ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ದೇಶವನ್ನು ಬೆಚ್ಚಿಬೀಳಿಸಿದೆ. ಕೆಲವೇ ಗಂಟೆಗಳಲ್ಲಿ ಪ್ರವಾಹದ ರಭಸಕ್ಕೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಇದುವರೆಗೆ 160 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿರುವುದಾಗಿ ನೇಪಾಳ ಸರ್ಕಾರ ಮಾಹಿತಿ ನೀಡಿದೆ.

ಕಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್, ಪ್ರವಾಹದ ಭೀಕರತೆಯನ್ನು ವಿವರಿಸಿದರು. ಕೆಲವೇ ಗಂಟೆಗಳಲ್ಲಿ ನಗರಗಳೇ ಕೊಚ್ಚಿಹೋಗುವಷ್ಟು ಪ್ರವಾಹದ ಪ್ರಮಾಣ ಹೆಚ್ಚಾಗಿತ್ತು. ಪ್ರವಾಹದಿಂದ ನಾಪತ್ತೆಯಾಗಿರುವವರಲ್ಲಿ ಮಾನಸ ಸರೋವರ ಯಾತ್ರೆಗೆ ತೆರಳಿದ್ದವರ ಸಂಖ್ಯೆಯೂ ಹೆಚ್ಚಿದೆ. ಕನಿಷ್ಠ 300 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರನ್ನು ಪತ್ತೆಹಚ್ಚಲು ನೇಪಾಳ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಭಾರತೀಯರು ಸೇರಿದಂತೆ ಸುಮಾರು 500 ವಿದೇಶಿ ಪ್ರಜೆಗಳು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಮೂಲಕವೇ ಮಾನಸ ಸರೋವರ ಯಾತ್ರೆಗೆ ತೆರಳುವ ಮಾರ್ಗವಿರುವುದರಿಂದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

ನೇಪಾಳಿ ನಾಗರಿಕರ ಸುರಕ್ಷತೆಯಷ್ಟೇ ವಿದೇಶಿ ಪ್ರಜೆಗಳ ರಕ್ಷಣೆಯೂ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಪತ್ತೆಯಾಗಿರುವವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮತ್ತು ತುರ್ತು ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಹದಿಂದ ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಕಾರ್ಯವೂ ನಡೆಯುತ್ತಿದೆ. ಅಲ್ಲದೇ ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ನೇಪಾಳಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ದೇಶಕ್ಕೆ ಸಹಾಯಕವಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವರು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.






