ಬೆಂಗಳೂರು: ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಟೀಕೆಗೆ ಒಳಗಾಗಿರುವ ನಮ್ಮ ಮೆಟ್ರೋ(Namma Metro) ಟಿಕೆಟ್ ದರಗಳು, ಮುಂದಿನ ಫೆಬ್ರವರಿಯಿಂದ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಚರ್ಚೆ ಜೋರಾಗಿದೆ. ಇದರಿಂದ ದಿನನಿತ್ಯ ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ಮತ್ತೊಂದು ಆರ್ಥಿಕ ಹೊರೆ ಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಟಿಕೆಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟುವರೆಗೆ ದರ ಏರಿಕೆ ಮಾಡಲಾಗಿದ್ದು, ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ದರ ಏರಿಕೆಯಿಂದ ಒಂದು ವರ್ಷವೂ ಪೂರೈಸುವ ಮೊದಲೇ ಮತ್ತೊಮ್ಮೆ ದರ ಹೆಚ್ಚಳದ ಮಾತು ಕೇಳಿಬರುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈಗಿರುವ ದರಗಳೇ ದೇಶದ ಇತರೆ ಮಹಾನಗರಗಳ ಮೆಟ್ರೋ ವ್ಯವಸ್ಥೆಗಳಿಗೆ ಹೋಲಿಸಿದರೆ ಹೆಚ್ಚು ದುಬಾರಿಯಾಗಿವೆ. ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳ ಮೆಟ್ರೋ ದರಗಳಿಗಿಂತ ನಮ್ಮ ಮೆಟ್ರೋ ಪ್ರಯಾಣ ಹೆಚ್ಚು ವೆಚ್ಚವಾಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಮೆಟ್ರೋ ರೈಲುಗಳಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಹೊಸ ಮಾರ್ಗಗಳ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ. ಆದರೆ ದರ ಏರಿಕೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಮೆಟ್ರೋ ಐಷಾರಾಮಿ ಸೇವೆಯಲ್ಲ, ಸಾಮಾನ್ಯ ನಾಗರಿಕರ ದಿನನಿತ್ಯದ ಅವಶ್ಯಕತೆ ಎಂದು ಪ್ರಯಾಣಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಮೆಟ್ರೋ ದರ ಏರಿಕೆ ಕುರಿತಂತೆ ಬಿಎಂಆರ್‌ಸಿಎಲ್ ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ, ಚರ್ಚೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಮೆಟ್ರೋ ಬಿಎಂಆರ್‌ಸಿಎಲ್ ಪ್ರಯಾಣಿಕರ ಅಭಿಪ್ರಾಯವನ್ನು ಎಷ್ಟು ಬೆಲೆ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.











