2024ರ ಲೋಕಸಭೆ ಚುನಾವಣೆ ಮೋದಿ ವರ್ಸಸ್ ದೀದಿ ಆಗಲಿದೆಯೇ? ಹಾಗಂತ ಸೂಚನೆಗಳಂತೂ ಸಿಗಲಾರಂಭಿಸಿದೆ. ಒಂದೋ ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ನಡುವೆ 2024ರ ಲೋಕಸಭೆ ಚುನಾವಣೆ ನಡೆಯಲಿದೆ. ಇಲ್ಲವೇ ಎನ್.ಡಿ.ಎ. ಗೆ ಕಾಂಗ್ರೆಸ್ ಮತ್ತು ತೃತೀಯ ರಂಗ ಸೇರಿಕೊಂಡು ಕಣಕ್ಕಿಳಿಯಲಿವೆ. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧದ ರಾಜಕೀಯ ಸಮೀಕರಣ ಯಾವುದೇ ಇರಬಹುದು. ಆ ಚುನಾವಣೆಯಲ್ಲಿ ಮೋದಿಗೆ ವಿರುದ್ಧವಾಗಿ ಇರುವ ಮುಖ ದೀದಿಯದ್ದಾಗುವ ಸಂಭವನೀಯತೆಗಳು ಕಾಣಿಸಲಾರಂಭಿಸಿದೆ.
ಏಕಾಂಗಿ ಹೋರಾಟದ ಗರಿಮೆ:
ಒಂದೆಡೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ 15 ಅಧಿಕ ಕೇಂದ್ರ ಸಚಿವರ ದಂಡು ಪ್ರಚಾರ ನಡೆಸಿದ ಬಿಜೆಪಿ, ಇನ್ನೊಂದೆಡೆ ಪ್ರಮುಖ ನಾಯಕರನ್ನು ಬಿಜೆಪಿ ಸೆಳೆದ ಬಳಿಕ ಅಳಿದುಳಿದ ನಾಯಕರನ್ನು ಕಟ್ಟಿಕೊಂಡು ರಣಾಂಗಣದಲ್ಲಿ “ಖೇಲಾ ಹೋಬೆ” ಎಂದು ಏಕಾಂಗಿಯಾಗಿ ಆಟಕ್ಕಿಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಇಡಿಯ ದೇಶದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದ ಕದನದಲ್ಲಿ ಕೊನೆಗೂ ಗೆದ್ದಿದ್ದು ಮಮತಾ ಬ್ಯಾನರ್ಜಿ.
“ಈ ಬಾರಿ 200 ನ್ನೂ ಮೀರಿ” ಎಂದು ತಿಂಗಳುಗಟ್ಟಲೆ ಬಿಜೆಪಿಯ ಹತ್ತಾರು ಸ್ಟಾರ್ ಪ್ರಚಾರಕರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ, ಇನ್ನೊಂದೆಡೆ ಏಕಾಂಗಿ ಸ್ಟಾರ್ ಪ್ರಚಾರಕಿಯೊಂದಿಗೆ ಇಡಿಯ ಪಶ್ಚಿಮ ಬಂಗಾಳದಲ್ಲಿ ಪೈಪೋಟಿ ನೀಡಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್. ಅಮಿತ್ ಶಾ ಬಳಿ ಕೇಂದ್ರ ಸರಕಾರದ ಸಮಸ್ತ ಪಡೆ ಜತೆಗಿದ್ದರೆ, ಪ್ರಶಾಂತ್ ಕಿಶೋರ್ ಗೆ ಇದ್ದಿದ್ದು ಮಮತಾ ಬ್ಯಾನರ್ಜಿ ಎಂಬ ಸಿಂಹಿಣಿ ಮಾತ್ರ. ಆಕೆಯೇ ಸಿಎಂ ಅಭ್ಯರ್ಥಿ. ಆಕೆಯೇ ಟಿಎಂಸಿಯ ಸ್ಟಾರ್ ಪ್ರಚಾರಕಿ!
ಕೊನೆಗೂ 213 ಸ್ಥಾನಗಳನ್ನು (ಒಟ್ಟು 292 ಸ್ಥಾನ) ಗಳಿಸಿ ಗೆದ್ದಿದ್ದು ಟಿಎಂಸಿ. ಬಿಜೆಪಿ ಮೂರಂಕಿ ಕೂಡ ತಲುಪದೆ 77 ಕ್ಷೇತ್ರಗಳಿಗೆ ಗೆಲುವಿನ ಯಾತ್ರೆ ಮುಗಿಸಿತ್ತು. ಮತ್ತು ಟಿಎಂಸಿಯ ಅಭೂತಪೂರ್ವ ಜಯಭೇರಿಯ ರೂವಾರಿ ಮಮತಾ ಬ್ಯಾನರ್ಜಿ!
ಈ ಏಕಾಂಗಿ ಹೋರಾಟದ ಸಾಹಸಗಾಥೆ ಇದೀಗ ಬಿಜೆಪಿಯೇತರ ಪಕ್ಷಗಳಿಗೆ ಸ್ಫೂರ್ತಿಯಾಗತೊಡಗಿದೆ. ಒಬ್ಬ ದಿಟ್ಟ ಹೆಣ್ಣುಮಗಳು 10 ವರ್ಷದ ಆಡಳಿತ ವಿರೋಧಿ ಅಲೆಯನ್ನು ಮೀರಿ ಈ ಪರಿಯಲ್ಲಿ ಜಯಭೇರಿ ಬಾರಿಸಿರುವುದು ಕಾಂಗ್ರೆಸ್ ಹಿರಿಯ ನಾಯಕರನ್ನೂ ಆಕರ್ಷಿಸತೊಡಗಿದೆ.
ಕಾಂಗ್ರೆಸ್ ನ ಕಪಿಲ್ ಸಿಬಲ್, ದಿಗ್ಗಿ ಶಹಬ್ಬಾಸ್:
“ಕೇಂದ್ರ ಸರಕಾರ ಏನೇನು ಮಾಡಿದರೂ ಮಮತಾ ಬ್ಯಾನರ್ಜಿಯನ್ನು ಸೋಲಿಸಲಾಗಲಿಲ್ಲ. ದೀದಿ ನಿಜವಾಗಿಯೂ ಝೂನ್ಸಿಯ ರಾಣಿ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಲ್, ಮಮತಾ ಬ್ಯಾನರ್ಜಿ ಗೆಲುವಿಗೆ ಶುಭಾಶಯ ಹೇಳುವ ಸಂದರ್ಭದಲ್ಲಿ ಪ್ರಶಂಸಿಸಿರುವುದು ಮುಂದಿನ ಬೆಳವಣಿಗೆಯ ಮುನ್ಸೂಚನೆ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಕೂಡ ಟ್ವೀಟ್ ಮಾಡಿ ಮಮತಾಗೆ ಶಹಬ್ಬಾಸ್ ಹೇಳಿದ್ದಾರೆ. “ನಿಮಗೂ ನಿಮ್ಮ ಪಕ್ಷದ ಕಾರ್ಯಕರ್ತರಿಗೂ ಹಾರ್ದಿಕ ಶುಭಾಶಯಗಳು. ಹಣಬಲದ ಶಕ್ತಿಯ ಜನರೆದುರಿಗೆ ಏಕಾಂಗಿಯಾಗಿ ನಿಂತು ಹೋರಾಡಿದ ಪರಿ ನಿಜಕ್ಕೂ ಪ್ರಶಂಸನೀಯ” ಎಂದು ಸಿಂಗ್ ಹೇಳಿದ್ದಾರೆ.
ಮಮತಾ ಇಂದು ರಾಷ್ಟ್ರ ನಾಯಕಿ: ಕಮಲ್ ನಾಥ್ ಪ್ರಶಂಸೆ
ಇನ್ನೊಂದೆಡೆ ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ನ ಹಿರಿಯ ಮುಖಂಡ ಕಮಲ್ ನಾಥ್ ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿಜಯವನ್ನು ಬಹುವಾಗಿ ಸಂಭ್ರಮಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಇಡಿ, ಐಟಿ, ಸಿಬಿಐನಂಥ ಕೇಂದ್ರದ ಏಜೆನ್ಸಿಗಳಿದ್ದ ವಿರೋಧಿ ಪಡೆಯನ್ನು ಒದ್ದು ಓಡಿಸಿ ಮೂರನೇ ಬಾರಿಗೆ ಸತತ ಗೆಲುವಿನೊಂದಿಗೆ ಹ್ಯಾಟ್ರಿಕ್ ಸಾಧಿಸಿದ ದೀದಿ ಕೈಗೊಂಡ ವಿಜಯ ಯಾತ್ರೆ ಅಮೋಘ. ಈ ಮೂಲಕ ಮಮತಾ ಬ್ಯಾನರ್ಜಿ ಇಂದು ರಾಷ್ಟ್ರ ನಾಯಕಿಯಾಗಿದ್ದಾರೆ ಎಂದು ಕಮಲ್ ನಾಥ್ ಬಣ್ಣಿಸಿದ್ದಾರೆ. ಜತೆಗೆ ದೀದಿಗೆ ಕರೆ ಮಾಡಿ ಮಧ್ಯಪ್ರದೇಶಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಹಾಗಾದರೆ 2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿಯನ್ನು ನೀವೆಲ್ಲ ಎದುರು ನಿಲ್ಲಿಸಲಿರುವಿರೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಮಲ್ ನಾಥ್, “ಅದು ಸದ್ಯಕ್ಕಂತೂ ನನಗೆ ಗೊತ್ತಿಲ್ಲ. ಅದನ್ನು ನಿರ್ಧರಿಸುವುದು ಯುಪಿಎ.” ಎಂದಿದ್ದಾರೆ. ಆದರೆ ಈ ಬೆಳವಣಿಗೆ ಈಗ ರಾಜಕೀಯ ಪಂಡಿತರಲ್ಲಿ ಹೊಸ ಲೆಕ್ಕಾಚಾರಗಳನ್ನು, ಸಮೀಕರಣಗಳನ್ನು ಬಿತ್ತಿದೆ.
ಎಲ್ಲವನ್ನೂ ಈಗಲೇ ನಿರ್ಧರಿಸಲಾಗದು: ದೀದಿ
ತೃತೀಯ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಎನ್.ಡಿ.ಟಿ.ವಿ.ಗೆ ನೀಡಿದ ಸಂದರ್ಶನದಲ್ಲಿ, 2024ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂಭವನೀಯ ಪ್ರಬಲ ಅಭ್ಯರ್ಥಿಯಾಗಿ ನೀವು ರೂಪುಗೊಳ್ಳುತ್ತಿರುವಂತಿದೆ ಎಂಬ ಪ್ರಶ್ನೆ ಕೇಳಿಬಂದಾಗ ನಸು ನಕ್ಕ ದೀದಿ, “ಕೆಲವೊಮ್ಮೆ ಎಲ್ಲವನ್ನೂ ಇಲ್ಲೇ ಈಗಲೇ ನಿರ್ಧರಿಸಲಾಗದು. ಚುನಾವಣೆ ಸಂದರ್ಭದಲ್ಲಿ ಅದು ವಿಭಿನ್ನವಾಗಿರುತ್ತದೆ. ಅದಕ್ಕೆಲ್ಲ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹಾಕಿಕೊಳ್ಳಬೇಕು. ಇದೀಗ ಕೋವಿಡ್ ವಿರುದ್ಧ ಸಮರ ಸಾರುವ ಸಮಯ. ಕೋವಿಡ್ ವಿರುದ್ಧದ ಹೋರಾಟ ಮುಗಿದ ಮೇಲೆ ನಾವೆಲ್ಲ ಅದನ್ನು ತೀರ್ಮಾನಿಸುತ್ತೇವೆ. ಇದಕ್ಕಾಗಿ ನಾವು ತಜ್ಞರ ತಂಡವನ್ನು ರಚಿಸುತ್ತೇವೆ. ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಆಯಾಚಿತವಾಗಿ ಅದೆಲ್ಲ ಆಗಲಿದೆ. ಏಕೆಂದರೆ ದೇಶವು ವಿಪತ್ತನ್ನು ಎದುರಿಸಲಾಗದು. ಬಿಜೆಪಿ ಎಂದರೆ ವಿಪತ್ತು” ಎಂದು ಉತ್ತರಿಸಿದ್ದಾರೆ.
ಈಗಲೇ ನಿರ್ಧರಿಸಲಾಗದು, ಮುಂದೆ ತೀರ್ಮಾನಿಸುತ್ತೇವೆ, ತಜ್ಞರ ತಂಡ ರಚಿಸುತ್ತೇವೆ ಎಂದೆಲ್ಲ ಹೇಳುವ ಮೂಲಕ ಪ.ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ತಾವು ಮುಂದೆ ಮೋದಿ ವಿರುದ್ಧವಾಗಿ ಸ್ಪರ್ಧಿಸಲೂ ಬಹುದು ಎಂಬ ಸುಳಿವು ನೀಡಿದ್ದಾರೆ. ಸಹಜವಾಗಿಯೇ 2024ಕ್ಕೆ ಇನ್ನೂ ಮೂರು ವರ್ಷಗಳಿಗೂ ಅಧಿಕ ಸಮಯವಿರುವುದರಿಂದ ದೀದಿಗೆ ಮೋದಿ ವಿರುದ್ಧ ಈಗಲೇ ಕಣಕ್ಕಿಳಿಯುವ ಉಮೇದು ಕಾಣಿಸುತ್ತಿಲ್ಲ. ಹಾಗಂತ ಮುಂದೆ ತಾನು ಮೋದಿ ವಿರುದ್ಧ ಕಣಕ್ಕಿಳಿಯಲೂ ಬಹುದು ಎಂಬ ಸೂಚನೆಯನ್ನು ರವಾನಿಸಿ ಯುಪಿಎ ಮುಂದೆ ಒಂದು ಆಯ್ಕೆಯನ್ನಂತೂ ತೆರೆದಿಟ್ಟಿದ್ದಾರೆ.
ಕಾಂಗ್ರೆಸ್ ನಾಯಕರ ಹುಮ್ಮಸ್ಸು:
ಒಂದೊಮ್ಮೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸಹಪಾಠಿಯಾಗಿದ್ದ ಮಮತಾ ಬ್ಯಾನರ್ಜಿ ಮುಂದಿನ ಲೋಕಸಭಾ ಚುನಾವಣೆಗೆ ಮೋದಿಗೆ ವಿರುದ್ಧವಾಗಿ ನಿಂತರೆ ಯಶಸ್ಸು ಕಾಣಬಬಹುದೇನೋ ಎಂಬ ಆಶಾವಾದ ಕಾಂಗ್ರೆಸ್ ನ ಕೆಲ ನಾಯಕರಲ್ಲಿ ಕಾಣಿಸಿಕೊಂಡಿದೆ. ಕಪಿಲ್ ಮಿಶ‍್ರಾ, ಕಮಲ್ ನಾಥ್, ದಿಗ್ವಿಜಯ ಸಿಂಗ್ ಹೇಳಿಕೆಗಳು ಆ ಸೂಚನೆಯನ್ನಂತೂ ನೀಡುತ್ತಿವೆ.
ಆದರೆ ಈ ಬಗ್ಗೆ ಕೈ ಹೈಕಮಾಂಡ್ ಒಲವು ಮಾತ್ರ ಈವರೆಗೂ ಬಹಿರಂಗವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್ ಹೈಕಮಾಂಡ್, ಎಡಪಕ್ಷಗಳು ಹಿಂಬಾಗಿಲಿನಿಂದ ದೀದಿ ಜತೆ ಕೈಜೋಡಿಸಿದ್ದರೂ, ಅದು ಆ ರಾಜ್ಯದ ಸದ್ಯದ ಪರಿಸ್ಥಿತಿಗೆ ಪೂರಕವಾದ ನಿರ್ಧಾರ ಮಾತ್ರವಾಗಿತ್ತು. ಅದರರ್ಥ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ ಆಗುವುದಕ್ಕೆ ಕಾಂಗ್ರೆಸ್ ಹೈಕಮಾಂಡ್, ಎಡಪಕ್ಷಗಳಿಗೆ ಆಸಕ್ತಿ ಇದೆ ಎಂದಲ್ಲ. ಅದೊಂದು ಸಾಂದರ್ಭಿಕ ಬೆಳವಣಿಗೆ ಮಾತ್ರ ಆಗಿತ್ತು.
ಅಲ್ಲದೆ ಕಪಿಲ್ ಮಿಶ‍್ರಾ, ಕಮಲ್ ನಾಥ್, ದಿಗ್ವಿಜಯ ಸಿಂಗ್ ಅವರಂಥ ಅನೇಕ ಹಿರಿಯ ತಲೆಗಳಿಗೂ ಕಾಂಗ್ರೆಸ್ ಹೈಕಮಾಂಡ್ ಗೂ ಶೀತಲ ಸಮರ ನಡೆಯುತ್ತಿರುವುದರಿಂದ ಅವರೆಲ್ಲರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ‘ಕೈ’ಕಮಾಂಡ್ ಚಿಂತಿಸಿದರೂ ಅಚ್ಚರಿಯಿಲ್ಲ.
ಎಲ್ಲ ಪಕ್ಷಗಳ ಬೆಂಬಲ ಸಿಕ್ಕರೆ ಮಾತ್ರ ಪ್ರಧಾನಿ:
ಯುಪಿಎ ಯ ಎಲ್ಲ ಅಂಗಪಕ್ಷಗಳು, ತೃತೀಯ ರಂಗದ ಕೆಲವಾದರೂ ಪಕ್ಷಗಳ ಬೆಂಬಲ ಸಿಕ್ಕಿದರೆ ಮಾತ್ರ ಸಿಎಂ ದೀದಿಗೆ ಪಿಎಂ ಮೋದಿ ವಿರುದ್ಧ ಕಣಕ್ಕಿಳಿಯಲು ಶಕ್ತಿ ಸಿಗಲಿದೆ. ಅದೆಲ್ಲ ದೀದಿಗೆ ಗೊತ್ತಿದೆ. ಅದಕ್ಕಾಗಿಯೇ ಸಂದರ್ಶನದಲ್ಲಿ “ಅದಕ್ಕೆಲ್ಲ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹಾಕಿಕೊಳ್ಳಬೇಕು. ಕೋವಿಡ್ ವಿರುದ್ಧದ ಹೋರಾಟ ಮುಗಿದ ಮೇಲೆ ನಾವೆಲ್ಲ ಅದನ್ನು ತೀರ್ಮಾನಿಸುತ್ತೇವೆ. ಇದಕ್ಕಾಗಿ ನಾವು ತಜ್ಞರ ತಂಡವನ್ನು ರಚಿಸುತ್ತೇವೆ. ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ.” ಎಂದು ದೀದಿ ವಿವಿಧ ಪಕ್ಷಗಳ ನಡುವಿನ ಸಮನ್ವಯತೆಯ ಸೂಚನೆ ನೀಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಬೇಕಾದರೆ ದೀದಿಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಅನ್ನಲೇಬೇಕು. ಇಲ್ಲದಿದ್ದರೆ ಆಕೆಯ ಹೋರಾಟ ವ್ಯರ್ಥವಾದೀತು. ಅದು ದೀದಿಗೂ ಗೊತ್ತಿದೆ, ಕಾಂಗ್ರೆಸ್ ಹೈಕಮಾಂಡ್ ದೀದಿ ನಾಯಕತ್ವ ಒಪ್ಪೀತಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಡೆಯಬಹುದಾದ ಬೆಳವಣಿಗೆಗಳು ನಿರ್ಧರಿಸಲಿವೆ. ಅಂಥ ಬೆಳವಣಿಗೆಗೆ ದೀದಿ ಕಾಯುವುದು ಸದ್ಯದ ಮಟ್ಟಿಗೆ ಅನಿವಾರ್ಯ.