ಬೆಂಗಳೂರು : ಪ್ರಧಾನಿ ಮೋದಿ ಕಳೆದೊಂದು ತಿಂಗಳಿಂದ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೋಟಿಗಟ್ಟಲೇ ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯಿದೆ. ಆದರೆ ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಪ್ರಧಾನಿ ಮೋದಿ ಇಂತದ್ದೇ ಪ್ಯಾಕೇಜ್ಗಳನ್ನು ಘೋಷಣೆ ಮಾಡಿದ್ದು ಯಾವುದೂ ಜಾರಿಯಾಗಿಲ್ಲವೆಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗುಡುಗಿದ್ದಾರೆ.
ಪ್ರಧಾನಿ ಮೋದಿ ಪಕ್ಷದ ನಾಯಕರಾಗಿ ಪ್ರವಾಸ ಮಾಡದೇ ರಾಜ್ಯ ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇವರ ಕಾರ್ಯಕ್ರಮದಿಂದಾಗಿ ಸರ್ಕಾರ ಬೊಕ್ಕಸದಿಂದ ಸಾಕಷ್ಟು ಹಣ ವ್ಯಯವಾಗುತ್ತಿದೆ. ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು ಮಾಡಿದ್ದಾರೆ. ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ 25 ಕೋಟಿ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆಗೆ ಬಂದಾಗ 9 .36 ಕೋಟಿ ವೆಚ್ಚ ಮಾಡಿದ್ದಾರೆ. ಇದೆಲ್ಲವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ರಾಜ್ಯ ಜನರ ತೆರಿಗೆ ಹಣ ಯಾಕೆ ವೆಚ್ಚ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ .
ಇದೇ ವೇಳೆ ನಂದಿನಿ ಹಾಗೂ ಅಮುಲ್ ನಡುವಿನ ಕಾಳಗದ ವಿಚಾರವಾಗಿಯೂ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕೆಎಂಎಫ್ ಹಾಗೂ ಅಮುಲ್ ವಿಲೀನಕ್ಕೆ ಹುನ್ನಾರ ನಡೆಯುತ್ತಿದೆ. 2021ರಲ್ಲೇ ಅಮುಲ್ ಜೊತೆ ವ್ಯಾಪಾರ ಮಾಡಲು ನಂದಿನಿ ಸಂಸ್ಥೆ ಒಪ್ಪಿಗೆ ನೀಡಿ ಪತ್ರಕ್ಕೆ ಸಹಿ ಹಾಕಿದೆ. ಆದರೆ ಆ ಪತ್ರವನ್ನು ರಾಜ್ಯ ಸರ್ಕಾರ ಬಹಿರಂಗ ಮಾಡುತ್ತಿಲ್ಲವಷ್ಟೇ ಎಂದು ಹೊಸ ಬಾಂಬ್ ಸಿಡಿಸಿದ್ರು.