ಮಗನ ರಾಜಕೀಯ ಭವಿಷ್ಯದ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
“ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ರಾಜಕೀಯದ ಸಹವಾಸ ಹೋಗಬೇಡ, ನಿನಗೆ ಭಗವಂತ ಕೊಟ್ಟಿರೋ ಕಲೆ ಸಿನಿಮಾ ಮಾಡು ಎಂದು ನಿಖಿಲ್ಗೆ ಸಲಹೆ ನೀಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ದಯವಿಟ್ಟು, ರಾಜಕೀಯ ಜಂಜಾಟ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಹೀಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
![](https://pratidhvani.com/wp-content/uploads/2023/08/05BGNIKHILGOWDA-1024x683.jpeg)
“ಈಗಾಗಲೇ ಎರಡು ಬಾರಿ ನಿಖಿಲ್ ಸೋತಿದ್ದಾನೆ. ಮಂಡ್ಯ ಎಂಪಿ ಚುನಾವಣೆಗೆ ನಿಲ್ಲುವಾಗಲೂ ಬೇಡ ಅಂದಿದ್ದೆ. ಮಂಡ್ಯದಲ್ಲಿ ನಿಲ್ಲಲು ನಿಖಿಲ್ ಕೂಡಾ ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ” ಎಂದು ಹೆಚ್ಡಿಕೆ ಹೇಳಿದ್ದಾರೆ.
“ಸೋಲು ಗೆಲುವು ಇರುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ.
ಮುಂದೆ ನೋಡೋಣಾ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್ಗೆ ಹೇಳಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
![](https://pratidhvani.com/wp-content/uploads/2023/08/100207607-1024x576.webp)
“ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ.ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ” ಎಂದು ಹೆಚ್ಡಿಕೆ ಹೇಳಿದ್ದಾರೆ.