ವಾಯುವ್ಯ ಚೀನಾದಲ್ಲಿ ಎರಡು ಹೊಸ ಜಾತಿಯ ಡೈನೋಸಾರ್‌ಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸುಮಾರು 130 ರಿಂದ 120 ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದಿರಬಹುದಾದ ಮೂರು ವಿಭಿನ್ನ ಡೈನೋಸಾರ್‌ಗಳ ಪಳೆಯುಳಿಕೆಗಳು ಚೀನಾದ ಟರ್ಪನ್-ಹಾಮಿ ಜಲಾನಯನ ಪ್ರದೇಶದಲ್ಲಿ ಸುಮಾರು 2 ರಿಂದ 5 ಕಿಮೀ ಅಂತರದಲ್ಲಿ ಕಂಡುಬಂದಿವೆ ಎಂದು ಅಧ್ಯಯನ ಹೇಳಿದೆ. ‘ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್’ ಮತ್ತು ‘ನ್ಯಾಷನಲ್ ಮ್ಯೂಸಿಯಂ ಆಫ್ ಬ್ರೆಜಿಲ್’ನ ಸಂಶೋಧಕರು ಈ ಬಗ್ಗೆ ‘ನೇಚರ್ ಫ್ಯಾಮಿಲಿ ಆಫ್ ಜರ್ನಲ್’ನಲ್ಲಿ ಪ್ರಕಟಿಸಿದ್ದಾರೆ.
ವಿಜ್ಞಾನಿಗಳು ಹೊಸದಾಗಿ ಪತ್ತೆಯಾದ ಪಳೆಯುಳಿಕೆಗೆ ಸಿಲುಟಿಟಾನ್ ಸಿನೆನ್ಸಿಸ್ (Silutitan sinensis) ಅಥವಾ “ಸಿಲು” ಮತ್ತು ಹಮಿಟಿಟಾನ್ ಸಿಂಜಿಯಾನ್ಜೆನ್ಸಿಸ್ಪನಸ್ ( Hamititan xinjiangensis)ಎಂದು ಹೆಸರಿಸಿದ್ದಾರೆ. ‘ಸಿಲು’ ಎಂದರೆ ಚೀನಾದ ಭಾಷೆಯಲ್ಲಿ “ಸಿಲ್ಕ್ ರೋಡ್” ಮತ್ತು ‘ಹಮಿ’ ಎಂಬುವುದು ಪಳೆಯುಳಿಕೆ ದೊರೆತ ಹಮಿ ಪಟ್ಟಣದ ಹೆಸರು.
ಅಧ್ಯಯನದ ಪ್ರಕಾರ ಸಿಲುಟಿಟಾನ್ ಸೈನೆನ್ಸಿಸ್ ಒಂದು ಹೊಸ ಜಾತಿಯ ಸೌರೋಪಾಡ್ (sauropod) ಆಗಿದ್ದು ಬಹಳ ಉದ್ದವಾದ ಕುತ್ತಿಗೆ, ಉದ್ದ ಬಾಲ, ದೊಡ್ಡ ದೇಹ ಮತ್ತು ಸಣ್ಣ ತಲೆ ಹೊಂದಿರುವ ಸಸ್ಯ ತಿನ್ನುವ ಡೈನೋಸಾರ್. ಡೈನೋಸಾರ್ ತನ್ನ ಕುತ್ತಿಗೆಯ ಕಶೇರುಖಂಡದಲ್ಲಿ ಕೆಲವು ಗುಣಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ, ಇದು ಯುಹೆಲೋಪೊಡಿಡೆ (Euhelopodidae) ಎಂಬ ಸೌರೋಪಾಡ್ಸ್ ಕುಟುಂಬಕ್ಕೆ ಸೇರಿದ್ದು, ಇದು ಪೂರ್ವ ಏಷ್ಯಾದಲ್ಲಿ ಮಾತ್ರ ಕಂಡುಬಂದಿದೆ.
Hamititan xinjiangensis 55 ಅಡಿಗಳಿಗಿಂತ ಹೆಚ್ಚು ಉದ್ದವಿತ್ತು ಎಂದು ಅಂದಾಜಿಸಲಾಗಿದೆ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಸೌರೋಪಾಡ್‌ಗಳಂತಹ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದರ ಕಶೇರುಖಂಡಗಳ ಉದ್ದಕ್ಕೂ ಇರುವ ಆಕಾರ ಮತ್ತು ಅಂಚುಗಳು ಇದು ಏಷಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೇರಳವಾಗಿರುವ ಟೈಟಾನೋಸಾರ್ಸ್ ಎಂದು ಕರೆಯಲ್ಪಡುವ ಸೌರೋಪಾಡ್ಸ್ ಕುಟುಂಬಕ್ಕೆ ಸೇರಿದ್ದು ಎಂದು ಸೂಚಿಸುತ್ತದೆ.
ಸಿಲುಟಿಟನ್ ಮಾದರಿಯು 65.6 ಅಡಿಗಳಿಗಿಂತ ಹೆಚ್ಚು ಉದ್ದವಿತ್ತು ಎಂದು ಅಂದಾಜಿಸಲಾಗಿದೆ ಮತ್ತು ನೀಲಿ ತಿಮಿಂಗಿಲಗಳಷ್ಟು ದೊಡ್ಡದಾಗಿತ್ತು ಎಂದೂ ಅಧ್ಯಯನ ತಿಳಿಸಿದೆ. ಅಧ್ಯಯನದ ಪ್ರಕಾರ, ಸುಮಾರು 160.3 ದಶಲಕ್ಷ ವರ್ಷಗಳ ಹಿಂದೆ ಜುರಾಸಿಕ್ ಅವಧಿಯ ಅಂತ್ಯದಿಂದ ಕ್ರಿಟೇಶಿಯಸ್ ಅವಧಿಯ ಅಂತ್ಯದವರೆಗೆ ವಾಸಿಸುತ್ತಿದ್ದ ಡೈನೋಸಾರ್‌ಗಳ ಒಂದು ಗುಂಪು ಸೋಂಫೋಸ್ಪಾಂಡೈಲನ್ ಸೌರೋಪಾಡ್ ಆಗಿರುವ ಸಾಧ್ಯತೆಗಳಿವೆ.
“ಅಧ್ಯಯನದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ” ಎಂದು ಅಧ್ಯಯನದ ಸಹ ಲೇಖಕ ಮತ್ತು ರಿಯೋ ಡಿ ಜನೈರೊದಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನಿರ್ದೇಶಕ ಅಲೆಕ್ಸಾಂಡರ್ ಕೆಲ್ನರ್ ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. “ಈ ‘ದಕ್ಷಿಣ ಅಮೆರಿಕನ್’ ಡೈನೋಸಾರ್ ಏಷ್ಯಾದಲ್ಲಿ ಹೇಗೆ ಕೊನೆಗೊಂಡಿತು?” ಬ್ರೆಜಿಲಿಯನ್ ಪ್ಯಾಲಿಯಂಟಾಲಜಿಸ್ಟ್ ಕೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದು ಎಂದು ಹೇಳಿರುವ ಕೆಲ್ನರ್ ಹೊಸದಾಗಿ ಪತ್ತೆಯಾದ ಡೈನೋಸಾರ್‌ಗಳ ಜಾತಿಯ ಮೊಟ್ಟೆಗಳು ಮತ್ತು ಭ್ರೂಣದ ಅವಶೇಷಗಳಿಂದ ತುಂಬಿದ ಗೂಡುಗಳು ಈ ಪ್ರದೇಶದಲ್ಲಿ ಇರುವ ಸಾಧ್ಯತೆಗಳು ಇವೆ ಅಂದಿದ್ದಾರೆ. “ನಾವು ಅಲ್ಲಿ ಡೈನೋಸಾರ್ ಗೂಡುಗಳನ್ನು ಹುಡುಕುವ ಕನಸು ಕಾಣುತ್ತಲೇ ಇದ್ದೇವೆ.” ಎಂದು ಅವರು ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಆಗ್ನೇಯ ಚೀನಾದಲ್ಲಿ ಮೊಟ್ಟೆಯ ಗೂಡಿನ ಮೇಲೆ ಕುಳಿತ ಸ್ಥಿತಿಯಲ್ಲಿದ್ದ ಡೈನೋಸಾರ್ ಪಳೆಯುಳಿಕೆ ಪತ್ತೆಯಾಗಿತ್ತು ಮತ್ತು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈಶಾನ್ಯ ಚೀನಾದಲ್ಲಿ ಡೈನೋಸಾರ್‌ನ ಮತ್ತೊಂದು ಹೊಸ ಪ್ರಭೇದವನ್ನು ಕಂಡುಹಿಡಿಯಲಾಗಿತ್ತು.
| | |