
ಸವಕಲ್ಯಾಣ: ‘ತಾಲ್ಲೂಕಿನಲ್ಲಿ ದಿನವೂ ಸಂಚರಿಸುತ್ತೇನೆ. ಆದರೆ ಯಾವುದೇ ಶಾಲಾ ಆವರಣದಲ್ಲಿ ಮಕ್ಕಳು ಆಟ ಆಡುವುದನ್ನು ನಾನು ಎಂದೂ ಕಂಡಿಲ್ಲ ಕಾರಣವೇನು?’ ಎಂದು ಶಾಸಕ ಶರಣು ಸಲಗರ ಸಂಬಂಧಿತ ಅಧಿಕಾರಿಗಳಿಗೆ ಪ್ರಶ್ನಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕರ ಕೊರತೆ ಇದೆಯೇ, ಆಟದ ಮೈದಾನ ಇಲ್ಲವೇ? ಬಟಗೇರಾ, ಕೊಹಿನೂರ, ಬೇಲೂರಿನ ಶಾಲೆಗಳ ಎದುರಲ್ಲಿ ಉತ್ತಮ ವ್ಯವಸ್ಥೆ ಇದೆ. ಆದರೂ ಕ್ರೀಡೆಗಳು ನಡೆಯುವುದಿಲ್ಲ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪಾಠದ ಜೊತೆಯಲ್ಲಿ ಆಟವೂ ಮುಖ್ಯವಾಗಿದ್ದು ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಉತ್ತಮ ಶಿಕ್ಷಕರ ವ್ಯವಸ್ಥೆ ಆಗಲಿ. ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು’ ಎಂದರು.’ತಾಲ್ಲೂಕು ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳು, ಆಂಬುಲೆನ್ಸ್, ಸಿಟಿ ಸ್ಕ್ಯಾನಿಂಗ್ ಒದಗಿಸುತ್ತೇನೆ. ಬ್ಲಡ್ ಬ್ಯಾಂಕ್ ಮತ್ತು ಶವ ಪರೀಕ್ಷಾ ಕೇಂದ್ರಕ್ಕೆ ರಸ್ತೆ ನಿರ್ಮಿಸುತ್ತೇನೆ. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಇಲ್ಲದಿದ್ದರೂ ಹೆರಿಗೆಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು ಅದನ್ನು ತಡೆಯಬೇಕು. ಅಪಘಾತಗಳಿಗೆ ಹೆಲ್ಮೆಟ್ ಹಾಕದಿರುವುದು ಕಾರಣವಾಗುತ್ತಿದ್ದು ಪೊಲೀಸ್ ಇಲಾಖೆಯವರು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದರು.