ಹೆಚ್ಚು ಓದಿದ ಸ್ಟೋರಿಗಳು
ಇಂದು ದೇಶದಲ್ಲಿ ಅತಿ ಹೆಚ್ಚು ಶಬ್ಧ ಮಾಡುತ್ತಿರುವ ಎರಡು ಸಂಗತಿಗಳೆಂದರೆ ಸುಳ್ಳು ಮತ್ತು ದ್ವೇಷ. ಸುಳ್ಳು ಮತ್ತು ದ್ವೇಷ ಇವೆರಡು ಸಂಗತಿಗಳು ದೇಶದ ಹಿನ್ನೆಡೆಗೆ ಕಾರಣವಾಗುತ್ತಿರುವ ಸಂಗತಿ ಇತ್ತೀಚಿಗೆ ಕೆಲವರ ಅರಿವಿಗೆ ಬರುತ್ತಿದೆ. ೨೦೧೪ ರಲ್ಲಿ ದಿಲ್ಲಿ ಗದ್ದುಗೆಗಾಗಿ ನಡೆದ ಜನತಂತ್ರದ ಕದನವು ಪ್ರಚಂಡ ಸುಳ್ಳಿನ ಮೂಲಕ ದೇಶದ ಜನರನ್ನು ಸಮೂಹ ಸನ್ನಿಗೆ ಒಳಪಡಿಸಿತು. ಆಶ್ಚರ್ಯವೆಂದರೆˌ ಕೇವಲ ಅಧಿಕಾರಕ್ಕೆ ಏರುವಲ್ಲಿಗೆ ಮಾತ್ರ ಆ ಸುಳ್ಳಿನ ಯಾತ್ರೆ ನಿಲ್ಲಲಿಲ್ಲ. ಬದಲಿಗೆ ಅಲ್ಲಿಂದ ಇಲ್ಲಿಯವರೆಗೆ ಆಡಳಿತದ ಎಲ್ಲ ವೈಫಲ್ಯಗಳನ್ನು ನಿರಂತರ ಸುಳ್ಳುಗಳ ಮೂಲಕವೆ ಮರೆಮಾಚಲಾಯಿತು. ಸುಳ್ಳಿನ ದಂಡಯಾತ್ರೆ ಕೇವಲ ಒಂದು ಅವಧಿಗೆ ನಿಲ್ಲದೆ ಮತ್ತೊಂದು ಅವಧಿಯನ್ನು ಬಾಚಿಕೊಂಡಿತು. ಜಗತ್ತಿನ ಇತಿಹಾಸದಲ್ಲಿ ಸುಳ್ಳೊಂದು ಸುದೀರ್ಘ ಅವಧಿ ಸಸ್ಟೇನ್ ಆಗಿರುವ ಅಪರೂಪದ ದೃಷ್ಟಾಂತವಿದು. ಆ ಸುಳ್ಳುಗಳ ಒಂದಷ್ಟು ಸ್ಯಾಂಪಲ್ ಇಲ್ಲಿವೆ ನೋಡಿ.
ಮೋದಿಯವರು ೨೦೧೪ ರ ವರೆಗೆ ಆಡಳಿತ ಮಾಡಿದ ಸರಕಾರಗಳು ದೇಶದಲ್ಲಿ ಕೇವಲ ೭೪ ವಿಮಾನ ನಿಲ್ದಾಣಗಳನ್ನು ನಿರ್ಮಿಸಿವೆ ಎಂದು ಹೇಳಿದ್ದಾರೆ. ಆದರೆ ೨೦೧೪ ರ ವರೆಗೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದದ್ದು ೯೪ ವಿಮಾನ ನಿಲ್ದಾಣಗಳು ಎನ್ನುವ ಸತ್ಯವನ್ನು ತಾವೆಲ್ಲರು ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸಬಹುದು. ಮೋದಿಯವರು ತಮ್ಮ ಆಡಳಿತಾವಧಿಯ ನಾಲ್ಕು ವರ್ಷಗಳಲ್ಲಿ ೩೫ ಹೊಸ ವಿಮಾನ ನಿಲ್ದಾಣಗಳು ನಿರ್ಮಿಸಿದ್ದಾಗಿ ೨೦೧೮ ರಲ್ಲಿ ಹೇಳಿದ್ದರು. ಆದರೆ ಆ ಅವಧಿಯಲ್ಲಿ ನಿರ್ಮಾಣವಾಗಿದ್ದು ಕೇವಲ ೦೪ ವಿಮಾನ ನಿಲ್ದಾಣಗಳು ಮಾತ್ರ ಎನ್ನುವ ಸಂಗತಿ ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸಬಹುದು. ಈ ದೇಶವು ವಿಮಾನ ನಿಲ್ದಾಣಗಳುˌ ಕೈಗಾರಿಕೋದ್ಯಮಗಳುˌ ವಿದ್ಯುತ್ ಉತ್ಪಾದನಾ ಘಟಕಗಳುˌ ಉನ್ನತ ಶಿಕ್ಷಣ ಸಂಸ್ಥೆಗಳುˌ ಬಂದರು ಇತ್ಯಾದಿಗಳ ಸ್ಥಾಪನೆಯ ಕನಸು ಕಾಣುತ್ತಿದ್ದ ಸಮಯದಲ್ಲಿ ಮೋದಿಯವರು ಇನ್ನೂ ಹುಟ್ಟಿರಲಿಲ್ಲ.

ಮೋದಿಯವರೆ ಹಿಂದೊಮ್ಮೆ ಹೇಳಿದಂತೆ ತಮ್ಮ ಬದುಕಿನಲ್ಲಿ ಒಟ್ಟು ೩೫ ವರ್ಷಗಳ ಅವಧಿ ಭಿಕ್ಷಾಟನೆ ಮಾಡಿದರಂತೆ. ಆ ಅವಧಿಯಲ್ಲಿ ಬಹುಶಃ ದೇಶದ ಅನೇಕ ಕನಸುಗಳನ್ನು ನನಸಾಗಿಸುವಲ್ಲಿ ಈ ದೇಶದ ನಾಯಕತ್ವ ಬಹುತೇಕ ಸಫಲವಾಗಿತ್ತು. ಮೋದಿಯವರು ಬೆಳೆಗ್ಗೆ ಮತ್ತು ಸಾಯಂಕಾಲ ಎರಡೂ ಹೊತ್ತು ನೆಹರುರನ್ನು ದೂಷಿಸುತ್ತಿರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ನೆಹರು ಪ್ರಧಾನಿ ಹುದ್ದೆ ಏರಿದಾಗ ಈ ದೇಶ ಬ್ರಿಟೀಷರ ಲೂಟಿಯಿಂದ ಖಾಲಿಯಾಗಿತ್ತು. ಜನರಿಗೆ ತಿನ್ನಲು ಅಗತ್ಯ ಪ್ರಮಾಣದ ಆಹಾರ ಧಾನ್ಯಗಳಿರಲಿಲ್ಲ ˌ ಉಡಲು ಮೈಮೇಲೆ ಬಟ್ಟೆಗಳಿರಲಿಲ್ಲ. ದೇಶ ಅನಕ್ಷರತೆ ಮತ್ತು ಬಡತನದಿಂದ ಕಂಗೆಟ್ಟಿತ್ತು. ನೆಹರು ಅವರು ಅಂದು ಬಹಳ ತಾಳ್ಮೆ ಮತ್ತು ದೂರದೃಷ್ಟಿಯಿಂದ ವರ್ತಿಸಿದರು. ಎಲ್ಲರನ್ನು ಒಳಗೊಂಡು ಆಡಳಿತ ಮಾಡಿದರು. ದೇಶದ ಭವಿಷ್ಯಕ್ಕೆ ಮಾರಕವಾಗಿದ್ದ ಗಾಂಧಿ ಹಂತಕ ಸಿದ್ಧಾಂತದ ಸಂಘಟನೆಯನ್ನು ನೆಹರು ಮನಸ್ಸು ಮಾಡಿದ್ದರೆ ಅಂದು ಸಂಪೂರ್ಣವಾಗಿ ನಾಶಗೊಳಿಸಬಹುದಿತ್ತು. ಬಹುಶಃ ನೆಹರು ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ಬಹುದೊಡ್ಡ ತಪ್ಪು ಎಂದರೆ ಗಾಂಧಿ ಹತ್ಯೆಕೋರ ಮನಸ್ಥಿತಿಗೆ ಸೇರಿರುವ ದೇಶದ್ರೋಹಿಗಳನ್ನು ಸದೆಬಡೆಯದೆ ಹಾಗೆ ಬಿಟ್ಟಿರುವುದು.
ಹೊಸದಾಗಿ ಸ್ವತಂತ್ರ ಪಡೆದ ದೇಶ ಅರಾಜಕತೆ ಮತ್ತು ಆಂತರಿಕ ಸಂಘರ್ಷಕ್ಕೆ ಈಡಾಗಬಾರದೆಂಬ ಒಂದೇ ಒಂದು ಮಹದುದ್ದೇಶದಿಂದ ಮತ್ತು ಹೊರ ಜಗತ್ತಿಗೆ ಭಾರತದ ಆಂತರಿಕ ಸಂಘರ್ಷದ ಬೆಳವಣಿಗೆಗಳು ತಪ್ಪು ಸಂದೇಶ ರವಾನಿಸಬಾರದೆನ್ನುವ ಉದ್ದೇಶದಿಂದ ಎಲ್ಲರನ್ನು ಒಳಗೊಂಡು ಆಡಳಿತವನ್ನು ಮಾಡಿದರು. ನೆಹರುರವರ ಈ ಒಂದು ಸದುದ್ದೇಶದಿಂದ ಮಾಡಲಾದ ಪ್ರಮಾದವೇ ಇಂದು ದೇಶವನ್ನು ಸರ್ವನಾಶದ ಅಂಚಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಅಂದು ನೆಹರು ಅವರು ಧರ್ಮಾಂಧ ಹಾಗು ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕಿದ್ದರೆ ಇಂದು ದೇಶ ಇಷ್ಟೊಂದು ಸಂಕಷ್ಟದ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಈ ದೇಶ ಸಂವಿಧಾನ ಅಂಗೀಕರಿಸುವ ಮೊದಲೇ ಐಟಿಐˌ ಯೋಜನಾ ಆಯೋಗˌ ಐಐಟಿಗಳುˌ ಏಮ್ಸ್ ˌ ಓ ಎನ್ ಜಿ ಸಿˌ ಮುಂತಾದ ಸಂಸ್ಥೆಗಳ ಸ್ಥಾಪನೆ ಆರಂಭಗೊಂಡಿತ್ತು. ಶಿಕ್ಷಣˌ ಕಲೆˌ ಸಾಹಿತ್ಯ ˌ ವಿಜ್ಞಾನˌ ತಂತ್ರಜ್ಞಾನ ಮುಂತಾದ ಹಲವು ಹತ್ತು ಕ್ಷೇತ್ರಗಳ ಅಭಿವೃದ್ದಿಗೆ ನೆಹರು ನೀಲನಕ್ಷೆಗಳನ್ನು ಸಿದ್ಧಪಡಿಸುತ್ತ ಸಾಗಿದ್ದರು.
ಇಂದು ನೆಹರುರ ಮೇಲೆ ದೋಷಾರೋಪ ಮಾಡುವವರು ಈ ದೇಶದವನ್ನು ನಾಶಗೊಳಿಸುವ ಸಿದ್ಧಾಂತಿಗಳು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ನೆಹರು ಅಧಿಕಾರ ಸ್ವೀಕರಿಸುವ ಮೊದಲು ಈ ದೇಶದಲ್ಲಿ ಸಂವಿಧಾನˌ ಹಾಗು ಜನತಂತ್ರಗಳು ಅಸ್ತಿತ್ವದಲ್ಲಿ ಇರಲಿಲ್ಲ. ನೆಹರು ಜಾರಿಗೆ ತಂದ ಸಂವಿಧಾನˌ ಜನತಂತ್ರದ ಫಲಗಳನ್ನು ಈ ದೇಶದ ಎಲ್ಲಾ ಜನರು ೭೦ ವರ್ಷಗಳಿಂದ ನಿರಂತರವಾಗಿ ಅನುಭವಿಸುತ್ತಿದ್ದಾರೆ. ಅದರಲ್ಲೂ ನೆಹರುರನ್ನು ಹಾಗು ಅವರು ತಂದಿರುವ ಸಂವಿಧಾನ ಹಾಗು ಜನತಂತ್ರ ವ್ಯವಸ್ಥೆಯನ್ನು ದ್ವೇಷಿಸುವವರೆ ಈ ಸೌಲತ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸಿದ್ದಾರೆ. ಆದರೆ ಈಗ ದೇಶದಲ್ಲಿ ಮತ್ತೊಮ್ಮೆ ಸಂವಿಧಾನ ಮತ್ತು ಜನತಂತ್ರಗಳು ಅಪಾಯಕ್ಕೆ ಸಿಲುಕಿವೆ. ಅಂದರೆˌ ನಾವು ಮತ್ತೆ ೭೦ ವರ್ಷಗಳಷ್ಟು ಹಿಂದೆ ಹೋಗಿದ್ದೇವೆ.

ನೆಹರುರನ್ನು ಟೀಕಿಸುವವರು ತಮಗೆ ಸಿಕ್ಕ ಸುದೀರ್ಘ ೨೩ ವರ್ಷಗಳ ಅಧಿಕಾರಾವಧಿ (೧೩ ವರ್ಷ ಮುಖ್ಯಮಂತ್ರಿಯಾಗಿ ಮತ್ತು ೧೦ ವರ್ಷ ಪ್ರಧಾನಿಯಾಗಿ) ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗಾಗಿ ದುಡಿಯದೆˌ ತಮ್ಮನ್ನು ಪ್ರಧಾನಿ ಮಾಡಿದ ಕಾರ್ಪೋರೇಟ್ ಉದ್ಯಮಿಗಳ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದಾರೆ ಎನ್ನುವ ವಿರೋಧಿಗಳ ಆರೋಪವನ್ನು . ಸುಳ್ಳೆಂದು ನಿರೂಪಿಸಬೇಕಿದೆ. ಇಷ್ಟೊಂದು ಸುದೀರ್ಘವಾಗಿ ಸಾಂವಿಧಾನಿಕ ಹುದ್ದೆ ಅನುಭವಿಸುವ ಅವಕಾಶ ನೆಹರು ಕುಟುಂಬದ ಯಾವೊಬ್ಬ ಸದಸ್ಯನಿಗೂ ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಅಧಿಕಾರಕ್ಕೆ ಏರುವ ಮೊದಲು ನೆಹರು ಟೀಕೆ ಸಹಿಸಬಹುದಿತ್ತೇನೊ. ಆದರೆˌ ತಮ್ಮ ಸುದೀರ್ಘ ಅಧಿಕಾರದ ಅವಧಿಯಲ್ಲಿ ನೆಹರು ದ್ವೇಷಿಗಳು ತಾವೇನು ಸಾಧಿಸಿದ್ದೇನೆ ಎನ್ನುವ ಕುರಿತು ಚರ್ಚಿಸುವ ಬದಲಿಗೆ ನೆಹರು ದೂಷಣೆಯೆ ತಮ್ಮ ಸಾಧನೆಯಾಗಿಸಿಕೊಂಡದ್ದು ದುರಂತದ ಸಂಗತಿಯಾಗಿದೆ.