• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಜಾಗತಿಕ ಡಿಜಿಟಲ್‌ ಆರ್ಥಿಕತೆಯ ಚಾಲಕ ಶಕ್ತಿಯಾಗಿ ನಿರ್ಲಕ್ಷ್ಯಕ್ಕೊಳಗಾಗಿರುವ ಶ್ರಮಶಕ್ತಿ

ನಾ ದಿವಾಕರ by ನಾ ದಿವಾಕರ
October 24, 2024
in Top Story, ಕರ್ನಾಟಕ, ಕ್ರೀಡೆ, ಜೀವನದ ಶೈಲಿ, ದೇಶ, ರಾಜಕೀಯ, ವಾಣಿಜ್ಯ, ಶೋಧ
0
ಜಾಗತಿಕ ಡಿಜಿಟಲ್‌ ಆರ್ಥಿಕತೆಯ ಚಾಲಕ ಶಕ್ತಿಯಾಗಿ ನಿರ್ಲಕ್ಷ್ಯಕ್ಕೊಳಗಾಗಿರುವ ಶ್ರಮಶಕ್ತಿ
Share on WhatsAppShare on FacebookShare on Telegram


ADVERTISEMENT

—ನಾ ದಿವಾಕರ—-

ಮಾರುಕಟ್ಟೆ ಆರ್ಥಿಕತೆಯೂ ಗಿಗ್‌ ಕಾರ್ಮಿಕರ ಭವಿಷ್ಯವೂ

======

ನಾಲ್ಕನೇ ಔದ್ಯೋಗಿಕ ಕ್ರಾಂತಿ ಈಗ ಉಚ್ಛ್ರಾಯ  ಸ್ಥಿತಿಯಲ್ಲಿದ್ದು ಮಾರುಕಟ್ಟೆ ಶಕ್ತಿಗಳ ಉತ್ಕರ್ಷ ಮತ್ತು ಜಾಗತಿಕ ಬಂಡವಾಳದ ಡಿಜಿಟಲ್‌ ವ್ಯಾಪ್ತಿ, ಇಡೀ ವಿಶ್ವದ ಆರ್ಥಿಕತೆಗಳನ್ನು ಆಕ್ರಮಿಸಿರುವುದರ ಪರಿಣಾಮ ಮಾಲೀಕ-ಕಾರ್ಮಿಕರ ಸಂಬಂಧಗಳನ್ನೂ ರೂಪಾಂತರಗೊಳಿಸಿದೆ. ತಳಮಟ್ಟದಲ್ಲಿ ತಮ್ಮ ಶ್ರಮಶಕ್ತಿಯನ್ನು ವ್ಯಯಿಸುತ್ತಲೇ ಬದುಕು ಸವೆಸಬೇಕಾದ ಶ್ರಮಜೀವಿಗಳ ಬಹುದೊಡ್ಡ ಸಂಖ್ಯೆ ಇಂದು ಅಗೋಚರ ಮಾಲೀಕರೊಂದಿಗೆ ಸೆಣಸಾಡಬೇಕಿದೆ. ಉದ್ಯೋಗ ಅಥವಾ ನೌಕರಿ ಎಂದರೆ ಒಬ್ಬ ವ್ಯಕ್ತಿಯ ಮತ್ತು ಆತನ/ಆಕೆಯ ಸೀಮಿತ ಕುಟುಂಬ, ಅದರ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಕೌಟುಂಬಿಕ ಆರೋಗ್ಯ ನಿರ್ವಹಣೆಗೆ  ಸಾಕಾಗುವಷ್ಟು ವರಮಾನ ಇರುವ ದುಡಿಮೆ ಎನ್ನುವುದು ಪಾರಂಪರಿಕ ಗ್ರಹಿಕೆ. ತಮ್ಮ ಶ್ರಮ ಮತ್ತು ಕೌಶಲವನ್ನು ಬಿಟ್ಟು ಮತ್ತಾವ ಬಂಡವಾಳವನ್ನೂ ಹೊಂದಿರದ ಶ್ರಮಜೀವಿಗಳಿಗೆ ಈ ವರಮಾನದ ನಿರಂತರತೆ, ಸುಸ್ಥಿರತೆ, ಸುರಕ್ಷತೆ ಮತ್ತು ನೌಕರಿಯ ಭದ್ರತೆ ಇವೆಲ್ಲವೂ ಜೀವನೋಪಾಯದ ದೃಷ್ಟಿಯಿಂದ ಮುಖ್ಯವಾದವು.

 ಆದರೆ  ನವ ಉದಾರವಾದದ ಡಿಜಿಟಲ್‌ ಯುಗದಲ್ಲಿ ಈ ಮೂಲ ನಿರ್ವಚನೆಯನ್ನೇ ಪಲ್ಲಟಗೊಳಿಸಲಾಗಿದ್ದು, ಮಾರುಕಟ್ಟೆಗೆ ಅಥವಾ ಬಂಡವಾಳ-ಮಾರುಕಟ್ಟೆಯ ನಿರ್ವಾಹಕ-ನಿಯಂತ್ರಕರಿಗೆ ಅನುಕೂಲಕರವಾದ ಶ್ರಮವೆಚ್ಚವನ್ನೇ ತಳಮಟ್ಟದ ಶ್ರಮಜೀವಿಯವರೆಗೂ ತಲುಪಿಸುವ ಹೊಸ ನಿರೂಪಣೆಗಳನ್ನು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿದೆ. ಭಾರತವೂ ಸೇರಿದಂತೆ ಎಲ್ಲ ದೇಶಗಳೂ ಒಪ್ಪಿಕೊಂಡಿರುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಮಾದರಿಗಳು ಇದನ್ನು ಪರಿಪಾಲಿಸುವ ಸಲುವಾಗಿಯೇ ತಮ್ಮ ಕಾರ್ಮಿಕ ಕಾನೂನುಗಳನ್ನೂ ತಿದ್ದುಪಡಿ ಮಾಡಿ, ʼ ಕಾರ್ಮಿಕರ ಸುರಕ್ಷತೆ-ಸುಭದ್ರತೆ ʼಯ ಪ್ರಶ್ನೆಯನ್ನು ಮಾರುಕಟ್ಟೆ ಅಂಗಳದಲ್ಲಿ ನಿಷ್ಕರ್ಷೆ ಮಾಡಲು ಹೊರಟಿವೆ. ಇದು ಸಾಂಪ್ರದಾಯಿಕ ಅರ್ಥದ ಬಂಡವಾಳಶಾಹಿಯನ್ನು ಮೀರಿದ ಒಂದು ವಿದ್ಯಮಾನವಾಗಿದ್ದು, ಡಿಜಿಟಲ್‌ ಪ್ಲಾಟ್‌ಫಾರಂಗಳ ಉಗಮಕ್ಕೆ ಕಾರಣವಾಗಿದೆ.

 ತಂತ್ರಜ್ಞಾನ ಮತ್ತು ಆರ್ಥಿಕತೆ

 ಗ್ರೀಸ್‌ನ ಅರ್ಥಶಾಸ್ತ್ರಜ್ಞ ಯಾನಿಸ್‌ ವರೌಫಾಕಿಸ್‌ ತಮ್ಮ What killed Capitalism ಕೃತಿಯಲ್ಲಿ ಸಾಂಪ್ರದಾಯಿಕ ಅರ್ಥದ ಬಂಡವಾಳಶಾಹಿ ಎಂದೋ ಅಂತ್ಯವಾಗಿದ್ದು ಅದರ ಸ್ಥಾನವನ್ನು ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಆಕ್ರಮಿಸಿದೆ ಎಂದು ಹೇಳುತ್ತಾರೆ. ಇದನ್ನು Techno Feudalism ಅಥವಾ ತಂತ್ರಜ್ಞಾನ ಆಧಾರಿತ ಊಳಿಗಮಾನ್ಯತ್ವ ಎಂದು ವ್ಯಾಖ್ಯಾನಿಸುವ ಯಾನಿಸ್‌ ಅವರು ಈ ನೂತನ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಪೈಪೋಟಿ, ಕೂಲಿ ಕಾರ್ಮಿಕರು ಮತ್ತು ಲಾಭ ಇವುಗಳಿಗಿಂತಲೂ ಮುಖ್ಯವಾಗಿ ಮಾರುಕಟ್ಟೆ ಏಕಸ್ವಾಮ್ಯ, ಕೂಲಿ ರಹಿತ ಶ್ರಮ ಮತ್ತು ಬಾಡಿಗೆ (Rent) ಮುಖ್ಯವಾಗಿದ್ದು, ಇದು ಶತಮಾನದ ಹಿಂದಿನ ಊಳಿಗಮಾನ್ಯ ಪದ್ಧತಿಯನ್ನು ಮರುಸ್ಥಾಪಿಸಿದೆ ಎಂದು ಹೇಳುತ್ತಾರೆ. ಅಲ್ಲದೆ ಯಾನಿಸ್‌ ವರೌಫಾಕಿಸ್‌ ಅವರು “ ಬಂಡವಾಳಶಾಹಿಯ ಉಚ್ಛ್ರಾಯ ಹಂತದಲ್ಲೂ ಅನೇಕ ಅನೇಕ ಊಳಿಗಮಾನ್ಯ ಸಂಬಂಧಗಳು ಹಾಗೇ ಉಳಿದಿದ್ದವು, ಆದರೆ ಬಂಡವಾಳಶಾಹಿ ಸಂಬಂಧಗಳು ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದವು. ಇಂದು, ಬಂಡವಾಳಶಾಹಿ ಸಂಬಂಧಗಳು ಹಾಗೇ ಉಳಿದಿವೆ, ಆದರೆ ತಂತ್ರಜ್ಞಾನ-ಊಳಿಗಮಾನ್ಯ ಸಂಬಂಧಗಳು ಅವುಗಳನ್ನು ಹಿಂದಿಕ್ಕಲು ಪ್ರಾರಂಭಿಸಿವೆ ” ಎಂದು ಹೇಳುತ್ತಾರೆ.

 ಸಾಂಪ್ರದಾಯಿಕ ಬಂಡವಾಳಶಾಹಿಗಳು ಈಗ ಡಿಜಿಟಲ್‌ ಪ್ಲಾಟ್‌ಫಾರಂಗಳ ಮೂಲಕ ಸಂಪತ್ತನ್ನು ಕ್ರೋಢೀಕರಿಸುವ ಬಿಗ್‌ ಟೆಕ್‌ ಕಂಪನಿಗಳನ್ನು ಅವಲಂಬಿಸಿದ್ದು, ಅವುಗಳಿಗೆ ಅಧೀನರಾಗಿರುವುದನ್ನು ಗುರುತಿಸುವ ಯಾನಿಸ್‌, ಈ Algorithm-ಆಧಾರಿತ ಬಂಡವಾಳವು ರೂಪಾಂತರಗೊಂಡು Cloud Capital ಸ್ವರೂಪ ಪಡೆದಿರುವುದನ್ನು ತಮ್ಮ ಕೃತಿಯಲ್ಲಿ ಗುರುತಿಸುತ್ತಾರೆ. ಈ ಹೊಸ ಜಗತ್ತಿನಲ್ಲೇ ಅಮೆಜಾನ್‌, ಫ್ಲಿಪ್‌ಕಾರ್ಟ್‌ ನಂತಹ ಸರಕುಗಳನ್ನು ಪೂರೈಸುವ ಉದ್ದಿಮೆಗಳು, ಓಲಾ, ಊಬರ್‌ ಮುಂತಾದ ಪ್ರಯಾಣಿಕರ ಸಂಚಾರ ಸಾಧನದ ಕಂಪನಿಗಳು, ಜಮೋಟೋ, ಸ್ವಿಗಿ ಮುಂತಾದ ಆಹಾರವನ್ನು ಪೂರೈಸುವ ಸಂಸ್ಥೆಗಳು ಮತ್ತು ಹಣಪಾವತಿಸುವ ಹಲವು ಸಂಸ್ಥೆಗಳು ಮಾರುಕಟ್ಟೆಯನ್ನು ಆಕ್ರಮಿಸಿವೆ. ಈ ಮಾರುಕಟ್ಟೆಯಲ್ಲಿ ನೌಕರಿ ಪಡೆಯುವ ಶ್ರಮಿಕರನ್ನು ಗಿಗ್‌ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ.

  ಗಿಗ್‌ ಆರ್ಥಿಕತೆ ಮತ್ತು ಕಾರ್ಮಿಕ ಜಗತ್ತು

 ಈ ಡಿಜಿಟಲ್‌ ಕಾರ್ಮಿಕ ಪ್ಲಾಟ್‌ಫಾರ್ಮ್‌ಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡಿರುವ              ಆಕ್ಸ್‌ಫರ್ಡ್‌  ಇಂಟರ್‌ನೆಟ್‌ ಇನ್‌ಸ್ಟಿಟ್ಯೂಟ್‌ನ ಸಾಮಾಜಿಕ ವಿಜ್ಞಾನಿಗಳು (Social Scientists), ಇವುಗಳು ಆಧುನಿಕ ನವಉದಾರವಾದಿ ಮಾರುಕಟ್ಟೆಯ ಮೇಲೆ ಆಧಿಪತ್ಯ ಸಾಧಿಸಿರುವುದನ್ನು ಗುರುತಿಸಿರುವುದೇ ಅಲ್ಲದೆ, ಜಾಗತಿಕವಾಗಿ ಒಂಬತ್ತು ಕೋಟಿ ಜನರಿಗೆ ನೌಕರಿಯನ್ನು ಒದಗಿಸುತ್ತಿರುವುದಾಗಿ ಹೇಳುತ್ತಾರೆ. ಈ ಬೃಹತ್‌ ಸಂಖ್ಯೆಯ ಗಿಗ್‌ ಕಾರ್ಮಿಕರನ್ನು ಅವರ ಹಕ್ಕುಗಳಿಂದ ವಂಚಿಸುವ ಸಲುವಾಗಿ, ಉದ್ಯೋಗ ಭದ್ರತೆಯಿಂದ ಹೊರಗಿಡುವ ಸಲುವಾಗಿ ಎಲ್ಲ ದೇಶಗಳಲ್ಲೂ ಕಾನೂನುಗಳಲ್ಲಿರುವ ಲೋಪಗಳನ್ನೇ ಬಳಸಲಾಗುತ್ತಿರುವುದನ್ನೂ ಈ ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಸಾಮಾಜಿಕ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಕನಿಷ್ಠ 11 ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ದುಡಿಯುವ ಸಾವಿರಾರು ಗಿಗ್‌ ಕಾರ್ಮಿಕರ ಸೇವಾ ನಿಯಮಗಳು ಸುಧಾರಣೆಯಾಗಿವೆ.

 ಜರ್ಮನಿಯ ಫೆಡರಲ್‌ ಸರ್ಕಾರವು FairWork Plan ಅಂದರೆ ನ್ಯಾಯಯುತ ದುಡಿಮೆಯ ನಿಯಮಗಳನ್ನು ಅಳವಡಿಸಿದ್ದರೆ, ಬ್ರಿಟನ್ನಿನಲ್ಲಿ 4.7 ದಶಲಕ್ಷ ಗಿಗ್‌ ಕಾರ್ಮಿಕರು ವೈಯುಕ್ತಿಕವಾಗಿ ರಕ್ಷಣಾ ಸೌಕರ್ಯಗಳನ್ನು ಒದಗಿಸುವ ಕಾನೂನುಬದ್ಧ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ನಿರ್ದಿಷ್ಟ ಉದಾಹರಣೆಯನ್ನು ಬ್ರಿಟನ್ನಿನ ಊಬರ್‌ ಚಾಲಕರ ಪ್ರಸಂಗದಲ್ಲಿ ಗುರುತಿಸಬಹುದು.  2021ರಲ್ಲಿ ಊಬರ್‌ ಚಾಲಕರನ್ನು ಗುತ್ತಿಗೆದಾರ ಉದ್ಯೋಗಿಗಳು  ( Contract Workers) ಅಲ್ಲ ಎಂದು ಬ್ರಿಟನ್ನಿನ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಪರಿಣಾಮ, ಇವರನ್ನು ಅಧಿಕೃತವಾಗಿ ಕಾರ್ಮಿಕರು ಎಂದೇ ಪರಿಗಣಿಸಲಾಗುತ್ತಿದೆ.  ವೇತನ ನಿಗದಿಪಡಿಸುವುದು, ಚಾಲಕ ಮತ್ತು ಪ್ರಯಾಣಿಕರ ನಡುವೆ ಸಂಪರ್ಕವನ್ನು ನಿಯಂತ್ರಿಸುವುದು , ಸಂಚಾರ ಮಾರ್ಗಗಳನ್ನು ನಿರ್ಧರಿಸುವುದು ಇವೇ ಮುಂತಾದ ನಿಯಮಗಳ ಹಿನ್ನೆಲೆಯಲ್ಲಿ ಊಬರ್‌ ಸಂಸ್ಥೆಯ ಕಾರ್ಯವೈಖರಿಯು ಉದ್ಯೋಗದಾತರನ್ನು ಹೋಲುವುದರಿಂದ ಅಲ್ಲಿನ ಸುಪ್ರೀಂಕೋರ್ಟ್‌ ಊಬರ್‌ ಚಾಲಕರನ್ನು ಉದ್ಯೋಗಿಗಳೆಂದೇ ಪರಿಗಣಿಸಲು ಆದೇಶಿಸಿದೆ.

  ಭಾರತದ ಗಿಗ್‌ ಆರ್ಥಿಕತೆ ಮತ್ತು ಕಾರ್ಮಿಕರು

 ಈ ಸಮಕಾಲೀನ ನಿದರ್ಶನದ ಹಿನ್ನೆಲೆಯಲ್ಲೇ ಭಾರತದಲ್ಲಿ ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ದುಡಿಯುತ್ತಿರುವ ಗಿಗ್‌ ಕಾರ್ಮಿಕರ ಭವಿಷ್ಯ ಮತ್ತು ಉದ್ಯೋಗ ಭದ್ರತೆಯತ್ತ ಗಮನಹರಿಸಬೇಕಿದೆ. 2022ರ ನೀತಿ ಆಯೋಗದ ಅಧಿಕೃತ ದತ್ತಾಂಶದ ಅನುಸಾರ ಭಾರತದಲ್ಲಿ 77 ಲಕ್ಷ ಗಿಗ್‌ ಕಾರ್ಮಿಕರು ದುಡಿಯುತ್ತಿದ್ದಾರೆ. ಇದು 2030ರ ವೇಳೆಗೆ 2.5 ಕೋಟಿ ಆಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಗಿಗ್ ಕಾರ್ಮಿಕರನ್ನು ಸೇರಿಸಲು ರಾಷ್ಟ್ರೀಯ ಕಾನೂನನ್ನು ರಚಿಸುತ್ತಿದೆ.  ಈ ಯೋಜನೆಯು ಆರೋಗ್ಯ ವಿಮೆ ಮತ್ತು ನಿವೃತ್ತಿ ಉಳಿತಾಯದಂತಹ ಪ್ರಯೋಜನಗಳನ್ನು ನೀಡುತ್ತದೆ.

 ಆರೋಗ್ಯ ವಿಮೆ ಮತ್ತು ಇತರ ಪ್ರಯೋಜನಗಳನ್ನು ಒದಗಿಸುವ ಸಾಮಾಜಿಕ ಭದ್ರತಾ ನಿಧಿಯನ್ನು ಸ್ಥಾಪಿಸಲು Aggregators (ಅಂದರೆ ಡಿಜಿಟಲ್‌ ಪ್ಲಾಟ್‌ಫಾರಂಗಳ ಮಾಲೀಕತ್ವ ಹೊಂದಿರುವ ಮಾರುಕಟ್ಟೆ ಭಾಗಿದಾರರು. ಈ ವಲಯದಲ್ಲಿ ಬಳಕೆದಾರರು ಪಾವತಿಸುವ ಹಣ ಎಲ್ಲವೂ ಇವರಲ್ಲೇ ಕ್ರೋಢೀಕೃತವಾಗುತ್ತದೆ. ಇವರಿಗೂ ಗ್ರಾಹಕರಿಗೂ ನೇರ ಸಂಬಂಧ ಇರುವುದಿಲ್ಲ ಹಾಗೆಯೇ ಸೇವೆ ಒದಗಿಸುವ ಗಿಗ್‌ ಕಾರ್ಮಿಕರೊಡನೆಯೂ ಇವರ ನೇರ ಸಂಬಂಧ ಇರುವುದಿಲ್ಲ) ತಮ್ಮ ಆದಾಯದ ಶೇಕಡಾ 1 ಅಥವಾ 2ರಷ್ಟು  ಕೊಡುಗೆ ನೀಡಬೇಕೆಂದು ಸರ್ಕಾರವು ನಿರೀಕ್ಷಿಸುತ್ತದೆ. ಈ ನಿಟ್ಟಿನಲ್ಲೇ ಗಿಗ್ ಮತ್ತು ವಲಸೆ ಕಾರ್ಮಿಕರ ವ್ಯಾಖ್ಯಾನಗಳನ್ನು ಸರ್ಕಾರವು ಪುನರ್‌ ಪರಿಷ್ಕರಿಸುತ್ತಿದೆ .

 ಪ್ರಸ್ತಾವಿತ ಶಾಸನವು ಕಲ್ಯಾಣ ಮಂಡಳಿಯ ಮಾದರಿಯನ್ನು (Welfare Board Model) ರೂಪಿಸುವ ಮೂಲಕ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ನಿಧಿಯನ್ನು ರಚಿಸುತ್ತದೆ. ಇದು ಎಲ್ಲಾ ಗಿಗ್ ಕೆಲಸಗಾರರ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ.  ಸ್ವಯಂ ಚಾಲಿತ ಯಾಂತ್ರಿಕ ವ್ಯವಸ್ಥೆಯಲ್ಲಿ (Automated Systems) ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿರಿಸುವ ಸಲುವಾಗಿ, ಅಗ್ರಿಗೇಟರ್‌ಗಳು ಉದ್ಯೋಗಿಗಳ ಸೇವೆಯನ್ನು ನಿರಾಕರಿಸುವ ಮುನ್ನ  ಸಕಾರಣಗಳೊಂದಿಗೆ 14-ದಿನದ ಸೂಚನೆಯನ್ನು ನೀಡಬೇಕಾಗುತ್ತದೆ.  ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ವಿವಾದ ಪರಿಹಾರ ಕಾರ್ಯವಿಧಾನಗಳನ್ನು ರೂಪಿಸಲು ಸರ್ಕಾರ ಯೋಚಿಸುತ್ತಿದೆ.  ಗಿಗ್ ಮತ್ತು ಪ್ಲಾಟ್‌ಫಾರ್ಮ್ ನೌಕರರನ್ನು ನೇಮಿಸಿಕೊಳ್ಳುವ ಅಗ್ರಿಗೇಟರ್ ಕಂಪನಿಗಳು ತಮ್ಮ ಕಾರ್ಮಿಕರನ್ನು ಪೋರ್ಟಲ್‌ನಲ್ಲಿ ನೋಂದಾಯಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ.. ಕಾರ್ಮಿಕ ಸಚಿವಾಲಯದ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಕಾರ್ಮಿಕರು ಇತರ ಪ್ರಯೋಜನಗಳೊಂದಿಗೆ ಜೀವವಿಮೆ ಮತ್ತು ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ

 ಹೊಸ ಸಂಹಿತೆಗಳಲ್ಲಿ ಗಿಗ್‌ ಕಾರ್ಮಿಕರು

 ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು 2019 ಮತ್ತು 2020 ರಲ್ಲಿ ರೂಪಿಸಿರುವ  ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.   ಈ ಸಂಹಿತೆಗಳು ಮೂಲಭೂತವಾಗಿ ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸುವ ಮೂಲಕ  29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ವಿಶಾಲ ಕೋಡ್‌ಗಳಲ್ಲಿ ವಿಲೀನಗೊಳಿಸಲು ಅನುವು ಮಾಡಿಕೊಟ್ಟಿವೆ. ಕಾರ್ಮಿಕ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧ ಮತ್ತು ಔದ್ಯೋಗಿಕ ಸುರಕ್ಷತೆ ಆರೋಗ್ಯ ಕೆಲಸದ ಸ್ಥಿತಗತಿಗಳು ಇವುಗಳ ರಕ್ಷಣೆಗಾಗಿ ಇದ್ದ ಕಾನೂನುಗಳನ್ನು ಹೊಸ ಸಂಹಿತೆಗಳಲ್ಲಿ ವಿಲೀನಗೊಳಿಸಲಾಗಿದೆ. ಆದರೆ  ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಉಲ್ಲೇಖ ಇರುವ  ಏಕೈಕ ಸಂಹಿತೆ ಎಂದರೆ  ʼ ಸಾಮಾಜಿಕ ಭದ್ರತಾ ಸಂಹಿತೆ 2020 ʼ ಆಗಿದೆ. ಈ ಸಂಹಿತೆಯಲ್ಲಿ  ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರನ್ನು ಅನೌಪಚಾರಿಕ ವಲಯದ (Informal Sector)  ಕಾರ್ಮಿಕರ ಉಪವಿಭಾಗವೆಂದು ವ್ಯಾಖ್ಯಾನಿಸಲಾಗಿದೆ. ಅದರಂತೆ ಅನೌಪಚಾರಿಕ ಕಾರ್ಮಿಕರಂತೆಯೇ , ಗಿಗ್ ಕೆಲಸಗಾರರು ಸ್ವಯಂ ಘೋಷಣೆಯ ಮೂಲಕ ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. .

 ಸಾಮಾಜಿಕ ಭದ್ರತಾ ಸಂಹಿತೆ 2020 ರಲ್ಲಿ ಗಿಗ್ ಕಾರ್ಮಿಕರನ್ನು ನಿರ್ವಚಿಸಿರುವ ವಿಧಾನದಲ್ಲೇ ಸಮಸ್ಯೆ ಕಾಣುತ್ತದೆ.  ಈ ಸಂಹಿತೆಯು ಅವರನ್ನು ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗೆ ಇರಿಸುತ್ತದೆ. ಅನೇಕ ಗಿಗ್ ಉದ್ಯೋಗದಾತರು, ಕೆಲವು ಪ್ರಸಿದ್ಧ ಕಂಪನಿಗಳಂತೆ, ಔಪಚಾರಿಕ ವಲಯದಲ್ಲಿ ಔಪಚಾರಿಕ ಘಟಕಗಳಾಗಿ ಕಾರ್ಯನಿರ್ವಹಿಸುವುದರಿಂದ ಇದು ಸಮಸ್ಯಾತ್ಮಕವಾಗಿ ಕಾಣುತ್ತದೆ. ಗಿಗ್ ಕೆಲಸಗಾರರನ್ನು ಸಾಂಪ್ರದಾಯಿಕ ಉದ್ಯೋಗ ಚೌಕಟ್ಟಿನಿಂದ ಹೊರಗಿಡುವುದು ಅವರನ್ನು ಹಲವು ಕಾನೂನಾತ್ಮಕ-ಸಾಂವಿಧಾನಿಕ ಹಕ್ಕು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತದೆ. ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆರ್ಥಿಕತೆಗಳಲ್ಲಿನ ಉದ್ಯೋಗ ಸಂಬಂಧಗಳನ್ನು ಅಸ್ಪಷ್ಟವಾಗಿ ವ್ಯಾಖ್ಯಾನಿಸುವ ಅಗ್ರಿಗೇಟರ್ಸ್‌ ಪ್ರೇರಿತ ಕಾರ್ಯತಂತ್ರವನ್ನು ಇಲ್ಲಿ ಗುರುತಿಸಬಹುದು.  ಅಂದರೆ ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಲಾಗದ ಹಾಗೆ ಗಿಗ್ ಆರ್ಥಿಕತೆಯಲ್ಲಿ, ಕಾರ್ಮಿಕರನ್ನು ಸ್ವತಂತ್ರ ದುಡಿಮೆಗಾರರು ಅಥವಾ ಗುತ್ತಿಗೆದಾರರು ಎಂದು ವರ್ಗೀಕರಿಸಲಾಗುತ್ತದೆ.

 ಉದ್ಯೋಗ ಸಂಬಂಧಗಳ ಇಂತಹ ಮರೆಮಾಚುವಿಕೆಯು ಗಿಗ್ ಕಾರ್ಮಿಕರು ಸ್ವತಂತ್ರ ದುಡಿಮೆಗಾರ ಎಂಬ ತಪ್ಪು ಕಲ್ಪನೆಗೆ ಕಾರಣವಾಗುತ್ತದೆ. ಸಾಮಾಜಿಕ ಭದ್ರತಾ ಸಂಹಿತೆಯು 2020 ಈ ತಪ್ಪುಕಲ್ಪನೆಯನ್ನೇ ಪುಷ್ಟೀಕರಿಸುವ ಮೂಲಕ ಅನೌಪಚಾರಿಕ ವಲಯದ ಭಾಗವಾಗಿ ಗಿಗ್ ಕಾರ್ಮಿಕರನ್ನು ಒಳಗೊಳ್ಳುತ್ತದೆ. ಗಿಗ್ ಮತ್ತು ಉದ್ಯೋಗ ಆರ್ಥಿಕತೆಯಲ್ಲಿ ನಿಜವಾದ ಉದ್ಯೋಗ ಸಂಬಂಧವನ್ನು ಈ ಸಂಹಿತೆಯಲ್ಲಿ ಎಲ್ಲೂ ಸಹ ಸ್ಪಷ್ಟವಾಗಿ ನಿರ್ವಚಿಸಲಾಗಿಲ್ಲ. ಅಷ್ಟೇ ಅಲ್ಲದೆ ಸಾಂಸ್ಥಿಕ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ನಡುವೆ ಕಾರ್ಮಿಕರ ಸವಲತ್ತುಗಳ ಅರ್ಹತೆಯ ವಿಷಯದಲ್ಲಿ ಭಾರಿ ವ್ಯತ್ಯಾಸಗಳು ಕಂಡುಬರುತ್ತವೆ. ಉದಾಹರಣೆಗೆ, ಔಪಚಾರಿಕ ಕೆಲಸಗಾರರು ಮಾತೃತ್ವ ಪ್ರಯೋಜನ ಕಾಯಿದೆ, 1961 ರ ಅಡಿಯಲ್ಲಿ ಸಂಪೂರ್ಣ ಮಾತೃತ್ವ ಅವಧಿಗೆ ಉದ್ಯೋಗ ಭದ್ರತೆಯೊಂದಿಗೆ 26 ವಾರಗಳ ವೇತನದ ರಜೆಯನ್ನು ಪಡೆಯುತ್ತಾರೆ. ಇದು ಸಾಂಸ್ಥಿಕ ಸಾಮಾಜಿಕ ಭದ್ರತಾ ವ್ಯಾಪ್ತಿಯ ಭಾಗವಾಗಿದೆ. ಆದರೆ ಸಾಮಾಜಿಕ ಭದ್ರತಾ ಸಂಹಿತೆಗಳ ಅಡಿಯಲ್ಲಿ, ಹೆರಿಗೆ ಪ್ರಯೋಜನಗಳಿಗಾಗಿ, ನೋಂದಾಯಿತ ಅನೌಪಚಾರಿಕ ಕಾರ್ಮಿಕರಿಗೆ 5,000 ದಿಂದ 10,000 ರೂಗಳ ನಗದು ನೀಡಲಾಗುತ್ತದೆ.  ಅಂದರೆ ಸಾಮಾಜಿಕ ಭದ್ರತಾ ಸಂಹಿತೆಯು ಗಿಗ್ ಕಾರ್ಮಿಕರಿಗೆ ಕೆಲವು ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಮಾತ್ರ ಒದಗಿಸುತ್ತದೆಯೇ ಹೊರತು  ಸಾಂಸ್ಥಿಕ ಸಾಮಾಜಿಕ ಭದ್ರತೆಯನ್ನಲ್ಲ. (Institutional Social Security)

ಮತ್ತೊಂದೆಡೆ  ಗಿಗ್ ಕಾರ್ಮಿಕರಿಗೆ ಕನಿಷ್ಠ ವೇತನ ರಕ್ಷಣೆಯಂತಹ ಸಾಂಸ್ಥಿಕ ರಕ್ಷಣೆಯ ಇತರ ಸವಲತ್ತುಗಳನ್ನು ಹೊಸ ಸಂಹಿತೆಯಲ್ಲಿ ಕಾಣಲಾಗುವುದಿಲ್ಲ.  ಈ ಕಾರ್ಮಿಕರಿಗೆ  ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ನಿಯಮಗಳು ಅನ್ವಯಿಸುವುದಿಲ್ಲ. ಗಿಗ್ ಕಾರ್ಮಿಕರನ್ನು ಕೈಗಾರಿಕಾ ಸಂಬಂಧಗಳ ಕೋಡ್ 2020 ರ ಅಡಿಯಲ್ಲಿ ಸೇರಿಸದೆ ಇರುವುದರಿಂದ ಅದರ ಅಡಿಯಲ್ಲಿ ಒದಗಿಸಲಾದ ವಿವಾದ ಪರಿಹಾರ ಕಾರ್ಯವಿಧಾನಗಳೂ ಇಲ್ಲಿ ಅನ್ವಯಿಸುವುದಿಲ್ಲ. ಕಾರ್ಮಿಕ ಕಾನೂನುಗಳ ಅಡಿಯಲ್ಲಿ ರಕ್ಷಣೆಯ ಮೂಲ ಆಧಾರ ಉದ್ಯೋಗಕ್ಕೆ ಸಂಬಂಧಿಸಿರುತ್ತದೆ. ಆದರೆ  ಗಿಗ್ ಕಾರ್ಮಿಕರ ದುಡಿಮೆಯ ನೆಲೆಯಲ್ಲಿ ಇದನ್ನು ವ್ಯಾಖ್ಯಾನಿಸಲಾಗಿಲ್ಲ. ರಾಜಸ್ಥಾನ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಚಯಿಸಲಾದ ಶಾಸನಗಳಲ್ಲಿ ಈ ಕೊರತೆ ಕಾಣಬಹುದು.

 ವರ್ತಮಾನ ಭವಿಷ್ಯದ ಸವಾಲುಗಳು

 ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೇಶದಲ್ಲಿ ಹೆಚ್ಚುತ್ತಿರುವ ಗಿಗ್ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುವುದೇ ಆದರೆ ಅದು ಗಿಗ್ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಉದ್ಯೋಗ ಸಂಬಂಧವನ್ನು ಸ್ಪಷ್ಟ ರೀತಿಯಲ್ಲಿ ವ್ಯಾಖ್ಯಾನಿಸಬೇಕಿದೆ. ಅಗ್ರಿಗೇಟರ್ಸ್‌ ನಿರೂಪಿಸಿರುವ ವಾಖ್ಯಾನವನ್ನು ಮುಸುಕಿನಿಂದ ತೆಗೆದು  ಈ ಉದ್ದಿಮೆಗಳನ್ನು  ಉದ್ಯೋಗದಾತರಾಗಿ ಗುರುತಿಸುವುದೇ ಅಲ್ಲದೆ  ಗಿಗ್ ಕಾರ್ಮಿಕರ ಸ್ಪಷ್ಟವಾದ ಉದ್ಯೋಗ ಸಂಬಂಧವನ್ನು ಪುನರ್‌ ವ್ಯಾಖ್ಯಾನಕ್ಕೊಳಪಡಿಸಬೇಕಿದೆ. ಹೀಗೆ ಉದ್ಯೋಗ ಸಂಬಂಧವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ ನಂತರ, ಗಿಗ್ ಕೆಲಸಗಾರರನ್ನು ಉದ್ದೇಶಿತ ನಾಲ್ಕು ಕಾರ್ಮಿಕ ಸಂಹಿತೆಗಳ  ಅಡಿಯಲ್ಲಿ ಒಳಗೊಳ್ಳಬಹುದು.  ಆಗ ಇತರ ಕಾರ್ಮಿಕರಿಗೆ ಲಭ್ಯವಿರುವ ಅಲ್ಪಸ್ವಲ್ಪ ಸೌಕರ್ಯ-ಸವಲತ್ತು-ಹಕ್ಕುಗಳನ್ನಾದರೂ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

 ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೂಚಿಸಿದಂತೆ ಕಲ್ಯಾಣ ಮಂಡಳಿ ಮಾದರಿಯು (Welfare Board Model)  ಈ ಹಿಂದೆ ಸೀಮಿತ ಪರಿಣಾಮವನ್ನು ಬೀರಿದೆ. ವಿಶೇಷವಾಗಿ ಕಟ್ಟಡ ಮತ್ತಿತರ ನಿರ್ಮಾಣ ಕಾರ್ಮಿಕರಲ್ಲಿ ಅನೇಕರನ್ನು ಅವರು ಔಪಚಾರಿಕ ಉದ್ಯೋಗದಾತರ ಸುಪರ್ದಿಯಲ್ಲಿ ದುಡಿಮೆ ಮಾಡಿದ್ದರೂ ಅವರನ್ನು  ಅನೌಪಚಾರಿಕ ಎಂದು ವರ್ಗೀಕರಿಸಲಾಗಿದೆ. ಗಿಗ್ ದುಡಿಮೆಯಲ್ಲಿ ಉದ್ಯೋಗ ಸಂಬಂಧವನ್ನು ಸ್ಪಷ್ಟಪಡಿಸುವುದು ಈ ವಲಯದಲ್ಲಿ ಕಾರ್ಮಿಕರ ಔಪಚಾರಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಅತ್ಯಧಿಕ ಕಾರ್ಮಿಕರ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಶತಮಾನದ ಕಾರ್ಮಿಕ ಕಾಯ್ದೆಗಳನ್ನು ಸರಳೀಕರಿಸುವ ಉದ್ದೇಶದೊಂದಿಗೆ ಸರ್ಕಾರವು ರೂಪಿಸಿರುವ ಹೊಸ ಕಾರ್ಮಿಕ ಸಂಹಿತೆಗಳು ಎಲ್ಲಶ್ರಮಜೀವಿಗಳನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ವಿಫಲವಾಗುತ್ತವೆ. ಇತ್ತ ಅಧಿಕೃತ ಉದ್ಯೋಗಿಗಳಾಗಿಯೂ ಪರಿಗಣಿಸಲ್ಪಡದ ಅತ್ತ ತಾತ್ಕಾಲಿಕ ನೌಕರರಾಗಿಯೂ ಗುರುತಿಸಲ್ಪಡದ ಗಿಗ್‌ ಕಾರ್ಮಿಕರು ಬಹುತೇಕವಾಗಿ ಗುತ್ತಿಗೆ ಕಾರ್ಮಿಕರಾಗಿ ತಮ್ಮ ಸೇವಾವಧಿ ಪೂರೈಸಬೇಕಾಗುತ್ತದೆ.  ಈ ಜಟಿಲ ಸಮಸ್ಯೆಯನ್ನು ಪರಿಹರಿಸದೆ ಹೋದರೆ ಭಾರತದ ಲಕ್ಷಾಂತರ ಗಿಗ್‌ ಕಾರ್ಮಿಕರು ಅನಿಶ್ಚಿತ ಭವಿಷ್ಯವನ್ನು ಎದುರಿಸಬೇಕಾಗುತ್ತದೆ.

 ರಾಜಕೀಯವಾಗಿ ಈ ಹೊಸ ಕಾರ್ಮಿಕ ಸಂಹಿತೆಗಳಾಗಲೀ, ಹೊಸ ಗಿಗ್‌ ಕಾರ್ಮಿಕ ನೀತಿಯಾಗಲೀ ಯಾವುದೇ ಪ್ರತಿರೋಧ ಎದುರಿಸುತ್ತಿಲ್ಲ. ಏಕೆಂದರೆ ಬಹುತೇಕ ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ನವ ಉದಾರವಾದವನ್ನು ಆರಾಧಿಸುತ್ತವೆ. ಎಡಪಕ್ಷಗಳ ವಿರೋಧ ರಾಜಕೀಯ ಪರಿಣಾಮಗಳನ್ನು ಬೀರುವಷ್ಟು ಮಟ್ಟಿಗೆ ಎಡಪಂಥೀಯ ರಾಜಕಾರಣ ತಳಮಟ್ಟವನ್ನು ತಲುಪುವುದು ಸಾಧ್ಯವಾಗಿಲ್ಲ ಇದರ ಕಾರಣಗಳೇನೇ ಇರಲಿ, ಶತಮಾನದ ಇತಿಹಾಸ ಇರುವ ಭಾರತದ ಕಾರ್ಮಿಕ ಚಳುವಳಿಯಲ್ಲಿ ಗಿಗ್‌ ಕಾರ್ಮಿಕರನ್ನು ಸಂಘಟಿಸುವ ಪ್ರಯತ್ನಗಳು ಪ್ರತ್ಯೇಕ ಸೇವಾವಿಭಾಗಗಳಲ್ಲಿ ನಡೆಯುತ್ತಿದ್ದರೂ ಒಂದು ಸಮಗ್ರ ನೆಲೆಯ ಐಕಮತ್ಯದ ಗಿಗ್‌ ಕಾರ್ಮಿಕ ಚಳುವಳಿ ಇಂದಿಗೂ ರೂಪುಗೊಂಡಿಲ್ಲ ಎನ್ನುವುದು ಕಟು ವಾಸ್ತವ. ಎಡಪಕ್ಷಗಳ ಕಾರ್ಮಿಕ ಸಂಘಟನೆಗಳ ಪ್ರಯತ್ನಗಳು ಈ ನಿಟ್ಟಿನಲ್ಲಿ ಇನ್ನು ಸಾಲದಾಗಿದೆ.

 ಕಾರ್ಮಿಕ ಚಳುವಳಿಯಲ್ಲಿ ಬೇರೂರಿರುವ ಪ್ರತ್ಯೇಕತೆಯ ಭಾವ, ತಾತ್ವಿಕ ಮಡಿವಂತಿಕೆ ಮತ್ತು ಸಂಘಟನಾತ್ಮಕ ವಿಘಟನೆಯನ್ನು ದಾಟಿ ಯೋಚಿಸಿದಾಗ, ವಿಕಸಿತ ಭಾರತವನ್ನು ಇನ್ನೂ ಹಲವು ದಶಕಗಳ ಕಾಲ ಕಟ್ಟಬೇಕಾದ ಲಕ್ಷಾಂತರ ಗಿಗ್‌ ಕಾರ್ಮಿಕರನ್ನು ಒಂದು ಹಂದರದಲ್ಲಿ ಸಂಘಟಿಸುವ ಅವಶ್ಯಕತೆ ಎದ್ದು ಕಾಣುತ್ತಿದೆ. ಇದು ಸಮಕಾಲೀನ ಚರಿತ್ರೆ ನಮ್ಮಿಂದ ನಿರೀಕ್ಷಿಸುವ ಮಹತ್ತರವಾದ ನಡೆ, ಭವಿಷ್ಯ ಭಾರತ ನಮ್ಮಿಂದ ಅಪೇಕ್ಷಿಸುವ ಕ್ರಾಂತಿಕಾರಿ ಹೆಜ್ಜೆ.

( ಈ ಲೇಖನದ ಬಹುತೇಕ ಮಾಹಿತಿಗಳನ್ನು ದಿನಾಂಕ 15 ಅಕ್ಟೋಬರ್‌ 2024ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಿಂಗ್‌ಶುಕ್‌ ಸರ್ಕಾರ್‌ ಅವರ “ Ensuring a proper social safety net for the gig worker ” ಲೇಖನದಿಂದ ಪಡೆದುಕೊಳ್ಳಲಾಗಿದೆ. )

-೦-೦-೦-

Tags: apple india labourchild labourfree labour indiaIndiaindia labour strikeindian labour lawslabourlabour indialabour india 10thlabour india 11thlabour india 1stlabour india 2ndlabour india 3rdlabour india 4thlabour india 6thlabour india 7thlabour india 8thlabour india 9thlabour india sslclabour india toplabour law in indialabour lawslabour laws in indialabour laws in india for private companies
Previous Post

JDS – BJP ಅಭ್ಯರ್ಥಿ ಆಗಿ ನಿಖಿಲ್‌ ಕುಮಾರಸ್ವಾಮಿ ಆಯ್ಕೆ..! BSY ಘೋಷಣೆ

Next Post

ಬಿಗ್ ಬಾಸ್ ಮನೆಗೆ ಮತ್ತೊಬ್ಬ ವ್ಯಕ್ತಿ ಎಂಟ್ರಿ ಅಗಿದೆ..!

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post

ಬಿಗ್ ಬಾಸ್ ಮನೆಗೆ ಮತ್ತೊಬ್ಬ ವ್ಯಕ್ತಿ ಎಂಟ್ರಿ ಅಗಿದೆ..!

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada