ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ – ಸಂತ್ರಸ್ತರ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಆರೋಗ್ಯ ಸಚಿವರು

ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಅವರ ಮನವೊಲಿಸಿದ ಗುಂಡೂರಾವ್
ಸೆಂಟ್ರಲ್ ಡ್ರಗ್ ಲ್ಯಾಬ್ ನ SQ ವರದಿಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ಐವಿ ದ್ರಾವಣ ರಿಲೀಸ್ ಆಗಲು ಕಾರಣವಾಯ್ತು
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಬಾಣಂತಿಯರ ಸಾವುಗಳ ಸಂಭವಿಸಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿರಾರು ಸರ್ಜರಿಗಳನ್ನ ಯಶಸ್ವಿಯಾಗಿ ನೆಡೆಸುವ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಸಿಸೇರಿಯನ್ ಗೆ ಒಳಗಾದ ಐವರು ಬಾಣಂತಿಯರು ಸಾವಿಗೀಡಾಗಿರುವುದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಬಳ್ಳಾರಿ ಜಿಲ್ಲಾ ಆಸ್ಪತ್ರೆ ಭೇಟಿ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಪ್ರತಿಭಟನೆಯನ್ನ ಎದುರಿಸಬೇಕಾಯ್ತು. ಜಿಲ್ಲಾಸ್ಪತ್ರೆಯ ಎದುರೇ ಧರಣಿ ಕುಳಿತಿದ್ದ ಶ್ರೀರಾಮುಲು ಅವರ ಬಳಿ ನೇರವಾಗಿ ತೆರಳಿದ ಸಚಿವ ದಿನೇಶ್ ಗುಂಡೂರಾವ್, ಧರಣಿ ಕೈ ಬಿಡುವಂತೆ ಮನವಿ ಮಾಡಿದರು.. ಬಾಣಂತಿಯರ ಸಾವಿನ ವಿಚಾರದಲ್ಲಿ ಪ್ರತಿಭಟಿಸುವುದನ್ನ ನಾನು ವಿರೋಧಿಸಲ್ಲ. ಆದರೆ ಈ ರೀತಿಯ ಸಾವಿನ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ನಾನೇ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲದಿಂದ ತಜ್ಞರ ತಂಡವನ್ನ ಕಳಿಸಿ ಏಲ್ಲಿ ಲೋಪದೋಷಗಳಾಗಿವೆ ವರದಿ ನೀಡುವಂತೆ ಕೇಳಿದ್ದೆ. ಅವರು ನೀಡಿರುವ ವರದಿಯ ಪ್ರಕಾರ ವೈದ್ಯರ ಸೇವೆಯಲ್ಲಿ ಯಾವುದೇ ಕುಂದು ಕೋರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಿಂಗರ್ ಲ್ಯಾಕ್ಟೇಟ್ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ನಮಗೂ ಈ ಮೊದಲು ಐವಿ ದ್ರಾವಣದ ಮೇಲೆ ಅನುಮಾನವಿತ್ತು. 6 ತಿಂಗಳ ಹಿಂದೆಯೇ ನಾವು ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ತಡೆಹಿಡಿದಿದ್ವಿ.. ಆದರೆ ಕಂಪನಿಯವರು ಕೋರ್ಟ್ ಮೊರೆ ಹೋಗಿ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ಪಾಸಿಟಿವ್ ವರದಿ ತಂದು KSMCL ನಿಂದ ಬಿಡುಗಡೆ ಮಾಡಿಸಿಕೊಂಡ್ರು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ಕಂಪನಿಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಕ್ರಮ ವಹಿಸುತ್ತಿದ್ದು, ಕಂಪನಿಯವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ರಾಜ್ಯಾದ್ಯಂತ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯನ್ನ ನಿಲ್ಲಿಸಲಾಗಿದೆ ಎಂದು ಸಚಿವ ಗುಂಡೂರಾವ್ ಸ್ಪಷ್ಟಪಡಿಸಿದರು. ಸಚಿವರ ಸ್ಪಷ್ಟನೆ ಬಳಿಕ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನ ಕೈಬಿಟ್ಟರು.

ಆಸ್ಪತ್ರೆ ಭೇಟಿ ನೀಡಿ ಆಪರೇಷನ್ ಥಿಯೇಟರ್ ಗಳನ್ನ ಪರಿಶೀಲಿಸಿದ ಸಚಿವರು, ಸರ್ಜರಿಗಳ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪಶ್ಚಿಮ ಬಂಗಾ ಕಂಪನಿ ಪೂರೈಸಿದ್ದ 192 ಐವಿ ರಿಂಗರ್ ಲ್ಯಾಕ್ಟೇಟ್ ಬ್ಯಾಚ್ ಗಳನ್ನ ತಡೆಹಿಡಿದಿದ್ದು, ಆಸ್ಪತ್ರೆಗಳಿಂದ ಹಿಂಪಡೆಯಲಾಗಿದೆ. ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಸೂಚಿಸಿದ್ದೇನೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಗ್ಲುಕೋಸ್ ಕೋರೆತೆಯಾಗದಂತೆ ನಿಗಾ ವಹಿಸಲಾಗಿದೆ. ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್ ಪ್ರಕ್ರಿಯೆ ಕೂಡ ನಡೆಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸೆಂಟ್ರಲ್ ಡ್ರಗ್ ಲ್ಯಾಬ್ ಪಾಸಿಟಿವ್ ವರದಿ ನೀಡಿದ್ದರಿಂದ ಸ್ಥಗಿತಗೊಳಿಸಿದ್ದ ರಿಂಗರ್ ಲ್ಯಾಕ್ಟೇಟ್ ರಿಲೀಸ್ ಆಯ್ತು

ಐವಿ ರಿಂಗರ್ ಲ್ಯಾಕ್ಟೇಟ್ ಅನ್ನ 6 ತಿಂಗಳ ಹಿಂದೆಯೇ ಬಳಸದಂತೆ ಸ್ಥಗಿತಗೊಳಿಸಲಾಗಿತ್ತು. ಪಶ್ಚಿಮ ಬಂಗಾ ಕಂಪನಿಯನ್ನ ಬ್ಲಾಕ್ ಲೀಸ್ಟ್ ಕೂಡಾ ಸೇರಿಸಲಾಗಿತ್ತು.
ಪಾವಗಡ ಆಸ್ಪತ್ರೆಯಲ್ಲಿ ದ್ರಾವಣ ಬಳಕೆಯ ಸಂದರ್ಭದಲ್ಲಿ ಕೆಲವು ಅನುಮಾನ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿಯೇ ಮುಂಜಾಗೃತ ಕ್ರಮವಾಗಿ 192 ಬ್ಯಾಚ್ ಗಳಲ್ಲಿ ಪೂರೈಕೆಯಾಗಿದ್ದ ಐವಿ ದ್ರಾವಣವನ್ನ ತಡೆಹಿಡಿದು, ಏಲ್ಲಿಯೂ ಬಳಸದಂತೆ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದೇವು. ಆ ನಂತರ ಟೆಸ್ಟ್ ಮಾಡಿಸಿದಾಗ ರಾಜ್ಯದ ಡ್ರಗ್ ಕಂಟ್ರೋಲ್ ನವರು ಎರಡು ಬ್ಯಾಚ್ ಗಳು ಸ್ಡ್ಯಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದು ವರದಿ ನೀಡಿದ್ದರು. ವರದಿಯ ಹಿನ್ನೆಲೆಯಲ್ಲಿ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನ ಕೂಡ ಬ್ಲಾಕ್ ಲಿಸ್ಟ್ ಗೆ ಸೇರಿಸಿಸಲಾಗಿತ್ತು.
ಆದರೆ ಕಂಪನಿಯವರು ಹೈಕೋರ್ಟ್ ಮೊರೆ ಹೋಗಿ ಸ್ಟೇ ಆರ್ಡರ್ ತೆಗೆದುಕೊಂಡರು. ಅಲ್ಲದೇ ರಾಜ್ಯದ ಡ್ರಗ್ ಕಂಟ್ರೋಲರ್ ನೀಡಿದ್ದ NSQ ವರದಿಯನ್ನ ಪ್ರಶ್ನಿಸಿ ಸೆಂಟ್ರಲ್ ಡ್ರಗ್ ಲ್ಯಾಬರೋಟಿರಿಯ ಮೆಟ್ಟಿಲೇರಿದರು. ನಮ್ಮಲ್ಲಿ NSQ ಬಂದಿದ್ದ ಎರಡು ಬ್ಯಾಚ್ ಗಳು CDL ನಲ್ಲಿ ಸ್ಟಾಂಡರ್ಡ್ ಕ್ವಾಲಿಟಿ (SQ) ಎಂದು ವರದಿ ನೀಡಿದರು. CDL ನವರು SQ ವರದಿ ಕೊಟ್ಟಿದ್ದರಿಂದ ತಡೆಹಿಡಿದಿದ್ದ ಐವಿ ದ್ರಾವಣವನ್ನ KSMCL ನವರು ರಿಲೀಸ್ ಮಾಡಿದರು. ಅವರು ಆ ರೀತಿಯ ವರದಿ ಕೊಡದಿದ್ದರೆ ಐವಿ ದ್ರಾವಣವನ್ನ ಆಸ್ಪತ್ತೆಗಳಿಗೆ ಪೂರೈಸುವ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ. ಏಕಂದರೆ 192 ಬ್ಯಾಚ್ ಗಳನ್ನ ಬಳಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವು. ಡ್ರಗ್ ಟೆಸ್ಟಿಂಗ್ ನಲ್ಲಿ ಸೆಂಟ್ರಲ್ ಡ್ರಗ್ ಲ್ಯಾಬರೋಟರಿ (CDL) ಕೊಡುವ ವರದಿ ಅಂತಿಮ ಆಗಿರುವುದರಿಂದ ಟೆಂಡರ್ ನಿಯಮದ ಪ್ರಕಾರ ನಾವು ತಿರಸ್ಕರಿಸಲು ಅವಕಾಶವಿರಲಿಲ್ಲ.

ಅಲ್ಲದೇ ರಾಜ್ಯದ ಔಷಧಿ ಸರಬರಾಜು ನಿಗಮ NABL ನವರು ಟೆಸ್ಟಿಂಗ್ ನಡೆಸಿದಾಗ 192 ಬ್ಯಾಚ್ ಗಳಿಗೆ NABL ನವರು ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದ್ದರು. ಆದರೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯದ ಡ್ರಗ್ ಕಂಟ್ರೋಲ್ ನವರು NSQ ವರದಿ ನೀಡಿದ್ದ 22 ಬ್ಯಾಚ್ ಗಳನ್ನ ಆಸ್ಪತ್ರೆಗಳಿಗೆ ನೀಡಿರಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸ್ಪಷ್ಟಪಡಿಸಿದರು.

ಮೃತ ಬಾಣಂತಿಯರಾದ ನಂದನಿ, ಲಲಿತಾ ಹಾಗೂ ಕುಡ್ಲಗಿಯ ಸುಮಯಾ ಅವರುಗಳ ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವರು, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಈ ಪ್ರಕರಣದಿಂದ ನೋವುಂಟಾಗಿದೆ. ಬಾಣಂತಿಯರನ್ನ ಆರೈಕೆ ಮಾಡಿ ಜೀವ ಉಳಿಸಲು ಸಾಧ್ಯವಿರುವಾಗ ಈ ರೀತಿಯ ಸಾವುಗಳು ಸಂಭವಿಸಬಾರದು. ಮುಂದೆ ಈ ರೀತಿಯ ಸಾವುಗಳು ಆಗದಂತೆ ಎಚ್ವರಿಕೆ ವಹಿಸುವುದರ ಜೊತೆಗೆ, ಘಟನೆಯಲ್ಲಾದ ಲೋಪದೋಷಗಳನ್ನ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಖುವುದಾಗಿ ಕುಟುಂಬ ವರ್ಗದವರಿಗೆ ಸಚಿವರು ಭರವಸೆ ನೀಡಿದರು. ಮೃತ ಬಾಣಂತಿಯರ ಕುಟುಂಬ ವರ್ಗದವರಿಗೆ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು, ಹೆಚ್ವಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.