ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ನಿನ್ನೆ ಒಂದೇ ದಿನದಲ್ಲಿ 8,93,903 ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಸಿದ್ದು, ಇದರಿಂದ 3 ಕೋಟಿ 8 ಲಕ್ಷ ರೂಪಾಯಿ ಆದಾಯ ದಾಖಲಾಗಿದೆ. ಇದು ನಮ್ಮ ಮೆಟ್ರೋ(Namma Metro) ಕಾರ್ಯಾರಂಭವಾದ ಬಳಿಕ ಒಂದೇ ದಿನದಲ್ಲಿ ಪಡೆದ ಅತ್ಯಧಿಕ ಆದಾಯ ಎಂದು ಹೇಳಲಾಗುತ್ತಿದೆ.

ಹೊಸ ವರ್ಷಾಚರಣೆ ಹಿನ್ನೆಲೆ ಬಿಎಂಆರ್‌ಸಿಎಲ್ (BMRCL) ನೇರಳೆ, ಹಸಿರು ಹಾಗೂ ಹಳದಿ ಮೆಟ್ರೋ ರೈಲುಗಳ ಸೇವಾ ಸಮಯ ವಿಸ್ತರಿಸಿತ್ತು. 2025ರ ಡಿಸೆಂಬರ್ 31ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದು, ಈ ಅವಧಿಯಲ್ಲಿ ಬರೋಬ್ಬರಿ 8,93,903 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಮೆಜೆಸ್ಟಿಕ್, ಯಶವಂತಪುರ, ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್, ಕೆಂಗೇರಿ, ನಾಗಸಂದ್ರ ಸೇರಿದಂತೆ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದ್ದು, ಸಂಜೆ ವೇಳೆ ಪೀಕ್ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸುವ ಮೂಲಕ ಬಿಎಂಆರ್‌ಸಿಎಲ್ ಸಂಚಾರ ಸುಗಮಗೊಳಿಸಿದೆ. ಇನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಮುಂದಿನ ಹಂತಗಳಲ್ಲಿ ಯೆಲ್ಲೋ ಲೈನ್ ಸೇರಿದಂತೆ ಹೊಸ ಮಾರ್ಗಗಳು ನಿಯಮಿತವಾಗಿ ಕಾರ್ಯಾರಂಭಿಸಿದರೆ ಪ್ರಯಾಣಿಕರ ಸಂಖ್ಯೆ ಒಂದು ದಿನಕ್ಕೆ 10 ಲಕ್ಷ ಗಡಿ ದಾಟುವ ಸಾಧ್ಯತೆ ಇದೆ. ಜೊತೆಗೆ ಆದಾಯವೂ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.











