ತಿರುಪತಿ ಲಡ್ಡುವಿನಲ್ಲಿ ಇನ್ನು ಮುಂದೆ ಕರ್ನಾಟಕದ ಘಮಲು ಇರುವುದಿಲ್ಲ. ರಾಜ್ಯದ ಪ್ರಮುಖ ಹಾಲು ಉತ್ಪನ್ನ ನಂದಿನ ತುಪ್ಪ ಬಳಸದಿರುರಲು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸೋಮವಾರ (ಜು.31) ಮಾಧ್ಯಮಗಳು ವರದಿ ಮಾಡಿವೆ.
ಟಿಟಿಡಿ ಆಡಳಿತ ಮಂಡಳಿ ಆಗಸ್ಟ್ 1 ರಿಂದ ಕರ್ನಾಟಕ ನಂದಿನಿ ತುಪ್ಪದ ಖರೀದಿ ಟೆಂಟರ್ ಅನ್ನು ರದ್ದುಪಡಿಸಿದೆ. ಇನ್ನು ಮುಂದೆ ತಿರುಪತಿ ಲಡ್ಡುವಿನಲ್ಲಿ ಬೇರೆಯ ಕಂಪನಿ ತುಪ್ಪ ಇರಲಿದೆ.
ಈಗಾಗಲೇ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರವನ್ನು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ಹಾಲು ಮಹಾಮಂಡಳಿ ( ಕರ್ನಾಟಕ ಹಾಲು ಒಕ್ಕೂಟ) ಹೆಚ್ಚಳ ಮಾಡಿದೆ. ದರ ಹೆಚ್ಚಳದ ಕಾರಣದಿಂದಲೇ ನಂದಿನಿ ತುಪ್ಪ ಖರೀದಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರ್ನಾಟಕ ನಂದಿನಿಯ ತುಪ್ಪವನ್ನು ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಹುತೇಕ ಐವತ್ತು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದ ಹಳೆಯ ಒಡಬಂಡಿಕೆ ರದ್ದಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಹಾಲು ಮಹಾಮಂಡ:ಳಿಯ ಅಧ್ಯಕ್ಷ ಭೀಮಾನಾಯಕ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಂದಿನಿ ಉತ್ಪನ್ನಗಳ ದರ ಏರಿಕೆ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ದರ ಏರಿಕೆ ಕಾರಣ ನೀಡಿ ಟಿಟಿಡಿ ಆಡಳಿತ ಮಂಡಳಿ ನಂದಿನಿ ತುಪ್ಪದ ಖರೀದಿ ಟೆಂಡರ್ ಅನ್ನು ರದ್ದುಪಡಿಸಿದೆ ಎಂದು ಹೇಳಿದರು.
“ನಂದಿನಿಗಿಂತ ಕಡಿಮೆ ದರದಲ್ಲಿ ತುಪ್ಪ ನೀಡುವ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲಿ ಹೊಸ ಸಂಸ್ಥೆಯನ್ನು ಹುಡುಕಿಕೊಂಡಿರುವುದರಿಂದ ನಾವು ಸಹಜವಾಗಿ ತುಪ್ಪದ ಸರಬರಾಜು ನಿಲ್ಲಿಸಬೇಕಾಗುತ್ತದೆ. ನಂದಿನಿ ತುಪ್ಪ ಉತ್ಪನ್ನವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನು ಬೇರೆ ಕಂಪೆನಿಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮುಂದೆ ತಿರುಪತಿ ಲಡ್ಡುಗಳು ಈಗಿನಂತೆಯೇ ಇರುತ್ತವೆ ಎಂದು ಹೇಳಲಾಗದು” ಎಂದು ಭೀಮಾನಾಯಕ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಎಸ್‌ವೈ, ಎಚ್‌ಡಿಕೆ ಮಾತುಕತೆ? ರಾಜ್ಯದಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ?
“ಕೆಎಂಎಫ್ ಅತ್ಯುತ್ತಮ ದರ್ಜೆಯ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎನ್ನುವುದರಲ್ಲಿ ಸಂದೇಹ ಬೇಡ. ನಮ್ಮ ಬೆಲೆಗಿಂತ ಕಡಿಮೆ ದರಕ್ಕೆ ಬೇರೆ ಸಂಸ್ಥೆ ತುಪ್ಪ ಸರಬರಾಜು ಮಾಡುತ್ತದೆ ಎಂದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡ ಹಾಗೆ ಎನ್ನುವುದು ನನ್ನ ಖಚಿತ ನಿಲುವು” ಎಂದು ತಿಳಿಸಿದರು.
ತಿರುಪತಿ ತಿರುಮಲ ದೇವರ ದರ್ಶನದ ನಂತರ ಪ್ರತಿಯೊಬ್ಬ ಭಕ್ತರು ಅಲ್ಲಿ ಲಡ್ಡು ಖರೀದಿಸುತ್ತಾರೆ. ಆ ಲಡ್ಡುರುಚಿ ಹಾಗೂ ತಯಾರಿಕೆ ಕ್ರಮವೂ ಹೆಸರುವಾಸಿಯಾಗಿದೆ. ನಂದಿನಿ ತುಪ್ಪ ಕಾರಣ ಲಡ್ಡು ಬಹಳ ರುಚಿಯಾಗಿರುತ್ತಿತ್ತು ಎಂದು ಹೇಳಲಾಗಿದ್ದು ಲಕ್ಷಾಂತರ ಭಕ್ತರಿಗೆ ನಿರಂತರವಾಗಿ ಲಡ್ಡುಗಳನ್ನು ಆಡಳಿತ ಮಂಡಳಿ ಬಹಳ ವರ್ಷಗಳಿಂದ ನೀಡುತ್ತಿದೆ.