ಬೆಂಗಳೂರು: ಹೊಸ ವರ್ಷ(New year) ಆಚರಣೆಗೆ ಇನ್ನೇನು ಇಪ್ಪತ್ತು ದಿನಗಳು ಬಾಕಿ ಇರುವಾಗಲೇ ಬೆಂಗಳೂರು ಪೊಲೀಸರು ಹೊಸ ವರ್ಷ ಸಂಭ್ರಮಾಚರಣೆ ಮಾಡುವ ಪಬ್, ಬಾರ್-ರೆಸ್ಟೋರೆಂಟ್ ಮಾಲೀಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಇತ್ತೀಚಿಗೆ ಗೋವಾದಲ್ಲಿ ಅಗ್ನಿ ಅನಾಹುತ ಸಂಭವಿಸಿದ ಕಾರಣ ಈ ಬಾರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.

ಈ ಬಾರಿ ಡಿಸೆಂಬರ್ 31ರ ರಾತ್ರಿ ಸಂಭ್ರಮಾಚರಣೆ ಮಾಡುವ ಪಬ್, ಬಾರ್-ರೆಸ್ಟೋರೆಂಟ್‌ಗಳು ಸ್ಥಳೀಯ ಪೊಲೀಸರಿಂದ ಹಾಗೂ ಅಗ್ನಿಶಾಮಕ ದಳದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಒಂದು ವೇಳೆ ಅನುಮತಿ ಪಡೆಯದ ಪಬ್, ಬಾರ್-ರೆಸ್ಟೋರೆಂಟ್‌ಗಳು ಕ್ಲೋಸ್ ಆಗಲಿವೆ. ಪಬ್ ಬಾರ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಗ್ರಾಹಕರನ್ನು ಸೇರಿಸುವಂತಿಲ್ಲ. ಹೆಚ್ಚು ಗ್ರಾಹಕರು ಸೇರಿ ಅನಾಹುತ ಆದರೆ ಮಾಲೀಕರೇ ಹೊಣೆಯಾಗುತ್ತಾರೆ.

ಇನ್ನು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಸಂಭ್ರಮಾಚರಣೆ ಪ್ರದೇಶದಲ್ಲಿ ಸಿಸಿಟಿವಿ ಕಡ್ಡಾಯವಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ಪಾರ್ಟಿಗೆ ನಿಗದಿ ಮಾಡಿದ ಸಮಯ ಮೀರಿ ಸೇವೆ ನೀಡುವಂತಿಲ್ಲ. ಅನುಮತಿ ಇಲ್ಲದೇ ಪಾರ್ಟಿಗಳನ್ನು ಆಯೋಜಿಸಿದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.













