ಬೆಂಗಳೂರು : 2025ರ ವರ್ಷವನ್ನು ಕಳೆದು ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ನಗರದಲ್ಲಂತೂ ಜನ ಜಂಗುಳಿಯಿಂದ ರಸ್ತೆಗಳು ತುಂಬಿದ್ದವು. ಪಾರ್ಟಿ ಪ್ರಿಯರ ತಾಣವಾಗಿರುವ ಚರ್ಚ್ ಸ್ಟ್ರೀಟ್, ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ನೂತನ ವರ್ಷದ ಹರುಷ ಮನೆ ಮಾಡಿತ್ತು. ಮೂರೂ ಸ್ಥಳಗಳಲ್ಲೂ ಹೊಸ ವರ್ಷದ ಆಚರಣೆಗಾಗಿ ರಾಜ್ಯದ ಹಲವೆಡೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಅಪಾರ ಜನರು ಆಗಮಿಸಿದ್ದರು.

ಯಾವುದೇ ಅಹಿತಕರ ಘಟನೆ, ಅವಘಡ ನಡೆಯದಂತೆ ಸಂಪೂರ್ಣ ಸಂಭ್ರಮದ ಜವಾಬ್ದಾರಿಯನ್ನು ಬೆಂಗಳೂರು ನಗರ ಪೊಲೀಸರು ಹೊತ್ತಿದ್ದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಪ್ರತಿ ವರ್ಷಕ್ಕಿಂತಲೂ ಈ ವರ್ಷದ ಸಂಭ್ರಮ ಜನರ ಮನ ಮುಟ್ಟುವಂತಾಗಿದ್ದು, ಪೊಲೀಸರ ಶ್ರಮವೇ ಇದಕ್ಕೆ ಮುಖ್ಯ ಕಾರಣವಾಗಿದೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆಯಂತೆ ನಗರದಲ್ಲಿ 20 ಸಾವಿರ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿತ್ತು. ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ಹದ್ದಿನ ಕಣ್ಣಿಡುವ ಸಲುವಾಗಿ ಡ್ರೋನ್ ಕ್ಯಾಮೆರಾಗಳ ಬಳಕೆ ಮಾಡಲಾಗಿತ್ತು. ಅಲ್ಲದೇ ಪ್ರಮುಖವಾಗಿ ಮಹಿಳೆಯರ ಸುರಕ್ಷತೆಗಾಗಿ ಈ ಬಾರಿ ಪೊಲೀಸ್ ಇಲಾಖೆಯ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳು ಮಹಿಳೆಯರಿಗೆ ಮಾರ್ಗದರ್ಶನ ಮಾಡಿದರು.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಜಂಕ್ಷನ್ ಮತ್ತು ಚರ್ಚ್ ಸ್ಟ್ರೀಟ್ನಲ್ಲಿ ಕಳೆದ ರಾತ್ರಿ ಹಬ್ಬದ ವಾತಾವರಣವಿತ್ತು. ಇನ್ನು ಮಹಿಳೆಯರು ಹಾಗೂ ಪುರುಷರಿಗಾಗಿಯೇ ಪ್ರತ್ಯೇಕ ಬ್ಯಾರಿಕೇಡ್ ಹಾಕಿ ಪ್ರವೇಶ ದ್ವಾರಗಳನ್ನು ಮಾಡಿಕೊಡಲಾಗಿತ್ತು. ಸಂಭ್ರಮದ ಎಲ್ಲಾ ಕಡೆಗಳಲ್ಲೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಂಜೆಯಿಂದ ಆರಂಭವಾದ ಜನರ ಆಗಮನ ಮಧ್ಯರಾತ್ರಿಯವರೆಗೂ ಎಂಜಿ ರೋಡ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕೋರಮಂಗಲದ 100 ಪೀಟ್ ರಸ್ತೆಗಳಿಗೆ ಜನರು ಸಾವಿರಾರು ಸಂಖ್ಯೆಯಲ್ಲಿ ಲಗ್ಗೆಯಿಟ್ಟು, ಹೊಸ ವರ್ಷದ ಸವಿಯನ್ನು ಸವಿದರು.

ಬಿಗಿ ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಹೆಚ್ಚಿನ ಜನಸಮೂಹ ನೆರೆದಿತ್ತು. ಪೊಲೀಸ್ ಸಿಬ್ಬಂದಿ ಜನಸಂದಣಿಯನ್ನು ನಿಯಂತ್ರಿಸುತ್ತಿದ್ದಂತೆ ನಿರಂತರವಾಗಿ ಸಾರ್ವಜನಿಕ ಸುರಕ್ಷತಾ ಪ್ರಕಟಣೆಗಳೂ ಸಹ ಜನ ಸಂದಣಿ ಕಡಿಮೆಗೆ ಕಾರಣವಾಗಿದ್ದವು. ಮಹಿಳಾ ಸಹಾಯ ಕೇಂದ್ರಗಳು ಮತ್ತು ಮಹಿಳಾ ಅಧಿಕಾರಿಗಳ ಉಪಸ್ಥಿತಿಯ ಹೊರತಾಗಿ, ಸುರಕ್ಷಿತ ವಲಯಗಳಿಂದ ಮಹಿಳೆಯರು ಮತ್ತು ಯುವ ವಯಸ್ಕರಿಗೆ ಭದ್ರತೆ ಸಾಧ್ಯವಾಯಿತು.

ಮುಖ್ಯವಾಗಿ ಸಂಭ್ರಮದ ಸ್ಥಳಗಳ ಪ್ರವೇಶಕ್ಕೂ ಮುನ್ನವೇ ಸಾರ್ವಜನಿಕರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಯಿತು. ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಅನುಮಾನಾಸ್ಪದ ವಸ್ತುಗಳಿಗೆ ಅವಕಾಶ ಇರಲಿಲ್ಲ. ಕಳೆದ ವರ್ಷಕ್ಕೂ ಮಿಗಿಲಾಗಿಯೂ ಈ ವರ್ಷ ಪೊಲೀಸರು ಜನಸಂದಣಿ, ಟ್ರಾಫಿಕ್ನ್ನು ಉತ್ತಮವಾಗಿ ನಿಭಾಯಿಸಿದರು. ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಇಡೀ ಹೊಸ ವರ್ಷದ ಭದ್ರತಾ ಜವಾಬ್ದಾರಿಯನ್ನು ಹೊತ್ತಿದ್ದ ಬೆಂಗಳೂರು ಪೊಲೀಸರು ಯಾವುದೇ ಕಾರಣಕ್ಕೂ ನಿಯಮ ಮೀರಲು ಅವಕಾಶ ನೀಡಲಿಲ್ಲ. ಸಂಭ್ರಮ ಸೂಕತವಾಗಬಾರದು ಎಂಬ ನಿಟ್ಟಿನಲ್ಲಿ ಖಾಕಿ ಯಾವುದೇ ಕಾರಣಕ್ಕೂ ಭದ್ರತೆಯ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲಿಲ್ಲ.

ಚಿನ್ನಸ್ವಾಮಿ ಕಾಲ್ತುಳಿತ ದುರಂತದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ 2026ರ ನೂತನ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡೆತಡೆಗಳಿಗೆ ಅವಕಾಶ ನೀಡಲಿಲ್ಲ. ಚಳಿಯಲ್ಲಿಯೂ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಜನರ ಜೀವದ ಬಗ್ಗೆ ಹೆಚ್ಚಿನ ಗಮನ ಹರಿಸಿ ಕರ್ತವ್ಯ ಬದ್ಧತೆ ಮೆರೆದರು. ಇದೇ ಕಾರಣಕ್ಕೆ ಸಂಭ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರು ಸಹ ಬೆಂಗಳೂರು ಪೊಲೀಸರ ಶ್ರಮವನ್ನು ಶ್ಲಾಘಿಸಿದ್ದಾರೆ.






