ದೇಶಭಕ್ತ ಸ್ವಾತಂತ್ರ ಹೋರಾಟಗಾರ ಅಪ್ರತಿಮ ವೀರ ಸೇನಾನಿ, ನೇತಾಜಿ ಸುಭಾಷ್ ಚಂದ್ರಬೋಸರ 125ನೇ ಜನ್ಮದಿನವಿಂದು. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಜವಬ್ದಾರಿಯುತ ಪಾತ್ರವಹಿಸಿದ ವ್ಯಕ್ತಿ, ದೇಶದ ಜನತೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ದಿಟ್ಟ ನಿಲುಹೊಂದಿದ ವ್ಯಕ್ತಿತ್ವ ಅವರದು.
ಜನವರಿ 23, 1897 ರಲ್ಲಿ ಒಡಿಶಾದ ಕಟಕ್ನಲ್ಲಿ ಜನಸಿದ ನೇತಾಜಿ ಅವರು ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಗೆ ಪ್ರೇರಿತರಾಗಿದ್ದರು. ಕಾಂತ್ರಿಕಾರಿಯಾಗಿ ಬ್ರಿಟೀಷ್ ಸರ್ಕಾರದ ವಿರುದ್ಧ ಹೋರಾಟ ನೇತಾಜಿ ಬ್ರಿಟೀಷರ ಹಾಗು ಭಾರತೀಯ ಕೆಲವು ಸ್ವತಂತ್ರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು.
75 ವರ್ಷಗಳಾದರೂ ಗೊಂದಲವಾಗಿ ಉಳಿದ ನೇತಾಜಿ ಸಾವಿನ ರಹಸ್ಯ
ನೇತಾಜಿ ಸಾವಿನ ವಿಚಾರದ ಬಗ್ಗೆ ಅನೇಕ ವರದಿಗಳು ಪ್ರಕಟವಾದರೂ, ದೇಶದ ಪ್ರಜ್ಞಾವಂತ ಸಮುದಾಯದಲ್ಲಿ ಗೊಂದಲವಾಗಿಯೇ ಉಳಿದ ವಿಚಾರ. 1945 ಆಗಸ್ಟ್ 18 ರಂದು ತೈಹೋಕ್ (ಈಗಿನ ತೈವಾನ್) ಜಪಾನಿನ ಮಾಟ್ಸುಯಾಮಾ ಮಿಲಿಟರಿ ವಿಮಾನ ನಿಲ್ಧಾಣದಲ್ಲಿ ವಿಮಾನ ಅಪಘಾತದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವನ್ನಪಿದ್ದಾರೆಂದು ಜಪಾನಿನ ಡೊಮಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಜೊತೆಗೆ 1945 ಸೆಪ್ಟೆಂಬರ್ 19 ರಂದು ಜಪಾನ್ ಸರ್ಕಾರ ವಿಮಾನ ಅಪಘಾತದಲ್ಲಿ ನೇತಾಜಿ ಮರಣ ಹೊಂದಿದ್ದಾರೆಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದು ಭಾರತೀಯರನ್ನು ತೀವ್ರ ದುಃಖದ ಮತ್ತು ನಂಬಲಾಗದ ಪರಿಸ್ಥಿತಿಗೆ ತಳ್ಳಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಘಟನೆ ನಡೆದು 75 ವರ್ಷಗಳು ಕಳೆದರು ಸಾವಿನ ಕುರಿತ ಹಲವು ವರದಿಗಳು ಗೊಂದಲಮಯವಾಗಿಯೇ ಇವೆ. ವಿಮಾನ ಅಪಘಾತದಿಂದ ಅವರು ಸಾವನ್ನಪ್ಪಿಲ್ಲ ಎಂಬುವುದು ಕೆಲವರ ಅಭಿಪ್ರಾಯವಾಗಿತ್ತು. ಕೆಲವು ವರದಿಯ ಪ್ರಕಾರ ಕೊನೆಯ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದರೆಂದರೆ, ಇನ್ನು ಕೆಲವು ವರದಿಗಳು ವಿದೇಶದಲ್ಲಿ ವಾಸವಾಗಿದ್ದರೆಂದು ಹೇಳಿವೆ.
ಗುಮ್ನಾಮಿ ಬಾಬಾ – ನೇತಾಜಿ
ಗುಮ್ನಾಮಿ ಬಾಬಾ ಒಬ್ಬ ಸನ್ಯಾಸಿಯಾಗಿದ್ದರು. ಅಯೋಧ್ಯೆ ಸಮೀಪದ ಉತ್ತರ ಪ್ರದೇಶದ ಫೈಜಾಬಾದ್ನ ರಾಮ ಭವನದಲ್ಲಿ ವಾಸವಾಗಿದ್ದರು. ಇವರು ಬೇರೆಯಾರು ಅಲ್ಲ ನೇತಾಜಿ ಸುಭಾಷ್ ಚಂದ್ರ ಬೋಸರೆ ಎಂದು ಕೆಲವು ವರದಿಗಳು ತಿಳಿಸಿವೆ. ಮತ್ತು ಅವರ ಹತ್ತಿರದ ಒಡನಾಡಿಗಳು ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ.
ನೇತಾಜಿ 1945 ರ ಜಪಾನ್ ವಿಮಾನ ಅಪಘಾತದಲ್ಲಿ ಮರಣ ಹೊಂದಿಲ್ಲ, ಗುಮ್ನಾಮಿ ಬಾಬಾ ಎಂದು ಹೆಸರು ಬದಲಾಯಿಸಿಕೊಂಡ ನೇತಾಜಿ ಸೆಪ್ಟೆಂಬರ್ 16, 1985 ರ ಮಧ್ಯರಾತ್ರಿ ಮರಣ ಹೊಂದಿದ್ದಾರೆ. 13 ಜನ ಅನುಯಾಯಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರವನ್ನು ಅಯೋಧ್ಯೆಯ ಗುಪ್ತಾರ್ ಘಾಟ್ನಲ್ಲಿ ನಡೆಸಲಾಗಿದೆ ಎಂಬ ಸುದ್ದಿ ಸದ್ದು ಮಾಡಿತ್ತು.
ಇಂಡಿಯಾ ಟಿವಿ 2013 ಫೆಬ್ರವರಿಯಲ್ಲಿ ಪ್ರಕಟಿಸಿದ ವರದಿಯಲ್ಲಿ, ಬಾಬಾ ರ ಜಮೀನುದಾರ ಗುರು ಬಸಪ್ಪ ಸಿಂಗ್ ಅವರ ಮಗ ಶಕ್ತಿಸಿಂಗ್, ಬಾಬಾರ ಹತ್ತಿರದ ಪರಿಚಯಸ್ಥರಾದ ಹೀರಾ ಅವರು ಸಂತ ಗುಮ್ನಾಮಿ ಬಾಬಾ ಅವರೇ, ಸುಭಾಷ್ ಚಂದ್ರಬೋಸ್ ಎಂದು ಹೇಳಿಕೊಂಡಿದ್ದಾರೆಂದು ಹೇಳಿದ್ದಾರೆ. ಅವರು ಸಮಾಜದ ಮುಂದೆ ಸತ್ಯವನ್ನು ಬಿಚ್ಚಿಡುತ್ತಿರಲ್ಲಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆಂದು ತಿಳಿಸಲಾಗಿದೆ. ಈ ಸಂಬಂಧ ಮೂರು ವರ್ಷಗಳ ಹಿಂದೆ ಈ ಗುಮ್ನಾಮಿ ಬಾಬಾ ಯಾರೆಂದು ತಿಳಿಯಲು ಯುಪಿ ಸರ್ಕಾರ ಆಯೋಗವೊಂದನ್ನು ರಚಿಸಿತ್ತು. ಇಲ್ಲಿ ಗುಪ್ತಚರ ಬ್ಯೂರೋ ನೀಡಿದ ಮಾಹಿತಿ ಗೊಂದಲಕ್ಕೀಡು ಮಾಡಿದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
ಬಿಜೆಪಿ – ಕಾಂಗ್ರೆಸ್ ನಡುವೆ ರಾಜಕೀಯ ಸರಕಾದ “ನೇತಾಜಿ ಸಾವು”
2016 ರಲ್ಲಿ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರ ಜನವರಿ 23 ರ ನೇತಾಜಿ ಜನ್ಮದಿನದಂದು ಕೇಂದ್ರ ಸರ್ಕಾರದ ಬಳಿಯಿದ್ದ ವರ್ಗೀಕೃತ ಖಡತವನ್ನು ಬಹಿರಂಗಪಡಿಸಿ ಕಾಂಗ್ರೆಸ್ ಪಕ್ಷ ಮತ್ತು ನೆಹರೂರವರ ಮೇಲೆ ಗೂಬೆ ಕೂರಿಸಿತ್ತು. “ಬೋಸ್ರವರ ಸಾವಿನ ಕುರಿತು ಆಗಿನ ನೆಹರು ನೇತೃತ್ವದ ಕೇಂಗ್ರೆಸ್ ಸರ್ಕಾರ ಮಾಹಿತಿ ಮುಚ್ಚಿಟ್ಟು ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೂರಿದೆ. ನೇತಾಜಿ ಸಾವಿನ ಕುರಿತು ಸುಮಾರು 1200 ಕಡತಗಳನ್ನು ಬಹಿರಂಗಪಡಿಸಿದರೂ ಮಾಹಿತಿ ಗೊಂದಲ ಮಯವಾಗಿದೆ ಎಂಬುವುದು ಕಾರಣವಾಗಿಯೆ ಉಳಿದಿದೆ.
ಸ್ವಾತಂತ್ರ ಹೋರಾಟ ಮತ್ತು ದೇಶ ಸೇವೆ
1944ರಲ್ಲಿ “ತುಮ್ ಮುಜೆ ಖೂನ್ ದೋ ಮೆ ತುಮ್ಹೆ ಆಜಾದಿ ದೂಂಗಾ” ಎಂಬ ನೇತಾಜಿ ಹೇಳಿಕೆ ಭಾರೀ ಸದ್ದು ಮಾಡಿತ್ತು. ಅಂದರೆ “ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ ಕೊಡಿಸುತ್ತೇನೆ ಎಂಬ ಮಾತು ದೇಶ ಭಕ್ತಿಯ ಹೊಸ ಅಲೆಯನ್ನು ಪ್ರಚೋಧಿಸಿತ್ತು. ನೇತಾಜಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿದ್ದರು. ಭಾರತದಿಂದ ಇಂಡ್ಲೆಂಗ್ ಹೋಗಿ ನಾಗರಿಕ ಸೇವೆಗಳ ತಯಾರಿ ನಡೆಸುವ ವೇಳೆ ಇಂಗ್ಲೆಂಡ್ನಲ್ಲಿಯೇ 1920 ರಲ್ಲಿ ಐಸಿಎಸ್ನಲ್ಲಿ ಆಯ್ಕೆಯಾದರು ಕೂಡ ಬ್ರಿಟೀಷ್ ಸರ್ಕಾರದಲ್ಲಿ ಕೆಲಸ ಮಾಡಲು ನಿರಾಕರಿಸಿ, ದೇಶ ಸೇವೆಗೆ ಮುಂದಾಗಿದ್ದರು.
ಮೊದಲಿಗೆ ನೇತಾಜಿಯವರು ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ನಂತರ ಕೆಲವು ಕಾರ್ಯತಂತ್ರಗಳಿಗೆ ಬೇಸತ್ತು, ಚಿತ್ತ ರಂಜನ್ ದಾಸ್ ಸ್ಥಾಪಿಸಿದ ಸ್ವರಾಜ್ಯ ಪಕ್ಷದ ದೇಶ ಸೇವೆ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಸ್ವತಂತ್ರ ಚಳುವಳಿಯಲ್ಲಿ ಗಾಂಧಿಯ ಅಹಿಂಸಾತ್ಮಕ ತತ್ವಗಳನ್ನು ಒಪ್ಪದ ನೇತಾಜಿ ಅವರು ಬ್ರಿಟೀಷ್ ಸೈನ್ಯದ ವಿರುದ್ಧ ಹೋರಾಡಲು ಭಾರತೀಯ ರಾಷ್ಟ್ರೀಯ ಸೈನ್ಯವನ್ನು(ಐಎನ್ಎ) ಸ್ಥಾಪಿಸಿ ಚಳುವಳಿಯಲ್ಲಿ ಸಕ್ರೀಯರಾಗಿ ಭಾಗಿಯಾಗಿದ್ದರು.
ಬ್ರಿಟೀಷರ ದೌರ್ಜನ್ಯದ ವಿರುದ್ಧ ಎಚ್ಚೆತ್ತುಕೊಳ್ಳುವಂತೆ ದೇಶದ ಜನತೆಗೆ ಸಂದೇಶ ನೀಡುವ ಮೂಲಕ ಬ್ರಿಟೀಷರ ದೌರ್ಜನ್ಯಕ್ಕೆ ಒಳಗಾಗಿದ್ದರು ಧೃತಿಗೆಡದೆ ಧೈರ್ಯದಿಂದ ಹೋರಾಟ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತೆ. ಇಂದಿಗೂ ದೇಶ ಇವರ ಸೇವೆಯನ್ನು ಸ್ಮರಿಸುತ್ತಿದೆ. ನೇತಾಜಿ ಅವರ ಜನ್ಮದಿನವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದೀಗ ಭಾರತ ಸರ್ಕಾರ ಜನವರಿ 23 ಸುಭಾಷ್ಚಂದ್ರ ಬೋಸರ ಜನ್ಮದಿನವನ್ನು “ಪರಾಕ್ರಮ ದಿನ” ಎಂದು ಆಚರಿಸಲು ನಿರ್ಧರಿಸಿದೆ.