ಭಾರತ ಸೇರಿದಂತೆ ಇಡೀ ವಿಶ್ವವೇ ಕೋವಿಡ್ 19 ಅನ್ನೋ ಮಾರಕ ರೋಗದಿಂದ ತತ್ತರಿಸಿ ಹೋಗಿತ್ತು. ಸರಿಸುಮಾರು 2 ವರ್ಷಗಳ ಕಾಲ ವಿಶ್ವವನ್ನು ಕಾಡಿದ ಕೊರೊನಾ ಸೋಂಕು ತನ್ನ ಶಕ್ತಿ ಕಳೆದುಕೊಂಡಿದೆ. ಜನರು ಲಸಿಕೆ ಪಡೆದ ಬಳಿಕ ಕೋವಿಡ್ ಸೋಂಕಿನ ವಿರುದ್ಧ ಧೈರ್ಯವಾಗಿ ಹೋರಾಡುತ್ತಿದ್ದಾರೆ. ಆದರೆ ಇದೀಗ ಮತ್ತೆ ಅದೇ ರೀತಿಯ ಮಾರಕ ಕಾಯಿಲೆಯೊಂದು ಕೇರಳದಲ್ಲಿ ಕೇಕೆ ಹಾಕುವುದಕ್ಕೆ ಶುರು ಮಾಡಿದೆ. ನಿಫಾ ವೈರಸ್ ಜನರನ್ನು ಕಾಡುತ್ತಿದ್ದು, ಇಬ್ಬರು ತೀವ್ರ ಉಸಿರಾಟ ಸಮಸ್ಯೆಯಿಂದ ಅಸುನೀಗಿದ್ದಾರೆ. ಇನ್ನುಳಿದ 6 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಸೆಪ್ಟೆಂಬರ್ 15ರ ನಂತರ ಯಾವುದೇ ವ್ಯಕ್ತಿಗಳಲ್ಲಿ ನಿಫಾ ವೈರಾಣು ಕಾಣಿಸಿಕೊಂಡಿಲ್ಲ ಎಂದು ಕೇರಳಾದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಅತ್ತ ಕೇರಳದಿಂದ ಪಶ್ಚಿಮ ಬಂಗಾಳಕ್ಕೆ ವಾಪಸ್ ಆಗಿದ್ದ ವಲಸೆ ಕಾರ್ಮಿಕನಿಗೆ ನಿಫಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಗಳಾಗಿವೆ.

6 ಜಿಲ್ಲೆಗಳಲ್ಲಿ ಮುಂದುವರಿದ ಅಲರ್ಟ್, ಲಾಕ್ಡೌಟ್ ಕಂಟಿನ್ಯೂ
ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸುತ್ತಮುತ್ತಲ 69 ಜಿಲ್ಲೆಗಳಲ್ಲಿ ಕೇರಳ ಸರ್ಕಾರ ಹೈಅಲರ್ಟ್ ಘೋಷಣೆ ಮಾಡಿದ್ದು, ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಲಾಕ್ಡೌನ್ ಕೂಡ ಮಾಡಲಾಗಿದೆ. 21 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗ್ತಿದೆ. ಒಟ್ಟು ಇಲ್ಲೀವರೆಗೂ 323 ಶಂಕಿತರ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 317 ಜನರ ಟೆಸ್ಟ್ ನೆಗೆಟಿವ್ ಬಂದಿದೆ. ಆದರೂ 45 ಜನ ಶಂಕಿತರನ್ನು ಕ್ವಾರಂಟೈನ್ ಮಾಡಿ ನಿಗಾ ವಹಿಸಲಾಗಿದೆ. ಕೇರಳಲ್ಲಿ ನಿಫಾ ವೈರಸ್ಗೆ ಕಾರಣ ಬ್ಯಾಟ್ಗಳೇ ಎನ್ನುವುದು ಸರ್ಕಾರದ ಮಾಹಿತಿ. ಬ್ಯಾಟ್ (ಬಾವಲಿ)ಗಳ ತಪಾಸಣೆ ನಡೆಸಿದ್ದು, ಯಾವುದೇ ನಿಫಾ ವೈರಸ್ ಪತ್ತೆ ಆಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಇದೇ ಕಾರಣಕ್ಕಾಗಿ ನಿಫಾ ಸೋಂಕುಕಾರಗಳು ಯಾವುದು..? ಪ್ರತಿ ಬಾರಿಯೂ ಕೋಝಿಕೋಡ್ ಜಿಲ್ಲೆಯಲ್ಲಿ ನಿಫಾ ಕಾಣಿಸಿಕೊಳ್ಳುವುದು ಯಾಕೆ..? ಅನ್ನೋ ಬಗ್ಗೆ ಅಧ್ಯಯನ ನಡೆಸಲು ಆದೇಶ ನೀಡಲಾಗಿದೆ.

ಕರ್ನಾಟಕ ಸರ್ಕಾರದಿಂದಲೂ ಅಲರ್ಟ್, ಆರೋಗ್ಯ ಸಿಬ್ಬಂದಿಗೆ ತರಬೇತಿ..!
ಕರ್ನಾಟಕ ಕೇರಳದ ಜೊತೆಗೆ ಗಡಿಯನ್ನು ಹಂಚಿಕೊಂಡಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕೇರಳದ ಜನರು ಕರ್ನಾಟಕಕ್ಕೆ , ಕರ್ನಾಟಕದ ಜನರು ಕೇರಳಕ್ಕೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಹೋಗುವುದು ಸರ್ವೇ ಸಾಮಾನ್ಯ. ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸ್ ಕರ್ನಾಟಕಕ್ಕೂ ಆತಂಕ ತಂದೊಡ್ಡಿದ್ದು, ಕರ್ನಾಟಕದಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ 10 ಬೆಡ್ಗಳ ವಿಶೇಷ ವಾರ್ಡ್ ಸ್ಥಾಪನೆ ಮಾಡಲಾಗಿದೆ. ಅದರ ಜೊತೆಗೆ ಸುಮಾರು ತಂಡಗಳ ರಚನೆ ಮಾಡಿ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗಿದೆ. ಭಾರತ ಸರ್ಕಾರ ಕೂಡ ನಿಫಾ ವೈರಾಣು ಬಗ್ಗೆ ಆತಂಕಗೊಂಡಿದ್ದು, ಪದೇ ಪದೇ ನಿಫಾ ವೈರಾಣು ಕಾಣಿಸಿಕೊಳ್ಳುವ ಆಸ್ಟ್ರೇಲಿಯಾ ಸರ್ಕಾರದಿಂದ ಚಿಕಿತ್ಸಾ ವಿಧಾನ, ಮೆಡಿಸಿನ್ ( monoclonal antibody) ಸೇರಿದಂತೆ ಹತ್ತಾರು ಪೂರಕ ಕ್ರಮಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದೆ.

ನಿಫಾ ಹರುಡುವುದು ಹೇಗೆ..? ರಕ್ಷಣಾ ಕ್ರಮಗಳೇನು..?
ನಿಫಾ ವೈರಸ್ ಕೂಡ ಕೊರೊನಾ ವೈರಸ್ ರೀತಿಯಲ್ಲೇ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ. ರೋಗ ಕಾಣಿಸಿಕೊಂಡ ಬಳಿಕ ರೋಗಿಯನ್ನು ಪ್ರತ್ಯೇಕವಾಗಿರಿ ಚಿಕಿತ್ಸೆ ಕೊಡುವುದು ಈಗಿರುವ ದಾರಿ. ಇನ್ನು ಯಾವುದೇ ಹಣ್ಣು ಹಂಪಲುಗಳನ್ನು ನಿಫಾ ವೈರಸ್ ಕಾಣಿಸಿಕೊಂಡ ಬಾವಲಿಗಳು ಕಚ್ಚಿದ ಬಳಿಕ ಅಥವಾ ಮೂಸಿದ ಬಳಿಕ ಮನುಷ್ಯರು ಸೇವನೆ ಮಾಡಿದಾಗ ಸುಲಭವಾಗಿ ನಿಫಾ ವೈರಾಣು ಮನುಷ್ಯರಿಗೆ ಹರಡುತ್ತದೆ. ಒಂದು ವೇಳೆ ಬಾವಲಿ ತಿಂದು ಬಿಟ್ಟ ಆಹಾರವನ್ನು ಮನೆಯ ಸಾಕು ಪ್ರಾಣಿಗಳು ಸೇವನೆ ಮಾಡಿದಾಗ ಸಾಕುಪ್ರಾಣಿಗಳಿಗೂ ಹಂಟಿಕೊಳ್ಳುವ ಸಂಭವವಿದ್ದು, ಆ ಬಳಿಕ ಸಾಕುಪ್ರಾಣಿಗಳಿಂದ ಮನಷ್ಯನಿಗೆ ಸೋಂಕು ಹರಡುತ್ತದೆ. ತೀವ್ರವಾದ ಜ್ವರ, ಉಸಿರಾಟದ ಸಮಸ್ಯೆ ನಿಫಾ ಸೋಂಕಿನ ಗುಣಲಕ್ಷಣ. ಪ್ರಾಣಿಗಳಿಂದ ದೂರ ಇರುವುದು ಹಾಗು ಹಣ್ಣುಗಳನ್ನು ಚೆನ್ನಾಗಿ ತೊಳೆದು, ತರಕಾರಿಗಳನ್ನು ತೊಳೆದು, ಬೇಯಿಸಿ ತಿನ್ನುವುದು ಸೂಕ್ತ.
ಕೃಷ್ಣಮಣಿ






