ರಾಜ್ಯದ 31ನೇ ಜಿಲ್ಲೆಯಾಗಿ ‘ವಿಜಯನಗರ’ ಇಂದು ಅಸ್ತಿತ್ವಕ್ಕೆ ಬಂದಿದೆ. ‘ವಿಜಯನಗರ’ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆಯನ್ನು ಉದ್ಘಾಟಿಸಿದರು. ವಿಜಯಸ್ತಂಭ ಅನಾವರಣಗೊಳಿಸಿದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಆನಂದ್ ಸಿಂಗ್, ಗೋವಿಂದ ಕಾರಜೋಳ, ಡಾ. ಸಿಎನ್ ಅಶ್ವತ್ಥ ನಾರಾಯಣ, ಸಿ ಸಿ ಪಾಟೀಲ್, ಬೈರತಿ ಬಸವರಾಜ ಸೇರಿದಂತೆ ಸಚಿವರು, ಶಾಸಕರು ಹಾಗೂ ವಿವಿಧ ಮಠಾಧೀಶರು ಹಾಜರಾಗಿದ್ದರು. ಈ ವೇಳೆ ಭವ್ಯ ವೇದಿಕೆಯನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೂತನ ಜಿಲ್ಲೆಯ ಬಗ್ಗೆ ಮಾತನಾಡಿದರು. ಇದು ಸಚಿವ ಆನಂದ್ ಸಿಂಗ್ ಸಂತಸ ಪಡಬೇಕಾದ ಘಳಿಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಇಂದು ಆನಂದ್ ಸಿಂಗ್ ಸಂಭ್ರಮ ಪಡುವ ಗಳಿಗೆ. ಅವರು ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಆಡಳಿತ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರದಂತೆ ಹೊಸ ಜಿಲ್ಲೆ ಅಸ್ವಿತ್ವಕ್ಕೆ ಬಂದಿದ್ದು, ನೂತನ ಜಿಲ್ಲೆ ವಿಜಯನಗರ ಸಾಮ್ರಾಜ್ಯದಂತೆ ವೈಭವಯುತವಾಗಿ ಮೆರೆಯಬೇಕು ಎಂದು ಹೇಳಿದರು.
ಬಳ್ಳಾರಿಯಿಂದ ಬೇರ್ಪಡಿಸಿ ವಿಜಯನಗರ ಜಿಲ್ಲೆಯನ್ನು ರಾಜ್ಯದ 31ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ 2021ರ ಫೆಬ್ರವರಿ 8ರಂದು ರಚನೆ ಮಾಡಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಅಧಿಕೃತವಾಗಿ ಜಿಲ್ಲೆಗೆ ಚಾಲನೆ ದೊರೆತಿರಲಿಲ್ಲ. ಈಗ ಚಾಲನೆ ದೊರೆಯುತಿರುವ ಹಿನ್ನೆಲೆ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಜನರಲ್ಲಿ ಉತ್ಸಾಹ ಹೆಚ್ಚಿದೆ. ಹಳ್ಳಿ, ಪಟ್ಟಣ, ತಾಂಡಾ, ಕ್ಯಾಂಪ್, ಕಾಲೋನಿಗಳಲ್ಲೂ ಜಿಲ್ಲೆಯ ಉದ್ಘಾಟನೆಯ ಸಂಭ್ರಮ ಕಳೆಗಟ್ಟಿದೆ.