ರಾಷ್ಟ್ರೀಯ ಶಿಕ್ಷಣ ನೀತಿಯಡಿ ದಾಖಲಾತಿಗಳು ಆರಂಭವಾಗಿವೆ. ಆದರೆ, ಭವಿಷ್ಯದಲ್ಲಿ ನಮ್ಮನ್ನು ಕಾಡಬಹುದಾದ ನೀತಿಯ ಕೆಲವು ಸಮಸ್ಯೆಗಳನ್ನು ತಜ್ಞರು ತೋರಿಸಿದ್ದಾರೆ.
“ಶಿಕ್ಷಣ ಮಾನವನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವುದಕ್ಕೆ, ಸಮತೆಯ ಮತ್ತು ನ್ಯಾಯಯುತವಾದ ಸಮಾಜವನ್ನು ನಿರ್ಮಿಸುವುದಕ್ಕೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಪೋಷಿಸುವುದಕ್ಕೆ ಅತ್ಯಗತ್ಯ. ಸರ್ವರಿಗೂ ಉತ್ತಮ ಗುಣಮುಟ್ಟದ ಶಿಕ್ಷಣಾವಕಾಶವನ್ನು ಕಲ್ಪಿಸಿ ಕೊಡುವುದು ಭಾರತದ ಏಳಿಗೆಗೆ ಅವಶ್ಯಕ. ಈ ಮೂಲಕವೇ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ವೈಜ್ಞಾನಿಕ ಬೆಳವಣಿಗೆ, ರಾಷ್ಟ್ರೀಯ ಒಗ್ಗೂಡುವಿಕೆ ಮತ್ತು ಸಾಂಸ್ಕೃತಿಕ ಬದುಕುಳಿಯುವಿಕೆ ಸಾಧ್ಯ.”
ಈ ಮಾತುಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಆರಾಂಭವಾಗುತ್ತದೆ. ಜುಲೈ 2020ರಲ್ಲಿ ಪರಿಚಯಿಸಲಾದ ಈ ನೀತಿ ಒಂದು ಹೊಸ ಜಾಗತೀಕರಣದ ಶಿಕ್ಷಣ ವ್ಯವಸ್ಥೆಯನ್ನು ಹುಟ್ಟುಹಾಕಲು ಉದ್ದೇಶಿಸುತ್ತದೆ. ರಾಜೀವ್ ಗಾಂಧಿ ಅವರ ಸರಕಾರ ಜಾರಿಗೆ ತಂದಿದ್ದ ಶಿಕ್ಷಣ ನೀತಿಯ ಬಳಿಕ 36 ವರ್ಷಗಳ ನಂತರ ಈ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಲಾಗಿದೆ. ಅದಾದ ನಂತರ, ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು ನಮ್ಮ ಬದುಕಿನ ಪರಿಸರವನ್ನೇ ಬದಲಿಸಿದೆ. ಎನ್.ಇ.ಪಿ. 2020 ಭಾರತವನ್ನು 21ನೇ ಶತಮಾನಕ್ಕೆ ಕರೆದೊಯ್ಯಲು ಮುಂದಾಗಿದ್ದು ಜಾಗತಿಕ ಮಟ್ಟದ ಶಿಕ್ಷಣವನ್ನು ಭಾರತದಲ್ಲಿ ಆರಂಭಿಸುವ ಗುರಿಯನ್ನು ಹೊಂದಿದೆ.
ಉನ್ನತ ಶಿಕ್ಷಣಕ್ಕಾಗಿ, ಪುರಾತನ ನಳಂದ ತಕ್ಷಶಿಲೆಗಳ ಮಾದರಿಯಲ್ಲಿ ಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಗುಂಪುಗಳನ್ನು ಪ್ರತೀ ಜಿಲ್ಲೆಯಲ್ಲೂ ಸೃಷ್ಟಿ ಮಾಡುವ ಎತ್ತರದ ಉಪಾಯಗಳನ್ನು ಈ ನೀತಿ ಹೊಂದಿದೆ. ಜೊತೆಗೆ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿ, ವಿಶ್ವವಿದ್ಯಾಲಯಗಳನ್ನು ಮತ್ತು ಪಠ್ಯಕ್ರಮಗಳನ್ನು ಇನ್ನಷ್ಟು ಸಂಶೋಧನಾತ್ಮಕವಾಗಿಸುತ್ತಾ ಎಲ್ಲಾ ಪದವಿ ಕೋರ್ಸ್ ಗಳನ್ನು ನಾಕು ವರ್ಷಗಳ ಅಭ್ಯಾಸಕ್ರಮಗಳನ್ನಾಗಿಸುತ್ತದೆ. ಹೀಗೆ ಹಲವಾರು ಪ್ರಮುಖ ಬದಲಾವಣೆಯನ್ನು ತರಲು ಈ ನೀತಿ ಇಚ್ಛಿಸುತ್ತದೆ.
“ಯಾವುದೇ ನೀತಿಯ ಗುಣವು ಅದರ ಜಾರಿಗಾರಿಕೆಯಲ್ಲಿದೆ. ಈ ಜಾರಿಗಾರಿಕೆಗೆ ಹಲವಾರು ಕ್ರಮಗಳು ಮತ್ತು ಉಪಕ್ರಮಗಳು ಅಗತ್ಯವಿರುತ್ತವೆ. ಈ ಕೆಲಸಗಳನ್ನು ಹಲವಾರು ಸಮಿತಿಗಳ ಮೂಲಕ ವ್ಯವಸ್ಥಿತವಾಗಿ ನಡೆಸಬೇಕಾಗುತ್ತದೆ,” ಎಂದು ಎನ್.ಇ.ಪಿ. ಹೇಳುತ್ತದೆ. ಇದನ್ನು ಪರಿಚಯಿಸುವಾಗ, ಒಕ್ಕೂಟ ಸರಕಾರವು ಇದನ್ನು 2030ರ ಒಳಗೆ ಜಾರಿಗೆ ತರಬೇಕು ಎಂದು ಆದೇಶಿಸಿತ್ತು. ಹೊಸ ಪಠ್ಯಕ್ರಮವನ್ನು ತಯಾರಿಸುವುದಕ್ಕೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅವಶ್ಯಕ ಸವಲತ್ತು-ಸೌಕರ್ಯಗಳನ್ನು ನಿರ್ಮಿಸುವುದಕ್ಕೆ ಮತ್ತು ವಿದ್ಯಾರ್ಥಿ-ಶಿಕ್ಷಕರಿಗೆ ಸ್ಪಷ್ಟತೆ ನೀಡುವುದಕ್ಕೆ ಈ ಹತ್ತು ವರ್ಷಗಳ ಅವಧಿ ರಾಜ್ಯಗಳಿಗೆ ಉಪಯೋಗವಾಗುತ್ತಿತ್ತು. ಆದರೆ, ಕರ್ನಾಟಕ ಸರಕಾರವು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೇ ಇದನ್ನು ಜಾರಿಗೆ ತಂದು ದೇಶದ ಮೊದಲ ರಾಜ್ಯವಾಗುತ್ತದೆ ಅಂದು ಆಗಸ್ಚ್ ತಿಂಗಳಲ್ಲಿ ಘೋಷಿಸಿತು. ದಾಖಲಾತಿಗಳು ನಡೆಯುವ ಒಂದು ತಿಂಗಳ ಮುನ್ನ ಬಂದ ಈ ಘೋಷಣೆ ಕಾಲೇಜುಗಳನ್ನು ಗೊಂದಲಕ್ಕೆ ದೂಡಿದೆ.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಈಗಾಗಲೇ ಗಲಿಬಿಲಿಗೊಳಗಾಗಿದ್ದ ಶಿಕ್ಷಣ ವಿಧಾನಗಳ ಮತ್ತು ವೇಳಾಪಟ್ಟಿಗಳ ಗೊಂದಲಗಳೊಡನೆ ಈ ನಿರ್ಧಾರ ಬೃಹತ್ ಗಡಿಬಿಡಿಯನ್ನು ಸೃಷ್ಟಿಸಿದೆ. ಇದೆಲ್ಲದರ ಜೊತೆಗೆ ಕಾಲೇಜುಗಳು ಹೊಸ ಕಾರ್ಯನಿರ್ವಹಣಾ ವಿಧಾನಗಳಿಗೆ ಒಗ್ಗಿಕೊಳ್ಳಬೇಕಿದೆ.
ಮೂರು ಮೇಜರ್ ವ್ಯವಸ್ಥೆಯನ್ನು ಎರಡು ಮೇಜರ್ ವ್ಯವಸ್ಥೆಗೆ ಬದಲಿಸುವುದು, ಹಲವಾರು ಪ್ರವೇಶ ಮತ್ತು ನಿರ್ಗಮನ ಅವಕಾಶಗಳನ್ನು ಸೃಷ್ಟಿಸುವುದು, ಪದವಿ ಅಭ್ಯಾಸಕ್ರಮಗಳನ್ನು ನಾಕು ವರ್ಷದ ಕೋರ್ಸ ಗಳಾಗಿ ಮಾರ್ಪಡಿಸುವುದು, ಕನ್ನಡವನ್ನು ಕಡ್ಡಾಯ ಅಧ್ಯಯನಾ ಭಾಷೆಯನ್ನಾಗಿಸುವುದು ಮತ್ತು ನಾಲ್ಕನೇ ವರ್ಷದಲ್ಲಿ ಪ್ರಮುಖ ಸಂಶೋಧನಾ ಅಂಶವನ್ನು ಪರಿಚಯಿಸುವುದು – ಇವೆಲ್ಲವೂ ಕರ್ನಾಟಕದಲ್ಲಿ ಆಗುವ ಮಹತ್ವಕಾರಿ ಬದಲಾವಣೆಗಳು.
ಈ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗದಿದ್ದರೂ ಭವಿಷ್ಯದಲ್ಲಿ ನಮ್ಮನ್ನು ಕಾಡಬಹುದಾದ ನೀತಿಯ ಕೆಲವು ಸಮಸ್ಯೆಗಳನ್ನು ತಜ್ಞರು ತೋರಿಸಿದ್ದಾರೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಂದ ಬರುವ ವಿದ್ಯಾರ್ಥಿಗಳಿಗಂತೂ ಈ ಸಮಸ್ಯೆಗಳು ಬಹಳ ಗಂಭೀರವಾಗುವಂತವು.
ಹಲವಾರು ಪ್ರವೇಶ ಮತ್ತು ನಿರ್ಗಮನಾ ಆಯ್ಕೆಗಳು ಈ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಉಪಬಂಧದ ಪ್ರಕಾರ ವಿದ್ಯಾರ್ಥಿಗಳು ಯಾವ ಸಮಯದಲ್ಲಾದರೂ ತಮ್ಮ ಅಭ್ಯಾಸವನ್ನು ನಿಲ್ಲಿಸಿ ಅದಕ್ಕೆ ಅನುಸಾರವಾಗಿ ಸರ್ಟಿಫಿಕೇಟ್ ಗಳನ್ನು ಪಡೆಯಬಹುದು. ನಾಕು ವರ್ಷಗಳ ಕಾಲ ಅಧ್ಯಯನ ನಡೆಸಲಾಗದೇ ಇರುವವರಿಗೂ ಸರ್ಟಿಫಿಕೇಟ್ ದೊರೆಯುವುದರಿಂದ ಮೇಲ್ನೋಟಕ್ಕೆ ಇದು ಪ್ರಗತಿದಾಯಕ ನಡೆಯಾಗಿ ಕಾಣಬಹುದು. ಆದರೆ, ಒಮ್ಮೆ ನಿರ್ಗಮಿಸಿದ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಶೈಕ್ಷಣಿಕವಾಗಿ ಸೆಳೆಯಲು ಯಾವುದೇ ಪ್ರೋತ್ಸಾಹವನ್ನು ನೀತಿ ನೀಡುವುದಿಲ್ಲ. “ಎರಡನೇ ಸೆಮೆಸ್ಟರ್ ನ ನಂತರ ವಿದ್ಯಾರ್ಥಿ ಅಧ್ಯಯನ ನಿಲ್ಲಿಸಿದರೆ, ಕನಿಷ್ಟ ಪಕ್ಷ ಅವರಿಗೆ ಒಂದು ಸರ್ಟಿಫಿಕೇಟ್ ದೊರೆಯುತ್ತದೆ. ಈ ಪರಿಭಾಷೆಯೇ ಅಪಾಯಕಾರಿ,” ಬೆಂಗಳೂರಿನ ಸ್ವಾಯತ್ತ ಕಾಲೇಜೊಂದರ ಪ್ರಾಧ್ಯಾಪಕರು ಹೀಗೆ ಹೇಳಿದರು. ಅವರ ಪ್ರಕಾರ ವಿದ್ಯಾರ್ಥಿಗಳು ಎಂದಿಗೂ ಈ ‘ಕನಿಷ್ಟ ಪಕ್ಷ’ದ ಮನಸ್ಥಿತಿಯನ್ನು ರೂಢಿಸಿಕೊಳ್ಳಬಾರದು.
“ಕಾಲೇಜಿಗೆ ಹಿಂತಿರುಗದೇ ಇರುವಂತಹ ಸುಲಭ ಸಾಧ್ಯ ಆಯ್ಕೆಯನ್ನು ಅವರಿಗೆ ಇದು ನೀಡುತ್ತದೆ. ಅವರು ಕಾಲೇಜಿಗೆ ಬರಬೇಕು ಎಂಬುದೇ ನಮ್ಮ ಆಶಯ.” ಎಂದೂ ಹೇಳಿದರು.
ಈ ನೀತಿ ವೃತ್ತಿಪರ ಮತ್ತು ಔದ್ಯೋಗಿಕ (ವೊಕೆಷನಲ್) ವಿದ್ಯಾರ್ಥಿಗಳಿಗೂ ಸರ್ಟಿಫಿಕೇಟ್ ಗಳನ್ನು ನೀಡುವುದರಿಂದ – “ಪಠ್ಯ, ಸಹಪಠ್ಯ ಮತ್ತು ಪಠ್ಯೇತರ ವಿಷಯಗಳ ನಡುವೆ ಯಾವುದೇ ಕಠಿಣ ಪ್ರತ್ಯೇಕಿಕರಣ ಇರುವುದಿಲ್ಲ. ಔದ್ಯೋಗಿಕ ಮತ್ತು ಶೈಕ್ಷಣಿಕ ಶಿಕ್ಷಣಕ್ಕೆ ಸಮಾನ ಬೆಲೆ ಸಿಗುತ್ತದೆ” ಎಂದು ನೀತಿ ಹೇಳುತ್ತದೆ.
“ಶಿಕ್ಷಣಶಾಸ್ತ್ರ, ಆಧುನಿಕ ಪ್ರಜ್ಷೆ, ವೈಜ್ಞಾನಿಕ ಮನೋಭಾವ, ಪ್ರಜಾತಾಂತ್ರಿಕ ಮೌಲ್ಯಗಳು, ಸಂವಿಧಾನ ಮತ್ತು ಮಾನವರ ವ್ಯಕ್ತಿತ್ವವನ್ನು ಬೆಳೆಸುವ ತಂತ್ರಜ್ಞಾನ – ಇವೆಲ್ಲವನ್ನು ಗುಣಮಟ್ಟದ ಸಾರ್ವಜನಿಕ ಶಿಕ್ಷಣದ ಮೂಲಕ ಸಾಧಿಸಲಾಗುತ್ತದೆ. ಆದರೆ ಎನ್.ಇ.ಪಿ. ಶಿಕ್ಷಣದ ಪರಿಕಲ್ಪನೆಯನ್ನು ನಿರುತ್ಸಾಹದಿ ತಿರಸ್ಕರಿಸಿ ‘ಇದನ್ನು ಕಲಿತರೆ, ಈ ಕೆಲಸ ಸಿಗುತ್ತದೆ’ ಎಂದು ಹೇಳುತ್ತದೆ. ಶಿಕ್ಷಣವನ್ನು ಗುಣಮಟ್ಟದಿಂದ ಪ್ರತ್ಯೇಕಿಸಿ ಉದ್ಯೋಗಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ.” ಎಂದು ಹೋರಾಟಗಾರರಾದ ಬಿ.ಶ್ರೀಪಾದ್ ಭಟ್ ಅವರು ಹೇಳುತ್ತಾರೆ. “ನಿಮಗೆ ಔದ್ಯೋಗಿಕ ಶಿಕ್ಷಣವನ್ನು ತರಲೆಬೇಕೆಂದಿದ್ದರೆ, ಅವುಗಳನ್ನು ಭಾಷೆ, ಇತಿಹಾಸ ಇತ್ಯಾದಿಗಳ ಶಿಕ್ಷಣಶಾಸ್ತ್ರದಲ್ಲಿ ಒಳಗೊಳಿಸಿ.”
ನೀತಿಯ ಮತ್ತೊಂದು ಸಮಸ್ಯೆಯೆಂದರೆ ಭಾಷೆಗಳ ಅಧ್ಯಯನ. ಸದ್ಯದ ಶಿಕ್ಷಣ ಮಾದರಿಯಲ್ಲಿ ಎರಡು ಭಾಷೆಗಳನ್ನು ಆಧ್ಯಯಿಸಬೇಕು. ಮೊದಲನೇ ಭಾಷೆ ಇಂಗ್ಲಿಷ್ ಆಗಿದೆ ಮತ್ತು ಎರಡನೇ ಭಾಷೆಯನ್ನು ಹಿಂದಿ, ಕನ್ನಡ, ಸಂಸ್ಕೃತ, ಫ್ರೆಂಚ್, ಇತ್ಯಾದಿ ಭಾಷೆಗಳಿಂದ ಆಯ್ದುಕೊಳ್ಳಬೇಕು. ಆದರೆ ಎನ್.ಇ.ಪಿ. ನಾಕು ಸೆಮೆಸ್ಟರ್ ಗಳಲ್ಲಿ ಆಧ್ಯಯಿಸುವ ಮೊದಲನೇ ಭಾಷೆಯನ್ನು ಕನ್ನಡವನ್ನಾಗಿಸಿಬೇಕೆಂದು ಆದೇಶಿಸುತ್ತದೆ. ಇಂಗ್ಲಿಷ್ ಸೇರಿದಂತೆ ಉಳಿದ ಭಾಷೆಗಳು ಎರಡನೇ ಭಾಷೆಯಾಗುತ್ತವೆ. ಇದು ರಾಜ್ಯಾದ್ಯಂತ ಇತರೆ ಭಾಷಾ ವಿಭಾಗಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ಇಂಗ್ಲಿಷನ್ನು ಎರಡನೇ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಉರ್ದು ಅಥವಾ ಸಂಸ್ಕೃತದಂತಹ ಇತರೆ ಭಾಷೆಗಳನ್ನು ನಿರಾಕರಿಸಬಹುದು. ವಿದ್ಯಾರ್ಥಿಗಳು ಈಗಾಗಲೇ ಕನ್ನಡ ಭಾಷಿಗರೇ ಅಥವಾ ಕನ್ನಡ ಮಾತನಾಡದೇ ಇರುವವರೇ ಎಂದು ಪರಿಗಣಿಸಿ ವಿಶ್ವವಿದ್ಯಾಲಯವೂ ಸಹ ವಿದ್ಯಾರ್ಥಿಗಳಿಗೆ ಎರಡು ಪಠ್ಯಕ್ರಮಗಳನ್ನು ಸೃಷ್ಟಿಸಬೇಕಾಗುತ್ತದೆ.
“ಕನ್ನಡವನ್ನು ಅನಿವಾರ್ಯ ಆಯ್ಕೆಯಾಗಿಸಿದರೆ ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ ಮತ್ತು ಉರ್ದು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳದೆ ಇರಬಹುದು ಎಂದು ಆಯಾ ವಿಭಾಗದವರು ಹೇಳುತ್ತಿದ್ದಾರೆ. ಎರಡನೇ ಭಾಷೆಗೆ ನಾಕು ಅಥವಾ ಐದು ಭಾಷೆಗಳಲ್ಲಿ ಒಂದನ್ನು ಆಯ್ದುಕೊಳ್ಳಲೇ ಬೇಕೆಂದರೆ ಬಹುತೇಕರು ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷ್ ಉದ್ಯೋಗದ ದೃಷ್ಟಿಯಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ಒಂದು ಭಾಷೆಯನ್ನು ಅನಿವಾರ್ಯ ಆಯ್ಕೆಯನ್ನಾಗಿಸುವುದರ ಕುರಿತು ಶಿಕ್ಷಕರು ಚಿಂತಿತರಾಗಿದ್ದಾರೆ” ಎಂದು ಶಿವಮೊಗ್ಗೆಯ ವಿಶ್ವವಿದ್ಯಾಲಯವೊಂದರ ಇಂಗ್ಲಿಷ್ ಪ್ರಾಧ್ಯಾಪಕರು ಹೇಳಿದರು.
ಭಾಷಾ ಆಧ್ಯಯನ ವಿಭಾಗಗಳ ಚಿಂತೆಗೆ ಮತ್ತೊಂದು ಕಾರಣ ಸಾಹಿತ್ಯ ಅಧ್ಯಯನಗಳಿಗೆ ನೀಡಲಾಗಿರುವ ಅಲ್ಪಮಹತ್ವ. ಈ ನೀತಿಯು ಇಂಗ್ಲಿಷನ್ನು ವಿಷಯವಾಗಿ ಬೋಧಿಸಲು ನೋಡುತ್ತದೆ, ಭಾಷೆಯಾಗಿ ಅಲ್ಲ. “ಎನ್.ಇ.ಪಿ. ಭಾಷೆಯ ಬೋಧನೆಯನ್ನು ಉಪಯೋಗಾತ್ಮಕ ಕಲಿಕೆಗೆ ಸೀಮಿತಗೊಳಿಸುತ್ತದೆ. ಭಾಷಾ ಆಧ್ಯಯನ ಉಪಯೋಗಾತ್ಮಕವಾಗಿರುವುದರ ಜೊತೆಗೆ ಪ್ರಸ್ತುತವಾಗಿಯೂ ಇರಬೇಕು. ವಿದ್ಯಾರ್ಥಿಗಳು ವೈವವಿಧ್ಯಾತ್ಮಕವಾದ ಗುಂಪು. ಅವರು ವಿವಿಧ ಹಿನ್ನಲೆಗಳಿಂದ ಬಂದಿರುತ್ತಾರೆ. ಅವರ ಅಗತ್ಯತೆಗಳು ಬೇರೆ ಬೇರೆಯದ್ದಾಗಿರುತ್ತದೆ. ಅವರ ಸಂವೇದನಾಶೀಲತೆಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ, ಈ ನೀತಿಯು ಎಲ್ಲರನ್ನೂ ಒಂದೇ ಗುಂಪಾಗಿ ಪರಿಗಣಿಸಿ ಒಂದೇ ಪಠ್ಯಕ್ರಮವನ್ನು ರೂಪಿಸುವುದಾಗಿ ಸೂಚಿಸುತ್ತದೆ. ಪ್ರಾಮುಖ್ಯತೆಯನ್ನು ಸಾಹಿತ್ಯ ಮತ್ತು ಸಂವಾದದಿಂದ ಉಪಯೋಗಾತ್ಮಕ ಕೌಶಲ್ಯಾಧಾರಿತ ಅಧ್ಯಯನಕ್ಕೆ ಬದಲಾಯಿಸಲಾಗಿದೆ,” ಎಂದು ಶಿವಮೊಗ್ಗೆಯ ವಿಶ್ವವಿದ್ಯಾಲಯವೊಂದರ ಇಂಗ್ಲಿಷ್ ಪ್ರಾಧ್ಯಾಪಕರು ಹೇಳಿದರು.
ಈ ಶಿಕ್ಷಣ ನೀತಿಯು ಶಿಕ್ಷಣ ಮತ್ತು ಯಶಸ್ಸನ್ನು ಅಸಂಬದ್ಧವಾಗಿ ಸಂಗಮಿಸುತ್ತದೆ. “ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಮತ್ತು ಸವಿಸ್ತಾರ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರನ್ನು ಉದ್ಯೋಗಕ್ಕಾಗಿ ತಯಾರಿಸುವುದು ಶಿಕ್ಷಣ ನೀತಿಯ ಮುಖ್ಯೋದ್ದೇಶವಾಗಿದೆ.” ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಆಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ನೀತಿಯ ಜಾರಿಗಾರಿಕೆಯ ಕುರಿತು ಘೋಷಿಸಿದ ಒಂದು ತಿಂಗಳ ನಂತರ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಮೇಜರ್-ಮೈನರ್ ಸಂಯೋಜನೆಗಳನ್ನು ಹೇಗೆ ಸಾಧ್ಯವಾಗಿಸುವುದು ಎಂಬುದರ ಕುರಿತು ತಯಾರಿ ನಡೆಸುತ್ತಿವೆ. ಈ ವರ್ಷದ ಮೊದಲನೇ ವರ್ಷದ ವಿದ್ಯಾರ್ಥಿಗಳು ಮಾತ್ರ ಹೊಸ ಶಿಕ್ಷಣ ನೀತಿಯಡಿ ಶಿಕ್ಷಣ ಪಡೆಯುತ್ತಾರೆ. ಹಾಗಾಗಿ ಉಳಿದ ವಿದ್ಯಾರ್ಥಿಗಳು ಮತ್ತು ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಎರಡು ಮಾದರಿಗಳ ಶಿಕ್ಷಣವನ್ನು ಹೇಗೆ ನೀಡುವುದು ಎಂಬುದರ ಬಗ್ಗೆಯೂ ಸಿದ್ಧತೆಗಳು ನಡೆಯುತ್ತಿವೆ.
ಈ ಘೋಷಣೆಯನ್ನು ಮಾಡಿದಾಗ ಕೆಲವು ಶಿಕ್ಷಕರು ಇದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಶಿಕ್ಷಣ ನೀತಿಯ ಬಹುಶಿಸ್ತೀಯ ಮಾದರಿ ಅವರಲ್ಲಿ ಭರವಸೆಯನ್ನು ಮೂಡಿಸಿತ್ತು. ಆದರೆ ಅದು ಹೀಗೆ ತಯಾರಿಯಿಲ್ಲದೆ ಜಾರಿಯಾಗುತ್ತದೆ ಎಂಬುದನ್ನು ಅವರು ನಿರೀಕ್ಷಿಸಿರಲಿಲ್ಲ.
ಆದರೆ, ರಾಜ್ಯ ಸರಕಾರ ಇದು ಯಾವುದೇ ರೀತಿಯಲ್ಲೂ ತಕ್ಷಣದ ನಿರ್ಧಾರವಲ್ಲ ಎಂದು ಹೇಳಿದೆ. “ಎನ್.ಇ.ಪಿ. ತಕ್ಷಣವಾಗಿ ಜಾರಿ ಮಾಡುತ್ತಿರುವುದಲ್ಲ. ಜುಲೈ 2020ರಲ್ಲಿ ಎನ್.ಇ.ಪಿ.ಯ ನೋಟಿಸ್ ಬಂದ ತಕ್ಷಣ ಸರಕಾರ ಇದನ್ನು ಜಾರಿಗೆ ತರಲು ತಯಾರಿ ನಡೆಸಲಾರಂಭಿಸಿತು.” ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣರು ಹೇಳಿದ್ದಾರೆ.