ನು ಬಳಸಿಕೊಂಡು, ಮಾರುಕಟ್ಟೆಯನ್ನು ಆಕ್ರಮಿಸುತ್ತವೆ ಎನ್ನುವುದಕ್ಕ ಇದೊಂದು ಸ್ಪಷ್ಟ ನಿದರ್ಶನ.
ಚುನಾವಣಾ ಬಾಂಡ್ ಯೋಜನೆ ಎಷ್ಟೇ ಜೋರಾಗಿ ಸದ್ದು ಮಾಡುತ್ತಿದ್ದರೂ, ಈ ಯೋಜನೆಯ ಫಲಾನುಭವಿಗಳಾಗಿ ಬಂಡವಾಳಿಗ ಪಕ್ಷಗಳು, ಮಾರುಕಟ್ಟೆಯ ಉದ್ಯಮಗಳಿಂದ ದೇಣಿಗೆ ಪಡೆಯುವ ರಾಜಕೀಯ ಪರಂಪರೆಯನ್ನು ಎಂದಿಗೂ ವಿರೋಧಿಸುವುದಿಲ್ಲ. ಏಕೆಂದರೆ ಕೇಂದ್ರ ಸಚಿವರೊಬ್ಬರು ಹೇಳಿರುವಂತೆ ಹಣ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದಿಲ್ಲ. ಆದರೆ ತಳಮಟ್ಟದ ವಾಸ್ತವಿಕ ನೆಲೆಯಲ್ಲಿ ಸಾಮಾನ್ಯ ಪ್ರಜೆಯಾಗಿ ನಿಂತು ನೋಡಿದಾಗ, ಈ ಇಡೀ ಪ್ರಕ್ರಿಯೆ ಹೇಗೆ ತಳಸಮಾಜದ ಅಸಮಾನತೆ ಮತ್ತು ಅಸಮತೋಲನಗಳನ್ನು ಹೆಚ್ಚಿಸುತ್ತದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಬಂಡವಾಳಶಾಹಿ ವ್ಯವಸ್ಥೆಯಿಂದ ಬಡಜನತೆಗೆ ಆಗುವ ಅಪಾಯಗಳನ್ನೂ ಅರಿಯಬಹುದು. ಚುನಾವಣಾ ಬಾಂಡ್ ಹಗರಣವು ವ್ಯಾಪಕವಾಗಿ ತಳಮಟ್ಟವನ್ನೂ ತಲುಪಿರುವ ಹೊತ್ತಿನಲ್ಲಿ ಎಡಪಕ್ಷಗಳು ಈ ನಿಟ್ಟಿನಲ್ಲಿ ಇನ್ನೂ ಚುರುಕಾಗಿ, ವಂಚಿತ ಜನಸಮುದಾಯಗಳಲ್ಲಿ ವಾಸ್ತವದ ಅರಿವು ಮೂಡಿಸಬೇಕಿದೆ.
(ಈ ಲೇಖನದ ಮಾಹಿತಿ ದತ್ತಾಂಶಗಳಿಗೆ ಆಧಾರ ದ ಸ್ಕ್ರೋಲ್ ಪತ್ರಿಕೆಯ ಲೇಖನ Bharti group’s Rs 150 crore bond donation to BJP coincided with Modi government’s telecom U-turn – 27 ಮಾರ್ಚ್ 2024)
-೦-೦-೦