ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 751.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ದೆಹಲಿ ಮತ್ತು ಮುಂಬೈನ ನ್ಯಾಷನಲ್ ಹೆರಾಲ್ಡ್ ಹೌಸ್ ಮತ್ತು ಲಕ್ನೋದ ನೆಹರೂ ಭವನ ಸೇರಿ ಸ್ಥಿರ ಆಸ್ತಿಗಳ ರೂಪದಲ್ಲಿ ಇರುವ 661.69 ಕೋಟಿ ರೂ. ಮತ್ತು ಯಂಗ್ ಇಂಡಿಯನ್ (ವೈಐ) ಎಜೆಎಲ್ನ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯ ರೂಪದಲ್ಲಿರುವ ರೂ. 90.21 ಕೋಟಿಗಳಷ್ಟು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಇಡಿ ತಿಳಿಸಿದೆ.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಪತ್ರಿಕೆಯನ್ನ ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಹಾಗೂ ಅದರ ಹಿಡುವಳಿ ಕಂಪನಿ ಯಂಗ್ ಇಂಡಿಯನ್ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಮೇಲೆ ದಾಳಿ ಮಾಡಿ ವಳಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಬಂಧ ಈ ಹಿಂದೆ ಇಡಿ ಸೋನಿಯಾ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿ ಉತ್ತರ ದಾಖಲಿಸಿತ್ತು.
ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ಜವಾಹರಲಾಲ್ ನೆಹರು ಮತ್ತು ಇತರೆ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.