ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ವ್ಯವಸ್ಥೆ ಕುಲಗೆಡಿಸುವ ಕೃತ್ಯ ಸರ್ವೇಸಾಮಾನ್ಯ. ಕಂಡಕಂಡಿದ್ದಕ್ಕೆಲ್ಲ ಜನಿವಾರ ತೊಡಿಸುವ ಕರ್ನಾಟಕ ಸರಕಾರದ ಕೆಲಸ ಯಡಿಯೂರಪ್ಪ ನಿರ್ಗಮನದ ನಂತರ ವೇಗ ಪಡೆದಿದೆ. ಸುರೇಶ ಕುಮಾರ ಮತ್ತು ಬಿ ಸಿ ನಾಗೇಶ್ ಸಾಂಪ್ರದಾಯವಾದಿ ಬ್ರಾಹ್ಮಣ ಜನಾಂಗಕ್ಕೆ ಸೇರಿದವರಾಗಿದ್ದು ಕರ್ನಾಟಕ ರಾಜ್ಯದ ಹೆಸರಾಂತ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವಲ್ಲಿ ಇವರಿಬ್ಬರು ಪ್ರಮುಖರು. ಅದರಲ್ಲೂ ಈ ನಾಗೇಶ ಶಿಕ್ಷಣ ಮಂತ್ರಿಯಾದ ನಂತರ ಚಕ್ರತೀರ್ಥನಂತ ಅಯೋಗ್ಯರು ಶಾಲಾ ಪಠ್ಯಕ್ರಮ ತಿರುಚುವ ವಿಕೃತಿ ಮೆರೆದದ್ದು ನಮಗೆಲ್ಲ ತಿಳಿದ ಸಂಗತಿ. ಮುಂದಿನ ಎರಡು ತಿಂಗಳಲ್ಲಿ ಬ್ರಾಹ್ಮಣರ ಆದರ್ಶ ಗ್ರಂಥ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಿಯೆ ತೀರುತ್ತೇನೆ ಅಂತಾರೆ ಅಶಿಕ್ಷಿತ ಶಿಕ್ಷಣ ಮಂತ್ರಿ. ಇದರ ಜೊತೆಗೆ ಪ್ರಸ್ತುತ ವೇದಿಕ್ ಮ್ಯಾಥ್ಸ್ ಎಂಬ ಇನ್ನೊಂದು ಅದ್ವಾನ ಈ ಶಿಕ್ಷಣ ಮಂತ್ರಿ ತೇಲಿ ಬಿಟ್ಟಿರುವುದು ನಾವು ಗಮನಿಸಬೇಕಿದೆ.
ನಾನು ಈ ಅಂಕಣದಲ್ಲಿ ‘ದಿ ಹಿಂದೂ ನಿಯತಕಾಲಿಕದಲ್ಲಿ ಸಿ ಕೆ ರಾಜು ಅವರು ಸೆಪ್ಟೆಂಬರ್ ೩ˌ ೨೦೧೪ ರಲ್ಲಿ ಬರೆದು ಮೇ ೧೨ˌ ೨೦೧೬ ರಲ್ಲಿ ಮರು ರೂಪಿಸಿದ ಬರಹವನ್ನು ಆಧಾರವಾಗಿಟ್ಟುಕೊಂಡು ವೇದಿಕ್ ಮ್ಯಾಥ್ಯ್ ಎಂಬ ವೈದಿಕರ ಕೃತಕ ಪರಿಕಲ್ಪನೆಯ ಕುರಿತು ಚರ್ಚಿಸಿದ್ದೇನೆ. ಸಿ ಕೆ ರಾಜು ಅವರು ಗಣಿತ ಶಾಸ್ತ್ರದ ಸಾಂಸ್ಕೃತಿಕ ಪ್ರತಿಷ್ಠಾನಗಳ ಲೇಖಕರು ಹಾಗು ಗಣಿತ ಶಾಸ್ತ್ರದ ಖ್ಯಾತ ಪ್ರಾಧ್ಯಾಪಕರಾಗಿದ್ದು ˌ ಭಾರತೀಯ ವಿಜ್ಞಾನˌ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಇತಿಹಾಸದ ಪ್ರಾಜೆಕ್ಟ್ ನ ಸಂಪಾದಕೀಯ ಫೆಲೊ ಆಗಿ ಕಾರ್ಯ ಮಾಡಿದವರು. ಭಾರತೀಯ ಸಂಪ್ರದಾಯಿ ನೆಲೆಯಲ್ಲಿ ಗಣಿತ ಶಾಸ್ತ್ರದ ಕುರಿತು ಆಳವಾದ ಅಧ್ಯಯನ ಮಾಡಿದ ನಿಪುಣ ತಜ್ಞರು. ರಾಜು ತವರು ಈಗ ವೈದಿಕರು ತೇಲಿ ಬಿಟ್ಟಿರುವ ವೇದಿಕ್ ಗಣಿತವೆಂದ ಹುಸಿ ಪರಿಕಲ್ಪನೆಗು ನಿಜವಾದ ವೇದಗಳಿಗು ಯಾವುದೆ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದಾರಷ್ಟೆ ಅಲ್ಲದೆ ನಿಜವಾಗಿಯು ಭಾರತವು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳೇನು ಎಂದು ವಿವರಿಸಿದ್ದಾರೆ.
ಸಾಂಪ್ರದಾಯಿಕ ಭಾರತೀಯ ಅಂಕಗಣಿತವನ್ನು ಉಪೇಕ್ಷಿಸಿ ಅದಕ್ಕೆ ಬದಲಾಗಿ ವೇದಿಕ್ ಗಣಿತ ಎಂಬ ಹುಸಿ ಪರಿಕಲ್ಪನೆ ತೇಲಿ ಬಿಟ್ಟಿರುವುದು ನಕಲಿ ರಾಷ್ಟ್ರೀಯವಾದದ ಗುಣಲಕ್ಷಣ ಎನ್ನುವ ರಾಜು ಅವರು ಇದು ಭಾರತೀಯ ಸಾಂಪ್ರದಾಯಿಕ ಗಣಿತ ಶಾಸ್ತ್ರದ ನೈಜ ಇತಿಹಾಸಕ್ಕೆ ಕೋಮುವಾದಿಗಳು ಬಗೆಯುತ್ತಿರುವ ಮಹಾನ್ ದ್ರೋಹ ಹಾಗು ಗಣಿತದ ಬಗೆಗಿನ ಅವರಲ್ಲಿರುವ ಅಜ್ಞಾನವನ್ನು ತೋರಿಸುತ್ತದೆ ಎನ್ನುತ್ತಾರೆ. ಪ್ರಧಾನಿ ಮೋದಿ ಅನುಮೋದಿಸಿದ್ದಾರೆನ್ನಲಾಗುವ ದೀನಾನಾಥ್ ಬಾತ್ರಾ ಅವರ ಪಾಠಗಳನ್ನು ಶಾಲಾ ಪಠ್ಯದಲ್ಲಿ ಸೇರಿಸುವುದು ಗುಜರಾತ್ ಸರಕಾರ ಕಡ್ಡಾಯಗೊಳಿಸಿದೆಯಂತೆ. ಮೂಲಗಳ ಪ್ರಕಾರ, ಶ್ರೀ ಬಾತ್ರಾ ಅವರು ಈಗ ಸರ್ಕಾರೇತರ ಶಿಕ್ಷಣ ಆಯೋಗವನ್ನು ಪ್ರಸ್ತಾಪಿಸಿˌ ವೇದ ಗಣಿತದ ಮೂಲಕ ಶಿಕ್ಷಣವನ್ನು ಭಾರತೀಕರಣಗೊಳಿಸುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ. ಗುಜರಾತಿನ ಅಂದಿನ ಶಿಕ್ಷಣ ಸಚಿವರು ತಮ್ಮ ಕಾರ್ಯಸೂಚಿಯ ಭಾಗವಾಗಿ ವೇದಿಕ್ ಗಣಿತ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸುವ ಕುರಿತು ಉಲ್ಲೇಖಿಸಿದ್ದರೆಂದು ರಾಜು ಅವರು ಜ್ಞಾಪಿಸಿದ್ದಾರೆ.
ಭಾರತೀಯ ಸಂಪ್ರದಾಯವಾದಿ ಬ್ರಾಹ್ಮಣರು ತಮ್ಮ ಬ್ರಾಹ್ಮಣ ಧರ್ಮ ಪ್ರೀತಿಯನ್ನು ರಾಷ್ಟ್ರಭಕ್ತಿಯ ನೆಲೆಗಟ್ಟಿನಲ್ಲಿ ಬಿಂಬಿಸಿಕೊಳ್ಳುವಲ್ಲಿ ನಿಪುಣರು. ತಮ್ಮ ಬ್ರಾಹ್ಮಣ ಸಂಪ್ರದಾಯದ ಬಗ್ಗೆ ಅವರಿಗಿರುವ ಬದ್ಧತೆ ಮೆಚ್ಚಬೇಕಾದದ್ದೆ. ಆದರೆ ವೇದಗಳಲ್ಲಿ “ವೇದಿಕ್ ಗಣಿತ” ಎಂಬ ಪರಿಕಲ್ಪನೆ ನಿಜವಾಗಿಯು ಇತ್ತೆ ಎಂದು ಪ್ರಶ್ನಿಸುವ ರಾಜು ಅವರು ವೇದಿಕ್ ಗಣಿತಕ್ಕೂ ವೇದಗಳಿಗೂ ಯಾವುದೇ ಸಂಬಂಧವಿಲ್ಲ ˌ ಇದು ವಾಸ್ತವವಾಗಿ ಭಾರತಿ ಕೃಷ್ಣ ತೀರ್ಥರ ವೇದಿಕ್ ಗಣಿತ ಎಂಬ ತಪ್ಪುದಾರಿಗೆಳೆಯುವ ಪುಸ್ತಕದಿಂದ ಹುಟ್ಟಿಕೊಂಡಿರುವ ಹುಸಿ ಪರಿಕಲ್ಪನೆ ಎನ್ನುತ್ತಾರೆ. ಈ ಪುಸ್ತಕದ ಶೀರ್ಷಿಕೆಯೇ ಮಿಸ್ಲೀಡಿಂಗ್ ಎನ್ನುವ ರಾಜು ಅವರು ಪುಸ್ತಕದಲ್ಲಿ ವಿವರಿಸಿರುವ (ಪ್ರಾಥಮಿಕ ಅಂಕಗಣಿತದ) ಕ್ರಮಾವಳಿಗಳಿಗು ಹಾಗು ವೇದಗಳಿಗು ಯಾವುದೇ ಸಂಬಂಧವಿಲ್ಲ ಎಂದು ಆ ಪುಸ್ತಕದ ಲೇಖಕರು ಮೊದಲ ಪುಟದಲ್ಲೆ ಒಪ್ಪಿಕೊಂಡಿದ್ದಾರಂತೆ. ಇದೇ ಮಾತನ್ನು ಪುಟ ಸಂಖ್ಯೆ xxxv ರಲ್ಲಿ “ನಿಸ್ಸಂಶಯವಾಗಿ ಈ ಸೂತ್ರಗಳು ಅಥರ್ವವೇದದ ಪ್ರಸ್ತುತ ಪುನರಾವರ್ತನೆಗಳಲ್ಲಿ ಕಂಡುಬರುವುದಿಲ್ಲ” ಎಂದು ಪುನಃ ಬರೆದಿದ್ದಾರೆಂದು ರಾಜು ಉಲ್ಲೇಖಿಸುತ್ತಾ ತಾವು ೧೯೯೮ ರಿಂದ ಇದನ್ನು ಎತ್ತಿ ತೋರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವಿಷಾದಕರ ಸಂಗತಿ ಎಂದರೆ, “ವೇದಿಕ್ ಗಣಿತಶಾಸ್ತ್ರ” ದ ಪ್ರತಿಪಾದಕರು ತಾವು ಭಾರತೀಯ ಸಂಪ್ರದಾಯದ ಪ್ರತಿಪಾದಕರೆಂದು ಹೇಳಿಕೊಂಡರೂ, ವೇದಗಳಲ್ಲಿನ ನಿಜವಾದ ಸಂಪ್ರದಾಯದ ಬಗ್ಗೆ ಅವರಿಗೆ ಗಾಢವಾದ ಅಜ್ಞಾನವಿದೆ ಎನ್ನುತ್ತಾರೆ ರಾಜುರವರು. ಎರಡನೆಯದಾಗಿ, “ವೇದಿಕ್ ಗಣಿತ” ದ ನಿಜವಾದ ಮೂಲ ಯಾವುದು ಎನ್ನುವ ಸಂಗತಿಯು ಈ ಸಂಪ್ರದಾಯವಾದಿಗಳಿಗೆ ತಿಳಿದಿಲ್ಲದೆ ಇರುವುದು. ಮೂರನೆಯದಾಗಿ, ಈ ವಿಷಯದ ಬಗ್ಗೆ ಪಾಂಡಿತ್ಯಪೂರ್ಣ ಬರವಣಿಗೆಯ ಆಳವಾದ ಜ್ಞಾನವು ಇವರಿಗಿಲ್ಲ ಎನ್ನುತ್ತಾರೆ ರಾಜು ಅವರು. ದೇಶದ ಶಿಕ್ಷಣ ನೀತಿಯನ್ನು ಇಂತಹ ಅಜ್ಞಾನಿಗಳು ನಿರ್ಧರಿಸುತ್ತಿರುವಾಗ ಅವರು ತಾವು ಮಾತ್ರ ನಗೆಪಾಟಲಿಗೀಡಾಗುವುದಲ್ಲದೆ ವೇದಗಳನ್ನೂ ಕೂಡ ಜನ ಸಂಶಯದಿಂದ ನೋಡುವಂತೆ ಮಾಡುತ್ತಿದ್ದಾರೆ ಮತ್ತು ಆ ಮೂಲಕ ಅವರು ತಾವು ಭಾರೀ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಂಪ್ರದಾಯಕ್ಕೆ ದೊಡ್ಡ ಅಪಚಾರ ಮಾಡುತ್ತಿದ್ದಾರೆ ಎನ್ನುವುದು ರಾಜು ಅವರ ಅಭಿಪ್ರಾಯ.
ಭಾರತೀಯ ಸಂಪ್ರದಾಯಿಕ ಗಣೀತಶಾಸ್ತ್ರದ ಕುರಿತು ರಾಜು ಅವರು ಹೀಗೆ ಬರೆಯುತ್ತಾರೆ: ನಾವು ಶಾಲೆಗಳಲ್ಲಿ ಕೂಡಿಸುವ, ಕಳೆಯುವ, ಗುಣಿಸುವ ಮತ್ತು ಭಾಗಿಸುವ ಲೆಕ್ಕಗಳನ್ನು ಪ್ರತಿಯೊಬ್ಬರೂ ಕಲಿಯುತ್ತೇವೆ. ಸಾಂಪ್ರದಾಯವಾದಿಗಳು ಆ ಮೂಲ ಅಲ್ಗಾರಿದಮ್‌ಗಳನ್ನು “ವೇದಿಕ್ ಗಣಿತ” ಎಂದು ತಪ್ಪಾಗಿ ಪ್ರತಿಪಾದಿಸುತ್ತಿದ್ದಾರೆ. ಹಾಗೆ ಮಾಡುವುದು ಶಿಕ್ಷಣವನ್ನು ಭಾರತೀಕರಣಗೊಳಿಸಿದಂತೆ ಎಂದು ಇವರು ಬಿಂಬಿಸುತ್ತಿದ್ದಾರೆ. ಪ್ರಮಾಣಿತ ಅಂಕಗಣಿತದ ಅನೇಕ ಪ್ರಮುಖ ಕ್ರಮಾವಳಿಗಳು ವಾಸ್ತವವಾಗಿ ಭಾರತದಲ್ಲಿಯೆ ಹುಟ್ಟಿಕೊಂಡಿವೆ. ಅವುಗಳನ್ನು ಈ ಹಿಂದೆ ಪಾಠಿ ಗಣಿತ (ಸ್ಲೇಟ್ ಅಂಕಗಣಿತ) ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಆದಾಗ್ಯೂ, “ಅಲ್ಗಾರಿದಮ್” ಎಂಬ ಪದವು “ಅಲ್ಗಾರಿದಮಸ್” ನಿಂದ ಬಂದಿದೆ: ಬಾಗ್ದಾದ್‌ನಲ್ಲಿರುವ ೯ ನೇ ಶತಮಾನದ ಹೌಸ್ ಆಫ್ ವಿಸ್ಡಮ್‌ನ ಅಲ್ ಖ್ವಾರಿಜ್ಮಿಯ ಲ್ಯಾಟಿನೀಕೃತ ಹೆಸರು. ಅವರು ಭಾರತೀಯ ಅಂಕಗಣಿತದ ಬಗ್ಗೆ ‘ಹಿಸಾಬ್ ಅಲ್ ಹಿಂದ್’ ಎಂಬ ವಿವರಣಾತ್ಮಕ ಗ್ರಂಥವನ್ನು ಬರೆದಿದ್ದಾರೆ.
೧೦ ನೇ ಶತಮಾನದ ಪ್ರಮುಖ ಯುರೋಪಿಯನ್ ಗಣಿತಶಾಸ್ತ್ರಜ್ಞ ಗೆರ್ಬರ್ಟ್ ಡಿ’ಆರಿಲಾಕ್ (ನಂತರ ಪೋಪ್ ಸಿಲ್ವೆಸ್ಟರ್ II), ಈ ಅಂಕಗಣಿತದ ತಂತ್ರಗಳನ್ನು ಕಾರ್ಡೋಬಾದ ಉಮಯ್ಯದ್ ಖಿಲಾಫತ್‌ನಿಂದ ಆಮದು ಮಾಡಿಕೊಂಡರು. ಏಕೆಂದರೆˌ ಯುರೋಪ್‌ನಲ್ಲಿ ಆಗ ಚಾಲ್ತಿಯಲ್ಲಿದ್ದ ಪ್ರಾಚೀನ ಗ್ರೀಕ್ ಮತ್ತು ರೋಮನ್ ಅಂಕಗಣಿತವು (ಅಬ್ಯಾಕಸ್), ಭಾರತೀಯ ಅಂಕಗಣಿತಕ್ಕೆ ಹೊಂದಿಕೆಯಾಗಿರಲಿಲ್ಲ. ಆದಾಗ್ಯೂ, ಅಬ್ಯಾಕಸ್‌ಗೆ ಒಗ್ಗಿಕೊಂಡಿರುವ ಸ್ಥಾನ-ಮೌಲ್ಯ ವ್ಯವಸ್ಥೆಯನ್ನು ಆಧರಿಸಿದ ಅಲ್ಗಾರಿದಮ್‌ಗಳಿಂದ ಗರ್ಬರ್ಟ್ ಗೊಂದಲಕ್ಕೊಳಗಾದರು ಮತ್ತು ಮೂರ್ಖತನದಿಂದ ಈ “ಅರೇಬಿಕ್ ಅಂಕಿಗಳಿಗೆ” ೯೭೬ ನೇ ವರ್ಷದಲ್ಲಿ ರೂಪಿಸಲಾದ ವಿಶೇಷ ಅಬ್ಯಾಕಸ್ (apices) ಅನ್ನು ಹೊಂದಿದರು. ಆದ್ದರಿಂದ “ಅರೇಬಿಕ್ ಅಂಕಿಗಳು” ಎಂಬ ಹೆಸರು ಹುಟ್ಟಿಕೊಂಡಿತು. ಏಕೆಂದರೆˌ ಅಂಕಗಣಿತವನ್ನು ಪರಿಣಾಮಕಾರಿಯಾಗಿ ಮಾಡುವ ಅಂಕಿಗಳ ಆಕಾರದಲ್ಲಿ ಮಂತ್ರವಿದ್ಯೆ (ಮ್ಯಾಜಿಕ್) ಇದೆ ಎಂದು ಜ್ಞಾನಿ ಪೋಪ್ ವಿನೋದದಿಂದ ಭಾವಿಸಿದ್ದರು. ಇದು ರಾಜು ಅವರು ಭಾರತೀಯ ಸಂಪ್ರದಾಯಿಕ ಗಣಿತಶಾಸ್ತ್ರದ ಇತಿಹಾಸದ ಕುರಿತು ಹೊಂದಿರುವ ಮಾಹಿತಿಯ ಒಂದು ಭಾಗ.
ಮುಂದುವರೆದು ರಾಜು ಅವರು ಭಾರತೀಯ ಸಂಪ್ರದಾಯಿಕ ಗಣೀತದ ಕುರಿತು ಇನ್ನಷ್ಟು ಮಾಹಿತಿಗಳನ್ನು ಹೀಗೆ ನೀಡುತ್ತಾರೆ: ನಂತರ, ಫ್ಲೋರೆಂಟೈನ್ ವ್ಯಾಪಾರಿಗಳು ಸಮರ್ಥ ಭಾರತೀಯ ಅಂಕಗಣಿತದ ಕ್ರಮಾವಳಿಗಳು ವಾಣಿಜ್ಯದಲ್ಲಿ ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುತ್ತವೆ ಎಂದು ಅರಿತುಕೊಂಡರು. ಇಸ್ಲಾಮಿಕ್ ಆಫ್ರಿಕಾದಾದ್ಯಂತ ವ್ಯಾಪಾರ ಮಾಡುವ ಫಿಬೊನಾಚಿ, ಅಲ್ ಖ್ವಾರಿಜ್ಮಿಯ ಕೆಲಸವನ್ನು ಅನುವಾದಿಸಿದರು. ಆದ್ದರಿಂದ ಅವನ್ನು ಅಲ್ಗಾರಿದಮ್‌ಗಳು ಎಂದು ಕರೆಯಲ್ಪಟ್ಟವು. ಅಂತಿಮವಾಗಿ, ೬೦೦ ವರ್ಷಗಳ ನಂತರ, ಭಾರತೀಯ ಅಲ್ಗಾರಿದಮ್‌ಗಳು ಯುರೋಪಿಯನ್ ಅಬ್ಯಾಕಸ್ ಬದಲಿಗೆ ಬಳಕೆಯಲ್ಲಿ ಬಂದವು ಮತ್ತು ಅವುಗಳು ಕ್ರಿಸ್ಟೋಫ್ ಕ್ಲಾವಿಯಸ್ ಅವರಿಂದ ಸುಮಾರು ೧೫೭೦ ರಲ್ಲಿ “ಪ್ರಾಯೋಗಿಕ ಗಣಿತ” ಎಂದು ಜೆಸ್ಯೂಟ್ ಪಠ್ಯಕ್ರಮದಲ್ಲಿ ಪರಿಚಯಿಸಲ್ಪಟ್ಟವು. ಈ ಕ್ರಮಾವಳಿಗಳು ಶ್ರೀಧರನ ಪಾಠಿ ಗಣಿತ ಅಥವಾ ಮಹಾವೀರನ ಗಣಿತ ಸಾರ ಸಂಗ್ರಹ, ಅಥವಾ ಭಾಸ್ಕರ II ರ ಲೀಲಾವತಿಯಂತಹ ಅನೇಕ ಆರಂಭಿಕ ಭಾರತೀಯ ಪಠ್ಯಗಳಲ್ಲಿ ಕಂಡುಬರುತ್ತವೆ. ಆದ್ದರಿಂದ, ಸಾಂಪ್ರದಾಯಿಕ ಭಾರತೀಯ ಅಂಕಗಣಿತದ ಬದಲಿಯಾಗಿ “ವೇದಿಕ್ ಗಣಿತ” ವನ್ನು ಪ್ರತಿಪಾದಿಸುವುದು ಹುಚ್ಚುತನದ ಪರಮಾವಧಿ ಎನ್ನುತ್ತಾರೆ ರಾಜು ಅವರು.
ಇದೊಂದು ಹುಸಿ ರಾಷ್ಟ್ರೀಯತೆಯ ಕ್ರಮ. ಇದು ಈ ಹುಸಿ ರಾಷ್ಟ್ರೀಯವಾದಿಗಳ ಭಾರತೀಯ ಸಾಂಪ್ರದಾಯಿಕ ಗಣಿತಶಾಸ್ತ್ರದ ನೈಜ ಇತಿಹಾಸದ ಬಗೆಗಿನ ಅಜ್ಞಾನವನ್ನು ತೋರಿಸುತ್ತದೆ. ಭವಿಷ್ಯದ ಪೀಳಿಗೆಗಳಲ್ಲಿ ಈ ಅಜ್ಞಾನವನ್ನು ಹರಡುವುದು ರಾಷ್ಟ್ರವನ್ನು ಬಲಪಡಿಸುವ ಬದಲಿಗೆ ದುರ್ಬಲಗೊಳಿಸಿದಂತೆ ಎನ್ನುತ್ತಾರೆ ರಾಜು ಅವರು. ಹೌದು ಇದೊಂದು ರಾಷ್ಟ್ರದ್ರೋಹದ ಕೆಲಸ ಕೂಡ. “ವೇದಿಕ್ ಗಣಿತ” ದ ತಂತ್ರಗಳನ್ನು ಮಾನಸಿಕ ಅಂಕಗಣಿತಕ್ಕಾಗಿ (ಮೆಂಟಲ್ ಅರ್ಥಮ್ಯಾಟಿಕ್) ವಿನ್ಯಾಸಗೊಳಿಸಲಾಗಿದೆ, ಸಾಂಪ್ರದಾಯಿಕವಾಗಿ ಬಡಗಿಗಳಂತಹ ಕುಶಲಕರ್ಮಿಗಳು ಇದನ್ನು ಬಳಸುತ್ತಾರೆ. ಇಂದು ಮಾನಸಿಕ ಅಂಕಗಣಿತದ ಇಂತಹ ಹಲವು ಪರ್ಯಾಯ ವ್ಯವಸ್ಥೆಗಳಿವೆ. ಇದರ ಕುರಿತು ಯಾರಾದರು ಪ್ರಚಾರ ಮಾಡಲು ಉದ್ದೇಶಿಸಿದ್ದರೆ, ಮೊದಲು ವ್ಯವಸ್ಥಿತ ಹೋಲಿಕೆಯ ಅಧ್ಯಯನದ ಅಗತ್ಯವಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತಿ ಕೃಷ್ಣ ತೀರ್ಥರ ಈ ವೇದಿಕ್ ಗಣಿತ ಪರಿಕಲ್ಪನೆಯು ಒಂದು ಮಾರಾಟದ ತಂತ್ರವಾಗಿದ್ದು ಭಾರತೀಯ ಸಾಂಪ್ರದಾಯಿಕ ಗಣಿತಕ್ಕೆ “ವೇದಿಕ್” ಎಂಬ ಮಿಸ್ಲೀಡಿಂಗ್ ಲೇಬಲ್ ಬಳಸದಂತೆ ನಾವೆಲ್ಲ ತಡೆಯಬೇಕು ಎನ್ನುತ್ತಾರೆ ರಾಜು ಅವರು.
ವೇದಗಳು ಮತ್ತು ಭಾರತೀಯ ಸಾಂಪ್ರದಾಯದಲ್ಲಿ ಅಡಕವಾಗಿರುವ ನೈಜ ಗಣಿತ ಶಾಸ್ತ್ರವನ್ನು ರಾಜು ಅವರು ಮುಂದುವರೆದು ಹೀಗೆ ವಿವರಿಸಿದ್ದಾರೆ: “ವೇದಿಕ್ ಗಣಿತ” ಎಂದು ತಪ್ಪಾಗಿ ಹೆಸರಿಸಿ ಪ್ರಚಾರ ಮಾಡಲಾಗುತ್ತಿರುವ ಹುಸಿ ರಾಷ್ಟ್ರೀಯವಾದಿಗಳ ಈ ಅಗ್ಗದ ತಂತ್ರವು ವೇದಗಳಲ್ಲಿ ನಿಜವಾಗಿಯೂ ಇರುವ ಗಣಿತವನ್ನು ದಮನಿಸುತ್ತದೆ. ಉದಾಹರಣೆಗೆ, ಯಜುರ್ವೇದ (೧೭.೨)ವು ಗಣಿತದ ದಶಮಾಂಶ ಸ್ಥಾನ ಮೌಲ್ಯ ವ್ಯವಸ್ಥೆಯನ್ನು (ಭಾರತೀಯ ಅಲ್ಗಾರಿದಮ್‌ಗಳ ಆಧಾರ) ಕುರಿತು ವಿವರಿಸುತ್ತದೆ ಮತ್ತು ಸಂಖ್ಯೆಗಳಿಗೆ ಆ ಕೆಲವು ಹೆಸರುಗಳು ಇನ್ನೂ ಬಳಕೆಯಲ್ಲಿವೆ, ಆದರೂ ಅರಬ್ (ಅರ್ಬುಡಮ್) ನಂತಹ ಪದಗಳು ಅರ್ಥವನ್ನು ಬದಲಾಯಿಸಿವೆ. ಆ ಭಾಗವು ಸ್ಥಳ ಮೌಲ್ಯ ವ್ಯವಸ್ಥೆಯು ವೇದ ಕಾಲದವರೆಗೆ ವಿಸ್ತರಿಸಿದೆ ಎಂದು ತೋರಿಸುತ್ತದೆ ಮತ್ತು ಇದು ಗಣಿತದಲ್ಲಿ ಅತ್ಯಂತ ಹಿಂದುಳಿದಿರುವ ಯುರೋಪಿನಲ್ಲಿ ತಡವಾಗಿ ಅನುಷ್ಠಾನಗೊಂಡಿದೆ ಎನ್ನುವುದು ರಾಜು ಅವರ ಅಭಿಮತ.